ಶಹಾಪುರಃ ಡಿಸಿಯವರಿಂದ ವಿವಿಧ ಕಾಮಗಾರಿಗಳ ವೀಕ್ಷಣೆ
ಶಹಾಪುರಃ ತಾಲ್ಲೂಕಿನ ಕನ್ಯಾಕೊಳ್ಳೂರು ಗ್ರಾಮದಲ್ಲಿ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿಯಲ್ಲಿ ಸುಮಾರು 10 ಎಕರೆಯಲ್ಲಿ ನಿರ್ಮಾಣವಾಗುತ್ತಿರುವ ಘನತ್ಯಾಜ್ಯ ನಿರ್ವಹಣಾ ಘಟಕ ಹಾಗೂ ಶುದ್ಧ ಕುಡಿಯುವ ನೀರಿನ ಸರಬರಾಜು ಘಟಕಕ್ಕೆ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ಭೇಟಿ ನೀಡಿ ಪರಿಶೀಲಿಸಿದರು.
ನಂತರ ಅಧಿಕಾರಿಗಳೊಂದಿಗೆ ಮಾತನಾಡಿದ ಅವರು, ಘನತ್ಯಾಜ್ಯ ಘಟಕ ಕಾಮಗಾರಿಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದು ಸ್ಥಳದಲ್ಲಿಯೇ ಇದ್ದ ಅಧಿಕಾರಿಗಳಿಗೆ ಸೂಚಿಸಿದರು. ಅಲ್ಲದೆ ನಗರದ ಫಿಲ್ಟರ್ ಬೆಡ್ ಜಲ ಶುದ್ಧೀಕರಣ ಘಟಕಕ್ಕೂ ಭೇಟಿ ನೀಡಿ ಪರಿಶೀಲಿಸಿದರು. ಜಲ ಶುದ್ದೀಕರಣ ಘಟಕ ಸ್ಥಗಿತಗೊಂಡಿರುವದನ್ನು ಕಂಡು ಅಧಿಕಾರಿಗಳೊಂದಿಗೆ ಚರ್ಚಿಸಿ, ನಗರದ ಜನರಿಗೆ ಶುದ್ಧೀಕರಿಸಿದ ನೀರು ಒದಗಿಸುವ ಅಗತ್ಯವಿದೆ. ಕೂಡಲೇ ಈ ಘಟಕ ನವೀಕರಣಗೊಳಿಸಲು ಸೂಚಿಸಿದರು. ಅಲ್ಲದೆ ನಗರದ ರುದ್ರಭೂಮಿಗೂ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿಗಳು ಹಾಗೂ ಪ್ರಭಾರಿ ಯೋಜನೆ ನಿರ್ದೇಶಕರಾದ ಪ್ರಕಾಶ ಜಿ.ರಜಪೂತ್, ಜಿಲ್ಲಾ ನಗರಾಭಿವೃದ್ಧಿ ಕೋಶ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಬಕ್ಕಪ್ಪ, ಶಹಾಪುರ ನಗರಸಭೆಯ ಪೌರಯುಕ್ತ ರಮೇಶ ಪಟ್ಟೇದಾರ, ಶರಣಪ್ಪ ಪೂಜಾರಿ ಸೇರಿದಂತೆ ಇತರರು ಸಭೆಯಲ್ಲಿ ಭಾಗಿಯಾಗಿದ್ದರು.