ಬಾಪುಗೌಡರು ಕಲ್ಯಾಣ ಕರ್ನಾಟಕದ ಬೆಳಕು-ಸಂಸದ ಜಾಧವ್
ದಿ.ಬಾಪುಗೌಡರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಲು ಜಾಧವ್ ಮನವಿ
ಯಾದಗಿರಿ,ಶಹಾಪುರಃ ದಿ.ಬಾಪುಗೌಡರು ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಅವಿರತ ಶ್ರಮವಹಿಸಿದ್ದಾರೆ. ಅವರ ಮಹಾನ್ ಕ್ರಾಂತಿಕಾರಿ ಕೆಲಸಗಳಿಂದ ಇಂದು ಕಲ್ಯಾಣ ಕರ್ನಾಟಕ ಅಭಿವೃದ್ಧಿಪಥದತ್ತ ಸಾಗಲು ಸಾಧ್ಯವಾಗಿದೆ ಎಂದು ಕಲಬುರ್ಗಿ ಸಂಸದ ಉಮೇಶ ಜಾಧವ್ ತಿಳಿಸಿದರು.
ನಗರದ ಚರಬಸವೇಶ್ವರ ಶಾಲಾ ಆವರಣದಲ್ಲಿ ದಿ.ಬಾಪುಗೌಡ ದರ್ಶನಾಪುರ ಅವರ 31 ನೇ ಸ್ಮರಣಾರ್ಥ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಬಾಪುಗೌಡರು ಈ ಭಾಗದ ಹಸಿರು ಕ್ರಾಂತಿಗೆ ಹೆಸರು ವಾಸಿ. ಅವರ ಮಹತ್ಕಾರ್ಯದಿಂದಲೇ ಈ ಭಾಗದ ರೈತರಿಗೆ ನೀರಾವರಿ ಸೌಲಭ್ಯ ದೊರಕಲು ಸಾಧ್ಯವಾಗಿದೆ. ಸಮೃದ್ಧವಾಗಿ ನೀರು ದೊರೆಯುವಂತೆ ಸೌಲಭ್ಯ ಕಲ್ಪಿಸುವಲ್ಲಿ ಬಾಪುಗೌಡರ ಶ್ರಮವಿದೆ. ಅವರೊಬ್ಬರು ದಿಟ್ಟ ನೇರ ರಾಜಕಾರಣಿಯಾಗಿದ್ದರು. ಕ್ಷೇತ್ರದ ಅಭಿವೃದ್ಧಿಗೆ ಅವರು ಪ್ರಾಮಾಣಿಕವಾಗಿ ಶ್ರಮಿಸಿದ್ದಾರೆ. ಅಷ್ಟೆ ಅಲ್ಲದೆ ಕಲ್ಯಾಣ ಕರ್ನಾಟಕದ ಸ್ಟ್ರಾಂಗ್ ರಾಜಕಾರಣಿ ಎಂಬುದರಲ್ಲಿ ಎರಡು ಮಾತಿಲ್ಲ. ಈ ಭಾಗದ ಹಲವಾರು ಶಾಸಕರು, ಮುಖಂಡರು ಅವರ ಮಾರ್ಗದರ್ಶನದಲ್ಲಿ ಸಾಗುತ್ತಿದ್ದರು. ಸಾಕಷ್ಟು ಜನರ ಬೆಳವಣಿ ಹಿಂದೆ ಬಾಪುಗೌಡರ ಸಹಕಾರ ಪ್ರೋತ್ಸಾಹವಿದೆ.
ಅವರೊಬ್ಬರ ಅಪರೂಪದ ರಾಜಕಾರಣಿ, ಜನರ ಅಂತಃಕರಣ ಬಲ್ಲವಾರದ ಅವರು ಜನರ ಏಳ್ಗೆಗೆ ಸದಾ ದುಡಿದವರು. ಮುಂದಾಲೋಚನೆ ಮೂಲಕ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತಿದ್ದರು. ಪ್ರಸ್ತುತ ಕಾಲದಲ್ಲಿ ಅವರಿದ್ದರೆ, ಹೈಕ ಭಾಗ ಇನ್ನಷ್ಟು ಶಕ್ತಿಯುತವಾಗಿ ಬೆಳೆಯುವದರಲ್ಲಿ ಅನುಮಾನವಿಲ್ಲ. ಅಂತಹ ಮಹಾನ್ ನಾಯಕರ ಸ್ಮರಣೆ ಅಗತ್ಯವಿದೆ. ಅವರು ಹೈಕ ಭಾಗಕ್ಕೆ ಪೂಜ್ಯನೀಯರು ಎಂದರು.
ಎಂಎಲ್‍ಸಿ ತಿಪ್ಪಣ್ಣಪ್ಪ ಕಮಕನೂರ ಮಾತನಾಡಿದರು. ಚರಬಸವೇಶ್ವರ ಗದ್ದುಗೆಯ ಬಸವಯ್ಯ ಶರಣರು ಸಾನ್ನಿಧ್ಯವಹಿಸಿದ್ದರು. ಬಸವರಾಜಪ್ಪಗೌಡ ದರ್ಶನಾಪುರ, ಜಿಪಂ ಅಧ್ಯಕ್ಷ ರಾಜಶೇಖರ ಪಾಟೀಲ್, ಬಸನಗೌಡ ಪಾಟೀಲ್ ಸಗರ, ಮರಿಗೌಡ ಹುಲಕಲ್, ಹಿರಿಯ ವಕೀಲರಾದ ಶ್ರೀನಿವಾಸರಾವ್ ಕುಲಕರ್ಣಿ, ಶರಣಪ್ಪ ಸಲಾದಪುರ ಸೇರಿದಂತೆ ಇತರರು ಉಪಸ್ಥಿತರಿದ್ದರು. ಅಪಾರ ಅಭಿಮಾನಿಗಳು, ಪ್ರಮುಖರು, ನಗರಸಭೆ, ಗ್ರಾಪಂ ಸದಸ್ಯರು ಇತರೆ ಗಣ್ಯರು ಭಾಗವಹಿಸಿದ್ದರು.