ಅಂಕಣ

ಕಾಲ ಕೆಟ್ಟಿದೆ ಅನ್ನುವ ಬದಲು ಮೊದಲು ನಾವು ಬದಲಾಗೋಣ!

-ವಿನಯ ಮುದನೂರ್

‘ಒರು ಆಡರ್ ಲವ್’ ಹೆಸರಿನ ಮಲಯಾಳಿ ಚಲನಚಿತ್ರ ಎಲ್ಲೆಡೆ ಸದ್ದು ಮಾಡುತ್ತಿದೆ. ‘ಮಣಿ ಮಾಣಿಕ್ಯ ಮಲರಾಯ ಪೂವಿ’ ಎಂಬ ಹಾಡು ಪ್ರತಿ ಯುವಕರ ಮೊಬೈಲ್ ನಲ್ಲಿ ಹರಿದಾಡುತ್ತಿದೆ. ಶಾಲಾ ವಿದ್ಯಾರ್ಥಿನಿಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟಿ ಪ್ರಿಯಾ ಪ್ರಕಾಶ್ ವಾರಿಯರ್  ತನ್ನ ವಾರಿಗೆಯ ಹುಡುಗನೊಂದಿಗೆ ಕಣ್ಣ ಭಾಷೆಯಲ್ಲಿ ಸಂವಹನ ನಡೆಸುವುದು. ಹುಬ್ಬು ಹಾರಿಸಿ, ಕಣ್ಣು ಮಿಟುಕಿಸುವ ಪರಿ ಎಂಥವರನ್ನೂ ಕೆರಳಿಸುತ್ತದೆ.

ಸಿಕ್ಕಾಪಟ್ಟೆ ಪಾಪುಲರ್ ಆಗಿರುವ ಈ ದೃಶ್ಯವನ್ನು ನೋಡಿದ ಜನ ಕಾಲ ಕೆಟ್ಟೋಯಿತು ಅಂತ ಉದ್ಘರಿಸುತ್ತಿದ್ದಾರೆ. ಹಾಗೆ ಹೇಳುತ್ತಲೇ ವಿಡಿಯೋ ತುಣುಕನ್ನು ನೋಡುತ್ತ ಹೋಟೆಲ್ ಗಳಲ್ಲಿ, ಬಾರ್ ಗಳಲ್ಲಿ, ತಮ್ಮ ಕಚೇರಿಗಳಲ್ಲಿ, ಸಹವರ್ತಿಗಳ ಜೊತೆಯಲ್ಲಿ ಈ ಬಗ್ಗೆ ಚರ್ಚೆಯಲ್ಲಿ ತೊಡಗಿದ್ದಾರೆ. ಇನ್ನೂ ಕೆಲವರು ತಮ್ಮ ಮಕ್ಕಳ ಭವಿಷ್ಯವನ್ನು ನೆನೆದು ಆತಂಕಗೊಂಡಿದ್ದಾರೆ. ತಮ್ಮ ಬಾಲ್ಯ, ಯೌವ್ವನ ನೆನೆದು ನಮ್ಮ ಕಾಲದಲ್ಲಿ ಹೀಗಿರಲಿಲ್ಲ ಸ್ವಾಮಿ ಅಂತ ಅಚ್ಚರಿಗೊಳಗಾಗಿದ್ದಾರೆ.

ಆದರೆ, ಕಾಲ ಕೆಟ್ಟಿರುವ ಬಗ್ಗೆ ಸಿಕ್ಕಸಿಕ್ಕಲ್ಲಿ ಚರ್ಚಿಸುವ ಜನ, ತಮ್ಮ ಮಕ್ಕಳ ಬಗ್ಗೆ ಆತಂಕಗೊಂಡಿರುವ ಜನ ನಿವಾರೋಣೋಪಾಯ ಕಂಡುಕೊಳ್ಳುವುದು ಮಾತ್ರ ಅಪರೂಪ. ಬಹುತೇಕರು ಕೆಲಸದ ಒತ್ತಡ, ಬಿಜಿ ಶೆಡ್ಯೂಲ್ ಮದ್ಯೆ ಪ್ರಿಯಾ ವಾರಿಯರ್ ವಿಡಿಯೋ ವೀಕ್ಷಿಸಿ ಕಾಲ ಕೆಟ್ಟೋಯ್ತು ಎಂದು ಮಾತನಾಡುವುದು ಕೂಡ ಮನೋರಂಜನೆಯ ಒಂದು ಭಾಗವೆಂಬಂತೆ ಮರೆತು ಬಿಡುತ್ತಿದ್ದಾರೆ. ಅದೇ ಚರ್ಚೆಯ ವಿಷಯವನ್ನು ತಮ್ಮ ಮಕ್ಕಳಿಗೆ, ತಮ್ಮ ಪರಿಸರ, ಪರಿವಾರದಲ್ಲಿರುವ ಹದಿಹರೆಯದ ಹುಡುಗ, ಹುಡುಗಿಯರಿಗೆ ಹೇಳಿ ಉತ್ತಮ ದಿಕ್ಕು, ಜೀವನಶೈಲಿ ತೋರುವ ಪೋಷಕರು ಬಲು ಅಪರೂಪ.

ಮಕ್ಕಳಿಗೆ ಅಪ್ಪನೇ ಮೊದಲ ಹಿರೋ ಆಗಿ ಕಾಣಿಸುತ್ತಾನೆ. ತಾಯಿ ಕೇಳಿದ್ದೆಲ್ಲವನ್ನೂ ಕರುಣಿಸುವ ದೇವತೆ ರೂಪ ಪಡೆದಿರುತ್ತಾಳೆ. ಆದರೆ, ಬರಬರುತ್ತ ನಾವೇ ಆ ಸ್ಥಾನಗಳನ್ನು ಬಿಟ್ಟು ಕೊಡುತ್ತೇವೆ. ನಮ್ಮ ದುಶ್ಚಟಗಳು, ಸಿಟ್ಟು, ಸೆಡವು, ಪತಿ-ಪತ್ನಿ ಕಲಹ, ಕೆಲ ತಪ್ಪು ನಿರ್ಧಾರ, ತಪ್ಪು ನಡವಳಿಕೆ, ಬಿಜಿ ಎಂಬ ನೆಪಗಳಿಂದ ನಮ್ಮ ಸ್ಥಾನ ನಾವೇ ತೆರವು ಮಾಡಿರುತ್ತೇವೆ. ಬೆಳೆಯುವ ಮಕ್ಕಳೆದುರು ನಮ್ಮ ಹಾಲತ್ ನಾವೇ ಬಟಾ ಬಯಲುಗೊಳಿಸಿರುತ್ತೇವೆ.

ಪ್ರತಿ ಮಕ್ಕಳಲ್ಲೂ ಒಬ್ಬ ಹಿರೋ, ಒಬ್ಬ ಆದರ್ಶ ವ್ಯಕ್ತಿ ಕಾಣುವ ತವಕ ಇದ್ದೇ ಇರುತ್ತದೆ. ಆ ಜಾಗಕ್ಕೆ ಆದರ್ಶ ವ್ಯಕ್ತಿಗಳನ್ನು ತಂದು ಕೂಡಿಸುವುದು. ಆ ಮೂಲಕ ಮಕ್ಕಳಲ್ಲಿ ಆದರ್ಶ ಗುಣಗಳನ್ನು ಬಿತ್ತುವುದು. ಉತ್ತಮ ಜೀವನ ಶೈಲಿಯತ್ತ ಕೊಂಡೊಯ್ಯುವುದು ಪೋಷಕರ ಜವಾಬ್ದಾರಿ ಆಗಿರುತ್ತದೆ. ಪೋಷಕರು ಜವಬ್ದಾರಿ ಮರೆತಾಗ ಮಾತ್ರ ಮಕ್ಕಳ ಕನಸಿನ ಹಿರೋ ಸಲ್ಮಾನ್ ಖಾನ್ ಆಗುತ್ತಾನೆ. ಕಣ್ಣು ಮಿಟುಕಿಸುವ ಪ್ರಿಯಾ ವಾರಿಯರ್ ಇಷ್ಟವಾಗುತ್ತಾಳೆ.

ಅದೇ ನಟಿ ಪ್ರಿಯಾ ವಾರಿಯರ್ ನನ್ನನ್ನು ಉತ್ತಮ ನಟಿ ಎಂದು ಗುರುತಿಸುವಂತಾಗಬೇಕು. ಚಿತ್ರದ ಪಾಪುಲರಿಟಿಗಾಗಿ ನಿರ್ದೇಶಕರ ಅಣತಿಯಂತೆ ನಟಿಸಿದ್ದೇನೆ ಅಷ್ಟೆ. ನನ್ನನ್ನು ಕಣ್ಣು ಮಿಟುಕಿಸುವ ನಟಿ ಎಂದು ಗುರುತಿಸುವುದು ಬೇಡ ಎಂದು ಮನವಿ ಮಾಡಿದ್ದು ಮಕ್ಕಳಿಗೆ ತಲುಪುವುದೇ ಇಲ್ಲ. ಪೋಷಕರೂ ಸಹ ಕಣ್ಣು ಮಿಟುಕಿಸಿದ ಬೆಡಗಿಯ ಬಗ್ಗೆಯೇ ಚರ್ಚಿಸಿ ಕಾಲ ಕೆಟ್ಟಿತು ಅಂದಿರುತ್ತಾರೆ ಹೊರತು ಅದೇ ನಟಿ ಹೇಳಿದ ಆದರ್ಶ ನುಡಿಗಳ ಬಗ್ಗೆ ಚರ್ಚಿಸುವುದಿಲ್ಲ.

ಕಾಲ ಕೆಟ್ಟಿದೆ ಅನ್ನುವುದರ ಮೊದಲು ನಾವು ಬದಲಾಗಬೇಕಿದೆ. ನಮ್ಮಲ್ಲಿನ ತಪ್ಪು ಒಪ್ಪುಗಳನ್ನು ಮೊದಲು ತಿದ್ದಿಕೊಂಡು ಬಳಿಕ ನಮ್ಮ ಮಕ್ಕಳಿಗೆ ಯಾವ ದಿಕ್ಕಿನಲ್ಲಿ ಕೊಂಡೊಯ್ಯಬೇಕು ಎಂಬುದರ ಬಗ್ಗೆ ಚಿಂತಿಸಬೇಕಿದೆ. ನಮ್ಮಿಂದ ಬದಲಿಸಲಾಗದ ಮಾಧ್ಯಮದ ಬಗ್ಗೆ, ಸಿನಿ ಲೋಕದ ಬಗ್ಗೆ ಇನ್ನಿತರೆ ವಿಷಯಗಳ ಬಗ್ಗೆ ಮಾತನಾಡುತ್ತ ವೃಥಾ ಕಾಲಹರಣ ಬಿಟ್ಟು ಮೊದಲು ನಾವು ಬದಲಾಗಬೇಕು. ನಮ್ಮ ಮಕ್ಕಳೊಂದಿಗೆ, ನಮ್ಮೊಂದಿಗಿರುವ ಯುವ ಸಮೂಹದ ಜೊತೆಗೆ ಉತ್ತಮ ಸಮಾಜ ನಿರ್ಮಾಣದತ್ತ ಆಶಾದಾಯಕ ಹೆಜ್ಜೆ ಹಾಕಬೇಕಿದೆ.

Related Articles

Leave a Reply

Your email address will not be published. Required fields are marked *

Back to top button