ಕಂದಾಯ ಪ್ರಗತಿ ಸಭೆಗೆ ಪತ್ರಕರ್ತರಿಗೆ ನಿಷೇಧ-ಪತ್ರಕರ್ತರ ಆಕ್ರೋಶ
ಸಾರ್ವತ್ರಿಕ ಕುಂದು ಕೊರತೆ ಸ್ಪಂಧನೆಗೆ ಡಿಸಿ ಕಟ್ಟಪ್ಪಣೆ
ಯಾದಗಿರಿ, ಶಹಾಪುರಃ ಸಾರ್ವತ್ರಿಕವಾಗಿ ಬಂದ ದೂರುಗಳನ್ನು ಗಮನಿಸಿ ಶೀಘ್ರದಲ್ಲಿ ಅವುಗಳಿಗೆ ಸೂಕ್ತ ಸ್ಪಂಧನೆ ನೀಡುವ ಮೂಲಕ ಇತ್ಯರ್ಥಗೊಳಿಸಬೇಕು. ಕಚೇರಿಯಲ್ಲಿ ಕಾಲಹರಣ ಮಾಡುವದನ್ನು ಬಿಟ್ಟು ಸಾರ್ವತ್ರಿಕ ದೂರುಗಳಿಗೆ ಸೂಕ್ತ ಪರಿಹಾರ ಒದಗಿಸುವ ಕಾರ್ಯ ಮಾಡುವಂತೆ ಜಿಲ್ಲಾಧಿಕಾರಿ ಕೂರ್ಮಾರಾವ್ ವಿವಿಧ ಇಲಾಖೆ ಅಧಿಕಾರಿ, ಸಿಬ್ಬಂದಿಗಳಿಗೆ ಖಡಕ್ ಸೂಚನೆ ನೀಡಿದರು.
ನಗರದ ತಾಪಂ ಸಭಾಂಗಣದಲ್ಲಿ ನಡೆದ ವಿವಿಧ ಇಲಾಖೆಗಳ ಕಂದಾಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ವಿವಿಧ ಇಲಾಖೆಯ ಕಚೇರಿಗಳು ಇನ್ನೂ ಬಾಡಿಗೆ ಕಟ್ಟಡದಲ್ಲಿಯೇ ಕಾರ್ಯ ನಿರ್ವಹಿಸುತ್ತಿವೆ. ಸ್ಥಳೀಯವಾಗಿ ಖಾಲಿ ನಿವೇಶನಗಳ ಲಭ್ಯವಿದ್ದಲ್ಲಿ ಜಮೀನು ಪಡೆದುಕೊಂಡು ಸ್ವಂತ ಕಟ್ಟಡ ನಿರ್ಮಾಣಕ್ಕೆ ಯೋಜನೆ ರೂಪಿಸಬೇಕು.
ಹಲವು ಯೋಜನೆಗಳ ಕಾರ್ಯಕ್ಷಮತೆ ಕುರಿತು ಪರಿಶೀಲಿಸಿದ ಅವರು, ವೃದ್ಯಾಪ್ಯ ವೇತನ, ಅಂಗವಿಕಲ ವೇತನ ಸೇರಿದಂತೆ ಪಿಂಚಣಿ ಕುರಿತು ಬಾಕಿ ಇರುವ ಅರ್ಜಿಗಳನ್ನು ವಿಲೇವಾರಿ ಮಾಡಿ ಜನ ಸಾಮಾನ್ಯರಿಗೆ ಸಮರ್ಪಕ ಸೇವೆ ಒದಗಿಸಬೇಕು ಎಂದು ತಾಕೀತು ಮಾಡಿದರು ಎನ್ನಲಾಗಿದೆ.
ಅಲ್ಲದೆ ಅತಿ ವೃಷ್ಟಿ ಅನಾವೃಷ್ಟಿ ಸಂಭವಿಸಿದ ತಾಲೂಕಿನ ವಿವಿಧ ಗ್ರಾಮಗಳಲ್ಲಿ ತುರ್ತು ಅರ್ಜಿಗಳನ್ನು ಪಡೆದುಕೊಂಡು ಆನ್ ಲೈನ್‍ನಲ್ಲಿ ದಾಖಲು ಮಾಡಿಕೊಳ್ಳಬೇಕು. ಈ ಕುರಿತು ಸಮಗ್ರ ಪರಿಶೀಲನೆ ನಂತರದಲ್ಲಿ ಪರಿಹಾರ ಕಾರ್ಯ ನಡೆಸಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ವಿವರಿಸಿದ್ದಾರೆ.
ನಂತರ ವಿವಿಧ ಯೋಜನಾ ಕಾರ್ಯಾನುಷ್ಠಾನ ಕುರಿತು ಪರಿಶೀಲನೆ ಮಾಡಲಾಯಿತು. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ, ಸಹಾಯಕ ಆಯುಕ್ತ ಶಂಕರಗೌಡ ಸೋಮನಾಳ, ತಹಶೀಲ್ದಾರ ಜಗನಾಥರಡ್ಡಿ, ಪೌರಾಯಕ್ತ ಬಸವರಾಜ ಶಿವಪೂಜೆ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪಂಪಾಪತಿ ಹೀರೆಮಠ, ಎಇಇ ರಾಜಕುಮಾರ ಪತ್ತಾರ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.
ಪತ್ರಕರ್ತರಿಗೆ ಸಭೆಯೊಳಗೆ ಅವಕಾಶ ಕಲ್ಪಿಸದ ಡಿಸಿ
ತಾಲೂಕು ಪಂಚಾಯತ ಸಭಾಂಗಣದಲ್ಲಿ ನಡೆದ ಕಂದಾಯ ಪ್ರಗತಿ ಸಭೆಗೆ ಪತ್ರಕರ್ತರಿಗೆ ಸುದ್ದಿ ಮಾಡಲು ಅವಕಾಶ ಕಲ್ಪಿಸದ ಕಾರಣ ವಾಪಾಸ್ ಆದ ಘಟನೆ ನಡೆದಿದೆ. ಜಿಲ್ಲಾಧಿಕಾರಿಗಳು ಈ ವಿಶೇಷ ಸಭೆ ಇದೆ ಕೇವಲ ಅಧಿಕಾರಿಗಳ ಮಟ್ಟದ್ದಾಗಿದ್ದು, ಪತ್ರಕರ್ತರಿಗೆ ಅವಕಾಶ ನೀಡಲಾಗುವದಿಲ್ಲ ಎಂಬ ಸಬೂಬು ಹೇಳಿದರು.
ಆದರೆ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷ ಈರಣ್ಣ ಹಾದಿಮನಿ ಇದನ್ನು ವಿರೋಧ ವ್ಯಕ್ತಪಡಿಸಿ, ಸಭೆಯೊಳಗೆ ಪತ್ರಕರ್ತರಿಗೆ ಅವಕಾಶ ಕಲ್ಪಿಸಬೇಕು. ತಾಲೂಕು ಮಟ್ಟದ ಕಂದಾಯ ಪ್ರಗತಿ ಸಭೆ ಇದಾಗಿದ್ದು, ಹಲವಾರು ಸಮಸ್ಯೆಗಳಿವೆ ಅವುಗಳ ಪರಿಹಾರಕ್ಕೆ ಜಿಲ್ಲಾಧಿಕಾರಿಗಳು ಕ್ರಮಕೈಗೊಳ್ಳಬೇಕಿದೆ. ಆ ಬಗ್ಗೆ ಕುರಿತು ಪತ್ರಕರ್ತರು ಸಮರ್ಪಕ ಮಾಹಿತಿ ಪಡೆದು ಸಾರ್ವಜನಿಕರ ಗಮನ ಹರಿಸಬೇಕಿದೆ ಅವಕಾಶ ಕಲ್ಪಿಸಿ ಎಂದು ತಹಶೀಲ್ದಾರ ಅವರಿಗೆ ಮನವಿ ಮಾಡಿದ್ದಾರೆ.
ಆದರೆ ತಹಶೀಲ್ದಾರ ಅವರು ಸಹ ಈ ಸಭೆಗೆ ಪತ್ರಕರ್ತರಿಗೆ ಅವಕಾಶ ನೀಡುವದಿಲ್ಲ ಎಂದು ಸುದ್ದಿಗೆ ಅನುಕೂಲ ಕಲ್ಪಿಸದೆ ಜಿಲ್ಲಾಧಿಕಾರಿಗಳು ತಮ್ಮ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಹೊರಟು ಹೋದರು ಎನ್ನಲಾಗಿದೆ. ಡಿಸಿ ಅವರ ನಡೆಯನ್ನು ಇಲ್ಲಿನ ಪತ್ರಕರ್ತರ ಸಂಘ ಪ್ರಶ್ನಿಸಿದ್ದು, ಯಾವ ಕಾರಣಕ್ಕೆ ಸಭೆಗೆ ಅವಕಾಶ ನೀಡಲಿಲ್ಲ ಎಂಬುದನ್ನು ಜಿಲ್ಲಾಧಿಕಾರಿಗಳು ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದೆ.