ಪ್ರಮುಖ ಸುದ್ದಿ

ಯಾದಗಿರಿ ಜಿಲ್ಲಾಧಿಕಾರಿಗಳಿಂದ ಮೊಬೈಲ್ ಆ್ಯಪ್ ಬಳಸಿ ಬೆಳೆ ಸಮೀಕ್ಷೆ

 

 ಮೊಬೈಲ್ ಆ್ಯಪ್ ಮೂಲಕ ಬೆಳೆ ಸಮೀಕ್ಷೆ ವಿನೂತನ ಪರೀಕ್ಷೆಗೆ ಮುಂದಾದ ಡಿಸಿ ಮಂಜುನಾಥ

ಯಾದಗಿರಿ: ತಾಲೂಕಿನ ಪಂಚಶೀಲ ನಗರದ ಹೊರವಲಯದ ರೈತರ ಜಮೀನುಗಳಿಗೆ ಜಿಲ್ಲಾಧಿಕಾರಿ ಮಂಜುನಾಥ.ಜೆ. ಅವರು ಭೇಟಿ ನೀಡಿ ವಿನೂತನ ಮೊಬೈಲ್ ಆ್ಯಪ್ ಬಳಸಿ ಬೆಳೆ ಸಮೀಕ್ಷೆ ಕೈಗೊಂಡರು.

ಈ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮೊಬೈಲ್ ಆಪ್ ದಾಖಲಿಸಿದಾಗ ನೈಜತೆ ಹಾಗೂ ಸೂಕ್ತ ದಾಖಲೆ ಹೊಂದಾಣಿಕೆಗಾಗಿ ಅತಿ ಅವಶ್ಯವಾಗಿರುತ್ತದೆ. ಹೀಗಾಗಿ ಸರ್ಕಾರ ಈ ಯೋಜನೆ ಅನುಷ್ಠಾನಗೊಳಿಸಲಾಗಿದ್ದು, ರೈತರು ಸಮೀಕ್ಷೆ ಸಿಬ್ಬಂದಿಗಳಿಗೆ ಬೆಳೆ ದಾಖಲಿಸಲು ಸಹಕರಿಸಬೇಕೆಂದು ರೈತರಲ್ಲಿ ಮನವಿ ಮಾಡಿದರು.

ಮೊಬೈಲ್ ಆಪ್ ಮೂಲಕ ಬೆಳೆಗಳ ಸಮೀಕ್ಷೆ ಬಗ್ಗೆ ದಾಖಲಿಸುವುದರಿಂದ ಪ್ರತಿಯೊಬ್ಬ ರೈತನು ಬೆಳೆಯಲಾದ ಬೆಳೆಗಳ ವಿವರ ಕ್ಷೇತ್ರದ ಜತೆಗೆ ನೀರಾವರಿ ಸೇರಿದಂತೆ ಸಂಪೂರ್ಣ ವರದಿ ಸಂಗ್ರಹವಾಗುತ್ತಿದೆ. ಈಗಾಗಲೇ ಪ್ರತಿಯೊಂದು ಕಡೆಗೂ ಜಮೀನುಗಳಲ್ಲಿ ಬೆಳೆದ ಬೆಳೆಗಳ ಕುರಿತು ಸಮಗ್ರ ವರದಿಯನ್ನು ದಾಖಲಿಸುವ ಮೂಲಕ ಸಮೀಕ್ಷೆ ಕಾರ್ಯ ಚುರುಕಗೊಂಡಿದೆ ಎಂದರು.

ವಿವಿಧ ಬೆಳೆಗಳಿಗೆ ಪ್ರಾಕೃತಿಕ ವಿಕೋಪದಂತಹ ಸಂದರ್ಭದಲ್ಲಿ ಫಸಲು ನಷ್ಟದ ನೈಜತೆಯನ್ನಾಧರಿಸಿ ರೈತಾಪಿ ವರ್ಗದ ಜನರಿಗೆ ಸಕಾಲಿಕ ಮತ್ತು ನ್ಯಾಯಯುತ ಪರಿಹಾರ ಪಾವತಿಗಾಗಿ ಬಿತ್ತನೆಯಾದ ಕ್ಷೇತ್ರ ಏಕರೂಪ ಪದ್ಧತಿ ಜಾರಿಗೊಳಿಸಲು ಮೊಬೈಲ್ ಆಪ್ ಸಮೀಕ್ಷೆ ಅಗತ್ಯವಿದೆ. ಈ ಆಪ್ ಬಳಕೆಯಿಂದ ನೈಜತೆ ಮತ್ತು ಸಮರ್ಪಕ ವರದಿ ಸಂಗ್ರಹಕ್ಕೆ ಸಹಕಾರವಾಗಲಿದೆ ಇದೊಂದು ದಾಖಲೆಯಾಗಿ ಉಳಿಯುತ್ತದೆ. ಆ ಕಾರಣ ಸರ್ಕಾರ ಈ ವಿನೂತನ ಯೋಜನೆಗೆ ಚಾಲನೆ ನೀಡಲು ನಿರ್ಧರಿಸಿದೆ ಎಂದರು.

ಈ ಸಂದರ್ಭ ಯಾದಗಿರಿ ತಾಲೂಕಿನ ತಹಶೀಲ್ದಾರ ಚನ್ನಮಲ್ಲಪ್ಪ ಘಂಟಿ, ಕಂದಾಯ ನಿರೀಕ್ಷಕರಾದ ಗಿರೀಶ, ಗ್ರಾಮಲೆಕ್ಕಾಧಿಕಾರಿಗಳಾದ ಮಲ್ಲಿಕಾರ್ಜುನ, ಕೊಟ್ರಯ್ಯಮಠ ಸೇರಿದಂತೆ ಇನ್ನಿತರ ಅಧಿಕಾರಿಗಳು ಇದ್ದರು.

ಮೊಬೈಲ್ ಆಪ್ ಬಳಕೆಯಿಂದ ರೈತರಿಗೆ ಅನುಕೂಲ

ರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಬೆಳೆ ಸಮೀಕ್ಷೆ ಯೋಜನೆಯಡಿ ಕೃಷಿ ಜಮೀನಿನಲ್ಲಿ ಬಿತ್ತನೆಯಾದ ಬೆಳೆ ಮತ್ತು ಕ್ಷೇತ್ರ ಜೊತೆಗೆ ಬಳಸಲಾದ ನೀರವಾರಿ ಪದ್ಧತಿಯ ವಿವರಗಳ ಸಂಗ್ರಹಣೆಯ ಕುರಿತು ಸ್ಪಷ್ಟವಾದ ಮತ್ತು ಏಕರೂಪದ ಪದ್ಧತಿಯನ್ನು ಜಾರಿಗೊಳಿಸಲು ಮೊಬೈಲ್ ಆಪ್ ಮೂಲಕ ಬೆಳೆಗಳ ಸಮೀಕ್ಷೆ ನಡೆಸಿ ಸಮಗ್ರ ವರದಿ ದಾಖಲಿಸಲು ಉದ್ದೇಶಿಸಿದೆ.

ಬೆಳೆ ಸಮೀಕ್ಷೆ ಯೋಜನೆ ಪ್ರಮುಖ ಅಂಶ ಈ ರೀತಿಯಾಗಿದ್ದು, ಜಮೀನು ಕ್ಷೇತ್ರವನ್ನು ವಿವಿಧ ಬೆಳೆ ಸ್ವರೂಪಗಳಿಗೆ ನವೀಕರಿಸುವುದಕ್ಕಾಗಿ, ವಿವಿಧ ಬೆಳೆಗಳಿಗೆ ಸರಿಯಾದ ಮೊತ್ತದ ಸಹಾಯಧನದ ಅಂದಾಜು ಪ್ರಕ್ರಿಯೆಗೆ, ಪ್ರಾಕೃತಿಕ ವಿಕೋಪಗಳ ಸಂದರ್ಭದಲ್ಲಿ ಫಸಲು ನಷ್ಟದ ನೈಜ ಅಂದಾಜು ಮತ್ತು ರೈತಾಪಿ ವರ್ಗದವರಿಗೆ ಸಕಾಲಿಕ ಮತ್ತು ನ್ಯಾಯಯುತ ಪರಿಹಾರ ಪಾವತಿಗಾಗಿ ಮತ್ತು ಪಹಣಿ ಪತ್ರಿಕೆ ಮತ್ತು ವಿಮೆ ದಾಖಲೆಗಳಲ್ಲಿ ಪರಸ್ಪರ ನೈಜ ಹಾಗೂ ಅದೇ ದಾಖಲೆ/ಮಾಹಿತಿಗಳ ನಿರೀಕ್ಷೆ ಇದಾಗಿದೆ.

ಜಿಲ್ಲೆಯಲ್ಲಿ ಒಟ್ಟು 408312 ಜಮೀನು ಇದ್ದು, ರೈತರ ಸಹಾಯದಿಂದ ಈಗಾಗಲೇ 24267 ಸಮೀಕ್ಷೆ ನಡೆಸಲಾಗಿದ್ದು, ಇನ್ನು ಹೆಚ್ಚಿನ ಪ್ರಮಾಣದಲ್ಲಿ ಎಲ್ಲಾ ರೈತರು ಆಸಕ್ತಿ ವಹಿಸಿ ಬೆಳೆ ಸಮೀಕ್ಷೆಯ ಸಮಯದಲ್ಲಿ ಹಾಜರಿದ್ದು, ತಮ್ಮ ಆಧಾರ ಸಂಖ್ಯೆ ಮತ್ತು ದೂರವಾಣಿ ಸಂಖ್ಯೆಯನ್ನು ಸಂಬಂಧಿಸಿದ ಸಮೀಕ್ಷೆಯ ಸಿಬ್ಬಂಧಿಗಳಿಗೆ ಒದಗಿಸಿ ಬೆಳೆ ಸಮೀಕ್ಷೆ ಕಾರ್ಯ ಪೂರ್ಣಗೊಳಿಸಲು ಸಹಕರಿಸಿ ಜಿಲ್ಲೆಯ ಸಮಸ್ತ ರೈತರು ಈ ಯೋಜನೆಯ ಸದುಪಯೋಗ ಪಡೆಯಬೇಕು ಎಂದು ಜಿಲ್ಲಾಧಿಕಾರಿ ಮಂಜುನಾಥ ಜೆ. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Related Articles

Leave a Reply

Your email address will not be published. Required fields are marked *

Back to top button