ಪ್ರಮುಖ ಸುದ್ದಿ

ನೆರೆ ಪರಿಹಾರ ಕಾಮಗಾರಿಗಳಿಗೆ ಅಲ್ಪಾವಧಿ ಟೆಂಡರ್ – ವಿಜಯ್ ಭಾಸ್ಕರ್

ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಂದ ಪ್ರಗತಿ ಪರಿಶೀಲನಾ ಸಭೆ

ಯಾದಗಿರಿಃ ಜಿಲ್ಲೆಯ ಕೃಷ್ಣಾ ಮತ್ತು ಭೀಮಾ ನದಿಗಳ ಪ್ರವಾಹದಿಂದ ಉಂಟಾದ ರಸ್ತೆ ಮತ್ತು ಬ್ರಿಡ್ಜ್‍ಗಳ ದುರಸ್ತಿಯನ್ನು ತ್ವರಿತವಾಗಿ ಕೈಗೊಳ್ಳಲು ಅಲ್ಪಾವಧಿ ಟೆಂಡರ್ ಕರೆದು ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ತ.ಮ. ವಿಜಯ್ ಭಾಸ್ಕರ್ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಅವರು ಡಿ.21ರ ಶನಿವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದರು.

ನೈಸರ್ಗಿಕ ವಿಕೋಪದಿಂದ ಹಾನಿಗೊಳಗಾದ ಕಾಮಗಾರಿಗಳಿಗಾಗಿ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗಕ್ಕೆ ಅಂದಾಜು 29 ಕೋಟಿ ರೂ.ಗಳ ಅನುದಾನ ಹಂಚಿಕೆಯಾಗಿದ್ದು, ಇದರಲ್ಲಿ ಒಟ್ಟು 220 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಅದರಂತೆ ಲೋಕೋಪಯೋಗಿ ಇಲಾಖೆಗೆ 9.60 ಕೋಟಿ ರೂ.ಗಳ ಅನುದಾನ ಹಂಚಿಕೆಯಾಗಿದ್ದು, 17 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಇವುಗಳಲ್ಲಿ 5 ರಿಂದ 50 ಲಕ್ಷ ರೂ.ವರೆಗಿನ ಕಾಮಗಾರಿಗಳಿಗೆ ಅಲ್ಪಾವಧಿ ಟೆಂಡರ್ ಕರೆದು, ನಿಗದಿತ ಅವಧಿಯಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕೆಂದು ಅವರು ತಾಕೀತು ಮಾಡಿದರು.

ಜಿಲ್ಲಾಧಿಕಾರಿಗಳಾದ ಎಂ. ಕೂರ್ಮಾ ರಾವ್ ಅವರು ಮಾತನಾಡಿ, ಆಗಸ್ಟ್ ಮಾಹೆಯಲ್ಲಿ ಪ್ರವಾಹದಿಂದ ಹಾನಿಯಾದ ಗ್ರೂಪ್ ಸಿ ಯ ಎಲ್ಲಾ 88 ಮನೆಗಳ ಮಾಲೀಕರಿಗೆ ಸರ್ಕಾರದ ನಿರ್ದೇಶನದಂತೆ ಪರಿಹಾರ ಹಣ ನೀಡಲಾಗಿದೆ. ಉಳಿದ ಬಿ ಗ್ರೂಪ್‍ನ 12 ಮನೆಗಳಲ್ಲಿ 3 ಮನೆಗಳ ಮಾಲೀಕರು ಮಾತ್ರ ಮನೆ ನಿರ್ಮಿಸಿಕೊಳ್ಳಲು ಮುಂದೆ ಬಂದಿದ್ದಾರೆ.

ಸುರಪುರ ತಾಲ್ಲೂಕಿನ ಹೇಮನೂರ ಮತ್ತು ತಿಂಥಣಿ ಗ್ರಾಮಗಳ 2 ಶಾಲೆಗಳಿಗೆ ಹಾನಿಯಾಗಿದೆ. ಈ ಶಾಲೆಗಳ ದುರಸ್ಥಿಗೆ ನೈಸರ್ಗಿಕ ಪ್ರಕೃತಿ ವಿಕೋಪದ ನಿಧಿಯಿಂದ ತಲಾ 1 ಲಕ್ಷ ರೂ.ಗಳಂತೆ ಅನುದಾನ ನೀಡಲಾಗಿದ್ದು, ದುರಸ್ಥಿ ಕಾಮಗಾರಿ ಪ್ರಗತಿಯಲ್ಲಿರುವ ಬಗ್ಗೆ ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶಿಲ್ಪಾ ಶರ್ಮಾ ಅವರು ಮಾತನಾಡಿ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ಮನರೇಗಾ) ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ 26.61 ಲಕ್ಷ ಮಾನವ ದಿನಗಳ ಗುರಿಯನ್ನು ನಿಗದಿಪಡಿಸಲಾಗಿದೆ. 16.76 ಲಕ್ಷ ಮಾನವ ದಿನಗಳ ಗುರಿಯನ್ನು ತಲುಪಿದ್ದು, ಶೇ.62.99 ರಷ್ಟು ಸಾಧಿಸಲಾಗಿದೆ ಎಂದು ತಿಳಿಸಿದರು.

ಆಗ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಮಾತನಾಡಿ, ಸುರಪುರ ತಾಲ್ಲೂಕಿನಲ್ಲಿ ಶೇ.70.50ರಷ್ಟು ಸಾಧನೆಯಾಗಿದೆ. ಆದರೆ, ಶಹಾಪುರ ತಾಲ್ಲೂಕಿನಲ್ಲಿ ಶೇ.57.75ರಷ್ಟು ಹಾಗೂ ಯಾದಗಿರಿ ತಾಲ್ಲೂಕಿನಲ್ಲಿ ಶೇ.60.42ರಷ್ಟು ಪ್ರಗತಿ ಸಾಧಿಸಲಾಗಿದೆ. ವೈಯಕ್ತಿಕ ಮತ್ತು ಸಾಮೂಹಿಕ ಕಾಮಗಾರಿಗಳನ್ನು ಕೈಗೊಂಡು ಗುರಿ ಸಾಧಿಸುವಂತೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಗುಳೆ ತಪ್ಪಿಸಲು ಕೂಲಿ ಕೊಡಿ: ಯಾದಗಿರಿ ಜಿಲ್ಲೆಯಲ್ಲಿ ಹೆಚ್ಚಿನ ಜನ ಗುಳೆ ಹೋಗುತ್ತಾರೆ. ಕೂಲಿಗೆ ಇಲ್ಲಿ ಬಹಳಷ್ಟು ಬೇಡಿಕೆ ಇದೆ. ಜನ ಗುಳೆ ಹೋಗುವುದನ್ನು ತಪ್ಪಿಸಲು ಅವರಿಗೆ ಮನರೇಗಾ ಯೋಜನೆಯಡಿ ಕೂಲಿ ಕೊಡಬೇಕು. ಈ ಯೋಜನೆಯ ಅನುಷ್ಠಾನದಲ್ಲಿ ಜಿಲ್ಲೆ ಪ್ರಥಮ ಸ್ಥಾನದಲ್ಲಿರಲು ಕ್ರಮ ವಹಿಸುವಂತೆ ಅವರು ತಿಳಿಸಿದರು.

ಸಭೆಯಲ್ಲಿ ಹಾಜರಿದ್ದ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ರಾಜಶೇಖರಗೌಡ ಪಾಟೀಲ್ ವಜ್ಜಲ್ ಅವರು ಮಾತನಾಡಿ, ಮನರೇಗಾ ಯೋಜನೆಯಡಿ ಚೆಕ್‍ಡ್ಯಾಮ್ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಂತೆ ಮನವಿ ಮಾಡಿದರು.
ಜಿಲ್ಲಾಧಿಕಾರಿಗಳಾದ ಎಂ.ಕೂರ್ಮಾ ರಾವ್ ಅವರು ಮಾತನಾಡಿ, ಮಹತ್ವಾಕಾಂಕ್ಷೆ ಜಿಲ್ಲೆ ಯೋಜನೆಯಡಿ ಕಳೆದ ಸಾಲಿನಲ್ಲಿ ಕೈಗೊಂಡಿದ್ದ ಕೆರೆಗಳ ಹೂಳೆತ್ತುವ ಯೋಜನೆಗೆ ರೈತರಿಂದ ಹೆಚ್ಚಿನ ಬೇಡಿಕೆ ಇದೆ.

ಹಾಗಾಗಿ, ಪ್ರಸಕ್ತ ಸಾಲಿನಲ್ಲಿ ಕೆರೆಗಳ ಹೂಳೆತ್ತುವ ಕಾರ್ಯಕ್ಕೆ ಶೀಘ್ರದಲ್ಲಿಯೆ ಚಾಲನೆ ನೀಡಲಾಗುವುದು. ಕೆರೆಗಳ ಹೂಳೆತ್ತುವ ಜೊತೆಗೆ ನಾಲೆಗಳ ಹೂಳನ್ನು ಕೂಡ ತೆಗೆದು ಕೆರೆಗಳಿಗೆ ಮಳೆಯ ನೀರು ಸುಗಮವಾಗಿ ಹರಿದುಬರುವಂತೆ ಮಾಡುವ ಕಾಮಗಾರಿಯನ್ನು ಸಹ ಸೇರ್ಪಡೆ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಕುಡಿಯುವ ನೀರಿಗೆ ಆದ್ಯತೆಗೆ ಸಂಬಂಧಿಸಿದಂತೆ  ಕುಡಿಯುವ ನೀರು ಪೂರೈಸುವುದಕ್ಕೆ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಬೇಕು. ಜಿಲ್ಲೆಯಲ್ಲಿ ಹೆಚ್ಚಿನ ಶುದ್ಧ ಕುಡಿಯುವ ನೀರಿನ ಘಟಕಗಳು ಮತ್ತು ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಗಳ ಕುರಿತಂತೆ ಸಾಕಷ್ಟು ದೂರುಗಳಿರುವುದಾಗಿ ಸಭೆಯಲ್ಲಿ ಪ್ರಸ್ತಾಪಿಸಿದ ಸರ್ಕಾರದ ಮುಖ್ಯಕಾರ್ಯದರ್ಶಿಗಳು, ಸಂಬಂಧಪಟ್ಟ ಇಂಜಿನಿಯರ್‍ಗಳಿಂದ ಕಾರಣ ಕೇಳಿದರು.

ಈ ಸಂದರ್ಭದಲ್ಲಿ ಮಾಹಿತಿ ನೀಡಿದ ಅಧಿಖಾರಿಗಳು,  ಜಿಲ್ಲೆಯಲ್ಲಿ 422 ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು, 241 ಚಾಲ್ತಿಯಲ್ಲಿವೆ. 145 ಘಟಕಗಳು ಕಾರ್ಯನಿರ್ವಹಿಸುತ್ತಿಲ್ಲ. ಇನ್ನು ಜಿಲ್ಲೆಯಲ್ಲಿರುವ 9 ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಗಳಲ್ಲಿ 4 ಚಾಲ್ತಿಯಲ್ಲಿಲ್ಲ ಎಂದು ಎಂಜಿನಿಯರುಗಳು ಮಾಹಿತಿ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಋಷಿಕೇಶ ಭಗವಾನ್ ಸೋನವಣೆ, ಕಲಬುರಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತಾಲಯದ ಅಪರ ಆಯುಕ್ತರಾದ ನಳಿನ್ ಅತುಲ್, ಅಪರ ಜಿಲ್ಲಾಧಿಕಾರಿಗಳಾದ ಪ್ರಕಾಶ್ ಜಿ.ರಜಪೂತ, ಸಹಾಯಕ ಆಯುಕ್ತರಾದ ಶಂಕರಗೌಡ ಎಸ್.ಸೋಮನಾಳ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿಗಳಾದ ಮುಕ್ಕಣ್ಣ ಕರಿಗಾರ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button