ರಾಜನಕೊಳ್ಳೂರು ವಸತಿ ಶಾಲೆಗಳಿಗೆ DC ಅನಿರೀಕ್ಷಿತ ಭೇಟಿ
ವಿದ್ಯಾರ್ಥಿಗಳ ಗೋಳು ಕೇಳಿದ ಜಿಲ್ಲಾಧಿಕಾರಿ
ಯಾದಗಿರಿಃ ಸುರಪುರ ತಾಲೂಕಿನ ರಾಜನಕೊಭೇಟಿಳ್ಳೂರು ಗ್ರಾಮದಲ್ಲಿರುವ ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿ ಬರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ (ಬಾಲಕಿಯರು) ಮತ್ತು ಮೊರಾರ್ಜಿ ದೇಸಾಯಿ ವಸತಿ ಶಾಲೆ (ಬಾಲಕರು)ಗಳಿಗೆ ಜಿಲ್ಲಾಧಿಕಾರಿಗಳಾದ ಶ್ರೀ ಜೆ. ಮಂಜುನಾಥ ಅವರು ಗುರುವಾರ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಿದರು.
ಬಸವಸಾಗರ ಜಲಾಶಯ ವೀಕ್ಷಿಸಿ ರಾತ್ರಿ ವಾಪಸ್ ಆಗುತ್ತಿದ್ದಾಗ ಅವರು ವಸತಿ ಶಾಲೆಗಳಿಗೆ ಭೇಟಿ ನೀಡಿದರು.
ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗೆ ಭೇಟಿ ಕೊಟ್ಟಾಗ ಬಾಲಕಿಯರೆಲ್ಲರೂ ಊಟ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಆಹಾರ ಪದಾರ್ಥಗಳ ಶುಚಿ-ರುಚಿ ಬಗ್ಗೆ ವಿಚಾರಿಸಿದರು. ಹಾಸ್ಟೆಲ್‍ನಲ್ಲಿ ಏನು ಸಮಸ್ಯೆಗಳಿವೆ ಎಂಬುದನ್ನು ಕೇಳಿ ಜಿಲ್ಲಾಧಿಕಾರಿಗಳು ಅರಿತರು. ಪ್ರಮುಖವಾಗಿ ನೀರಿನ ಸಮಸ್ಯೆ ಇದ್ದು, ಪರಿಹರಿಸುವಂತೆ ವಿದ್ಯಾರ್ಥಿನಿಯರು ಮನವಿ ಮಾಡಿಕೊಂಡರು.
ನಂತರ, ಕೋಣೆಗಳಿಗೆ ಭೇಟಿ, ಪುಸ್ತಕ, ಕಿಟ್, ಟ್ರಂಕ್, ಹಾಸಿಗೆ ಮುಂತಾದವುಗಳನ್ನು ಪೂರೈಕೆ ಬಗ್ಗೆ ಮಕ್ಕಳಿಂದಲೇ ಮಾಹಿತಿ ಪಡೆದುಕೊಂಡರು. ಶೌಚಾಲಯ ಮುಂತಾದವುಗಳನ್ನು ವೀಕ್ಷಿಸಿ ಸಿಬ್ಬಂದಿಗೆ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ವಸತಿ ಶಾಲೆಗೆ ಜಿಲ್ಲಾಧಿಕಾರಿಗಳು ಭೇಟಿ ನೀಡಿದ್ದಕ್ಕೆ ವಿದ್ಯಾರ್ಥಿನಿಯರು ಫುಲ್ ಖಷಿಯಾದರು. ಜಿಲ್ಲಾಧಿಕಾರಿಗಳಿಗೆ ಕೈಕುಲಕಿ, ಅವರೊಂದಿಗೆ ನಾ ಮುಂದು-ತಾ ಮುಂದು ಎಂಬಂತೆ ಫೋಟೊ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದರು. ನಾವು ಕೂಡ ಓದಿ ನಿಮ್ಮಂತೆ ಉನ್ನತ ಹುದ್ದೆ ಅಲಂಕರಿಸಬೇಕೆಂಬ ಹಂಬಲವನ್ನು ವಿದ್ಯಾರ್ಥಿನಿಯರು ವ್ಯಕ್ತಪಡಿಸಿದರು.
ಬಳಿಕ ಪಕ್ಕದಲ್ಲಿದ ಮೊರಾರ್ಜಿ ದೇಸಾಯಿ ವಸತಿ ಶಾಲೆ (ಬಾಲಕರು)ಗೆ ಭೇಟಿ ಕೊಟ್ಟು ಪರಿಶೀಲಿಸಿದರು. ಅಲ್ಲಿಯೂ ಕೂಡ ನೀರಿನ ಸಮಸ್ಯೆ ಬಗ್ಗೆ ಕೇಳಿ ಬಂತು. ಕುಡಿಯಲು ಫಿಲ್ಟರ್ ನೀರಿನ ವ್ಯವಸ್ಥೆ ಕಲ್ಪಿಸಬೇಕೆಂದು ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕೋರಿದರು.
ಈ ಸಂದರ್ಭದಲ್ಲಿ ಮಾತನಾಡದ ಜಿಲ್ಲಾಧಿಕಾರಿಗಳು 1.5ಕಿಮೀ ದೂರದಲ್ಲಿ ಕೃಷ್ಣಾ ನದಿ ಕಾಲುವೆ ಇದ್ದು, ಪಕ್ಕದಲ್ಲಿ 20ಅಡಿ ಬಾವಿ ತೋಡಿ, ಪೈಪ್‍ಲೈನ್ ಮೂಲಕ ಉಭಯ ವಸತಿ ಶಾಲೆಗಳಿಗೆ ಪೂರೈಸಬೇಕು. ಇದಕ್ಕೆ ಸಂಬಂಧಪಟ್ಟ ಅನುದಾನವನ್ನು ಜಿಲ್ಲಾ ಅಭಾವ ಪರಿಹಾರ ಸಮಿತಿಯಿಂದ ಭರಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀ ಹೆಚ್.ಸಿ ಪಾಟೀಲ್, ಅಧಿಕಾರಿಗಳು ಮುಂತಾದವರು ಇದ್ದರು.