ಶತಾಯುಷಿ ಬಸನಗೌಡ ಹೆಚ್.ಮಾಲಿಪಾಟೀಲ್ ಉಕ್ಕಿನಾಳ ಇನ್ನಿಲ್ಲ
ಶತಾಯುಷಿ ಬಸನಗೌಡ ಹೆಚ್.ಮಾಲಿಪಾಟೀಲ್ ಉಕ್ಕಿನಾಳ (101) ವಿಧಿವಶ
ಶಹಾಪುರಃ ಶಹಾಪುರ ತಾಲೂಕಿನಲ್ಲಿ ಚಿರಪರಿಚಿತರು, ಭಕ್ತಿ ಸಂಪನ್ನರು, ರಾಜಕೀಯ ಮುತ್ಸದ್ಧಿ, ಬಸವ ಅನುಯಾಯಿಯಾಗಿದ್ದ ಕಳೆದ ವರ್ಷವೇ ಜನ್ಮ ಶತಮಾನೋತ್ಸವ ಆಚರಿಸಿಕೊಂಡಿದ್ದ ತಾಲೂಕಿನ ಉಕ್ಕಿನಾಳ ಗ್ರಾಮದ ಬಸನಗೌಡ ಹೆಚ್.ಮಾಲಿಪಾಟೀಲ್ (101) ಸೋಮವಾರ ಬೆಳಗಿನಜಾವ ನಿಧನರಾದರು. ಮೃತರು 3 ಗಂಡು 2 ಹೆಣ್ಣು ಸೇರಿದಂತೆ ಅಪಾರ ಬಂಧುವರ್ಗ ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಇಂದು ಸೋಮವಾರ ಸಂಜೆ ಉಕ್ಕಿನಾಳ ಗ್ರಾಮದ ಅವರ ಜಮೀನಿನಲ್ಲಿ ನಡೆಯಲಿದೆ.
ಕಳೆದ ವಾರದಿಂದ ವಯೋಸಹಜ ಅಸ್ವಸ್ಥಗೊಂಡಿದ್ದ ಬಸನಗೌಡ ಮಾಲಿಪಾಟೀಲರನ್ನು ಕಲಬುರ್ಗಿಯ ಎಚ್ .ಸಿ.ಜಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆಗೆ ಸ್ಪಂಧಿಸದೆ ಸೋಮವಾರ ಬೆಳಗಿನ ಜಾವ ಅವರು ನಿಧನ ಹೊಂದಿದ್ದಾರೆ.
ದಿ.ಬಸನಗೌಡ ಮಾಲಿಪಾಟೀಲ್ ರ ಜನ್ಮ ಶತಮಾನೋತ್ಸವವನ್ನು ಕಳೆದ 16 ಜುಲೈ 2017 ರಂದು ಇಲ್ಲಿನ ಭೀಮರಾಯನ ಗುಡಿ ಕೃಷಿ ಮಹಾವಿದ್ಯಾಲಯದ ಕ್ರೀಡಾಂಗಣದಲ್ಲಿ ಸಂಭ್ರಮದಿಂದ ಜರುಗಿತ್ತು. ಇದೇ ಸಂದರ್ಭದಲ್ಲಿ ಉಚಿತ ಆರೋಗ್ಯ ತಪಾಸಣ ಶಿಬಿರ ಮತ್ತು ನೂರಾರು ಜನರಿಗೆ ಉಚಿತ ಕಣ್ಣಿನ ಶಸ್ತ್ರಚಿಕಿತ್ಸೆ ಕೊಡಿಸುವ ಕಾರ್ಯವನ್ನು ಅವರ ಮಕ್ಕಾಳದ ಡಾ.ಶೇಖರ ಪಾಟೀಲ್ ಮತ್ತು ಡಾ.ಮಲ್ಲನಗೌಡ ಪಾಟೀಲ್ ಉಕ್ಕಿನಾಳ ಅದ್ದೂರಿಯಾಗಿ ನೆರವೇರಿಸಿದ್ದರು. ಅಲ್ಲದೆ ಈ ಸಮಾರಂಭದಲ್ಲಿ ವಿಶೇಷವಾಗಿ ವಿಜಯಪುರದ ಜ್ಞಾನಯೋಗಿ ಆಶ್ರಮದ ಸಿದ್ದೇಶ್ವರ ಶ್ರೀಗಳು ಸಾನ್ನಿಧ್ಯವಹಿಸಿ ಪ್ರವಚನ ನೀಡಿದ್ದರು. ಆಗ ಸಹಸ್ರಾರು ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದು ಒಂದು ನೆನಪು.
ಮೃತ ಬಸನಗೌಡ ಮಾಲಿಪಾಟೀಲರು ಬಾಲ್ಯದಲ್ಲಿಯೇ ತಮ್ಮ ಹೆತ್ತವರನ್ನು ಕಳೆದುಕೊಂಡವರು, ಹೀಗಾಗಿ ತಮ್ಮ ವಿದ್ಯಾಭ್ಯಾಸವನ್ನು 9 ನೇ ತರಗತಿಯಲ್ಲಿಯೇ ಮೊಟಕುಗೊಳಿಸಿ, ಅವಿಭಕ್ತ ಕುಟುಂಬದ ಅತಿ ದೊಡ್ದ ಭಾರವನ್ನು ಸಮರ್ಪಕವಾಗಿ ನಿಭಾಯಿಸಿದ್ದು, ಆದರ್ಶ ನಿದರ್ಶನ.
ಶಿಕ್ಷಣದಿಂದ ತಾವೂ ವಂಚಿತಗೊಂಡ ಕಾರಣ ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಬೇಕೆಂಬ ಆಸೆಯಂತೆ ಮಕ್ಕಳಾದ ಖ್ಯಾತ ವೈದ್ಯ ಡಾ.ಶೇಖರ ಪಾಟೀಲ್ ಉಕ್ಕಿನಾಳ ಹಾಗೂ ಡಾ.ಮಲ್ಲನಗೌಡ ಉಕ್ಕಿನಾಳ ಸೇರಿದಂತೆ ಇತರೆ ತಮ್ಮ ಸಹೋದರರ ಮಕ್ಕಳಿಗೂ ಉತ್ತಮ ಶಿಕ್ಷಣ ಕೊಡಿಸಿದರು. ಅಷ್ಟೆ ಅಲ್ಲದೆ ತಮ್ಮ ಗ್ರಾಮ ಸುತ್ತಮುತ್ತಲಿನ ಗ್ರಾಮದ ಹಲವರಿಗೆ ಶೈಕ್ಷಣಿಕವಾಗಿ ಸಹಾಯಹಸ್ತ ನೀಡಿದ್ದಾರೆ.
ರಾಜಕೀಯ ಜೀವನಃ ಬಸನಗೌಡರ ರಾಜಕೀಯ ಜೀವನ ಬಲು ರೋಚಕವಿದೆ. ಆದರೆ ಅವರು ಎಂದಿಗೂ ಯಾವುದೆ ಚುನಾವಣೆಗೆ ನಿಂತವರಲ್ಲ. ತಮ್ಮ ಆತ್ಮೀಯರನ್ನು ಚುನಾವಣೆ ಅಖಾಡಕ್ಕೆ ಇಳಿಸಿ ಇಡಿ ಕ್ಷೇತ್ರದಾದ್ಯಂತ ತಾವೇ ಸ್ವತಹಃ ಪ್ರಚಾರ ಮಾಡುವ ಮೂಲಕ ಇಡಿ ಚುನಾವಣೆ ಉಸ್ತುವಾರಿವಹಿಸಿ ಜಿದ್ದಿನ ಮೂಲಕ ತಮ್ಮವರ ಗೆಲುವಿಗೆ ತನುಮನ ಧನದಿಂದ ಶ್ರಮಿಸಿದವರು. ಸಾರ್ಜವನಿಕ ಜೀವನದಲ್ಲಿ ಉತ್ತಮ ಹೆಸರುಗಳಿಸಿದ್ದವರು.
ಈ ಭಾಗದ ಪ್ರಮುಖರಾದ ರಾಜಾ ವೆಂಕಟಪ್ಪನಾಯ್ಕ ಬ್ಯಾರಿಸ್ಟರ್, ಕೋಳೂರು ಮಲ್ಲಪ್ಪ, ಬಾಪುಗೌಡ ದರ್ಶನಾಪುರ, ಎಕ್ಕೆಳ್ಳಿ ವಿರೂಪಾಕ್ಷಪ್ಪ, ಶಿವಣ್ಣ ಸಾವೂರ ಹಾಗೂ ಶಿವಶೇಖರಪ್ಪ ಗೌಡ ಶಿರವಾಳ ಇವರಿಗೆ ತಮ್ಮ ಅಭಯ ಹಸ್ತವನ್ನು ಚಾಚಿದ್ದವರು.
ದುಖಃತಪ್ತ– ಡಾ.ಮಲ್ಲನಗೌಡ ಉಕ್ಕಿನಾಳ, ಬಿಜೆಪಿ ಮಂಡಲ ಅಧ್ಯಕ್ಷರು. ಶಹಾಪುರ. ಡಾ.ಶೇಖರಗೌಡ ಪಾಟೀಲ್ ಉಕ್ಕಿನಾಳ. ಖ್ಯಾತ ವೈದ್ಯರು. ಬೆಂಗಳೂರ. (ಶಹಾಪುರ) ರಾಜೂಗೌಡ ಉಕ್ಕಿನಾಳ, ದೇವಾನಂದ ಪಾಟೀಲ್ ಉಕ್ಕಿನಾಳ, ಶರಣು ಪಾಟೀಲ್ ಪರಸನಳ್ಳಿ ಸೇರಿದಂತೆ ಅಪಾರ ಬಂಧು ವರ್ಗ.
ಸಂತಾಪಃ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಜಗದೀಶ ಶೆಟ್ಟರ್, ಅನಂತಕುಮಾರ ಸಂಸದರು, ಮಾಜಿ ಸಚಿವ ಶಾಸಕ ಡಾ.ಮಾಲಕರಡ್ಡಿ, ಶಶೀಲ್ ನಮೋಶಿ, ಅಮರನಾಥ ಪಾಟೀಲ್, ಮಾಜಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ, ಮಾಜಿ ಸಚಿವ ರಾಜೂಗೌಡ ಸುರಪುರ, ಶಾಸಕ ಗುರು ಪಾಟೀಲ್ ಶಿರವಾಳ ಸೇರಿದಂತೆ ನಗರದ ಗಣ್ಯರು ಸಂತಾಪ ಸೂಚಿಸಿದ್ದಾರೆ.
-ಮಲ್ಲಿಕಾರ್ಜುನ ಮುದನೂರ.