ಪ್ರಮುಖ ಸುದ್ದಿ

ಡಿ.11 ರಂದು ಶಹಾಪುರಕ್ಕೆ ಪರಿವರ್ತನಾ ಯಾತ್ರೆ, ಯೋಗಿ ಆದಿತ್ಯನಾಥ ಆಗಮಿಸುವ ಸಾಧ್ಯತೆ.!

 

ಶಹಾಪುರಃ ಪೂರ್ವಭಾವಿ ಸಭೆ- ಬಿಜೆಪಿ ಬೃಹತ್ ಸಮಾವೇಶ

ಯಾದಗಿರಿಃ ನವ ಕರ್ನಾಟಕ ನಿರ್ಮಾಣಕ್ಕಾಗಿ ರಾಜ್ಯ ಬಿಜೆಪಿ ಕೈಗೊಂಡಿರುವ ಪರಿವರ್ತನಾ ಯಾತ್ರೆ ಇದೇ ಡಿ.11 ರಂದು ಮದ್ಯಾಹ್ನ 3 ಗಂಟೆಗೆ  ಶಹಾಪುರ ನಗರಕ್ಕೆ ಆಗಮಿಸಲಿರುವ ಹಿನ್ನೆಲೆಯಲ್ಲಿ ಅದ್ದೂರಿ ಸ್ವಾಗತ ಹಾಗೂ ಅಂದು ಬೃಹತ್ ಸಮಾವೇಶ ಆಯೋಜಿಸಲಾಗಿದೆ ಎಂದು ಸ್ಥಳೀಯ ಶಾಸಕ ಗುರು ಪಾಟೀಲ್ ಶಿರವಾಳ ಹೇಳಿದರು.

ಜಿಲ್ಲೆಯ ಶಹಾಪುರ  ನಗರದ ಪ್ರವಾಸಿ ಮಂದಿರದಲ್ಲಿ, ಪರಿವರ್ತನಾ ಯಾತ್ರೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ತಾಲೂಕು ಬಿಜೆಪಿ ಘಟಕದಿಂದ ನಡೆದ ಪೂರ್ವಭಾವಿ ಸಭೆಯಲ್ಲಿ ಭಿತ್ತಿಪತ್ರ ಮತ್ತು ಬಿಜೆಪಿ ಸರ್ಕಾರ ಅವಧಿಯ  ಸಾಧನಾ ಮಾಹಿತಿ ಪತ್ರಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ನಗರದ ಹಳೇ ಬಸ್ ನಿಲ್ದಾಣ ಎದುರಿಗಿರುವ ಸಿಪಿಎಸ್ ಶಾಲಾ ಮೈದಾನದಲ್ಲಿ ಬೃಹತ್ ಸಮಾವೇಶಕ್ಕಾಗಿ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ವಾಹನ ನಿಲುಗಡೆ ಸೇರಿದಂತೆ ಇತರೆ ವ್ಯವಸ್ಥೆಗಳನ್ನು ಸಮರ್ಪಕವಾಗಿ ಕೈಗೊಳ್ಳಲು ನಿರ್ಧರಿಸಲಾಗಿದೆ.

ಕೇಂದ್ರದ ಬಿಜೆಪಿ ಸರ್ಕಾರ ಪ್ರಧಾನಿ ಮೋದಿ ಮತ್ತು ಅಮೀತ್ ಶಾ ನೇತೃತ್ವದಲ್ಲಿ ನವಭಾರತ ನಿರ್ಮಾಣ ಗುರಿ ಹೊಂದಿದ್ದು, ಅದರಂತೆ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಮುಂದೆ ಸಾಗಿದ್ದು, ಅದೇ ನಿಟ್ಟಿನಲ್ಲಿ ರಾಜ್ಯದಲ್ಲೂ ನವ ಕರ್ನಾಟಕ ನಿರ್ಮಾಣದ ಗುರಿಯನ್ನು ಬಿಜೆಪಿ ಹೊಂದಿದೆ.

ಕೇಂದ್ರದಲ್ಲಿನ ಬಿಜೆಪಿ ಸರ್ಕಾರ ಕಳೆದ ಮೂರು ವರ್ಷದಿಂದ ಹಗರಣ ರಹಿತವಾಗಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದೆ ಆಡಳಿತ ನಡೆಸಿದ್ದು, ಅದೇ ಮಾದರಿಯಲ್ಲಿ ರಾಜ್ಯದಲ್ಲೂ ಪಾರದರ್ಶಕ ಆಡಳಿತದ ಅಗತ್ಯವಿದೆ. ಆ ನಿಟ್ಟಿನಲ್ಲಿ ನವ ಕರ್ನಾಟಕ ನಿರ್ಮಾಣ ಅಗತ್ಯವಿದೆ ಎಂದರು.

ಅಂದಿನ ಯಾತ್ರೆಗೆ ಭಾರತೀಯ ಜನತಾ ಪಕ್ಷದ ರಾಜ್ಯ ಮುಖಂಡರಾದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅಪ್ಪಾಜಿ, ಶೋಭಾ ಕರಂದ್ಲಾಜೆ, ಸಿ.ಟಿ.ರವಿ, ಶ್ರೀರಾಮುಲು ಸೇರಿದಂತೆ ವಿವಿಧ ಪ್ರಮುಖರು ಭಾಗವಹಿಸಲಿದ್ದಾರೆ.

ಅಂದು ಸಾವಿರಾರು ಸಂಖ್ಯೆಯಲ್ಲಿ ಜನ ಸೇರುವ ನಿರೀಕ್ಷೆ ಇದೆ. ಸರ್ವರೂ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೆ ಸಹಕರಿಸಬೇಕು. ಕಾರ್ಯಕರ್ತರು ಒಗ್ಗಟ್ಟಾಗಿ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು. ಭಾಜಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭೀಮಣ್ಣ ಮೇಟಿ ಮಾತನಾಡಿದರು.

ಮಾಜಿ ಎಂಎಲ್ಸಿ ಅಮಾತೆಪ್ಪ ಕಂದಕೂರ, ಬಿಜೆಪಿ ತಾಲೂಕು ಅಧ್ಯಕ್ಷ ಡಾ.ಮಲ್ಲಣ್ಣಗೌಡ ಉಕ್ಕಿನಾಳ, ನಗರ ಅಧ್ಯಕ್ಷ ಲಾಲನಸಾಬ ಖುರೇಶಿ, ಮುಖಂಡರಾದ ಡಾ.ಚಂದ್ರಶೇಖರ ಸುಬೇದಾರ, ಮಲ್ಲಣ್ಣ ಮಡ್ಡಿ, ಭೀಮಣ್ಣ ಮೇಟಿ, ಭೀಮಯ್ಯಗೌಡ ಕಟ್ಟಿಮನಿ, ರಾಜೂ ಗೂಗಲ್, ಶಾಂತಪ್ಪ ಕಟ್ಟಿಮನಿ, ವಸಂತಕುಮಾರ ಸುರಪುರಕರ್ ಉಪಸ್ಥಿತರಿದ್ದರು.
———————-

ಯೋಗಿ ಆದಿತ್ಯನಾಥ ಆಗಮನ ನಿರೀಕ್ಷೆಃ ಪಾಟೀಲ್

ಡಿ. 11 ರಂದು ಶಹಾಪುರ ನಗರಕ್ಕೆ ಆಗಮಿಸಲಿರುವ ಬಿಜೆಪಿಯ ಪರಿವರ್ತನಾ ಯಾತ್ರೆ ಕಾರ್ಯಕ್ರಮಕ್ಕೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಆಗಮನದ ನಿರೀಕ್ಷೆಯಲ್ಲಿದ್ದೇವೆ ಎಂದು ಶಾಸಕ ಗುರು ಪಾಟೀಲ್ ಶಿರವಾಳ ಪತ್ರಕರ್ತರಿಗೆ ತಿಳಿಸಿದರು.

ಅಂದು ಕಲಬುರ್ಗಿಗೆ ಆಗಮಿಸಲಿದ್ದಾರೆ ಎಂದು ಪಕ್ಷದ ಉನ್ನತ ಮೂಲಗಳಿಂದ ತಿಳಿದು ಬಂದಿದೆ. ಹೀಗಾಗಿ ಶಹಾಪುರದ ಕಾರ್ಯಕ್ರಮಕ್ಕೂ ಅವರಿಗೆ ಆಹ್ವಾನ ನೀಡಿದ್ದು, ಅಂದು ಯಾತ್ರೆ, ಅಥವಾ ಬಿಜೆಪಿಯ ಸಮಾವೇಶ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಾಧ್ಯತೆಗಳಿವೆ ಎಂದು ಅವರು ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button