ಕಥೆ

ಸಹಕಾರ ಹೇಗೆ ಪಡೆಯಬೇಕು ಉಪಾಯ ತೋರಿದ ಗೆಳೆಯ

ದಿನಕ್ಕೊಂದು ಕಥೆ

ಸಹಕಾರ ಪಡೆಯುವ ಉಪಾಯ.!

ಜಗತ್ತಿನಲ್ಲಿ ಒಬ್ಬ ವ್ಯಕ್ತಿಗೆ ಇತರರಿಂದ ಬೆಂಬಲ, ನೆರವು, ಸಹಕಾರ ಸಿಗಬೇಕೆಂದಾದರೆ ಅವನಲ್ಲಿ ತನ್ನದೇ ಆದ ಆರ್ಥಿಕ ಶಕ್ತಿ, ಬೌದ್ಧಿಕ ಬಲ, ದೈಹಿಕ ಸಾಮರ್ಥ್ಯವಿರಬೇಕು. ಏನೂ ಇಲ್ಲದ ದುರ್ಬಲರನ್ನು, ಅಶಕ್ತರನ್ನು ಎಲ್ಲರೂ ತಿರಸ್ಕಾರದಿಂದ ಕಾಣುತ್ತಾರೆ.

ನೀರಿನಲ್ಲಿ ಬೆಳೆಯುವ ತಾವರೆ ಹೂ ಸೂರ್ಯನನ್ನು ಗೆಳೆಯನೆಂದು ಪರಿಗಣಿಸಿದರೂ, ಅದೇ ಸೂರ್ಯನು ನೀರಿಲ್ಲದಾಗ ತಾವರೆ ಹೂವಿಗೆ ನೆರವಾಗುವುದಿಲ್ಲ.
ಸೂರ್ಯನ ಬಿಸಿಲಿನ ಉಷ್ಣತೆಗೆ ಆ ತಾವರೆ ಹೂವು ಬಾಡಿ ಹೋಗುತ್ತದೆ ಎಂದು ಕವಿಯೊಬ್ಬ ಎಚ್ಚರಿಸುತ್ತಾನೆ.

ಸಹಕಾರವನ್ನು ಪಡೆಯಲು ದಾರಿ ತೋರಿದ ಗೆಳೆಯನೊಬ್ಬನು ಮಾಡಿದ ಉಪಾಯವೊಂದರ ಪ್ರಸಂಗ ತುಂಬಾ ರೋಚಕವಾಗಿದೆ.

ಒಂದೂರಿನಲ್ಲಿ ಒಬ್ಬ ಶ್ರೀಮಂತ ವ್ಯಾಪಾರಿಯಿದ್ದ. ಆತನ ಬಳಿ ಸಾಕಷ್ಟು ಧನ ಸಂಪತ್ತಿದ್ದರೂ, ತನ್ನ ಬಳಿಕ ಈ ಸಂಪತ್ತಿಗಾಗಿ ಮಕ್ಕಳಲ್ಲಿ ಜಗಳವಾಗದಿರಲೆಂದು ಎಲ್ಲ ಧನ ಕನಕಾದಿಗಳನ್ನು ತನ್ನ ಐವರು ಪುತ್ರರಿಗೂ ಪಾಲು ಮಾಡಿ ಹಂಚಿಕೊಟ್ಟನು.

ಮಕ್ಕಳು ತಮ್ಮ ತಮ್ಮ ಪಾಲು ತೆಗೆದುಕೊಂಡು ತಮ್ಮದೇ ಆದ ಮನೆಗಳಲ್ಲಿ ಆರಾಮವಾಗಿರುತ್ತಾ, ತಂದೆಯನ್ನು ಮರೆತೇ ಬಿಟ್ಟರು. ತಂದೆ ಕಂಗಾಲಾಗಿ ಬಿಟ್ಟ ಏಕೆಂದರೆ ಅವನ ಪತ್ನಿ ಮೊದಲೇ ತೀರಿ ಹೋಗಿದ್ದಳು.

ಆ ವ್ಯಾಪಾರಿಗೊಬ್ಬ ಶ್ರೀಮಂತ ರತ್ನ ವ್ಯಾಪಾರಿ ಗೆಳೆಯನಿದ್ದ. ಅವನು ತನ್ನ ಗೆಳೆಯನನ್ನು ನೋಡಲು ಬಂದಾಗ, ತಂದೆಯ ಸಂಪತ್ತು ಖಾಲಿಯಾದುದರಿಂದಾಗಿ ಅವನನ್ನು ಯಾರೂ ಪ್ರೀತಿಯಿಂದ ಕಾಣುತ್ತಿಲ್ಲವೆಂದು ತಿಳಿಯಿತು.

ಆತ ನಾಳೆ ಬರುತೇನೆ ಎಂದು ಹೋದ. ಮರುದಿನ ಬರುವಾಗ ಒಂದು ಅಮೂಲ್ಯವಾದ ಪೆಟ್ಟಿಗೆಯನ್ನು ತಂದು, ತನ್ನ ಗೆಳೆಯನ ತಲೆಯ ಹತ್ತಿರ ಇಟ್ಟ. ಆಗ ಮನೆಗೆ ಆ ತಂದೆಯ ಸಣ್ಣ ಮಗನೂ ಬಂದಿದ್ದ. ಇದೇನು ಪೆಟ್ಟಿಗೆ ಎಂದು ಕೇಳಿದ.

ರತ್ನ ವ್ಯಾಪಾರಿ ನುಡಿದ ಇದು ವಜ್ರ ರತ್ನಗಳ ಪೆಟ್ಟಿಗೆ ನಿಮ್ಮ ತಂದೆಯದು. ಅವನಿಗೆ ನಡೀಲಿಕ್ಕೆ ಆಗುತ್ತಿಲ್ಲ. ಆದ್ದರಿಂದ ಹಿಂದಿರುಗಿಸಿದ್ದೇನೆ ಆಗ ಮಗನು ಆ ಪೆಟ್ಟಿಗೆ ನನಗೆ ಕೊಡಿರಿ ಎಂದಾಗ, ಸಾಧ್ಯವಿಲ್ಲ. ನಿಮ್ಮ ತಂದೆಯಿದ್ದಷ್ಟು ಕಾಲ ಅವರ ತಲೆಯ ಬಳಿ ಇರುತ್ತದೆ ಎಂದು ರತ್ನ ವ್ಯಾಪಾರಿ ಹೇಳಿದ.

ಆಗ ಸಣ್ಣ ಮಗ ತನ್ನ ನಾಲ್ಕು ಅಣ್ಣಂದಿರಿಗೆ ರತ್ನದ ಪೆಟ್ಟಿಗೆಯ ವಿಷಯ ತಿಳಿಸಿದ. ಎಲ್ಲರೂ ಓಡೋಡಿ ಬಂದರು. ಪ್ರೀತಿಯಿಂದ ತಂದೆಯ ಉಪಚಾರ ಸೇವೆ ಮಾಡತೊಡಗಿದರು. ಹೀಗೆ ರತ್ನ ವ್ಯಾಪಾರಿಯ ಉಪಾಯ ಫಲಿಸಿತು.

ದಾನ ಧರ್ಮ ಮಾಡುವ ಔದಾರ್ಯ ನಿಜಕ್ಕೂ ಶ್ಲಾಘನೀಯವೇ ಸರಿ. ಆದರೆ ತನ್ನ ಶಕ್ತಿ ಸಾಮರ್ಥ್ಯಗಳನ್ನು ಮೀರಿ ದಾನ ಮಾಡುವುದು, ಕೆಲವೊಮ್ಮೆ ಸಾಲ ಮಾಡಿಯಾದರೂ ಪರವಾಗಿಲ್ಲ, ಕೀರ್ತಿ ಸಂಪಾದನೆಗಾಗಿ ಚಂದಾ ನೀಡುವುದು ಇದೆಲ್ಲಾ ಅಪಾಯಕರವಾದ ಹೆಜ್ಜೆಗಳು. ಬಂಧು ಬಾಂಧವರಿಂದ ಮಿತ್ರರು ನೆರೆಕರೆಯವರಿಂದ ಅಗತ್ಯ ಬಿದ್ದಾಗ ಸಹಕಾರ ಉಪಕಾರ ನೆರವು ಸಿಗಬೇಕೆಂದಾದರೆ ಆ ವ್ಯಕ್ತಿಯಲ್ಲಿ ತನ್ನ ಸ್ವಂತವಾದ ಆರ್ಥಿಕ ಸಾಮರ್ಥ್ಯವೂ ಇರಬೇಕು.

ಅಂಥ ಶಕ್ತಿ ಸಾಮರ್ಥ್ಯಗಳನ್ನು ಭಗವಂತನು ಅನುಗ್ರಹಿಸಲೆಂದು ಹಾರೈಸುತ್ತಾ ಎಲ್ಲರೂ, ತಮ್ಮ ತಮ್ಮ ಕರ್ತವ್ಯಗಳಲ್ಲಿ ಮಗ್ನರಾಗಬೇಕು.

ಸಂಗ್ರಹ
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882

Related Articles

Leave a Reply

Your email address will not be published. Required fields are marked *

Back to top button