ಪೂರ್ಣಗೊಳ್ಳದ ರಸ್ತೆ ಕಾಮಗಾರಿ, ಸಂಚಾರಕ್ಕೆ ಸಂಚಕಾರ
ಯಾದಗಿರಿಃ ರಸ್ತೆ ದುರಸ್ತಿಗಾಗಿ ನಾಗರಿಕರ ಆಗ್ರಹ
ಯಾದಗಿರಿ, ಶಹಾಪುರಃ ಯಾದಗಿರಿ ಮುಖ್ಯ ರಸ್ತೆಯಿಂದ ತಾಲೂಕಿನ ಚಟ್ನಳ್ಳಿ ಗ್ರಾಮಕ್ಕೆ ಹೋಗುವ ರಸ್ತೆ ಕಾಮಗಾರಿ ವಿಳಂಬತೆಯಿಂದ ನಿತ್ಯ ಸಂಚಾರಕ್ಕೆ ತೊಂದರೆಯಾಗಿದೆ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ವರ್ಷದ ಹಿಂದೆ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಇದುವರೆಗೂ ಸಂಪೂರ್ಣ ಕಾಮಗಾರಿ ಕೈಗೊಳ್ಳದ ಕಾರಣ ನಾಗರಿಕರು ಸಂಚಾರಕ್ಕೆ ಪರದಾಡುವಂತಾಗಿದೆ.
ಗುತ್ತಿಗೆದಾರರು ಅರ್ಧಕ್ಕೆ ಕಾಮಗಾರಿ ನಿಲ್ಲಿಸಿ ಬಹು ದಿನಗಳಾದ ಕಾರಣ ರಸ್ತೆ ಮೇಲೆ ಸಂಪೂರ್ಣ ಕಂಕರ್ ತೇಲಿವೆ. ಹೀಗಾಗಿ ನಿತ್ಯ ವಾಹನಗಳ ಓಡಾಟಕ್ಕೆ ತೀವ್ರ ತೊಂದರೆಯಾಗಿದೆ ಎಂದು ಪ್ರಯಾಣಿಕರು ದೂರಿದ್ದಾರೆ. ಸಾಕಷ್ಟು ಬಾರಿ ಅವಘಡಗಳು ಸಂಭವಿಸಿದ್ದು, ಅದೃಷ್ಟವಶಾತ್ ವಾಹನ ಸವಾರರು ಪ್ರಾಣಪಾಯದಿಂದ ಪಾರಾಗಿದ್ದಾರೆ.
ಕೂಡಲೇ ಸಂಬಂಧಿಸಿದ ಅಧಿಕಾರಿಗಳು ರಸ್ತೆ ದುರಸ್ತಿಗೊಳಿಸಬೇಕು. ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಇಲ್ಲವಾದಲ್ಲಿ ಮುಂದೆ ಸಂಭವಿಸುವ ಅವಘಡಗಳಿಗೆ ಅಧಿಕಾರಿಗಳು ಮತ್ತು ಗುತ್ತಿಗೆದಾರರೇ ನೇರ ಹೊಣೆಗಾರರು ಎಂದು ಜನರು ಎಚ್ಚರಿಸಿದ್ದಾರೆ.
ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಾರು ಈ ರಸ್ತೆ ಅವ್ಯವಸ್ಥೆ ಸರಿಪಡಿಸದಿರುವದು ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಶಾಲಾ ಮಕ್ಕಳು ಗ್ರಾಮಸ್ಥರು ನಿತ್ಯ ಒಂದಿಲ್ಲೊಂದು ಕಾರ್ಯಕ್ಕಾಗಿ ಇತರೆ ವ್ಯಾಪಾರ ವಹಿವಾಟಿಗಾಗಿ ಶಹಾಪುರ ಮತ್ತು ಯಾದಗಿರಿ ಪಟ್ಟಣಕ್ಕೆ ಹಾದು ಹೋಗಲು ಹರಸಾಹಸ ಪಡುವಂತಾಗಿದೆ.
ಅಲ್ಲದೆ ಗಭೀಣಿ ಸ್ತ್ರೀಯರಂತು ಜೀವಭಯದಿಂದಲೇ ಪ್ರಯಾಣಿಸುವಂತಾಗಿದೆ. ಮಹಿಳೆಯರು ನಿತ್ಯ ಸಂಚರಿಸುವಾಗ ಇಡಿ ಶಾಪ ಹಾಕುವಂತಾಗಿದೆ. ಸಂಪೂರ್ಣ ರಸ್ತೆ ಮೇಲೆ ಕಂಕರ್ ತೇಲಿದ್ದು, ಮಹಿಳೆಯರು ಶಾಲಾ ಮಕ್ಕಳು ನಿತ್ಯ ವಾಹನಗಳು ಸಂಚರಿಸುವಾಗ ಅಧಿಕಾರಿಗಳಿಗೆ ಇಡಿ ಶಾಪ ಹಾಕುತ್ತಿರುವದು ಸುಳ್ಳಲ್ಲ ಎನ್ನುತ್ತಾರೆ ಗ್ರಾಮ ಮುಖಂಡ ಮಹಾಂತೇಶ ಪೂಜಾರಿ.
ಈಗಲಾದರೂ ಸಂಬಂಧಿಸಿದ ಅಧಿಕಾರಿಗಳು ಜನಪ್ರತಿನಿಧಿಗಳು ರಸ್ತೆ ಕಾಮಗಾರಿ ಪೂರ್ಣಗೊಳಿಸಿವ ಕೆಲಸ ಮಾಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಗ್ರಾಮಸ್ಥರಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಲಾಗುವದು ಎಂದು ಅವರು ಎಚ್ಚರಿಸಿದ್ದಾರೆ.