ಪ್ರಮುಖ ಸುದ್ದಿ

ಶಹಾಪುರಃ ಡೆಂಘೀ ಪೀಡಿತ ಓಣಿಗೆ ಅಪರ ನಿರ್ದೇಶಕ ಭೇಟಿ ಪರಿಶೀಲನೆ

ಅಪರ ನಿರ್ದೇಶಕರಿಂದ ಡೆಂಘೀ ತಡೆಗೆ ಹಲವು ಕ್ರಮಕ್ಕೆ ಸೂಚನೆ

ಯಾದಗಿರಿ, ಶಹಾಪುರಃ ಈಚೆಗೆ ನಗರದ ವಾರ್ಡ ನಂ 22ರ ಕುಂಚಿಕೊರವರ ಓಣಿಯಲ್ಲಿ ಡೆಂಘೀ ಪ್ರಕರಣದಿಂದ ಓರ್ವ ಬಾಲಕ ಮೃತಪಟ್ಟಿದ್ದಲ್ಲದೆ ಮೃತ ಬಾಲಕನ ಕುಟುಂಬದಲ್ಲಿಯೇ ಮತ್ತೆರಡು ಡೆಂಘೀ ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ನಿರ್ದೇಶನಾಲಯದ ಅಪರ ನಿರ್ದೇಶಕ ಓಂಪ್ರಕಾಶ ಪಾಟೀಲ್ ಶನಿವಾರ ಇಲ್ಲಿನ ಕುಂಚಿಕೊರವರ ಬಡಾವಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಡೆಂಘೀಯಿಂದ ಮೃತಪಟ್ಟಿದ್ದ ಬಾಲಕನ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ತಿಳಿಸಿ ವಿಚಾರಿಸಿದರು. ಕುಟಂಬದಲ್ಲಿ ಇನ್ನಿಬ್ಬರ ಬಾಲಕರಿಗೆ ಡೆಂಘಿ ಪತ್ತೆಯಾದ ಕುರಿತು ಮಾಹಿತಿ ಪಡೆದ ಅವರು, ಅದೇ ರೀತಿ ಇನ್ನುಳಿದ ಕುಟುಂಬದ ಎಲ್ಲರ ರಕ್ತ ಪರೀಕ್ಷೆ ಮಾಡಿಸುವಂತೆ ಸ್ಥಳದಲ್ಲಿದ್ದ ಸಿಬ್ಬಂದಿಗೆ ಸೂಚನೆ ನೀಡಿದರು.

ಅಲ್ಲದೆ ಬಡಾವಣೆಯಲ್ಲಿ ಚರಂಡಿ ಹೊಲಸು ನೀರು ಸಂಗ್ರಹ, ವಿಲೇವಾಗದ ತ್ಯಾಜ್ಯ, ಕೊಳಚೆ ನೀರು ಸಂಗ್ರಹ, ಹಂದಿಗಳ ವಾಸ ಹೀಗೆ ಅಸುರಕ್ಷತಾ ಪರಿಸರದಿಂದ ಡೆಂಘೀಯಂತಹ ಮಾರಕ ರೋಗಗಳು ಹರಡುತ್ತಿವೆ. ಮಾರಕ ರೋಗಗಳ ತಡೆಗೆ ಸೂಕ್ರ ಕ್ರಮಕೈಗೊಳ್ಳಲು ನಾಗರಿಕರಲ್ಲಿ ಜಾಗೃತಿ ಮೂಡಿಸುವ ಕುರಿತು ಇಲಾಖೆ ಸಿಬ್ಬಂದಿ ಕ್ರಮಕೈಗೊಳ್ಳಲಿದ್ದಾರೆ.
ಬಡಾವಣೆಯ ಸಂಪೂರ್ಣ ಮಾಹಿತಿ ಪಡೆದಿರುವೆ. ಕೂಡಲೇ ಮಾರಕ ರೋಗಗಳ ತಡೆಗೆ ಕ್ರಮಕ್ಕೆ ಸೂಚಿಸಿರುವೆ. ನಗರಸಭೆ, ನಾಗರಿಕರು ಇದಕ್ಕೆ ಕೈಜೋಡಿಸಬೇಕು. ಆಗ ಆರೋಗ್ಯಯುತ ವಾತಾವರಣ ನಿರ್ಮಾಣಕ್ಕೆ ಸಹಕಾರಿಯಾಗಲಿದೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಭಗವಂತ ಅನುವಾರ, ಆರ್.ಸಿ.ಎಚ್. ಅಧಿಕಾರಿ ಲಕ್ಷ್ಮಿಕಾಂತ, ಟಿಎಚ್‍ಓ ಡಾ.ರಮೇಶ ಗುತ್ತೇದಾರ, ತಾಲೂಕು ಆಸ್ಪತ್ರೆಯ ಮುಖ್ಯಾಧಿಕಾರಿ ಡಾ.ಮಲ್ಲಪ್ಪ ಕಣಜಿಗಿಕರ್, ಆರೋಗ್ಯ ಶಿಕ್ಷಣಾಧಿಕಾರಿ ಶಿವರಾಜ ಜಾನೆ, ಹಿರಿಯ ಆರೋಗ್ಯ ಸಹಾಯಕ ಸಂತೋಷ ಮುಳಜೆ, ಮಲ್ಲಪ್ಪ ಕಾಂಬಳೆ, ಸಂಗಣ್ಣ ನುಚ್ಚಿನ, ಪ್ರಮೀಳಾ ಹಾಜರಿದ್ದರು.

ಈಗಾಗಲೇ ನಗರದ ವಿವಿಧ ಬಡಾವಣೆಯಲ್ಲಿ ಜಾಗೃತಿ ಮೂಡಿಸಲಾಗಿದೆ. ಪರಿಸರ ಸ್ವಚ್ಛತೆಗೆ ಆದ್ಯತೆ ನೀಡುವಂತೆ ತಿಳಿಸಲಾಗಿದೆ. ಮತ್ತು ಆಸ್ಪತ್ರೆಯಲ್ಲಿ ಡೆಂಘೀ ಜ್ವರ ಸುಧಾರಣೆಗೆ ಸೂಕ್ತ ಚಿಕಿತ್ಸೆ ವ್ಯವಸ್ಥೆ ಮಾಡಲಾಗಿದೆ. ಮಾರಕ ರೋಗ ನಿವಾರಣೆಗೆ ಬೇಕಾದ ಔಷಧಿಗಳು ಸರ್ಕಾರಿ ಆಸ್ಪತ್ರೆಯಲ್ಲಿ ಲಭ್ಯವಿದ್ದು, ಸಮರ್ಪಕ ವ್ಯವಸ್ಥೆಗೆ ಅನುಕೂಲ ಕಲ್ಪಿಸಲಾಗಿದೆ. ಯಾರೊಬ್ಬರು ಆತಂಕ ಪಡುವ ಅಗತ್ಯವಿಲ್ಲ.

          -ಡಾ.ರಮೇಶ ಗುತ್ತೇದಾರ. ಟಿಎಚ್‍ಓ ಶಹಾಪುರ.

ಅಪರ ನಿರ್ದೇಶಕರಲ್ಲಿ ಸಿಬ್ಬಂದಿ ಮನವಿ

ಕಳೆದ ಏಳೆಂಟು ತಿಂಗಳಿಂದ ಸಂಬಳವಿಲ್ಲದೆ ಇಲ್ಲಿನ ನೌಕರರು ಪರದಾಡುವಂತಾಗಿದೆ. ಸಾಲ ಸೂಲ ಮಾಡಿಕೊಂಡು ಜೀವನ ತಳ್ಳುತ್ತಿದ್ದೇವೆ. ಕೂಡಲೆ ಸಂಬಳ ಬಿಡುಗಡೆಗೆ ವ್ಯವಸ್ಥೆ ಕಲ್ಪಿಸಬೇಕು. ಇಲ್ಲವಾದಲ್ಲಿ ಕರ್ತವ್ಯ ಸ್ಥಗಿತಗೊಳಸಿ ಹೋರಾಟ ಮಾಡುವ ಅನಿವಾರ್ಯತೆ ಎದುರಾಗಲಿದೆ ಎಂದು ಹಿರಿಯ ಆರೋಗ್ಯ ಸಹಾಯಕರ ಸಂಘದ ಅಧ್ಯಕ್ಷ ಮಲ್ಲಪ್ಪ ಕಾಂಬಳೆ ಅಪರ ನಿರ್ದೇಶಕರಲ್ಲಿ ಮನವಿ ಮಾಡಿಕೊಂಡರು.

ಈ ಕುರಿತು ಪರಿಶೀಲಿಸಿ ಅನುಕೂಲ ಕಲ್ಪಿಸುವೆ. ಕರ್ತವ್ಯ ನಿಭಾಯಿಸಿ, ಯಾವುದೇ ಆತಂಕ ಬೇಡು. ಈ ಕುರಿತು ಸರ್ಕಾರದ ಗಮನಕ್ಕೆ ತರಲಾಗುವದು ಎಂದು ಭರವಸೆಯನ್ನು ಅಪರ ನಿರ್ದೇಶಕ ಓಂ ಪ್ರಕಾಶ ನೀಡಿದರು.

Related Articles

Leave a Reply

Your email address will not be published. Required fields are marked *

Back to top button