ವಾಹನ ಚಾಲಕರಿಗೆ ಹೆದರಿಸಿ ಹಣ ವಸೂಲಿ ಮಾಡುತ್ತಿದ್ದ ಇಬ್ಬರ ಬಂಧನ
ಚಾಲಕನಿಗೆ ಹೆದರಿಸಿ 20 ಸಾವಿರ ರೂ.ವಸೂಲಿ ಮಾಡಿದ್ದ ಇಬ್ಬರ ಬಂಧನ
ಯಾದಗಿರಿ, ಶಹಾಪುರಃ ರಾಜ್ಯ ಹೆದ್ದಾರಿ ಹಾಗೂ ಆಯಕಟ್ಟಿನ ಕ್ರಾಸ್, ಮುಖ್ಯ ರಸ್ತೆಗಳಲ್ಲಿ ನಿಂತುಕೊಂಡು ರಸ್ತೆಯಲ್ಲಿ ಹಾಯ್ದು ಹೋಗುವ ವಾಹನಗಳ ಚಾಲಕರಿಗೆ ಹೆದರಸಿ ಹಣ ವಸೂಲಿ ಮಾಡುತ್ತಿದ್ದ ಇಬ್ಬರನ್ನು ಶಹಾಪುರ ಠಾಣಾ ಪೋಲಿಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಎಸ್ಪಿ ಹೃಷಿಕೇಶ ಭಾಗವಾನ ಸೋನಾವಾಲೆ ಮತ್ತು ಡಿವೈಎಸ್ಪಿ ವೆಂಕಟೇಶ ಹುಗಿಬಂಡೆ ಸೂಕ್ತ ಮಾರ್ಗದರ್ಶನದಲ್ಲಿ ನಗರ ಠಾಣೆ ಸಿಪಿಐ ಹನುಮರಡ್ಡೆಪ್ಪ ಮತ್ತು ಎಎಸ್‍ಐ ನಬಿಲಾಲ್ ಮತ್ತು ಎಚ್‍ಸಿಗಳಾದ ಬಾಬು ನಾಯ್ಕಲ್, ನಾರಾಯಣ, ಸತೀಶಕುಮಾರ ಸೇರಿದಂತೆ ಪಿಸಿಗಳಾದ ಗೋಕುಲ ಹುಸೇನ, ಭಾಗಣ್ಣ, ಹಣಮಂತ, ಸಿದ್ರಾಮಯ್ಯ, ಸಿದ್ಧವೀರ ತಂಡದಲ್ಲಿದ್ದರು.
ತಾಲೂಕಿನ ಹತ್ತಿಗೂಡೂರ ಕ್ರಾಸ್ ಬಳಿ ಹಾಗೂ ಬಸ್ ನಿಲ್ದಾಣದ ಆವರಣದಲ್ಲಿ ಸಂಚು ಹಾಕಿಕೊಂಡು ಸುತ್ತುತ್ತಿರುವಾಗ ಸೋಪಣ್ಣ ಹೆಳವ ಸಗರ (30) ಮತ್ತು ಶರಣಪ್ಪ ಕೃಷ್ಣಪ್ಪನೋರ್ (23) ಸಾ.ಖಾನಾಪುರ ಆರೋಪಿಗಳಿಬ್ಬರು ಲಾರಿ ಇತರೆ ವಾಹನಗಳು ರಸ್ತೆಗೆ ಬರುತ್ತಿದ್ದಂತೆ ಅಡ್ಡಲಾಗಿ ನಿಂತು ಬೆದರಿಸಿ ಹಣ ವಸೂಲಿ ಮಾಡುತ್ತಿರುವಾಗ ಪೊಲೀಸ್ ತಂಡ ದಾಳಿ ನಡೆಸಿ ಆರೋಪಿಗಳಿಬ್ಬರನ್ನು ಬಂಧಿಸಿ ಠಾಣೆಗೆ ತಂದು ವಿಚಾರಿಸಲಾಗಿದೆ.
ವಿಚಾರಣೆ ವೇಳೆ ಆರೋಪಿಗಳ ಹತ್ತಿರ 20.050 ರೂಪಾಯಿ ವಸೂಲಿ ಮಾಡಿದ್ದಾಗಿ ತಪ್ಪು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅಲ್ಲದೆ ವಸೂಲಿ ಹಣದಲ್ಲಿ ಪ್ರಸ್ತುತ ಅವರ 4590 ರೂಪಾಯಿಗಳು ಮಾತ್ರ ಇದ್ದು, ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳಿಬ್ಬರ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
—–