ದೇವದುರ್ಗದ ಸಾಹಸಿ ಬಾಲಕನಿಗೆ ಸಾಹಸ ಸೇವಾ ಪ್ರಶಸ್ತಿ!
ರಾಯಚೂರು: ಅದು ಪ್ರವಾಹದಿಂದ ತಪ್ಪಿಸಿಕೊಂಡು ಪ್ರಾಣ ಉಳಿಸಿಕೊಳ್ಳಲು ಪರದಾಡುವ ಸ್ಥಿತಿ. ಆದರೆ, ಅಲ್ಲಿ ಓರ್ವ ಬಾಲಕ ಮಾತ್ರ ತನ್ನ ಪ್ರಾಣದ ಹಂಗುಬಿಟ್ಟು ನೀರು ಭೋರ್ಗರೆಯುತ್ತಿದ್ದ ಸೇತುವೆ ಮೇಲೆ ಅಂಬುಲೆನ್ಸ್ ಗೆ ದಾರಿ ತೋರಿಸಿದ್ದ. ಆ ಅಂಬುಲೆನ್ಸ್ ನಲ್ಲಿ ನಾಲ್ವರು ಗಾಯಾಳುಗಳು ಹಾಗೂ ಒಂದು ಶವವಿತ್ತು. ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ದು ಜೀವ ಉಳಿಸುವ ಕಾಯಕದಲ್ಲಿದ್ದ ಚಾಲಕನಿಗೆ ಜಲಾವೃತಗೊಂಡ ಸೇತುವೆ ಮೇಲೆ ದಾರಿ ಕಾಣದಂತಾಗಿತ್ತು. ಆಗ ನೆರವಾದ ಬಾಲಕ ಸೇತುವೆ ಮೇಲೆ ಓಡಿ ದಾರಿ ತೋರುವ ಮೂಲಕ ಪ್ರಾಣ ಪಣಕ್ಕಿಟ್ಟು ಮಾನವೀಯತೆ ಮೆರೆದಿದ್ದನು. ಆ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು ಭಾರೀ ಮೆಚ್ಚುಗೆಗೆ ಪಾತ್ರವಾಗಿತ್ತು.
ಹೌದು, ಆ ಘಟನೆ ನಡೆದದ್ದು ದೇವದುರ್ಗ ತಾಲೂಕಿನ ಹಿರಿಯನಕುಂಪಿ ಗ್ರಾಮದಲ್ಲಿ. 12 ವರ್ಷದ ಬಾಲಕ ವೆಂಕಟೇಶ ಧೈರ್ಯದಿಂದ ನಾಲ್ವರ ಪ್ರಾಣ ರಕ್ಷಣೆಗೆ ಸಹಕಾರಿ ಆಗಿದ್ದನು. ಶೌರ್ಯ ಮೆರೆದ ಹುಡುಗನನ್ನು ಗುರುತಿಸಿದ ಜಿಲ್ಲಾಡಳಿತ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ರಾಯಚೂರು ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಾಲಕ ವೆಂಕಟೇಶ್ ಗೆ ಸಾಹಸ ಸೇವಾ ಪ್ರಶಸ್ತಿ ನೀಡಿ ಜಿಲ್ಲಾಧಿಕಾರಿ ಶರತ್ ಅವರು ಗೌರವಿಸುವ ಮೂಲಕ ಬೆನ್ನುತಟ್ಟಿದ್ದಾರೆ.