‘ಕಣ್ಣು ಬಿಟ್ಟಳಾ ದೇವಿ’ : ದೇಗುಲ ದರ್ಶನಕ್ಕೆ ಜನವೋ ಜನ!
ಹುಬ್ಬಳ್ಳಿ : ಕೆಲ ದಿನಗಳ ಹಿಂದಷ್ಟೇ ಅಲ್ಲಿನ ದೇಗುಲದ ದೇವಿ ಮೂರ್ತಿಗೆ ಅಳವಡಿಸಿದ್ದ ಬೆಳ್ಳಿ ಕಣ್ಣು ಕಳುವಾಗಿದ್ದವು. ಕಳ್ಳತನ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದರು. ದೇಗುಲಕ್ಕೆ ಬೀಗ ಹಾಕಲಾಗಿತ್ತು. ಆದರೆ, ನಿನ್ನೆ ಸಂಜೆ ವೇಳೆ ಇದ್ದಕ್ಕಿದ್ದಂತೆ ದೇಗುಲದ ಮೂರ್ತಿ ಮೇಲೆ ಬೆಳ್ಳಿ ಕಣ್ಣು ಪ್ರತ್ಯಕ್ಷವಾಗಿವೆ. ವಿಷಯ ತಿಳಿದದ್ದೇ ತಡ ಅರ್ಚಕರು ‘ದೇವಿ ಕಣ್ಣು ಬಿಟ್ಟಿದ್ದಾಳೆ’ ಎಂದು ಪೂಜಾ ಕೈಂಕರ್ಯ ಆರಂಭಿಸಿದ್ದಾರೆ.
ಹೌದು, ನಗರದ ಮಂಟೂರು ರಸ್ತೆಯ ನಲ್ಲಮ್ಮ ದೇಗುಲದಲ್ಲಿ ಘಟನೆ ನಡೆದಿದ್ದು ಭಕ್ತರು ದರ್ಶನಕ್ಕಾಗಿ ನಲ್ಲಮ್ಮ ದೇಗುಲದತ್ತ ಸಾಗರೋಪಾದಿಯಲ್ಲಿ ಬರುತ್ತಿದ್ದಾರೆ. ಜನ ಸಾಲುಗಟ್ಟಿ ದರ್ಶನಕ್ಕೆ ನಿಂತಿದ್ದು ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುವಂತಾಗಿದೆ. ಸಾಮಾಜಿಕ ಜಾಲತಾಣದಲ್ಲಿ ‘ದೇವಿ ಕಣ್ಣು ಬಿಟ್ಟ’ ವಿಚಾರ ಭಾರೀ ಸದ್ದು ಮಾಡುತ್ತಿದೆ.
ಇನ್ನು ಇಷ್ಟೆಲ್ಲದರ ನಡುವೆ ದೇವಿಯ ಬೆಳ್ಳಿ ಕಣ್ಣು ಕದ್ದವರು ಯಾರು?. ಯಾವಾಗ ಮತ್ತೆ ಮರಳಿ ತಂದಿಟ್ಟರು? ಎಂಬ ಪ್ರಶ್ನೆಗಳು ಮೂಡಿವೆ. ಮತ್ತೊಂದು ಕಡೆ ದೇಗುಲವು ರೈಲ್ವೆ ಇಲಾಖೆಯ ವ್ಯಾಪ್ತಿಗೊಳಪಟ್ಟಿದ್ದು ದೇಗುಲ ತೆರವುಗೊಳಿಸುವ ಸುಳಿವು ಸಿಕ್ಕ ಹಿನ್ನೆಲೆ ಹೈಡ್ರಾಮಾ ಶುರುವಾಗಿದೆ ಎನ್ನಲಾಗುತ್ತಿದೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸಿ ಸತ್ಯಂಶ ಬಯಲು ಮಾಡಬೇಕಿದೆ ಎಂಬುದು ಪ್ರಗ್ನಾವಂತರ ಆಗ್ರಹವಾಗಿದೆ. ಅಂತಿಮವಾಗಿ ಯಾವುದು ಸತ್ಯ ‘ಅರ್ಚಕ ಪ್ರಿಯ ದೇವಿ’ಗೇ ಗೊತ್ತು!?