‘ಅಣ್ತಮ್ಮಾಸ್’ ಕಾಡಾನೆಗಳು ಕವಲು ದಾರಿಯಲ್ಲಿವೆ ಹುಷಾರ್!
ಚಿತ್ರದುರ್ಗ: ಕಳೆದ ತಿಂಗಳು 20 ನೇ ತಾರೀಖು ಚಿತ್ರದುರ್ಗ ಜಿಲ್ಲೆಯಲ್ಲಿ ಕಾಣಿಸಿಕೊಂಡಿದ್ದ ಅಣ್ತಮ್ಮಾಸ್ ಕಾಡಾನೆಗಳು ಇನ್ನೂ ಮರಳಿ ಕಾಡು ಸೇರಿಲ್ಲ. ಕಳೆದ 25 ದಿನಗಳಲ್ಲಿ ಹಿರಿಯೂರು, ತುಮಕೂರು, ಆಂದ್ರ, ಮೊಳಕಾಲ್ಮೂರು, ಚಳ್ಳಕೆರೆ, ಚಿತ್ರದುರ್ಗ ಮತ್ತು ಚನ್ನಗಿರಿ ತಾಲೂಕಿನ ವಿವಿದೆಡೆ ಕಾಣಿಸಿಕೊಂಡಿದ್ದ ಕಾಡಾನೆಗಳು ಅನೇಕ ಅವಾಂತರಗಳನ್ನು ಸೃಷ್ಠಿಸಿವೆ. ಆಂಧ್ರದ ಗಡಿಯಲ್ಲಿ ಇಬ್ಬರು ರೈತರು, ಚನ್ನಗಿರಿ ಭಾಗದಲ್ಲಿ ಇಬ್ಬರು ರೈತರನ್ನು ಬಲಿ ಪಡೆದಿದ್ದು ಹತ್ತಾರು ಜನರನ್ನು ಗಾಯಗೊಳಿಸಿವೆ.
ಚನ್ನಗಿರಿಯಲ್ಲಿ ಕಾಣಿಸಿಕೊಂಡಿದ್ದ ಕಾಡಾನೆಗಳು ಇನ್ನೇನು ಮರಳಿ ಭದ್ರಾ ಅರಣ್ಯದ ದಾರಿ ಹಿಡಿದಿವೆ ಎನ್ನಲಾಗಿತ್ತು. ಆದರೆ, ನಿನ್ನೆ ಅಣ್ತಮ್ಮಾಸ್ ಕಾಡಾನೆಗಳು ಬೇರ್ಪಟ್ಟಿವೆ. ದೊಡ್ಡ ಆನೆ ಚನ್ನಗಿರಿ ಅರಣ್ಯ ವ್ಯಾಪ್ತಿಯಲ್ಲಿದೆ. ಚಿಕ್ಕ ಆನೆ ಹೊಳಲ್ಕೆರೆ ತಾಲೂಕಿನ ದುಮ್ಮಿ, ಬೆಟ್ಟ ಕಡೂರು, ತಾಳಿಕಟ್ಟೆ ಗ್ರಾಮದ ಬಳಿ ಪ್ರತ್ಯಕ್ಷವಾಗಿದೆ. ಅಲ್ಲದೆ ಇಂದು ಒಟ್ಟು ಏಳು ಜನರ ಮೇಲೆ ದಾಳಿ ನಡೆಸಿದ್ದು ಹಲವೆಡೆ ಬೆಳೆ ನಾಶ ಪಡಿಸಿದೆ. ಪರಿಣಾಮ ಗಾಯಾಳುಗಳನ್ನು ದಾವಣಗೆರೆ, ಶಿವಮೊಗ್ಗದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಇನ್ನು ಬೇರ್ಪಟ್ಟಿರುವ ಕಾಡಾನೆಗಳು ಅಪಾಯಕಾರಿಯಾಗಿರುತ್ತವೆ. ಒಂಟಿ ಸಲಗಗಳು ಮೊದಲೇ ಗಾಬರಿಗೊಂಡಿದ್ದು ಸಿಕ್ಕಸಿಕ್ಕಂತೆ ದಾಳಿ ನಡೆಸುವ ಸಾಧ್ಯತೆ ಇರುತ್ತದೆ. ಹೀಗಾಗಿ, ಚನ್ನಗಿರಿ ಮತ್ತು ಹೊಳಲ್ಕೆರೆ ಭಾಗದ ರೈತರು ಜಾಗೃತರಾಗಿರಬೇಕು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ ಆನೆ ದಾಳಿ ನಡೆಸಿದ್ದ ಸ್ಥಳದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಬೀಡು ಬಿಟ್ಟಿದ್ದು ಆನೆ ಪತ್ತೆ ಹಚ್ಚಿ ಕಾಡಿಗಟ್ಟುವ ಕಾರ್ಯಾಚರಣೆ ನಡೆಸಿದ್ದಾರೆ