ಧರ್ಮಸ್ಥಳ ಸಂಸ್ಥೆ ಸಮಾಜ ಮುಖಿ ಕಾರ್ಯಕ್ಕೆ ಸದಾ ಅಸ್ತು-ಗದ್ದುಗೆ
ಅರ್ಹ ಬಡ ವಿದ್ಯಾರ್ಥಿಗಳಿಗೆ ಲ್ಯಾಪ್‍ಟ್ಯಾಪ್, ಟ್ಯಾಬ್ ವಿತರಣೆ
yadgiri, ಶಹಾಪುರಃ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಸಂಸ್ಥೆ ಸದಾ ಸಮಾಜಮುಖಿ ಕಾರ್ಯಕ್ಕೆ ಮುಂದಾಗಿದ್ದು, ಕೊರೊನಾ ಹಾವಳಿಯಿಂದಾಗಿ ಕಲಿಕಾ ಶಿಕ್ಷಣ ನಿಂತ ನೀರಾಗಿದ್ದು, ವಿದ್ಯಾರ್ಥಿಗಳ ಮೇಲೆ ಅಗಾಧ ಪರಿಣಾಮ ಬೀರಿದೆ. ಆ ಹಿನ್ನೆಲೆಯಲ್ಲಿ ಮಕ್ಕಳ ವಿದ್ಯಾರ್ಜನೆಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸಂಸ್ಥೆ ಕಡಿಮೆ ದರದಲ್ಲಿ ಲ್ಯಾಪ್‍ಟ್ಯಾಪ್ ಮತ್ತು ಟ್ಯಾಬ್ ನೀಡುತ್ತಿರುವದು ಶ್ಲಾಘನೀಯ ಕಾರ್ಯವಾಗಿದೆ ಎಂದು ಕರವೇ ಉತ್ತರ ಕರ್ನಾಟಕ ಅಧ್ಯಕ್ಷ ಶರಣು ಗದ್ದುಗೆ ತಿಳಿಸಿದರು.
ಇಲ್ಲಿನ ಗಂಗಾ ನಗರದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಅರ್ಹ ವಿದ್ಯಾರ್ಥಿಗಳಿಗೆ ಸಂಸ್ಥೆಯಿಂದ ಕಡಿಮೆ ದರದಲ್ಲಿ ಟ್ಯಾಬ್ ವಿತರಣೆ ಕುರಿತ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಬಡ ವಿದ್ಯಾರ್ಥಿಗಳ ಶಿಕ್ಷಣದ ಹಿತದೃಷ್ಟಿಯಿಂದ ಜ್ಞಾನತಾಣ ಕಾರ್ಯಕ್ರಮ ಮೂಲಕ ಬಡ ವಿದ್ಯಾರ್ಥಿಗಳಿಗೆ ಅಂತರ್ಜಾಲದ ಸ್ಪರ್ಶ ನೀಡಿ ಅದಕ್ಕೆ ಬೇಕಾದ ಟ್ಯಾಬ್ ಮತ್ತು ಲ್ಯಾಪ್‍ಟ್ಯಾಪ್ ಕಡಿಮೆ ದರದಲ್ಲಿ ವಿತರಿಸುತ್ತಿದ್ದ ಅರ್ಹ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯಬೇಕು ಎಂದರು.
ಶಹಾಪುರ ಶಾಖಾ ಯೋಜನಾಧಿಕಾರಿ ನಾಗರಾಜ ಹದ್ಲಿ ಮಾತನಾಡಿ, ಬಡ ವಿದ್ಯಾರ್ಥಿಗಳ ಶಿಕ್ಷಣದ ಭವಿಷ್ಯ ಉಜ್ವಲಗೊಳಿಸಬೇಕೆಂಬ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗಡೆ ಅವರ ಮೂಲ ಉದ್ದೇಶದಂತೆ, ಮಹಿಳಾ ಸಬಲೀಕರಣ ಜೊತೆಗೆ ಶೈಕ್ಷಣಿಕವಾಗಿ ಮಕ್ಕಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಅತ್ಯಂತ ಕಡಿಮೆ ದರದಲ್ಲಿ ಟ್ಯಾಬ್, ಲ್ಯಾಪ್‍ಟ್ಯಾಪ್ ವಿತರಿಸಲಾಗುತ್ತಿದೆ. ಮಹಿಳೆಯರು ಸ್ವಉದ್ದೇಗ ಕಂಡುಕೊಂಡು ಸ್ವ ಸಹಾಯ ಸಂಘಗಳ ಮೂಲಕ ಆರ್ಥಿಕ ನೆರವು ಪಡೆದುಕೊಂಡು ಕುಟುಂಬದ ಅಭಿವೃದ್ಧಿಯಲ್ಲಿ ಪಾಲುದಾರರಾಗಬೇಕೆಂದು ಕರೆ ನೀಡಿದರು.
ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನಾರಾಯಣಾಚಾರ್ಯ ಸಗರ ಮಾತನಾಡಿ, ಮಕ್ಕಳ ಶಿಕ್ಷಣದಲ್ಲಿ ತಂದೆ ತಾಯಿಯರ ಪಾತ್ರ ಬಹುಮುಖ್ಯವಾಗಿದ್ದು, ವಿದ್ಯಾರ್ಥಿಗಳು ಸಂಸ್ಥೆ ಕೊಡಮಾಡಿದ ಯೋಜನೆಯ ಸದ್ಭಳಿಕೆ ಮಾಡಿಕೊಂಡು ಬದುಕಿನಲ್ಲಿ ಸನ್ಮಾರ್ಗದಿ ಬೆಳೆಯುವ ಮೂಲಕ ಸಾರ್ಥಕತೆ ಪಡೆದುಕೊಳ್ಳಬೇಕು ಎಂದರು. ಇದೇ ಸಂದರ್ಭದಲ್ಲಿ ವಿಕಲಚೇತನರಿಗೆ ಅಗತ್ಯ ಉಪಕರಣಗಳನ್ನು ವಿತರಿಸಲಾಯಿತು.
ಒಕ್ಕೂಟದ ಅಧ್ಯಕ್ಷೆ ಲ್ಕಷ್ಮೀ ನಾರಾಯಣ ಶೆಟ್ಟಿ, ಸಹಾಯಕ ಪ್ರಬಂಧಕ ವಿಜಯಕುಮಾರ ಇದ್ದರು. ತಾಲೂಕಿನ ಜ್ಞಾನ ವಿಕಾಸ ಸಮನ್ವಯಧಿಕಾರಿ ಸಾವಿತ್ರಿ ಸ್ವಾಗತಿಸಿದರು. ಮೇಲ್ವಿಚಾರಕ ಶಿವಲಿಂಗಮ್ಮ ನಿರೂಪಿಸಿದರು.