ಮಾಂಧಾತ ಯಾರು ಗೊತ್ತಾ..? ಆತನ ಸಂಕ್ಷಿಪ್ತ ಪರಿಚಯ
ದಿನಕ್ಕೊಂದು ಕಥೆ
ಮಾಂಧಾತನ ಕಥೆ
ಇಕ್ಷ್ವಾಕು ವಂಶದ ಅರಸನಾದ ಯುವನಾಶ್ವನಿಗೆ ಬಹುಕಾಲ ಮಕ್ಕಳಾಗದಿರಲು ಆತನು ಅನೇಕ ಋಷಿಗಳು ಹಾಗೂ ಋತ್ವಿಜರ ಸಹಾಯದಿಂದ ಇಂದ್ರಯಾಗವನ್ನು ಕೈಗೊಳ್ಳುತ್ತಾನೆ. ಒಂದು ರಾತ್ರಿ ಯುವನಾಶ್ವನಿಗೆ ಬಹಳ ಬಾಯಾರಿಕೆಯಾಗಿ ನೀರು ಕುಡಿಯಲು ಯಜ್ಞಶಾಲೆಗೆ ಬರುತ್ತಾನೆ.
ಎಲ್ಲ ಋಷಿಗಳೂ ಗಾಢವಾದ ನಿದ್ರೆಯಲ್ಲಿದ್ದುದರಿಂದ ಅವರಿಗೆ ತೊಂದರೆ ನೀಡಬಾರದೆಂದು ಯಾಗಕುಂಡದ ಬಳಿ ಮಡಕೆಯೊಳಗೆ ಇದ್ದ ನೀರನ್ನು ಕುಡಿದು ಬಿಡುತ್ತಾನೆ.
ಮರುದಿನ ಮಡಕೆಯೊಳಗೆ ನೀರಿಲ್ಲದಿರುವುದನ್ನು ಕಂಡ ಋಷಿಗಳು ಪ್ರಶ್ನಿಸಲಾಗಿ ತಾನು ಅದನ್ನು ಸೇವಿಸಿ ಬಿಟ್ಟಿರುವುದಾಗಿ ತಿಳಿಸುತ್ತಾನೆ.
ಆ ಜಲವು ಮಂತ್ರ ಜಲವಾಗಿದ್ದು ಅದನ್ನು ಯುವನಾಶ್ವನ ಪತ್ನಿ ಸೇವಿಸಿ ಗರ್ಭಿಣಿಯಾಗಬೇಕಿತ್ತು ಆದರೆ ಈಗ ಪ್ರಮಾದ ಜರುಗಿದ ಕಾರಣ ಯುವನಾಶ್ವನೇ ಗರ್ಭಧರಿಸಬೇಕು ಎಂದು ಋಷಿಗಳು ತಿಳಿಸುತ್ತಾರೆ.
ಹಾಗೆಯೇ ಆಗಿ ಯುವನಾಶ್ವನ ಹೊಟ್ಟೆಯ ಬಲಭಾಗವನ್ನು ಸೀಳಿಕೊಂಡು ಗಂಡು ಶಿಶುವಿನ ಜನನವಾಗುತ್ತದೆ. ಋಷಿಪ್ರಭಾವದಿಂದ ಯುವನಾಶ್ವನಿಗೆ ಯಾವ ನೋವಿನ ಅನುಭವವಾಗುವುದಿಲ್ಲ.
ಜನಿಸಿದ ಶಿಶುವು ಹಾಲಿಗಾಗಿ ಅಳಲು ಇಂದ್ರನು ಪ್ರತ್ಯಕ್ಷವಾಗಿ ತನ್ನ ಬೆರಳನ್ನೇ ಮಗುವಿಗೆ ಚೀಪಲು ನೀಡುತ್ತಾನೆ. ಸುರಲೋಕದ ಹಾಲು ಇಂದ್ರನ ಬೆರಳಿನಿಂದ ಹರಿಯುತ್ತದೆ. ನನ್ನಿಂದ ಕುಡಿ ಎಂದು ಇಂದ್ರ ಹೇಳಿದ ಕಾರಣ ಮಗುವಿಗೆ “ಮಾಂಧಾತ ಅಥವಾ ಮಾಂಧಾತ್ರಿ ” ಎಂದು ಹೆಸರಾಯಿತು.
ಕೇವಲ ಹನ್ನೆರಡು ದಿನಗಳಲ್ಲೇ ಮಾಂಧಾತನು ಹನ್ನೆರಡು ವರ್ಷಗಳ ಬಾಲಕನಷ್ಟು ಬೆಳೆದು ಬಿಡುತ್ತಾನೆ. ಅವನಿಗೆ ಸಕಲ ವೇದಶಾಸ್ತ್ರಗಳ ಅರಿವು ತಂತಾನೇ ದೊರಕುತ್ತದೆ. ಮಾತ್ರವಲ್ಲ ಶಿವನ ಧನುಸ್ಸು,ಅಕ್ಷಯ ಬತ್ತಳಿಕೆ ಮತ್ತು ಅಭೇದ್ಯ ಕವಚಗಳೂ ಪ್ರಾಪ್ತವಾಗುತ್ತದೆ. ಇವುಗಳ ಸಹಾಯದಿಂದ ಮಾಂಧಾತನು ಪಾತಾಳ, ಭೂಮಿ ಹಾಗೂ ಇಂದ್ರನನ್ನು ಹೊರತುಪಡಿಸಿ ಅರ್ಧ ಸ್ವರ್ಗ ಲೋಕಗಳ ಆಧಿಪತ್ಯ ಸಾಧಿಸುತ್ತಾನೆ.
ಲಂಕಾಧಿಪತಿಯಾದ ರಾವಣ ಸಹ ಇವನಿಗೆ ಹೆದರಿ ತೆಪ್ಪಗಿರುತ್ತಾನೆ. ಮಾಂಧಾತನು ಬಿಂದುಮತಿ ಎಂಬವಳನ್ನು ವಿವಾಹವಾಗಿ ಪುರುಕುತ್ಸ, ಅಂಬರೀಷ ಮತ್ತು ಮುಚುಕುಂದರೆಂಬ ಮೂರು ಗಂಡು ಮಕ್ಕಳನ್ನೂ ಐವತ್ತು ಹೆಣ್ಣು ಮಕ್ಕಳನ್ನೂ ಪಡೆಯುತ್ತಾನೆ.
ಈತನು ನೂರು ರಾಜಸೂಯ ಮತ್ತು ನೂರು ಅಶ್ವಮೇಧ ಯಾಗಗಳನ್ನು ಮಾಡಿ ಸ್ವರ್ಗವನ್ನೂ ತನ್ನ ವಶಕ್ಕೆ ಪಡೆಯುವ ಯೋಚನೆಯಲ್ಲಿರಲು ಇಂದ್ರನು ಅದಕ್ಕೆ ಮೊದಲು ಮಧುಪುರಿಯ ಅರಸನಾದ ಲವಣಾಸುರನನ್ನು ಜಯಿಸಿ ನಂತರ ಸುರಲೋಕದ ಆಧಿಪತ್ಯ ಬಯಸು ಎನ್ನುತ್ತಾನೆ.
ಈ ಲವಣಾಸುರನ ಬಳಿ ಪರಶಿವನು ನೀಡಿದ ದಿವ್ಯ ತ್ರಿಶೂಲವಿರುತ್ತದಾದ್ದರಿಂದ ಅವನು ಅಜೇಯನಾಗಿರುತ್ತಾನೆ. ಮಾಂಧಾತನ ಸೇನೆಯ ಮೇಲೆ ಈ ತ್ರಿಶೂಲವನ್ನು ಲವಣಾಸುರನು ಪ್ರಯೋಗ ಮಾಡಲು ಮಾಂಧಾತನೂ ಸೇರಿದಂತೆ ಸಮಸ್ತ ಸೈನ್ಯ ಭಸ್ಮವಾಗುತ್ತದೆ.
ಮುಂದೆ ಮಾಂಧಾತನ ವಂಶಸ್ಥನೂ ಶ್ರೀ ರಾಮನ ಸಹೋದರನೂ ಆದ ಶತ್ರುಘ್ನ ಲವಣಾಸುರನ ಬಳಿ ತ್ರಿಶೂಲ ಇಲ್ಲದೇ ಇರುವ ಸಂದರ್ಭ ನೋಡಿಕೊಂಡು ಅವನನ್ನು ಕೊಲ್ಲುತ್ತಾನೆ
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882