ಕಥೆ

ಅನ್ಯಾಯವನ್ನು ಪ್ರತಿಭಟಿಸುವುದು ಒಂದು ನ್ಯಾಯ, ವಿವೇಕಾನಂದರ ಒಂದು ಪ್ರಸಂಗ ಓದಿ

ಅನ್ಯಾಯದ ಪ್ರತಿಭಟನೆಯೂ ಕರ್ತವ್ಯವೇ ಸರಿ..

ಮಾನವನ ಬದುಕಿನಲ್ಲಿ ಅನೇಕ ಬಾರಿ ಅನೇಕ ತರಹದ ಅಪ್ರಿಯ, ಅಸಹ್ಯ ಘಟನೆಗಳು ಜರಗುವುದಿದೆ. ಆಗ ಶಾಂತಿ ಪ್ರೇಮಿಗಳು ಅಂಥ ಪ್ರಸಂಗದಲ್ಲಿ ಅಹಿಂಸಾವಾದಿಗಳಾಗಿ, ಶಾಂತಿಯಿಂದ ಸಹಿಸಿಕೊಳ್ಳಬೇಕು. ಅಶಾಂತರಾಗಿ ಹಿಂಸಾಪ್ರಿಯರಂತೆ ವಿರೋಧಿಸಬಾರದು ಎಂದು ಅಹಿಂಸಾ ವಾದಿಗಳು ವಾದಿಸುವುದು, ಉಪದೇಶಿಸುವುದು ಉಂಟು.

ಆದರೆ ಹಿಂಸಾ ಪ್ರೇಮಿಗಳ ಅನ್ಯಾಯ, ಅತ್ಯಾಚಾರಗಳನ್ನು ಹೇಗೆ ಮತ್ತು ಏಕೆ ಪ್ರತಿಭಟಿಸಬೇಕೆಂಬುದನ್ನು ನಿರೂಪಿಸುವಂತಹ ಸ್ವಾಮಿ ವಿವೇಕಾನಂದರ ಬದುಕಿನ ಒಂದು ಮಾರ್ಗದರ್ಶಕ ಪ್ರಸಂಗ ಅತೀವ ಸ್ವಾರಸ್ಯಕರವಾಗಿದೆ.

ಇದು ಬ್ರಿಟಿಷ್‌ ಆಡಳಿತ ಕಾಲದ ಪ್ರಸಂಗ. ಸ್ವಾಮಿ ವಿವೇಕಾನಂದರು ಒಮ್ಮೆ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದರು. ಅವರು ಕುಳಿತಿದ್ದ ಕಂಪಾರ್ಟ್‌ಮೆಂಟ್‌ನಲ್ಲಿ ಒಬ್ಬ ಭಾರತೀಯ ಮಹಿಳೆಯೂ ತನ್ನ ಮಗುವಿನೊಂದಿಗೆ ಪ್ರಯಾಣಿಸುತ್ತಿದ್ದಳು.

ಮುಂದಕ್ಕೆ ಒಂದು ಸ್ಟೇಶನ್‌ನಲ್ಲಿ ಇಬ್ಬರು ಆಂಗ್ಲ ಆಧಿಕಾರಿಗಳು ಬಂದು ಅದೇ ಕಂಪಾರ್ಟ್‌ಮೆಂಟ್‌ನಲ್ಲಿ ಮಹಿಳೆಯ ಎದುರಿನ ಸೀಟಿನಲ್ಲಿ ಕುಳಿತರು. ಆಂಗ್ಲರ ಆಡಳಿತ ಕಾಲವಾದ್ದರಿಂದ ಭಾರತೀಯರೊಂದಿಗೆ ಅಸಭ್ಯ ವ್ಯವಹಾರ ಮಾಡುವುದು ಸಹಜವೆಂಬಂತೆ ಆ ಮಹಿಳೆಯೆದುರು ವರ್ತಿಸತೊಡಗಿದರು.

ಮೊದಲಿಗೆ ಆ ಮಹಿಳೆಯ ಜತೆಗಿದ್ದ ಮಗುವಿನ ಕಿವಿಯನ್ನು ಹಿಂಡುವುದು, ಕೆನ್ನೆಯನ್ನು ಚಿವುಟುವುದು ಮೊದಲಾಗಿ ಕೀಟಲೆ ಮಾಡತೊಡಗಿದರು. ಇದರಿಂದ ಬೇಸರಗೊಂಡ ಮಹಿಳೆಯು ಮುಂದಿನ ಸ್ಟೇಶನ್‌ ಬಂದಾಗ, ಬೇರೆ ಕಂಪಾರ್ಟ್‌ಮೆಂಟ್‌ನಲ್ಲಿದ್ದ ಒಬ್ಬ ಭಾರತೀಯ ಪೊಲೀಸ್‌ ಅಧಿಕಾರಿಗೆ ದೂರು ನೀಡಿದಳು.

ಆ ದೂರಿನಂತೆ ಆ ಪೊಲೀಸ್‌ ಅಧಿಕಾರಿ ಬಂದರೂ ದೂರು ಆಂಗ್ಲರ ವಿರುದ್ಧ ಎಂದು ಗೊತ್ತಾದಾಗ, ಆತ ಏನೂ ಹೇಳದೆ ಹೊರಟು ಹೋದರು. ಇದನ್ನು ಕಂಡ ಆ ಆಂಗ್ಲ ಅಧಿಕಾರಿಗಳು ಮತ್ತೆ ಕೀಟಲೆ ಆರಂಭಿಸಿದರು.

ಇದೆಲ್ಲವನ್ನೂ ಬಹು ಹೊತ್ತಿನಿಂದ ಗಮನಿಸುತ್ತಿದ್ದ ವಿವೇಕಾನಂದರು ಈ ಆಂಗ್ಲ ಅಧಿಕಾರಿಗಳಿಗೆ ಸೂಕ್ತ ಪಾಠ ಕಲಿಸಬೇಕೆಂದು ನಿರ್ಧರಿಸಿದರು. ತಕ್ಷ ಣ ತಾವು ಕುಳಿತಲ್ಲಿಂದ ಎದ್ದು, ಆಂಗ್ಲ ಅಧಿಕಾರಿಗಳ ಎದುರುಗಡೆ ನಿಂತುಬಿಟ್ಟರು.

ಅವರ ಬಲಿಷ್ಠ ಕಾಯವನ್ನು ವೀಕ್ಷಿಸಿದ ಆಂಗ್ಲರು ಗಾಬರಿಯಾದರು. ಮೊದಲಿಗೆ ವಿವೇಕಾನಂದರು ಅವರಿಬ್ಬರ ಕಣ್ಣುಗಳನ್ನು ದಿಟ್ಟಿಸಿ ನೋಡಿದರು. ಬಳಿಕ ಎಡಗೈಯ ಶರ್ಟ್‌ನ ತೋಳನ್ನು ಮೇಲಕ್ಕೆ ಸರಿಸಿದರು ಮತ್ತು ಕೈಯನ್ನು ತಿರುಗಿಸಿ ಅವರಿಗೆ ತಮ್ಮ ಬಾಹುಗಳ ಸುಪುಷ್ಟವೂ, ಬಲಿಷ್ಠವೂ ಆದ ಮಾಂಸ ಖಂಡಗಳನ್ನು ತೋರಿಸಿದರು.

ವಿವೇಕಾನಂದರ ಈ ನಡವಳಿಕೆಯನ್ನು ಕಂಡು ಇಬ್ಬರೂ ಆಂಗ್ಲ ಅಧಿಕಾರಿಗಳು ಗಾಬರಿಯಾದರು ಮತ್ತು ಮುಂದಿನ ಸ್ಟೇಶನ್‌ ಬಂದೊಡನೆ ಇಳಿದು ಇನ್ನೊಂದು ಕಂಪಾರ್ಟ್‌ಮೆಂಟ್‌ಗೆ ಹತ್ತಿಕೊಂಡರು.

ಸ್ವಾಮಿ ವಿವೇಕಾನಂದರು ಭಾರತೀಯ ಸಂಸ್ಕೃತಿಯ ಹಿರಿಮೆ, ಗರಿಮೆಗಳನ್ನು ಅರಿತಿದ್ದ ಧೀಮಂತ ಪುರುಷರಾಗಿದ್ದು ತಮ್ಮ ಪ್ರವಚನಗಳಲ್ಲಿ ಈ ಉದಾಹರಣೆಯನ್ನು ನೀಡುತ್ತಿದ್ದರು. ಅವರು ಹಿಂಸೆಯ ಪರವಾಗಿರಲಿಲ್ಲ.

ಆದರೆ ಹಿಂಸಾತ್ಮಕವಾಗಿರುವವರನ್ನು ಎದುರಿಸಲು ಕೆಲವೊಮ್ಮೆ ದೃಢವಾದ ಶಾರೀರಿಕ ನಿಲುವುಗಳೇ ಬೇಕು. ದೃಢವಾದ ದೇಹವನ್ನೂ ವಿವೇಕಯುತವಾದ ಪ್ರಜ್ಞೆಯನ್ನೂ ಸ್ವಾಮಿ ವಿವೇಕಾನಂದರು ಪ್ರತಿಪಾದಿಸುತ್ತಿದ್ದರು.

ನಾವು ಅನ್ಯಾಯವನ್ನು ಪ್ರತಿಭಟಿಸದೆ, ಸಹಿಸುತ್ತಾ ಮುನ್ನಡೆದರೆ ಅನ್ಯಾಯ ಮಾಡುವವರು ಮತ್ತಷ್ಟು ಬಲಿಷ್ಠರಾಗುತ್ತಾರೆ. ಆದ್ದರಿಂದ ಅಧರ್ಮ, ಅನೀತಿ, ಅನ್ಯಾಯ ಮಾಡುವವರನ್ನು ಪ್ರತಿಭಟಿಸುವುದೂ ಕೂಡ ನ್ಯಾಯ, ನೀತಿ, ಧರ್ಮಗಳ ರಕ್ಷ ಣೆಯೇ ಆಗಿದೆ ಎಂಬುದನ್ನು ಮರೆಯುವಂತಿಲ್ಲ.

🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882

Related Articles

Leave a Reply

Your email address will not be published. Required fields are marked *

Back to top button