ಕಥೆ

ಬೇಡಿದ್ದನ್ನೆಲ್ಲಾ ನೀಡುವ ದೇವರು ದೇವರಲ್ಲ..ಈ ಕಥೆ ಓದಿ

ಬೇಡಿದ್ದನ್ನೆಲ್ಲಾ ನೀಡುವ ದೇವರು ದೇವರಲ್ಲ..

ಹಾಗಾದರೆ ದೇವರು ಯಾರು? ಇಲ್ಲಿರುವ ಪುಟ್ಟ ಘಟನೆಯೊಂದು ಉತ್ತರವನ್ನು ತೋರಿಸಬಹುದು!

ಒಬ್ಬ ಗೃಹಸ್ಥರ ಮನೆಯಲ್ಲಿ, ಅವರ ಹತ್ತು ವರ್ಷ ವಯಸ್ಸಿನ ಒಬ್ಬಳೇ ಮಗಳ ಹುಟ್ಟುಹಬ್ಬದ ಸಮಾರಂಭ ನಡೆಯುತ್ತಿತ್ತು. ಗೃಹಸ್ಥರ ಅನೇಕ ಗೆಳೆಯರು ಬಂದಿದ್ದರು. ಗೃಹಸ್ಥರ ಗೆಳೆಯರೊಬ್ಬರು ಕಟ್ಟಾ ನಾಸ್ತಿಕರಾಗಿದ್ದರು. ಅವರು ಆಕೆಗೆ ಒಂದು ಮರದ ಬೊಂಬೆಯನ್ನು ಉಡುಗೊರೆಯಾಗಿ ಕೊಟ್ಟಿದ್ದರು.

ಜಾಹಿರಾತು

ಎಲ್ಲರೂ ಔತಣಕೂಟದಲ್ಲಿ ಭಾಗವಹಿಸುತ್ತಿದ್ದಾಗ ಆಕೆ ಮರದ ಬೊಂಬೆಯೊಂದಿಗೆ ಆಟವಾಡುತ್ತಿದ್ದಳು. ಆಟದ ಮರದಗೊಂಬೆ ಮುರಿದುಹೋಯಿತು. ಮುರಿದ ಬೊಂಬೆಯನ್ನು ನೋಡಿ ಆಕೆ ಗಟ್ಟಿಯಾಗಿ ಅಳಲಾರಂಭಿಸಿದಳು.

ಆನಂತರ ಆಕೆ ದೇವರ ಮನೆಗೆ ಹೋದಳು. ಬೊಂಬೆಯನ್ನು ದೇವರ ಮಂಟಪದ ಮುಂದಿಟ್ಟು ದೇವರೇ, ಈ ಬೊಂಬೆ ಮುರಿದುಹೋಗಿದೆ. ಇದನ್ನು ರಿಪೇರಿ ಮಾಡಿಕೊಡು ಎಂದು ಬೇಡಿಕೊಂಡಳು.

ಇದನ್ನು ಗಮನಿಸಿದ ನಾಸ್ತಿಕ ಮಿತ್ರರು, ಆಕೆಗೆ ಮಗು! ನೀನು ಮುಗ್ಧೆ! ಆದರೆ ದೇವರೇ ಬಂದು ಮುರಿದುಹೋದ ಬೊಂಬೆ ರಿಪೇರಿ ಮಾಡಿಕೊಡುತ್ತಾನೆ ಎಂಬ ನಿನ್ನ ನಂಬಿಕೆ ಕಂಡು ನನಗೆ ಅಯ್ಯೋ ಎನಿಸುತ್ತದೆ. ಏಕೆಂದರೆ ಅಸ್ತಿತ್ವ ದಲ್ಲೇ ಇಲ್ಲ. ಆತ ಬಂದು ಯಾರ ಬೊಂಬೆಯನ್ನೂ ರಿಪೇರಿ ಮಾಡಿಕೊಟ್ಟದ್ದೂ ಇಲ್ಲ ಎಂದರು.

ಆಕೆ ನನಗೆ ಖಂಡಿತ ನಂಬಿಕೆಯಿದೆ. ದೇವರು ಖಂಡಿತ ಬೊಂಬೆಯನ್ನು ರಿಪೇರಿ ಮಾಡಿ, ಪರಿಹಾರ ಒದಗಿಸುತ್ತಾನೆ ಎಂದು ಹೇಳಿದಳು. ನಾಸ್ತಿಕರು ಮತ್ತೊಮ್ಮೆ ನಕ್ಕು, ದೇವರು ಖಂಡಿತ ಪರಿಹಾರ ಒದಗಿಸುವುದಿಲ್ಲ. ಬೇಕಿದ್ದರೆ ಕೇಳು. ಮುಂದಿನ ಸಾರಿ ನಾನೇ ಮತ್ತೊಂದು ಅಂತಹದ್ದೇ ಬೊಂಬೆ ತಂದುಕೊಡುತ್ತೇನೆ ಎಂದರು.

ಹುಡುಗಿ ದೃಢವಾದ ಧ್ವನಿಯಲ್ಲಿ ನೀವು ಮತ್ತೊಂದು ಬೊಂಬೆ ತರುವುದು ಬೇಡ. ಖಂಡಿತ ಪರಿಹಾರವನ್ನು ಕೊಡುತ್ತಾನೆ ಎಂದಳು.

ಅದಾದ ನಂತರ ಬಂದಿದ್ದ ಅತಿಥಿಗಳೆಲ್ಲ ಹೊರಟು ಹೋದರು. ಎಲ್ಲರೂ ಆ ಘಟನೆಯನ್ನು ಮರೆತೂ ಬಿಟ್ಟರು.

ಈ ಘಟನೆ ಸಂಭವಿಸಿದ ಐದಾರು ವರ್ಷಗಳಲ್ಲಿ ಆ ಹುಡುಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ಉತ್ತೀರ್ಣ ಳಾಗಿದ್ದಳು. ಆಕೆಯ ತಂದೆ ಮತ್ತೊಂದು ಔತಣಕೂಟ ಏರ್ಪಡಿಸಿ, ಗೆಳೆಯರನ್ನೆಲ್ಲ ಕರೆದಿದ್ದರು.

ಅಂದು ಕೂಡ ಆ ನಾಸ್ತಿಕ ಮಿತ್ರರು ಬಂದಿದ್ದರು. ಬಂದವರೇ ನೇರ ಆಕೆಯ ಬಳಿ ಹೋಗಿ ಮಗು! ಕಳೆದ ಬಾರಿ ನಾನು ಮರದ ಗೊಂಬೆಯನ್ನು ಉಡುಗೊರೆಯಾಗಿ ಕೊಟ್ಟಿದ್ದೆ. ಅದು ಮುರಿದು ಹೋದಾಗ ನೀನು ದೇವರ ಮನೆಗೆ ಹೋಗಿ ಬೊಂಬೆಯನ್ನು ರಿಪೇರಿ ಮಾಡಿಕೊಡೆಂದು ದೇವರನ್ನು ಬೇಡಿಕೊಂಡೆ. ದೇವರು ಬೊಂಬೆಯನ್ನು ರಿಪೇರಿ ಮಾಡಿಕೊಡಲಿಲ್ಲ ಅಲ್ಲವೇ? ಎಂದು ಕೇಳಿದರು.

ಆಕೆ ಇಲ್ಲವೆಂದು ತಲೆಯಾಡಿಸಿದಾಗ, ಅವರು ಆಕೆಗೆ ಮತ್ತೊಂದು ಬೊಂಬೆಯನ್ನು ಕೊಟ್ಟು ದೇವರು ನಿನಗೆ ಪರಿಹಾರ ಒದಗಿಸಿರುವುದಿಲ್ಲವೆಂದು ನನಗೆ ಗೊತ್ತಿತ್ತು.

ಅದಕ್ಕೇ ನಾನು ಮತ್ತೊಂದು ಅಂತಹದೇ ಬೊಂಬೆಯನ್ನು ತಂದಿದ್ದೇನೆ ಎಂದರು. ಆಗ ಆಕೆ ನಸುನಗುತ್ತಾ ದೇವರು ರಿಪೇರಿ ಮಾಡಿಕೊಡಲಿಲ್ಲ. ಆದರೆ ಬೊಂಬೆಗಳೊಂದಿಗೆ ಆಟವಾಡುತ್ತಿದ್ದ ನನ್ನನ್ನು

ಬೆಳೆಸಿ ದೊಡ್ಡವಳನ್ನಾಗಿ ಮಾಡಿದ್ದಾನೆ. ಬುದ್ಧಿಮತ್ತೆ ಹೆಚ್ಚಿಸಿದ್ದಾನೆ. ಈಗ ನನಗೆ ಬೊಂಬೆಗಳೊಂದಿಗೆ ಆಡುವುದು ಹುಚ್ಚಾಟವೆನಿಸುತ್ತದೆ.

ನಾನೀಗ ಬೊಂಬೆ ಇಲ್ಲದೆಯೂ ಸಂತೋಷವಾಗಿರುವಂತೆ ಮಾಡಿದ್ದಾನೆ. ಆದರೆ ಅಂಕಲ್, ನೀವು ದೇವರು ಇಲ್ಲ ಎನ್ನುವ ಚಕ್ರಸುಳಿಯಲ್ಲೇ ಉಳಿದು ಹೋಗಿದ್ದೀರಿ. ನೀವು ಬೆಳೆದೇ ಇಲ್ಲವಲ್ಲ! ಎಂದಳಂತೆ.

ನಮ್ಮ ದೇವರು ನಾವು ಬೇಡಿದ್ದನ್ನೆಲ್ಲಾ ನೀಡುವುದರ ಬದಲು, ನಾವು ಬೇಡುವ ವಸ್ತುವಿಗಿಂತ ನಮ್ಮನ್ನು ದೊಡ್ಡವರನ್ನಾಗಿ ಮಾಡಿದರೆ ಸಾಕಲ್ಲವೇ? ಯಾವುದೇ ವಸ್ತು ನಾವು ಸಂತಸದಿಂದ ಬದುಕಬಲ್ಲೆವು ಎಂಬುದನ್ನು ನಮಗೆ ಮನವರಿಕೆ ಮಾಡಿಕೊಟ್ಟರೆ, ಅದಕ್ಕಿಂತ ದೊಡ್ಡ ವರವನ್ನು ದೇವರು ಕೊಡಬೇಕಾಗಿಲ್ಲ ಅಲ್ಲವೇ? ಈಗ ನಮ್ಮ ದೇವರನ್ನು ನಾವೇನು ಬೇಡೋಣ?

🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882

Related Articles

Leave a Reply

Your email address will not be published. Required fields are marked *

Back to top button