ಕಥೆ

ಮೃತ್ಯುವೆಂಬುದೆ ಇಲ್ಲ.! ಡಾ.ಈಶ್ವರಾನಂದ ಶ್ರೀ ಬರಹ

ದಿನಕ್ಕೊಂದು ಕಥೆ

ಮೃತ್ಯುವೆಂಬುದು ಇಲ್ಲ!

ಇಂದು ಬೆಳಿಗ್ಗೆ ಯಾರೋ ಒಬ್ಬರು ನನ್ನಲ್ಲಿ ಕೇಳುತ್ತಿದ್ದರು. ಮೃತ್ಯು ಎಂದರೇನು? ಅವರಿಗೆ ನಾನು ಹೇಳಿದೆ. ಯಾರಿಗೆ ಜೀವನ ತಿಳಿದಿರುವುದಿಲ್ಲವೋ ಅವರಿಗೆ ಮಾತ್ರವೇ ಮೃತ್ಯು ಕಾಣಿಸುವುದು. ಯಾರಿಗೆ ಜೀವನ ತಿಳಿದಿರುವುದೋ ಅವರಿಗೆ ಮೃತ್ಯುವೆಂಬುದೇ ಇರುವುದಿಲ್ಲ. ಆದ್ದರಿಂದ ಮೃತ್ಯುವನ್ನು ತಿಳಿಯುವ ಉಪಾಯವಿದೆ.

ಯಾವಾಗ ನೀವು ಮೃತ್ಯುವನ್ನು ಅರಿಯುವಿರೋ ಆಗ ನಿಮಗೆ ತಿಳಿಯುವುದು ಮೃತ್ಯುವೆಂಬುದು ಇಲ್ಲ ಎಂದು. ಆದರೆ ಮೃತ್ಯುವಿನಿಂದ ಓಡಿಹೋಗುವ ಯಾವುದೇ ಉಪಾಯ ಇಲ್ಲ. ಏಕೆಂದರೆ ಹೀಗೆ ಓಡಿಹೋಗುವವನು ಮೃತ್ಯುವಿನ ಇರುವಿಕೆಯನ್ನು ಒಪ್ಪಿಕೊಂಡಿರುವವನಾಗಿರಬೇಕು ಹಾಗೂ ಆ ಮೃತ್ಯು ಆತನ ಹಿಂದೆ ಓಡಿ ಬರುತ್ತಲೇ ಇರುವುದು.

ಒಂದು ಸಣ್ಣ ಕಥೆಯೊಂದಿಗೆ ಕೊನೆಯ ಮಾತುಗಳನ್ನು ಹೇಳ ಬಯಸುತ್ತೇನೆ. ಒಬ್ಬ ರಾಜನ ಕುರಿತು ಒಂದು ಕಾಲ್ಪನಿಕ ಕಥೆ ಪ್ರಚಲಿತದಲ್ಲಿದೆ. ಒಂದು ಬೆಳಗಿನ ಜಾವ ಆತ ಕೆಟ್ಟ ಕನಸು ಕಂಡ. ಕನಸಿನಲ್ಲಿ ಮೃತ್ಯು ಅವನ ಹಿಂದೆಯೇ ನಿಂತಿತ್ತು.

ಆತ ಉದ್ಯಾನವನದ ಒಂದು ಮರದ ಸಮೀಪದಲ್ಲಿ ನಿಂತಿದ್ದ. ಮೃತ್ಯು ಆತನ ಹಿಂದೆ ನಿಂತಿತ್ತು. ಆತ ನೀನು ಯಾರು? ಎಂದು ಕೇಳಿದಾಗ ಅದು ನಾನು ಮೃತ್ಯು ನಿನ್ನನ್ನು ಕರೆದುಕೊಂಡು ಹೋಗಲು ಬಂದಿರುವೆ. ಇಂದು ಸಂಜೆ ಸರಿಯಾದ ಸಮಯಕ್ಕೆ ಸರಿಯಾದ ಜಾಗದಲ್ಲಿ ನನ್ನನ್ನು ಭೇಟಿಯಾಗು ಎಂದು ಹೇಳಿತು.

ಹೆದರಿಕೆಯಿಂದ ಆತನ ನಿದ್ದೆ ಹಾರಿಹೋಯಿತು. ಯಾರಿಗಾದರೂ ಕೂಡ ನಿದ್ದೆ. ಹಾರಿಹೋಗುವಂತಹ ವಿಷಯವೇ ಆದಾಗಿದೆ. ಕೂಡಲೇ ತನ್ನ ದರ್ಬಾರಿನ ವಿಚಾರಶೀಲ ವಿದ್ವಾಂಸನೂ, ಜ್ಯೋತಿಷಿಯೂ, ಪಂಡಿತನೂ ಆಗಿದ್ದವನಿಗೆ ಬರುವಂತೆ ಹೇಳಿ ಕಳುಹಿಸಿದ.

ತುಂಬಾ ಕೆಟ್ಟ, ಕನಸು ಬಿದ್ದಿತು. ನಾನು ತುಂಬಾ ತೊಂದರೆಯಲ್ಲಿ ಸಿಲುಕಿರುವಂತೆ ಕನಸು ಬಿದ್ದಿತು. ಮೃತ್ಯು ಹಿಂದೆ ಬಿದ್ದಿದೆ. ನಾನು ಕೇಳಿದೆ ನೀನು ಯಾರು ಎಂದು, ಅದು ತನ್ನ ಪರಿಚಯ ಹೇಳಿತು. ಅದರೊಂದಿಗೆ ಇಂದು ಸಂಜೆ ಸೂರ್ಯ ಮುಳುಗುವ ಮುನ್ನ ಸರಿಯಾದ ಸ್ಥಾನದಲ್ಲಿ ಸರಿಯಾದ ಸಮಯಕ್ಕೆ ಭೇಟಿಯಾಗಲು ಅದು ಹೇಳಿತು. ಇದು ನನ್ನ ಅಂತಿಮ ದಿನವೆಂದು ಅನ್ನಿಸುತ್ತಿದೆ. ಇದರ ಅರ್ಥವೇನು? ಎಂದು ಕೇಳಿದ ರಾಜ.

ಆ ಜ್ಯೋತಿಷಿ ಹೇಳಿದ. ಈಗ ಅದರ ಅರ್ಥವನ್ನು ಗ್ರಂಥ ಹಾಗೂ ಶಾಸ್ತ್ರಗಳಲ್ಲಿ ಹುಡುಕಿ ನೋಡುವಷ್ಟು ಸಮಯವಿಲ್ಲ. ಸಂಜೆಯ ಮುನ್ನ ನೀವು ಈ ಅರಮನೆಯಿಂದ ಎಷ್ಟು ದೂರ ಹೋಗಲು ಸಾಧ್ಯವಾಗುವುದೋ ಅಷ್ಟು ದೂರ ಸಾಗಿ ಹೋಗಿರಿ. ಇಲ್ಲವಾದರೆ ವಿಚಾರ ಮಾಡುವ ವೇಳೆಗೇ ಸಂಜೆಯಾಗಿರುತ್ತದೆ. ನೀವು ನಿರ್ಣಯ ಮಾಡುವ ವೇಳೆಗೆ ಕಥೆ ಮುಗಿದೇ ಹೋಗಿರುತ್ತದೆ. ಸೂರ್ಯ ಮುಳುಗಲು ಇನ್ನೂ ಸಮಯವಾದರೂ ಎಷ್ಟಿದೆ. ಉದಯಿಸುತ್ತಿರುವ ಸೂರ್ಯ ಬಹುಬೇಗ ಮುಳುಗಲು ಆರಂಭಿಸುತ್ತಾನೆ. ಎಷ್ಟು ಬೇಗ ಓಡಿಹೋಗಲು ಸಾಧ್ಯವಾಗುವುದೋ ಅಷ್ಟು ಬೇಗ ಓಡಿ ಹೋಗಿರಿ ಎಂದ.

ಆಗ ವೇಗವಾಗಿ ಓಡುವ ಕುದುರೆಯನ್ನೇರಿದ ರಾಜ ಅದನ್ನು ಓಡಿಸತೊಡಗಿದ. ಪ್ರಾಣವನ್ನು ಉಳಿಸಿಕೊಳ್ಳುವ ವಿಚಾರದಲ್ಲಿ ಪ್ರಾಣದ ಮೇಲಿನ ಹಂಗು ತೊರೆದು ಓಡಲಾರಂಭಿಸಿದ. ಕುದುರೆಯಲ್ಲಿ, ತನ್ನಲ್ಲಿ ಎಷ್ಟು ಶಕ್ತಿ ಇತ್ತೊ ಅದಷ್ಟನ್ನೂ ಬಳಸಿಕೊಂಡ. ಒಂದು ಉದ್ಯಾನದ ಸಮೀಪ ಹೋಗಿ ಕುದುರೆಯನ್ನು ಮರದ ಕೆಳಗೆ ಕಟ್ಟಿ ಹಾಕಿದ. ಆತ ಸೂರ್ಯ ಮುಳುಗುತ್ತಿರುವುದನ್ನು ಹಾಗೂ ಮೃತ್ಯು ಹಿಂದೆಯೇ ನಿಂತಿರುವುದನ್ನೂ ಗಮನಿಸಿದ. ರಾಜ ಗಾಬರಿಯಾಗಿ ಇದೇನಿದು? ಎಂದು ಕೇಳಿದ.

ಮೃತ್ಯು ಹೇಳಿತು. ನಿನಗೆ ಸರಿಯಾದ ಜಾಗಕ್ಕೆ ಸರಿಯಾದ ಸಮಯಕ್ಕೆ ಬರಲು ಹೇಳಿದ್ದೆ. ಇದೇ ಆ ಜಾಗ. ನಾವು ಯಾವುದರಿಂದ ದೂರ ಓಡಿ ಹೋಗುತ್ತಿರುತ್ತೇವೋ ವಾಸ್ತವದಲ್ಲಿ ಅದರತ್ತಲೇ ಓಡುತ್ತಿರುತ್ತೇವೆ ಎಂಬುದು ಈ ಕತೆಯ ತಿರುಳು.

🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882

Related Articles

Leave a Reply

Your email address will not be published. Required fields are marked *

Back to top button