ಕಥೆ

ರಮಣ ಮಹರ್ಷಿ-ಪಾಲ್ ಬ್ರಂಟನ್ ಈ ಕಥೆ ಓದಿ

ಭಾರತದ ಸಂತರನ್ನು ವಿಮರ್ಶಿಸುತ್ತಿದ್ದ ವಿದೇಶಿ ಬರಹಗಾರ ಕೌಪೀನಧಾರಿ ಎದುರು ಶರಣಾಗಿದ್ದ!

ರಮಣ ಮಹರ್ಷಿ-ಪಾಲ್ ಬ್ರಂಟನ್

ಪೌರಾತ್ಯ ತತ್ವಜ್ಞಾನ, ತತ್ವಜ್ಞಾನಿಗಳನ್ನು ಹಲವು ಪಾಶ್ಚಿಮಾತ್ಯರು ಪರಿಪರಿಯಾಗಿ ಪರೀಕ್ಷಿಸಿ, ವಿಮರ್ಶೆಗೊಳಪಡಿಸಿದ್ದಾರೆ. ವಿಮರ್ಶೆಗೊಳಪಡಿಸುತ್ತಾ, ಅದೆಷ್ಟೋ ಪಾಶ್ಚಿಮಾತ್ಯ ಬರಹಗಾರರು, ಪೌರಾತ್ಯ (ಭಾರತೀಯ) ತತ್ವಜ್ಞಾನದ ಸೆಳೆತಕ್ಕೊಳಗಾಗಿ, ಸನಾತನ ಶ್ರೀಮಂತಿಕೆಗೆ ಮಾರುಹೋಗಿದ್ದಾರೆ. ಅಂಥಹದ್ದೇ ಸಾಲಿನಲ್ಲಿ ನಿಲ್ಲುವವರು ಪಶ್ಚಿಮದ ಬರಹಗಾರ ಪಾಲ್ ಬ್ರಂಟನ್.

ಬ್ರಿಟನ್ ಮೂಲದ ಥಿಯೋಸಫಿಸ್ಟ್ ಪಾಲ್ ಬ್ರಂಟನ್ ಗೆ ಭಾರತವೆಂದರೆ ಬಾಲ್ಯದಿಂದಲೂ ಕುತೂಹಲ, ಆಕರ್ಷಣೆ. ಶಾಲೆಗೆ ಹೋಗುತ್ತಿರುವಾಗಲೇ ಆತನಿಗೆ ಜೀವನದಲ್ಲಿ ಒಮ್ಮೆಯಾದರೂ ಭಾರತವನ್ನು ನೋಡಬೇಕು ಎಂಬ ಅದಮ್ಯ ಇಚ್ಛೆ ಉಂಟಾಗಿತ್ತು.

ಅಂತೆಯೇ ಶಾಲಾ ಕಾಲೇಜು ವಿದ್ಯಾಭ್ಯಾಸವನ್ನು ಪೂರೈಸಿದ ನಂತರ ಪತ್ರಕರ್ತನಾಗಿ ಕಾರ್ಯನಿವಹಿಸುತ್ತಿದ್ದ ಪಾಲ್ ಬ್ರಂಟನ್ ಗೆ ಭಾರತಕ್ಕೆ ಭೇಟಿ ನೀಡುವ ಬಯಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇತ್ತು. ಪತ್ರಕರ್ತನಾಗಿ ದುಡಿದಿದ್ದು ಸಾಕು ಎಂದುಕೊಂಡ ಪಾಲ್ ಬ್ರಂಟನ್ ಒಂದು ದಿನ ಭಾರತಕ್ಕೆ ಹೊರಟು ನಿಂತ, ಆತನಿಗೆ ಭಾರತದ ವಿಪರೀತವಾದ ಸೆಳೆತವಿತ್ತು. ಅದು ಆಧ್ಯಾತ್ಮಿಕ ಸೆಳೆತ ಎನ್ನಿ, ಸಿದ್ಧಪುರುಷರನ್ನು ತಿಳಿಯುವ ಸೆಳೆತ.

ವಾರಾಣಸಿಯ ಮಂದಿರ, ಸರಯೂ ತೀರದಲ್ಲಿ ಹೋದಲ್ಲೆಲ್ಲಾ ಆ ಆಧ್ಯಾತ್ಮವನ್ನು ತಿಳಿಯಲು ಬ್ರಂಟನ್ ಗೆ ಎಲ್ಲಿ ಹೋದರೂ, ಯಾವುದೇ ಸಿದ್ಧ ಪುರುಷರನ್ನು ಕಂಡರೂ ಸಹ ತನ್ನ ಆಧ್ಯಾತ್ಮದ ಹಸಿವು ಹೋಗಲಿಲ್ಲ. ಜಿಜ್ಞಾಸೆಗೆ ಉತ್ತರ ಸಿಗಲಿಲ್ಲ, ಹಾಗಾಗಿಯೇ ಆತ ತಾನು ಭೇಟಿ ಮಾಡಿದ ಪವಾಡ ಪುರುಷರನ್ನು ವಿಮರ್ಶಿಸಲು ಪ್ರಾರಂಭಿಸುತ್ತಾನೆ.

ಬಾಲ್ ಬ್ರಂಟನ್ ಬರೆದಿರುವ ದಿ ಸರ್ಚ್ ಇನ್ ಸಿಕ್ರೆಟ್ ಇಂಡಿಯಾ ಪುಸ್ತಕದಲ್ಲಿ ತಾನು ಭೇಟಿ ಮಾಡಿದ ಪವಾಡ ಪುರುಷರರ ಬಗ್ಗೆ ಬರೆದಿರುವ ಬ್ರಂಟನ್, ಅವರ್ಯಾರಿಂದಲೂ ತನಗೆ ಬೇಕಾದ ಉತ್ತರ ಸಿಗಲಿಲ್ಲ ಎಂದು ವಿಮರ್ಶಿಸುತ್ತಾನೆ. ಒಂದಷ್ಟು ಪ್ರವಾಸದ ನಂತರ ಆತ ತಮಿಳುನಾಡಿಗೆ ಆಗಮಿಸುತ್ತಾನೆ.

ಆತನಿಗೆ ಅಲ್ಲಿ ಕಂಚಿಯ ಪರಮಾಚಾರ್ಯರ ಭೇಟಿಯಾಗುತ್ತದೆ. ಈ ವೇಳೆ ತಾನು ಭಾರತಕ್ಕೆ ಭೇಟಿ ನೀಡಿರುವ ಉದ್ದೇಶ, ಈ ವರೆಗೂ ಮಾಡಿದ್ದ ಕೆಲಸಗಳ ಬಗ್ಗೆ ಹೇಳುತ್ತಾನೆ. ಬ್ರಂಟನ್ ಜೊತೆ ಮಾತನಾಡಿದ್ದ ಕಂಚಿಯ ಪರಮಾಚಾರ್ಯರು ಅರುಣಾಚಲದಲ್ಲಿರುವ ರಮಣ ಮಹರ್ಷಿಗಳನ್ನು ದರ್ಶಿಸುವಂತೆ ಸಲಹೆ ನೀಡುತ್ತಾರೆ.

ಈ ವೇಳೆಗಾಗಲೇ ಭಾರತದಲ್ಲಿ ನಕಲಿಗಳನ್ನು ನೋಡಿ ಸುಸ್ತಾಗಿ ಹೋಗಿದ್ದ ಬ್ರಂತನ್ ಗೆ ರಮಣ ಮಹರ್ಷಿಗಳೂ ಸಹ ತಾನು ಈ ವರೆಗೂ ಭೇಟಿ ಮಾಡಿದಂತಹ ಪವಾಡ ಪುರುಷರಲ್ಲಿ ಒಬ್ಬರಾಗಿರಬೇಕು ಎನಿಸುತ್ತದೆ.

ಆದರೆ ರಮಣ ಮಹರ್ಷಿಗಳನ್ನು ನೋಡುತ್ತಿದ್ದಂತೆಯೇ ಬ್ರಂಟನ್ ದಂಗಾಗುತ್ತಾನೆ.  ತುಂಡು ಬೆಟ್ಟ, ಅದರ ಮೇಲೊಂದು ಆಶ್ರಮ ಅಲ್ಲೊಬ್ಬ ಸನ್ಯಾಸಿ. ಕೇವಲ ಕೌಪಿನ ಧಾರಿ.

ಸದಾ ಮೌನಧಾರಿ. ಅವರೇ ರಮಣ ಮಹರ್ಷಿಗಳು. ಉಳಿದ ಪವಾಡ ಪುರುಷರನ್ನು ಪರಿಪರಿಯಾಗಿ ಪ್ರಶ್ನಿಸುತ್ತಿದ್ದ ಪಾಲ್ ಬ್ರಂಟನ್ ಗೆ ಈ ಬಾರಿ ಅಚ್ಚರಿ ಎದುರಾಗಿತ್ತು. ರಮಣ ಮಹರ್ಷಿಗಳು ನೀನಾರು? ಎಂದು ಪ್ರಶ್ನಿಸಿದ್ದರು.

ಬ್ರಂಟನ್ ತನ್ನ ಊರನ್ನು ಹೇಳಿದ, ವೃತ್ತಿಯ ಬಗ್ಗೆ ಹೇಳಿದ. ತನ್ನ ಬಗ್ಗೆ ಹೇಳಿಕೊಂಡ. ಅಷ್ಟು ಕೇಳಿಯೂ ಕೂಡ ಮತ್ತೆ ರಮಣ ಮಹರ್ಷಿಗಳು ಪ್ರಶ್ನಿಸಿದರು ” ನೀನಾರು?  ಆ ಪ್ರಶ್ನೆ ಕೇವಲ ಪ್ರಾಪಂಚಿಕ ದೃಷ್ಟಿಯದ್ದಾಗಿರಲಿಲ್ಲ. ಆಧ್ಯಾತ್ಮದ ಪ್ರಶ್ನೆಯಾಗಿತ್ತು. ಪಾಲ್ ಬ್ರಂಟನ್ ಗೆ ತಲೆ ಕೆಟ್ಟಿತು.

ನಾನಾರು? ಎಂಬ ಪ್ರಶ್ನೆಯೇ ತುಂಬಿತ್ತು. ಉಳಿದೆಲ್ಲಾ ಪವಾಡ ಪುರುಷರನ್ನು ಪರಿಪರಿಯಾಗಿ ಪರೀಕ್ಷಿಸುತ್ತಿದ್ದ ಬ್ರಂಟನ್ ಮರು ಪ್ರಶ್ನೆ ಕೇಳಲಿಲ್ಲ. ರಮಣರೂ ಮಾತನಾಡಲಿಲ್ಲ. ಬ್ರಂಟನ್, ರಮಣರ ನಡುವೆ ನಡೆದ ಆ ಸಂವಾದ ಗುರು ಮೌನವಾಗಿದ್ದುಕೊಂಡೇ ಉಪದೇಶಿಸುತ್ತಾನೆ ಎಂಬುದಕ್ಕೆ ಅತ್ಯುತ್ತಮ ನಿದರ್ಶನ.

ಅಂದಿನಿಂದ ಬ್ರಂಟನ್ ರಮಣರನ್ನು ತನ್ನ ಗುರುವಾಗಿ ಸ್ವೀಕರಿಸಿದ. ರಮಣರ ಮಾರ್ಗದರ್ಶನ ಪಡೆದು ಪೌರಾತ್ಯ ತತ್ವಜ್ಞಾನ ಅರಿತ.  ಭಾರತದ ಸಂತರನ್ನು, ಪವಾಡ ಪುರುಷರನ್ನು ವಿಮರ್ಶಿಸುತ್ತಿದ್ದ ವಿದೇಶಿ ಬರಹಗಾರ ಕೌಪೀನಧಾರಿ ಎದುರು ಶರಣಾಗಿದ್ದ. ಅದೊಂದು ಘಟನೆ ಪಾಶ್ಚಿಮಾತ್ಯರು ಪೌರಾತ್ಯ(ಭಾರತೀಯ) ತತ್ವಜ್ಞಾನವನ್ನು ನೋಡುವ ದೃಷ್ಟಿಯ ಮೇಲೆ ಸಾಕಷ್ಟು ಪರಿಣಾಮ ಬೀರಿತ್ತು.

🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882

Related Articles

Leave a Reply

Your email address will not be published. Required fields are marked *

Back to top button