ಪಾಠ ಕಲಿಸಿತ್ತು ಸತ್ತ ನಾಯಿ..ಈ ಅದ್ಭುತ ಕಥೆ ಓದಿ
ದಿನಕ್ಕೊಂದು ಕಥೆ
ಹೆದ್ದಾರಿ ಬದಿಯ ಕ್ಯಾಂಟೀನಿಗೆ ಪ್ರತಿದಿನ ತಪ್ಪದೇ ಹಾಜರಾಗುತ್ತಿದ್ದ ಆತನೊಂದಿಗೆ ಅಲ್ಲಿನ ಬೀದಿನಾಯಿಯೊಂದು ತುಂಬಾ ಅಕ್ಕರೆಯ ಒಡನಾಟ ಹೊಂದಿತ್ತು.
ಆ ನಾಯಿ ಆತನನ್ನು ಕಾಣುತ್ತಿದ್ದಂತೆ ಶರವೇಗದಲ್ಲಿ ಓಡಿ ಬಂದು ಪಾದ ನೆಕ್ಕಲು ಶುರುಮಾಡುತ್ತಿತ್ತು. ಆತ ಹಾಕುತ್ತಿದ್ದ ಬಿಸ್ಕೆಟ್ಟು ಬ್ರೆಡ್ಡು ತಿಂದು ಸಂತೃಪ್ತಿಯಿಂದ, ಕೃತಜ್ಞತೆಯಿಂದ ಬಾಲ ಅಲ್ಲಾಡಿಸುತ್ತ ಅವನ ಎದೆಮಟ್ಟಕ್ಕೆ ಜಿಗಿದು ಪ್ರೀತಿ ತೋರಿಸುತ್ತಿತ್ತು.
ಆ ವ್ಯಕ್ತಿ ಮತ್ತು ನಾಯಿಯ ನಡುವಿನ ಬಾಂಧವ್ಯವನ್ನು ಅಲ್ಲಿನ ಜನರು ಸೋಜಿಗದಿಂದ ನೋಡುತ್ತಿದ್ದರು. ತಾವು ಲೆಕ್ಕಕ್ಕೇ ಇಟ್ಟುಕೊಳ್ಳದ ಯಃಕಶ್ಚಿತ್ ಒಂದು ಬೀದಿ ನಾಯಿಯೆಡೆಗೆ ಈತ ಇಷ್ಟೊಂದು ಅಕ್ಕರೆ ತೋರುತ್ತಿದ್ದಾನಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು.
ಆ ಮೆಚ್ಚುಗೆ ಅವನಿಗೆ ಹುಮ್ಮಸ್ಸು ನೀಡುತ್ತಿತ್ತು. ತಾನು ನಾಯಿಗೆ ತಿಂಡಿ ಹಾಕಿ ಮುದ್ದಿಸುತ್ತಿರುವುದನ್ನು ನಾಲ್ಕಾರು ಜನ
ಮೆಚ್ಚುಗೆಯ ಕಂಗಳಿಂದ ನೋಡುತ್ತಿದ್ದರೆ ಆತನ ಅಂತರಾಳದಲ್ಲಿ ಧನ್ಯತಾಭಾವ ಮೂಡುತ್ತಿತ್ತು.
ಇಬ್ಬರ ಒಡನಾಟ ಎಷ್ಟು ಜನಪ್ರಿಯವಾಯ್ತೆಂದರೆ ಸ್ಥಳೀಯ ಪತ್ರಿಕೆಯಲ್ಲಿ ಕೂಡಾ ಸುದ್ದಿಯಾಯಿತು.
ಆತ ತಾನು ಆಕರ್ಷಣೆಯ ಕೇಂದ್ರಬಿಂದುವಾಗಿರುವುದರಿಂದ ತನ್ನ ಜವಾಬ್ದಾರಿ ಕೂಡಾ ಹೆಚ್ಚಾಗಿದೆ ಎಂದು ಭಾವಿಸಿ ಸುತ್ತಮುತ್ತಲಿನ ಬೀದಿನಾಯಿಗಳ ಪೋಷಣೆಯಲ್ಲಿಯೂ ತೊಡಗಿಸಿಕೊಂಡ .
ಇದೇ ಉದ್ದೇಶಕ್ಕೆ ಒಂದು ಸಂಸ್ಥೆಯನ್ನು ಆರಂಭಿಸುವ ದಿಶೆಯಲ್ಲಿ ಕಾರ್ಯಪ್ರವೃತ್ತನಾದ.
ದುರದೃಷ್ಟವಶಾತ್ ಒಂದು ರಾತ್ರಿ ಆತನ ಪ್ರೀತಿಯ ನಾಯಿ ಅಪಘಾತಕ್ಕೊಳಗಾಗಿ ರಸ್ತೆ ಹೆಣವಾಯ್ತು. ಬೆಳಕು ಮೂಡಿ ನೆತ್ತಿಗೇರುತ್ತಿದ್ದರೂ ಆ ನಾಯಿಯ ಶವವನ್ನು ಯಾರೂ ಆಚೀಚೆ ಸರಿಸಿರಲಿಲ್ಲ.
ಆತ ರಸ್ತೆಯ ಮಧ್ಯೆ ರಕ್ತದ ಮಡುವಿನಲ್ಲಿ ಅಪ್ಪಚ್ಚಿಯಾಗಿ ಬಿದ್ದಿದ್ದ ತನ್ನ ಮುದ್ದಿನ ನಾಯಿಯನ್ನು ನೋಡಿದ ಕೂಡಲೇ ದುಃಖದಿಂದ ದಿಟ್ಟಿಸುತ್ತಾ ನಿಂತುಬಿಟ್ಟ. ರಸ್ತೆಯ ಬದಿಯಲ್ಲಿದ್ದ ಹಳ್ಳಕ್ಕೆ ಎಳೆದಿಡುವಂತೆ ಒಳಮನಸ್ಸು ಹೇಳುತ್ತಿತ್ತು.
ರಸ್ತೆಯಂಚಿನಲ್ಲಿ ನಿಂತು ಸುತ್ತಲೂ ಕಣ್ಣಾಡಿಸಿದ. ಅಕ್ಕಪಕ್ಕದ ಅಂಗಡಿ ಸಾಲಿನಲ್ಲಿ ಜನರು ಚಟುವಟಿಕೆಯಿಂದ ಓಡಾಡುತ್ತಿದ್ದರು. ಎಳನೀರಿನ ಗುಡ್ಡೆಯ ಬಳಿ ಮತ್ತು ಸೈಕಲ್ ಶಾಪಿನಲ್ಲಿ ಕುಳಿತಿದ್ದ ಮೂರ್ನಾಲ್ಕು ಜನರ ಕಣ್ಣುಗಳು ಮಾತ್ರ ಆತನನ್ನು ದಿಟ್ಟಿಸುತ್ತಿದ್ದವು.
ಯಾರೂ ಮುಟ್ಟದ ಆ ನಾಯಿಯ ಹೆಣವನ್ನು ತಾನು ಮುಟ್ಟಿದರೆ ನೋಡುವವರು ಏನಂದುಕೊಳ್ಳುತ್ತಾರೋ ಎಂಬ ಸಂಕುಚಿತ ಭಾವ ಆತನ ಮನಸ್ಸನ್ನು ಆಕ್ರಮಿಸಿತು.
ಬೈಕ್ ಸ್ಟಾರ್ಟ್ ಮಾಡಿಕೊಂಡು ಮುಂದೆ ಹೊರಟುಬಿಟ್ಟ. ಒಂದು ಕಿಲೋಮೀಟರ್ ದಾಟುವಷ್ಟರಲ್ಲಿ ಅಪರಾಧಿಪ್ರಜ್ಞೆ ಕೊರೆಯತೊಡಗಿತು. ತಾನು ದೃಢಮನಸ್ಸು ಮಾಡಿ ಅದನ್ನು ರಸ್ತೆ ಬದಿಯ ಹಳ್ಳಕ್ಕೆ ಎಳೆದಿಡಬೇಕಿತ್ತು ಅನ್ನಿಸಿತು. ಇನ್ನೂ ಕಾಲ ಮಿಂಚಿಲ್ಲ ಎಂದು ಬೈಕ್ ತಿರುಗಿಸಿ ಅಲ್ಲಿಗೆ ಬರುವಷ್ಟರಲ್ಲಿ ಭಿಕ್ಷುಕನೊಬ್ಬ ಅದನ್ನು ಹಳ್ಳಕ್ಕೆ ಎಸೆದು ಬರುತ್ತಿದ್ದ..
ಅಪರಾಧಿಪ್ರಜ್ಞೆ ನೂರ್ಮಡಿಯಾಯಿತು. ನಾಯಿ ಬದುಕಿದ್ದಾಗ ತಾನು ತೋರಿಸಿದ್ದು ಅಸಲಿ ಮಾನವೀಯತೆಯಲ್ಲ, ಅದು ಪರರನ್ನು ಮೆಚ್ಚಿಸುವುದಕ್ಕಷ್ಟೇ ಸೀಮಿತವಾಗಿತ್ತು ಅನ್ನಿಸಿತು..
ಮಾನವೀಯತೆಯೆಂದರೆ ಒಂದು ಜೀವವನ್ನು ಉಳಿಸುವುದಷ್ಟೇ ಅಲ್ಲ, ಸಾವಿನಾಚೆಗೂ ಅದರ ಘನತೆಯನ್ನು ಕಾಪಾಡುವುದು ನಿಜವಾದ ಮಾನವೀಯತೆ – ಎಂಬ ಪಾಠ ಕಲಿಸಿತು ನಾಯಿಯ ಸಾವು.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882