ಉದಾತ್ತ ಬದುಕು ತೆಂಗಿನ ಮರದ್ದು – ತಾಯಿ ಅಂದಳ್ಯಾಕೆ.?
ದಿನಕ್ಕೊಂದು ಕಥೆ
ಆಕೆ ಹಣ್ಣು ಮುದುಕಿ ಇಬ್ಬರು ಹೆಣ್ಣು ಮಕ್ಕಳು ಮದುವೆಯಾಗಿ ದೂರದ ಊರುಗಳನ್ನು ಸೇರಿಕೊಂಡಿದ್ದರು. ಮಗ ಸಂಸಾರದೊಂದಿಗೆ ಸಿಟಿಯಲ್ಲಿ ವಾಸಿಸುತ್ತಿದ್ದ. ಊರಿನ ದೊಡ್ಡ ಮನೆಯಲ್ಲಿ ತಾನೊಬ್ಬಳೇ ವಾಸಿಸುತ್ತಿದ್ದಳು.
ಆಸರೆ-ಬೇಸರಕ್ಕೆ ಪಕ್ಕದ ಮನೆಯ ಮುದುಕಿಯಿದ್ದಳು.
ಆರು ಎಕರೆ ತೆಂಗಿನ ತೋಟವನ್ನು ನೋಡಿಕೊಳ್ಳಲು ಮಗ ಆಳೊಬ್ಬನನ್ನು ನೇಮಿಸಿದ್ದ . ಮಗ ಪ್ರತಿ ವರ್ಷದಂತೆ ತೆಂಗಿನ ಮರಗಳು ತಾರುಗಟ್ಟುವ ಸಮಯಕ್ಕೆ ಸರಿಯಾಗಿ ಊರಿಗೆ ಬಂದಿದ್ದ.
ಈ ಬಾರಿಯ ತೆಂಗಿನ ದುಡ್ಡಿನಲ್ಲಿ ಮಗಳು ಸ್ಕೂಟಿಗೆ ಬೇಡಿಕೆಯಿಟ್ಟಿದ್ದಳು ,ಮಗ ಲ್ಯಾಪ್ಟಾಪಿಗೆ ಬೇಡಿಕೆಯಿಟ್ಟಿದ್ದ. ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಫಸಲು ಬಂದಿದ್ದನ್ನು ನೋಡಿ ಖುಷಿಪಡುತ್ತಾ ಮಕ್ಕಳ ಬೇಡಿಕೆಗಳಿಗೆ ಮನಸ್ಸಿನಲ್ಲೇ ಅಸ್ತು ಎಂದ.
ಅದೇ ಖುಷಿಯಲ್ಲಿ ತೆಂಗಿನಕಾಯಿಗಳನ್ನು ಕೀಳುತ್ತಿದ್ದ ಆಳುಗಳನ್ನು ಹುರಿದುಂಬಿಸುತ್ತಾ ಹುಮ್ಮಸ್ಸಿನಿಂದ ಓಡಾಡುತ್ತಿದ್ದ.
ಅವ್ವ ತೋಟದ ಇನ್ನೊಂದು ತುದಿಯಲ್ಲಿ ಕೆಳಗೆ ಬಿದ್ದಿದ್ದ ತೆಂಗಿನ ಒಣಗರಿಗಳನ್ನು ಗುಡ್ಡೆ ಸೇರಿಸುತ್ತಿದ್ದಳು.
ಅವ್ವ ಮಗ ಇಬ್ಬರ ಮಧ್ಯೆ ಅದೊಂದು ಉಂಗುರ ಸಣ್ಣ ಬಿರುಕು ಮೂಡಿಸಿತ್ತು. ಬೆಳಿಗ್ಗೆ ತಿಂಡಿ ತಿನ್ನುವಾಗ ಖಾಲಿ ಬೆರಳನ್ನು ನೋಡಿ ಉಂಗುರ ಎಲ್ಲಿಯೆಂದು ಪ್ರಶ್ನಿಸಿದ್ದ. ಆವತ್ತು ಪಕ್ಕದ ಮನೆಯ ಮುದುಕಿ ಖಾಯಿಲೆ ಬಿದ್ದಿದ್ದಾಗ ಉಂಗುರ ಅಡವಿಟ್ಟು ಆಸ್ಪತ್ರೆ ಖರ್ಚಿಗೆ ದುಡ್ಡು ಕೊಟ್ಟಿದ್ದೆ ಎಂದಿದ್ದಳು.
ಆಗ ಸಿಡಿಮಿಡಿಗೊಂಡು -ಜನ ನನ್ನ ಬಗ್ಗೆ ತಪ್ಪು ತಿಳ್ಕೊಳ್ತಾರೆ ಕಣವ್ವ, ಮಗನೇ ಕಿತ್ಕೊಂಡು ತಿಂದ್ನೇನೋ ಅಂತ ಮಾತಾಡ್ಕೋತಾರೆ, ಅಷ್ಟು ರಿಸ್ಕ್ ತೆಗೆದುಕೊಂಡು ಸಹಾಯ ಮಾಡುವ ಅಗತ್ಯ ಇತ್ತಾ ಹೇಳು- ಎಂದು ನುಡಿದಿದ್ದ.
ಒಂದೆಡೆ ಹೊತ್ತು ಮುಳುಗಿ ತಂಪೇರುತ್ತಿತ್ತು .
ಇನ್ನೊಂದೆಡೆ ಅವಳ ಮನಸ್ಸಿನೊಳಗೆ ಇನ್ನೂ ಮಾರ್ದನಿಸುತ್ತಿದ್ದ ಮಗನ ಮಾತುಗಳು ನಡು ಹಗಲಿನ ರವಿಯಂತೆ ಸುಡುತ್ತಿದ್ದವು.
ಮಗ ಸಮೀಪಕ್ಕೆ ಬಂದಾಗ, “ಈ ತೆಂಗಿನ ಮರದ್ದು ಮನುಷ್ಯನಿಗಿಂತ ಉದಾತ್ತ ಬದುಕು ಕಣಪ್ಪಾ” ಅಂದಳು.
ಯಾಕವ್ವಾ ಹಂಗೆ ಹೇಳಿದೆ.?
ಸ್ವಲ್ಪ ಹೊತ್ತಿನ ಹಿಂದೆ ತಾರುಗಳನ್ನು ತುಂಬಿಕೊಂಡು ಜೋಲಾಡುತ್ತಿದ್ದ ಮರ ಈಗ ಎಲ್ಲವನ್ನೂ ಕೊಟ್ಟು ಎಷ್ಟು ಹಗುರಾಗಿ ನಿಂತಿದೆ ನೋಡು,ಯಾವ ಹಮ್ಮೂಬಿಮ್ಮೂ ಇಲ್ಲದೇ..ತೆಂಗು ನೀರುಣಿಸಿ ಸಾಕಿದವನಿಗೆ,ಕಳ್ಳಕಾಕರಿಗೆ ,ಕಪಿಗಳಿಗೆ,ಇಲಿಗಳಿಗೆ ಯಾರಿಗೂ ಭೇದ ಮಾಡದೇ ಫಲ ಕೊಡುತ್ತೆ.
ಯಾಕೆ ಕೊಟ್ಟೆ ಎಂದು ಯಾರೂ ಪ್ರಶ್ನೆ ಮಾಡುವುದಿಲ್ಲ .ಮೂಕ ಮರವಾದರೂ ಕೊಡುವ ಸ್ವಾತಂತ್ರ್ಯವನ್ನು ಉಳಿಸಿಕೊಂಡಿದೆ. ಆ ಸ್ವಾತಂತ್ರ್ಯ ಮನುಷ್ಯನಿಗಿಲ್ಲ.
ತಾಯಿಯ ಮಾತಿನ ಗೂಢಾರ್ಥವನ್ನು ಗ್ರಹಿಸಲು ಅವನಿಗೆ ಕಷ್ಟವಾಗಲಿಲ್ಲ. ಅವ್ವಳ ಮಾತಿನುಂಗುರ ಉರುಳಿನಂತೆ ಗಂಟಲು ಬಿಗಿಯಿತು. ಕ್ಷಮಿಸವ್ವ ಎನ್ನಲೂ ಮಾತು ಬರಲಿಲ್ಲ.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882