ಕಥೆ

ಭೀಷ್ಮ ಪ್ರಭಾಸನಾಗಿದ್ದಾಗ ನಂದಿನಿಯನ್ನು ಅಪಹರಿಸಿದ್ದ ಏಕೆ.? ಗೊತ್ತಾ.?

ದಿನಕ್ಕೊಂದು ಕಥೆ

ದ್ಯಾಸನ ಕಥೆ

ದ್ಯಾಸನು ಅಷ್ಟ ವಸುಗಳಲ್ಲಿ ಒಬ್ಬ. ಇವನಿಗೆ ಪ್ರಭಾಸ ಎಂಬ ಹೆಸರೂ ಇದೆ. ಒಮ್ಮೆ ಈತನೂ ಅಷ್ಟ ವಸುಗಳೂ ವಸಿಷ್ಟರ ಆಶ್ರಮದ ಬಳಿ ವನವಿಹಾರ ಮಾಡುತ್ತಿರುವಾಗ ಇವನ ಪತ್ನಿ ಯೋಗಸಿದ್ಧಾ ಎಂಬವಳು ವಸಿಷ್ಟರ ಹಸುವಾದ ನಂದಿನಿಯನ್ನು ನೋಡುತ್ತಾಳೆ. ಅದರ ಸೌಂದರ್ಯಕ್ಕೆ ಬೆರಗಾಗಿ ತನ್ನ ಪತಿ ದ್ಯೌಸನಲ್ಲಿ ಅದರ ಬಗ್ಗೆ ವಿಚಾರಿಸುತ್ತಾಳೆ.

ಅವನು ನಂದಿನಿ ಅಸಾಧಾರಣ ಗೋವೆಂದೂ ಕೇಳಿದ್ದನ್ನು ನೀಡುವ ಶಕ್ತಿ ಉಳ್ಳದ್ದೆಂದೂ, ಅದರ ಹಾಲನ್ನು ಸೇವಿಸಿದವರು ಹತ್ತು ಸಹಸ್ರ ವರ್ಷಗಳ ಕಾಲ ಜೀವಿಸುತ್ತಾರೆ ಎಂದೂ ತಿಳಿಸುತ್ತಾನೆ. ಆಗ ಅವಳು ಆ ಹಸುವನ್ನು ಅಪಹರಿಸುವಂತೆ ಕೇಳುತ್ತಾಳೆ.

ಅಮರಳಾದ ನಿನಗೇಕೆ ಅದರ ಹಾಲು ಎಂದು ದ್ಯೌಸನು ಕೇಳಲು ಭೂಲೋಕದಲ್ಲಿ ಇರುವ ತನ್ನ ಆಪ್ತಮಿತ್ರಳಿಗೆ ಆ ಹಾಲನ್ನು ನೀಡಬೇಕೆಂದಿರುವುದಾಗಿ ತಿಳಿಸುತ್ತಾಳೆ. ಮೊದಲು ನಿರಾಕರಿಸಿದರೂ ಸಹ ಪತ್ನಿಯ ಒತ್ತಾಯಕ್ಕೆ ಮಣಿದು ದ್ಯೌಸನು ನಂದಿನಿಯನ್ನು ಅಪಹರಿಸುತ್ತಾನೆ. ಈ ಕಾರ್ಯದಲ್ಲಿ ಉಳಿದ ಏಳು ವಸುಗಳೂ ಸಹಕಾರ ನೀಡುತ್ತಾರೆ.

ತಮ್ಮ ಪ್ರೀತಿಯ ಗೋವನ್ನು ಕಾಣದೇ ವಿಹ್ವಲರಾದ ವಸಿಷ್ಟರು ದಿವ್ಯ ದೃಷ್ಟಿಯಿಂದ ಅಷ್ಟ ವಸುಗಳ ಕುಕೃತ್ಯವನ್ನು ತಿಳಿದು ಅವರು ಸುರಲೋಕವನ್ನು ತ್ಯಜಿಸಿ ಭೂಮಿಯಲ್ಲಿ ಜನಿಸುವಂತಾಗಲಿ ಎಂದು ಶಪಿಸುತ್ತಾರೆ. ಶಾಪಕ್ಕೆ ಹೆದರಿ ಅಷ್ಟ ವಸುಗಳು ವಸಿಷ್ಟರಿಗೆ ನಂದಿನಿ ಯನ್ನು ಹಿಂತಿರುಗಿಸಿ ಕ್ಷಮೆ ಯಾಚಿಸುತ್ತಾರೆ.

ಶಾಂತರಾದ ವಸಿಷ್ಟರು ಮೊದಲ ಏಳು ವಸುಗಳು ನಂದಿನಿಯ ಅಪಹರಣಕ್ಕೆ ಕೇವಲ ಸಹಕಾರ ನೀಡಿದ ಕಾರಣ ಭೂಮಿಯಲ್ಲಿ ಒಂದು ವರ್ಷಗಳ ಕಾಲವನ್ನು ಮಾತ್ರ ಕಳೆಯುವಂತೆಯೂ ಕಡೆಯವನಾದ ದ್ಯೌಸನು ಮಾತ್ರ ತನ್ನ ಪೂರ್ತಿ ಆಯುಷ್ಯವನ್ನು ಭೂಮಿಯಲ್ಲಿ ಕಳೆಯುವಂತೆಯೂ ಶಾಪವನ್ನು ಮಾರ್ಪಡಿಸುತ್ತಾರೆ.

ಮಾತ್ರವಲ್ಲ ಪತ್ನಿಯನ್ನು ಸಂತೋಷ ಪಡಿಸುವ ಸಲುವಾಗಿ ದ್ಯೌಸನು ಈ ಕಳ್ಳತನ ಮಾಡಿದ ಕಾರಣ ಆತನು ಭೂಮಿಯಲ್ಲಿ ಪತ್ನಿಯ ಸಂಗವಿಲ್ಲದೇ ಆಜನ್ಮ ಬ್ರಹ್ಮಚರ್ಯ ಆಚರಿಸಬೇಕು ಎನ್ನುತ್ತಾರೆ.

ಇದಕ್ಕೆ ಮೊದಲು ಮಹಾಭಿಷ ಎಂಬ ರಾಜನು ದೇವತೆಗಳ ಜತೆಗೆ ಬ್ರಹ್ಮದೇವನ ಸನ್ನಿಧಿಯಲ್ಲಿ ಇದ್ದಾಗ ಇದ್ದಕ್ಕಿದ್ದಂತೆ ಗಾಳಿ ಬೀಸಿ ಗಂಗೆಯ ಉಡುಪು ಅಸ್ತವ್ಯಸ್ತವಾಗುತ್ತದೆ. ಅಲ್ಲಿದ್ದ ಎಲ್ಲರೂ ಮರ್ಯಾದೆಯ ದೃಷ್ಟಿಯಿಂದ ತಲೆ ತಗ್ಗಿಸಿದರೂ ಮಹಾಭಿಷನು ಮಾತ್ರ ನಿರ್ಲಜ್ಜನಾಗಿ ಗಂಗೆಯನ್ನೇ ದಿಟ್ಟಿಸಿ ನೋಡುತ್ತಾನೆ.

ಇದರಿಂದ ಕೋಪಗೊಂಡ ಬ್ರಹ್ಮದೇವನು ಅವರಿಬ್ಬರೂ ಭೂಲೋಕದಲ್ಲಿ ಸತಿಪತಿಯರಾಗಲಿ ಎಂದು ಶಪಿಸುತ್ತಾನೆ. ಗಂಗೆ ಶಾಪ ವಿಮೋಚನೆಯನ್ನು ಕೋರಲು ನಿನ್ನಲ್ಲಿ ಮೋಹವಿರುವ ನಿನ್ನ ಪತಿ ನಿನ್ನ ಯಾವುದೇ ಕಾರ್ಯವನ್ನು ಪ್ರಶ್ನಿಸಿದಾಗ ಮಾತ್ರ ನೀನು ಮುಕ್ತಳಾಗುವೆ ಎನ್ನುತ್ತಾನೆ.

ಈ ವಿಷಯದಬಗ್ಗೆ ಅರಿವಿದ್ದ ಅಷ್ಟ ವಸುಗಳು ಗಂಗೆಯ ಬಳಿ ಬಂದು ತಮ್ಮನ್ನು ಮಕ್ಕಳಾಗಿ ಪಡೆಯುವಂತೆಯೂ ಜನಿಸಿದ ವರ್ಷದೊಳಗೆ ತಮ್ಮಲ್ಲಿ ಮೊದಲ ಏಳು ಜನರನ್ನು ಕೊಂದು ಬಿಡುವಂತೆಯೂ ಪ್ರಾರ್ಥಿಸುತ್ತಾರೆ.

ಈ ಎರಡೂ ಶಾಪಗಳ ಸಮ್ಮಿಲನವಾಗಿ, ಮಹಾಭಿಷನು ಶಂತನುವಾಗಿಯೂ,ಗಂಗೆ ಗಂಗೆಯಾಗಿಯೂ, ದ್ಯೌಸನು ಮುಂದೆ ಭೀಷ್ಮ ಎಂದು ಖ್ಯಾತಿ ಪಡೆದ ದೇವವ್ರತನಾಗಿಯೂ ಜನಿಸುತ್ತಾರೆ.

🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882

Related Articles

Leave a Reply

Your email address will not be published. Required fields are marked *

Back to top button