ಕಥೆ

ಸನ್ಯಾಸಿ ರಾಜನಾದ ಹೇಗೆ.? & ಏಕೆ.? ಬದುಕಿಗೆ ಹತ್ತಿರವಾದ ಈ ಅದ್ಭುತ ಕಥೆ ಓದಿ

ದಿನಕ್ಕೊಂದು ಕಥೆ

ಸ್ಥಾಯೀಭಾವವಾದ ಮೋಸ

ಒಂದು ನಾಡಿನಲ್ಲಿ ಬಹಳ ದಿನಗಳ ಮೇಲೆ ರಾಜನಿಗೊಬ್ಬ ಮಗ ಹುಟ್ಟಿದ. ಬಾಲ್ಯ­ದಿಂದಲೂ ಅವನ ನಡೆ, ನುಡಿಗಳೇ ವಿಚಿತ್ರವಾದವು. ಆತ ದುರ­ಹಂಕಾರಿ­­ಯಾದ. ಅರಮನೆಯಲ್ಲಿ ಎಲ್ಲರಿಗೂ ಅವನನ್ನು ಕಂಡರೆ ಅಸಹ್ಯ. ಆದರೆ ರಾಜ­ಕುಮಾರ­­ನಾದ್ದರಿಂದ ಅವನ ಮುಂದೆ ತೋರಿಸುವ ಹಾಗಿಲ್ಲ.

ಮಳೆಗಾಲದಲ್ಲಿ ಒಂದು ದಿನ ರಾಜಕುಮಾರ ಕಾಡಿಗೆ ಹೋಗಲು ಅಪೇಕ್ಷೆ­ಪಟ್ಟ. ಮಂತ್ರಿಗಳು ಇದು ಸರಿಯಾದ ಕಾಲವಲ್ಲವೆಂದು ಎಷ್ಟು ಹೇಳಿದರೂ ಕೇಳದೇ ಹೊರಟ. ನಿರ್ವಾಹವಿಲ್ಲದೆ ಬೆಂಗಾವಲು ಪಡೆಯವರು ಅವನನ್ನು ಹಿಂಬಾಲಿಸಿ­ದರು.

ಕಾಡಿನಲ್ಲಿ ವಿಪರೀತ ಮಳೆಯಾಗಿ ನದಿಗೆ ಪ್ರವಾಹ ಉಕ್ಕಿ ಬಂದಿತು. ಜೊತೆ­ಯವರು ಹೇಳಿದ್ದನ್ನು ಕೇಳದೇ ಮುಂದೆ ನುಗ್ಗಿದ ರಾಜಕುಮಾರ­ನನ್ನು ಪ್ರವಾಹ ಕೊಚ್ಚಿ­ಕೊಂಡು ಹೋಯಿತು. ಕ್ಷಣಾರ್ಧದಲ್ಲಿ ಅವನು ಪ್ರವಾಹ­ದಲ್ಲಿ ಮಾಯ­ವಾದ. ಹಿಂಬಾಲಕರು ಬಂದು ದುಃಖದ ಸುದ್ದಿಯನ್ನು ರಾಜನಿಗೆ ಅರುಹಿದರು.

ನೀರಿನಲ್ಲಿ ಹೋಗುತ್ತಿದ್ದ ರಾಜಕುಮಾರನಿಗೆ ಒಂದು ತೇಲುವ ಮರದ ದಿಮ್ಮಿ ಸಿಕ್ಕಿತು. ಆತ ಅದನ್ನೇರಿ ಕುಳಿತುಕೊಂಡ. ಅವನೊಂದಿಗೆ ಹೀಗೆಯೇ ಕೊಚ್ಚಿ ಹೋಗು­ತ್ತಿದ್ದ ಒಂದು ಸರ್ಪ, ಒಂದು ಇಲಿ ಮತ್ತು ಒಂದು ಗಿಳಿ ಕೂಡ ದಿಮ್ಮಿಯ ಮೇಲೆ ಆಶ್ರಯ ಪಡೆದವು.

ರಾಜಕುಮಾರ ಅವುಗಳನ್ನು ಕಂಡು ಹೆದರಿ ಜೋರಾಗಿ ಕೂಗುತ್ತಿದ್ದ. ನದಿ ತೀರದ ಆಶ್ರಮದಲ್ಲಿದ್ದ ತರುಣ ಸನ್ಯಾಸಿಗೆ ಈ ಧ್ವನಿ ಕೇಳಿ­ಸಿತು. ಆತ ಓಡಿ ಬಂದು ನೀರಿಗೆ ಧುಮುಕಿ ದಿಮ್ಮಿಯನ್ನು ದಡಕ್ಕೆ ತಂದ. ನಾಲ್ವರನ್ನು ಪಾರುಮಾಡಿ ಆಶ್ರಮಕ್ಕೆ ಕರೆದೊಯ್ದ. ಅಸಹಾಯಕವಾಗಿದ್ದ ಹಾವು, ಇಲಿ ಮತ್ತು ಗಿಳಿಗೆ ಮೊದಲು ಆರೈಕೆ ಮಾಡಿ ನಂತರ ರಾಜಕುಮಾರನಿಗೆ ವ್ಯವಸ್ಥೆ ಮಾಡಿದ.

ತನಗಿಂತ ಮೊದಲು ಪ್ರಾಣಿಗಳಿಗೆ ಕಾಳಜಿ ಮಾಡಿದ ಸನ್ಯಾಸಿಯ ಬಗ್ಗೆ ರಾಜಕುಮಾರ­ನಿಗೆ ಕೋಪ ಬಂತು. ಆತ ತನ್ನ ಪ್ರಾಣ ಉಳಿಸಿದವನೆಂಬ ವಿಷ­ಯವೂ ಮರೆಯಿತು. ಅಲ್ಲಿಂದ ಹೊರಡುವಾಗ ಹಾವು ಸನ್ಯಾಸಿಗೆ ‘ಸ್ವಾಮಿ, ನಾನು ನಿಮ್ಮ ಋಣ­ದಲ್ಲಿದ್ದೇನೆ. ನಾನು ನಲವತ್ತು ಕೋಟಿ ಬಂಗಾರದ ನಾಣ್ಯಗಳನ್ನು ಕಾಯು­ತ್ತೇನೆ. ನಿಮಗೆ ಯಾವಾಗ ಬೇಕಾದರೂ ಇಂಥ ಸ್ಥಳಕ್ಕೆ ಬಂದು ನಾಗರಾಜಾ ಎಂದು ಕೂಗಿ. ನಾನು ಬಂದು ಎಲ್ಲ ಹಣವನ್ನು ನಿಮಗೆ ಕೊಡುತ್ತೇನೆ’ ಎಂದು ಹೇಳಿ ಹೊರಟು ಹೋಯಿತು.

ಇಲಿ ಕೂಡ, ‘ಸ್ವಾಮಿ, ನನ್ನ ಬಳಿಯೂ ಇಪ್ಪತ್ತು ಕೋಟಿ ಬಂಗಾ­­ರದ ನಾಣ್ಯಗಳಿವೆ. ನಿಮಗೆ ಬೇಕಾದಾಗ ಇಂಥ ಜಾಗೆಗೆ ಬಂದು ಮೂಷಿಕ ಎಂದು ಕರೆಯಿರಿ, ನಾನು ಬಂದು ಎಲ್ಲವನ್ನು ತಮಗೆ ಒಪ್ಪಿಸು­ತ್ತೇನೆ’ ಎಂದಿತು.

ಗಿಳಿ, ‘ನನ್ನಲ್ಲಿ ಹಣವಿಲ್ಲ ಸ್ವಾಮಿ. ಆದರೆ ಯಾರಿ­ಗಾ­ದರೂ ಅನಾರೋಗ್ಯವಾದರೆ ಅವರ ಆರೋಗ್ಯವನ್ನು ತಕ್ಷಣ ಸುಧಾರಿಸ­ಬಲ್ಲ ಔಷಧಿ ಗುಣದ ಭತ್ತದ ರಾಶಿಯೇ ನನ್ನ ಬಳಿಯಿದೆ. ಇಂಥ ಸ್ಥಳಕ್ಕೆ ಬಂದು, ಶುಕ­ಗುರು ಎಂದು ಕರೆದರೆ ಸಾಕು, ಅದೆಲ್ಲವೂ ನಿಮ್ಮದಾಗುತ್ತದೆ’ ಎಂದಿತು.

ನಂತರ ರಾಜ­ಕುಮಾರ ಹೊರಡುವಾಗ ಸುಮ್ಮನೇ, ‘ನಾನು ರಾಜನಾದ ಮೇಲೆ ನನ್ನ ರಾಜ್ಯಕ್ಕೆ ಬಂದರೆ ನಿಮಗೆ ಮರ್ಯಾದೆ ಮಾಡುತ್ತೇನೆ’ ಎಂದು ಹೇಳಿದ.
ಎರಡು ವರ್ಷದ ನಂತರ ರಾಜಕುಮಾರ ರಾಜನಾದನೆಂಬ ಸುದ್ದಿ ಸನ್ಯಾಸಿಗೆ ಬಂತು. ಆತ ಅಲ್ಲಿಗೆ ಹೋದರೆ ಯಾರೂ ರಾಜನನ್ನು ಇಷ್ಟಪಡುವವರಿಲ್ಲ. ಈತ ಅರಮನೆಗೆ ಹೋಗಿ ರಾಜನನ್ನು ಭೇಟಿಯಾದ.

ಈ ದರಿದ್ರ ಸನ್ಯಾಸಿ ತನ್ನಿಂದ ಏನಾ­ದರೂ ಪಡೆಯಲು ಬಂದಿದ್ದಾನೆಂದು ಭಾವಿಸಿ, ತನ್ನ ಸೈನಿಕರಿಗೆ ಹೇಳಿ ಇವನನ್ನು ಕೊಲ್ಲಲು ಆಜ್ಞೆ ಮಾಡಿದ. ಅವರು ಸನ್ಯಾಸಿಯನ್ನು ಎಳೆದುಕೊಂಡು ಹೋಗು­ವಾಗ ಈತ, ‘ಯಾರಿಗೆ ಸಹಾಯ ಮಾಡಿದರೂ ಮನುಷ್ಯನಿಗೆ ಮಾಡಬಾರದು’ ಎಂದ. ಅವರು ಕುತೂಹಲದಿಂದ ಕೇಳಿದಾಗ ಎಲ್ಲವನ್ನೂ ಸವಿಸ್ತಾರವಾಗಿ ಹೇಳಿದ.

ಇದನ್ನು ಕೇಳಿದ ಜನ ಮತ್ತು ಸೈನಿಕರು ಬಂಡೆದ್ದು ರಾಜನನ್ನು ಹೊಡೆದು ಕೊಂದು ಇವನನ್ನೇ ರಾಜನಾಗಿ ಮಾಡಿದರು. ನಂತರ ಈತ ಸರ್ಪ ಮತ್ತು ಇಲಿಯ ಬಳಿಗೆ ಹೋಗಿ ಅರವತ್ತು ಕೋಟಿ ಹೊನ್ನು ತಂದು ರಾಜ್ಯದಲ್ಲಿ ಎಲ್ಲ ಸುಧಾರಣೆಗಳನ್ನು ಮಾಡಿದ. ಗಿಳಿಯ ಸಹಾಯದಿಂದ ರಾಶಿ ಔಷಧಿಯ ಭತ್ತವನ್ನು ತರಿಸಿ ಜನರು ನಿರೋಗಿ­ಗಳಾಗು­ವಂತೆ ನೋಡಿಕೊಂಡ. ಮುಂದೆ ರಾಜ ಮತ್ತು ಜನರು ಸುಖವಾಗಿದ್ದರು.

ಕಥೆಯ ಸಾರಾಂಶ ಇಷ್ಟೇ. ಗಿಳಿ, ಇಲಿ ಮತ್ತು ಹಾವು ಕೂಡ ಮನುಷ್ಯನಿಗಿಂತ ಹೆಚ್ಚು ಕೃತಜ್ಞವಾಗಿರುತ್ತವೆ. ಇದು ಆ ಕಥೆಯಲ್ಲಿ ಮಾತ್ರವಲ್ಲ, ಇಂದೂ ದಿನನಿತ್ಯ ನೋಡುವ ಘಟನೆಗಳಲ್ಲಿ ಅದನ್ನೇ ಕಾಣುತ್ತೇವೆ. ಮಗನಿಂದ ತಂದೆಗೆ ಮೋಸ, ಮಗಳಿಂದ ತಾಯಿಯ ಕೊಲೆ, ಹೆಂಡತಿಯಿಂದ ಗಂಡನಿಗೆ ವಂಚನೆ ಇವು ಪ್ರತಿದಿನದ ಸುದ್ದಿಯ ವಿಷಯಗಳಲ್ಲವೇ? ಒಂದು ಚೂರು ರೊಟ್ಟಿ ಹಾಕಿದ ಮನೆಯ ಮುಂದೆ ನಾಯಿ ಹಗಲುರಾತ್ರಿ ಕುಳಿತು ಕಾಯುತ್ತದೆ.

ಹಿಡಿ ಹುಲ್ಲು ಹಾಕಿದ ಯಜಮಾನನಿಗಾಗಿ ಊರೆಲ್ಲ ಅಲೆದು, ಮೇಯ್ದು ಮನೆಗೆ ಬಂದು ಹಸು ಹಾಲು ಕೊಡುತ್ತದೆ. ಅವುಗಳಿಗೆ ಮೋಸವೆಂಬುದು ಗೊತ್ತಿಲ್ಲ. ಆದರೆ ಭಗವಂತನ ಸೃಷ್ಟಿಯ ಶಿಖರವಾದ ಮನುಷ್ಯ ಮಾತ್ರ ಯಾಕೆ ಕೃತಜ್ಞತೆಯ ಭಾವವನ್ನು ತನ್ನ ಸ್ಥಾಯೀಭಾವ ವನ್ನಾಗಿಸಿಕೊಳ್ಳಲಿಲ್ಲವೋ?

🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882

Related Articles

Leave a Reply

Your email address will not be published. Required fields are marked *

Back to top button