ಅಂಕಣಕಥೆ

ಉಡುಗೊರೆ ಕೊಡುವುದು ಹುಡುಗಾಟವಾಗದಿರಲಿ.!

ದಿನಕ್ಕೊಂದು ಕಥೆ

ಉಡುಗೊರೆ ಕೊಡುವುದು ಹುಡುಗಾಟವಾಗಬಾರದು!

ಹೌದು ಮಕ್ಕಳಿಗೆ ಉಡುಗೊರೆ ಕೊಡುವುದು ಹುಡುಗಾಟವಾಗಬಾರದು. ಹಾಗೆ ಹುಡುಗಾಟವಾದರೆ ಅದು ಅವರ ಬದುಕನ್ನೇ ಕೊನೆಗೊಳಿಸಬಹುದು. ಅಂಥದ್ದೊಂದು ನಿಜ ಜೀವನದ ಘಟನೆ ಇಲ್ಲಿದೆ.

2005ರ ನವೆಂಬರ್‌ನಲ್ಲಿ ಪ್ಯಾಲೆಸ್ಟೈನಿನಲ್ಲಿ ಅಹಮದ್ ಇಸ್ಮಾಯಿಲ್ ಖಾತಿಬ್ ಎಂಬ ಹನ್ನೆೆರಡು ವರ್ಷದ ಹುಡುಗನಿದ್ದ. ಅವನಿಗೆ ಹತ್ತಿರದ ಬಂಧುವೊಬ್ಬರು ರಮ್ಜಾನ್ ಹಬ್ಬದ ಪ್ರಯುಕ್ತ ಒಂದು ಆಟದ ಬಂದೂಕನ್ನು ಉಡುಗೊರೆಯಾಗಿ ಕೊಟ್ಟರು.

ಪ್ಯಾಲೆಸ್ಟೈನ್ ಪ್ರದೇಶದಲ್ಲಿ ಮೂಲ ಪ್ಯಾಲೆಸ್ಟೈನರಿಗೂ, ಇಸ್ರೇಲಿಗಳಿಗೂ ನೂರು ವರ್ಷಗಳಿಂದ ಯುದ್ಧಗಳು ನಡೆಯುತ್ತಲೇ ಬಂದಿದೆ. ಬಾಲಕ ಅಹಮದ್ ಸಂತೋಷದಿಂದ ತನ್ನ ಆಟದ ಬಂದೂಕನ್ನು ಹಿಡಿದು ಆಟವಾಡಲು ಬೀದಿಗೆ ಬಂದ. ದೂರದಲ್ಲಿದ್ದ ಇಸ್ರೇಲಿ ಸೈನಿಕರ ಕಣ್ಣಿಗೆ ಬಿದ್ದ. ಅವರು ಆತ ಹಿಡಿದಿದ್ದ ಬಂದೂಕು ನಿಜವೆಂದುಕೊಂಡರು.

ಇವನು ಶತ್ರು ಸೈನಿಕನಿರಬೇಕೆಂದುಕೊಂಡರು. ಇವನತ್ತ ಗುಂಡು ಹಾರಿಸಿದರು. ಅಹಮದ್ ಕುಸಿದುಬಿದ್ದ. ಹತ್ತಿರ ಬಂದಾಗ ಇಸ್ರೇಲಿ ಸೈನಿಕರಿಗೆ ತಮ್ಮ ತಪ್ಪಿನ ಅರಿವಾಯಿತು. ಆತ ಸೈನಿಕನಲ್ಲವೆಂದೂ, ಆತನ ಕೈಯಲ್ಲಿದ್ದುದು ಹುಡುಗಾಟದ ಬಂದೂಕೆಂದೂ ತಿಳಿಯಿತು. ಆದರೆ ಅದು ತಡವಾಗಿತ್ತು. ಅವರು ತಕ್ಷಣ ಆತನನ್ನು ಇಸ್ರೇಲಿಯರ ಆಸ್ಪತ್ರೆಗೆ ಸಾಗಿಸಿದರು.

ಆದರೆ ಅಹಮದ್ ಉಳಿಯಲಿಲ್ಲ. ಸೈನಿಕರು ತಮ್ಮಿಂದಾದ ಪ್ರಮಾದಕ್ಕೆ ಕ್ಷಮೆ ಕೋರಿ ಹೊರಟು ಹೋದರು. ಆದರೆ ಅಹಮದನ ತಾಯಿ-ತಂದೆಯರ ಹದಿಹರೆಯದ ಮಗನ ದೇಹ ಹೆಣವಾಗಿ ಉರುಳಿತ್ತು. ಅವರಿಗೆ ಕಣ್ಣೀರು ಮಾತ್ರ ಉಳಿದಿತ್ತು. ಅವರಿಗೆ ಕಣ್ಣೀರಿನ ನಡುವೆಯೂ ಏನನಿಸಿತೋ ಏನೋ! ಅವರು ವೈದ್ಯರನ್ನು ಕರೆದು ತಮ್ಮ ಮಗನ ದೇಹದ ಅಂಗಗಳನ್ನು ದಾನವಾಗಿ ಕೊಡುತ್ತೇವೆಂದು ಹೇಳಿದರು. ವೈದ್ಯರು ಕಕ್ಕಾಬಿಕ್ಕಿಯಾದರು.

ಏಕೆಂದರೆ ಅದು ಇಸ್ರೇಲಿಗಳ ಆಸ್ಪತ್ರೆ. ಸತ್ತಿರುವವನು ಅರಬ್ಬೀ ಹುಡುಗ. ಇಸ್ರೇಲಿನಲ್ಲಿ ಮನುಷ್ಯ ದೇಹದ ಅಂಗಾಂಗಗಳಿಗೆ ಅಪಾರ ಬೇಡಿಕೆ. ಆದರೆ ಅಂಗಾಂಗಗಳ ದಾನ ಧರ್ಮ ವಿರುದ್ಧವೆಂಬ ಭಾವನೆ. ಆಸ್ಪತ್ರೆಯಲ್ಲೇ ಅನೇಕ ಇಸ್ರೇಲಿ ಮಕ್ಕಳು ಅಂಗಾಂಗ ನಿರೀಕ್ಷೆಯಲ್ಲಿ ಬದುಕಿದ್ದರು.

ಅವರು ಅಹಮದನ ತಾಯ್ತಂದೆಯರಿಗೆ ‘ನಿಮ್ಮ ಮಗನ ಅಂಗಾಂಗಗಳ ದಾನ ಸ್ವೀಕರಿಸಲು ನಾವು ಸಿದ್ಧ. ಆದರೆ ಅದನ್ನು ಪಡೆಯುವವರು ಇಸ್ರೇಲಿಗಳು. ನಿಮ್ಮ ಜನಾಂಗದ ಪರಂಪಾರಗತ ಶತ್ರುಗಳು. ಯೋಚಿಸಿ ನೋಡಿ’ ಎಂದರು. ಅಹಮದನ ತಂದೆ ‘ಹೆಣವಾಗಿ ಬಿದ್ದಿರುವ ನಮ್ಮ ಮಗನ ಅಂಗಾಂಗಗಳು ಇಸ್ರೇಲಿಗಳಿಗೆ ಉಪಯೋಗವಾಗುತ್ತದೆಂಬ ಚಿಂತೆ ನಮಗಿಲ್ಲ. ಅವು ಮಣ್ಣುಪಾಲು ಆಗುವುದರ ಬದಲು ಯಾರಾದರೂ ಬದುಕಿದರೆ ಅವನ ಆತ್ಮಕ್ಕೂ ಶಾಂತಿ. ನಮಗೂ ಸಂತೋಷ’ ಎಂದರು.

ತಕ್ಷಣ ವೈದ್ಯರು ಕಾರ್ಯೋನ್ಮುಖರಾದರು. ಅಹಮದನ ಹೃದಯವನ್ನು ಹನ್ನೆರಡು ವರ್ಷ ವಯಸ್ಸಿನ ಸಮಾ ಎಂಬ ಹುಡುಗಿಗೆ ಜೋಡಿಸಲಾಯಿತು. ಆಕೆಯ ಅಪ್ಪ ಅಹಮದನ ತಂದೆಗೆ ಧನ್ಯವಾದ ಹೇಳಿದಾಗ, ಅವರು ‘ಇಂದಿನಿಂದ ನಿಮ್ಮ ಮಗಳಿಗೆ ನಾವೂ ತಾಯಿತಂದೆಯಾದೆವು’ ಎಂದರು. ಅಹಮದನ ಶ್ವಾಸಕೋಶ, ಪಿತ್ತಜನಕಾಂಗ ಮತ್ತು ಮೂತ್ರಪಿಂಡ ಮುಂತಾದವುಗಳನ್ನು ಐವರು ಇಸ್ರೇಲಿ ಮಕ್ಕಳಿಗೆ ಅಳವಡಿಸಲಾಯಿತು.

ಒಬ್ಬ ಅರಬ್ಬೀ ಅಹಮದ್ ಸತ್ತನಾದರೂ ಅವನ ಸತ್ತದೇಹದ ಅಂಗಗಳು ಐದಾರು ಜನ ಇಸ್ರೇಲಿಗಳು ಬದುಕಲು ಸಹಾಯ ಮಾಡಿದವು.
ನಿಜಜೀವನದ ಈ ಪ್ರಸಂಗ ಇಲ್ಲಿಗೆ ಮುಗಿಯಿತು. ಆದರೆ ಹುಡುಗರಿಗೆ ಉಡುಗೊರೆಗಳನ್ನು ಕೊಡುವಾಗ ನಾವು ಕೊಂಚ ಯೋಚಿಸಿ ಕೊಡುವುದು ಒಳ್ಳೆಯದಲ್ಲವೇ? ಹಿಂಸೆಯನ್ನು ಪ್ರಚೋದಿಸುವ ಬಂದೂಕು, ಕತ್ತಿ, ಬಿಲ್ಲುಬಾಣ ಮುಂತಾದವುಗಳನ್ನು ಕೊಡುವುದು ಒಳ್ಳೆಯದಲ್ಲ ಅಲ್ಲವೇ?

ಅವರನ್ನು ಸಕಾರಾತ್ಮಕವಾಗಿ ಚಿಂತಿಸುವಂತೆ ಮಾಡುವ ಆಟಿಕೆಗಳನ್ನು ಕೊಡುವುದು ಉತ್ತಮ. ಹೊಡೆದುರುಳಿಸುವ ಆಟಿಕೆಗಳಿಗಿಂತ, ಕಟ್ಟುವ ಆಟಿಕೆಗಳನ್ನು ಕೊಡುವ ಮೂಲಕ ಮಕ್ಕಳಲ್ಲಿಸಕರಾತ್ಮ ಧೋರಣೆ ತೋರಬೇಕಿದೆ.

 

 

🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882

Related Articles

Leave a Reply

Your email address will not be published. Required fields are marked *

Back to top button