ಪ್ರಮುಖ ಸುದ್ದಿ

ದೇಹದ ಸದೃಢತೆಗೆ ಮಾನಸಿಕ ಆರೋಗ್ಯ ಮುಖ್ಯ-ವಜ್ಜಲ್

ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ

ಯಾದಗಿರಿಃ ಅನವಶ್ಯಕ ವಿಚಾರಗಳು ಮನುಷ್ಯನ ಮಾನಸಿಕ ಅಸ್ವಸ್ಥತೆಗೆ ಕಾರಣವಾಗುತ್ತವೆ. ದೇಹದ ಸದೃಢತೆಗೆ ಮಾನಸಿಕ ಆರೋಗ್ಯವು ಮುಖ್ಯವಾಗಿದೆ. ಹಾಗಾಗಿ, ಸಾತ್ವಿಕ ಆಹಾರವನ್ನು ಸೇವಿಸುವ ಮೂಲಕ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ರಾಜಶೇಖರಗೌಡ ಪಾಟೀಲ್ ವಜ್ಜಲ್ ಹೇಳಿದರು.

ನಗರದ ಬಾಲಾಜಿ ಪದವಿ ಮಹಾವಿದ್ಯಾಲಯದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ಆರೋಗ್ಯ ಸಂಘ (ಮಾನಸಿಕ ವಿಭಾಗ) ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಎಲ್ಲಾ ಭಾಗ್ಯಗಳಲ್ಲಿ ಆರೋಗ್ಯ ಭಾಗ್ಯ ದೊಡ್ಡದು. ಮನುಷ್ಯ ಆರೋಗ್ಯವಾಗಿದ್ದರೆ ಏನೆಲ್ಲ ಸಾಧನೆ ಮಾಡಲು ಸಾಧ್ಯ. ಹೀಗಾಗಿ ಪ್ರತಿಯೊಬ್ಬರು ಆರೋಗ್ಯದ ಕಾಪಾಡಿಕೊಳ್ಳುವ ಬಗ್ಗೆ ಪರಿಪೂರ್ಣವಾಗಿ ತಿಳಿದುಕೊಳ್ಳಬೇಕು. ಅದರಲ್ಲೂ ಮಾನಸಿಕ ಆರೋಗ್ಯವು ಮುಖ್ಯವಾಗಿದೆ. ಕೋಟಿ ಕೋಟಿ ಹಣವಿದ್ದರೂ ಮಾನಸಿಕ ನೆಮ್ಮದಿ ಇಲ್ಲದಿದ್ದರೆ ಸಂಪತ್ತು ವ್ಯರ್ಥ ಎಂದು ಅವರು ಹೇಳಿದರು.

ದೇಹದ ಅಂಗಗಳಲ್ಲಿ ಕಣ್ಣು ಕೂಡ ಅತಿ ಮುಖ್ಯವಾಗಿದೆ. ಕಣ್ಣು ಇದ್ದಾಗ ಮಾತ್ರ ಹೊರ ಜಗತ್ತು ನೋಡಲು ಸಾಧ್ಯ. ಬದುಕಲು ಮಾತ್ರ ಆಹಾರ ಸೇವಿಸಬೇಕು. ಆಹಾರ ಸೇವನೆಗಾಗಿಯೆ ಬದುಕಬಾರದು. ಸಾಧ್ಯವಾದಷ್ಟು ಸಮಾಜಕ್ಕೆ ಒಳ್ಳೆಯದನ್ನು ಮಾಡಬೇಕು. ಮನುಷ್ಯ ಜೀವನದಲ್ಲಿ ಛಲದಿಂದ ಬದುಕಲು ಕಲಿಯಬೇಕು. ಆರೋಗ್ಯಕ್ಕೆ ಮಹತ್ವ ನೀಡಿ, ಮತ್ತೊಬ್ಬರಿಗೂ ಆರೋಗ್ಯದ ಬಗ್ಗೆ ತಿಳುವಳಿಕೆ ನೀಡಿ ಎಂದು ಅವರು ಸಲಹೆ ನೀಡಿದರು.

ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಪ್ರಕಾಶ ಅರ್ಜುನ ಬನಸೊಡೆ ಅವರು ಮಾತನಾಡಿ, ಮಾನಸಿಕ ಕಾಯಿಲೆ ಮನಸ್ಸಿನ ನೆಮ್ಮದಿಗೆ ತೊಂದರೆ ಮಾಡುತ್ತದೆ. ಅಸ್ವಸ್ಥ ಹಾಗೂ ಬುದ್ಧಿಮಾಂಧ್ಯರಿಗೆ ಗೌರವ ನೀಡಬೇಕು. ಮಾನಸಿಕ ಅಸ್ವಸ್ಥರಿಗೆ ಸರಕಾರ ಹಲವು ಸೌಲಭ್ಯಗಳನ್ನು ನೀಡಿದೆ.

ಮಾನಸಿಕ ಅಸ್ವಸ್ಥರು ಕಂಡುಬಂದರೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಮಾಹಿತಿ ನೀಡಿ. ಮೆಂಟಲ್ ಹೆಲ್ತ್ ಕಾಯಿದೆಯ ಅಡಿಯಲ್ಲಿ ಅವರಿಗೆ ಉಚಿತ ಚಿಕಿತ್ಸೆ ಕೊಡಿಸಲಾಗುತ್ತದೆ ಎಂದು ತಿಳಿಸಿದರು.

ಮೆಂಟಲ್ ಹೆಲ್ತ್ ಕಾಯಿದೆಯನ್ನು ಅವರ ಆರೋಗ್ಯದ ದೃಷ್ಟಿಯಿಂದ ಜಾರಿಗೆ ತಂದಿದ್ದು ಜಾತಿ, ಧರ್ಮ, ಲಿಂಗ ತಾರತಮ್ಯ ಮಾಡದೆ ಚಿಕಿತ್ಸೆ ನೀಡಿ, ಅವರನ್ನು ಸಮಾಜದಲ್ಲಿ ಬಾಳಲು ಅವಕಾಶ ನೀಡಲಾಗುತ್ತದೆ. ಅಲ್ಲದೆ ಮಾನಸಿಕ ಅಸ್ವಸ್ಥರ ಆಸ್ತಿ ರಕ್ಷಣೆ ಮಾಡಲು ಕಾನೂನು ಸೇವಾ ಪ್ರಾಧಿಕಾರದಿಂದ ವಕೀಲರನ್ನು ನೇಮಿಸಲಾಗುತ್ತದೆ. ಭಾರತ ಸಂವಿಧಾನದ 21ನೇ ವಿಧಿಯ ಪ್ರಕಾರ ಪ್ರತಿಯೊಬ್ಬರಿಗೂ ಆರೋಗ್ಯದಿಂದ ಬಾಳಲು ಅವಕಾಶ ಇದೆ ಎಂದು ತಿಳಿಸಿದರು.

ಪ್ರಭಾರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಭಗವಂತ ಅನವಾರ ಅವರು ಮಾತನಾಡಿ, ಜನರಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಅರಿವು ಮೂಡಿಸಲು 1992ರಿಂದ ಪ್ರತಿ ವರ್ಷ ಜಗತ್ತಿನಾದ್ಯಂತ ವಿಶ್ವ ಮಾನಸಿಕ ಆರೋಗ್ಯ ದಿನವನ್ನು ಆಚರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬಾಲಾಜಿ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಭೀಮರಾಯ, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯರಾದ ಸಿ.ಎಸ್ ಮಾಲಿಮಾಟೀಲ್, ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿಗಳಾದ ವಿನಯಕುಮಾರ ಕುಲಕರ್ಣಿ ಹಾಗೂ ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷರಾದ ನಾಗಯ್ಯ ಗುತ್ತೆದಾರ ಅವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button