ಬಿಜೆಪಿ ನಾಯಕ ಮೇಟಿ ಬೆಳಿಗ್ಗೆ ಕಾಂಗ್ರೆಸ್ ಸೇರ್ಪಡೆ ಮಧ್ಯಾಹ್ನ ರದ್ದು
ಬೆಳಗ್ಗೆ ಕಾಂಗ್ರೆಸ್ ಸೇರ್ಪಡೆ ಮಧ್ಯಾಹ್ನ ರದ್ದು ಏನಿದರ ಮರ್ಮ..?
ಯಾದಗಿರಿ : ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಡಾ.ಭೀಮಣ್ಣ ಮೇಟಿ ತಮ್ಮ ಬೆಂಬಗಲಿಗರೊಂದಿಗೆ ಬುಧವಾರ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಅಧ್ಯಕ್ಷ ದಿನೇಶ ಗುಂಡುರಾವ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು. ಮಧ್ಯಾಹ್ನವೇ ಅವರ ಸೇರ್ಪಡೆಯನ್ನು ಪಕ್ಷ ರದ್ದುಗೊಳಿಸಿರುವುದು ಜಿಲ್ಲೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಡಾ.ಭೀಮಣ್ಣ ಮೇಟಿ ಬುಧವಾರ ಬೆಳಿಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ತಮ್ಮ ಬೆಂಬಲಿಗರೊಂದಿಗೆ ಭೇಟಿ ಮಾಡಿ ಕಾಂಗ್ರೆಸ್ ಪಕ್ಷ ಸೇರ್ಪಡೆ ಪ್ರಸ್ತಾಪ ಮಾತುಕತೆ ನಡೆದ ನಂತರ ಅವರು ಕೆಪಿಸಿಸಿ ಕಚೇರಿಗೆ ತೆರಳಿ ಪಕ್ಷಕ್ಕೆ ಸೇರ್ಪಡೆಯಾಗಿದ್ದರು ಎನ್ನಲಾಗಿದೆ. ಅಲ್ಲದೆ ಈ ಕುರಿತು ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು.
ಅವರು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ ಎಂಬ ಸುದ್ದಿ ಜಿಲ್ಲೆಯಲ್ಲಿ ಹರಡುತ್ತಿದ್ದಂತೆ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮರಿಗೌಡ ಪಾಟೀಲ ಹುಲಕಲ್, ವಿಧಾನ ಪರಿಷತ್ ಮಾಜಿ ಸದಸ್ಯ ಚೆನ್ನಾರಡ್ಡಿ ಪಾಟೀಲ ತುನ್ನೂರ ಇತರ ನಾಯಕರು ಬೆಂಗಳೂರಿನಲ್ಲಿರುವ ಕಾಂಗ್ರೆಸ್ ನಾಯಕರ ಜೊತೆ ಮಾತನಾಡಿ, ಡಾ.ಮೇಟಿ ಪಕ್ಷಕ್ಕೆ ಸೇರ್ಪಡೆ ಅಗತ್ಯವಿಲ್ಲ ಅವರು ಸ್ಥಳೀಯ ನಾಯಕರ ಜೊತೆ ಪಕ್ಷ ಸೇರ್ಪಡೆ ಕುರಿತು ಚರ್ಚಿಸಿಲ್ಲ. ಯಾರ ಸಲಹೆ ತೆಗೆದುಕೊಂಡು ನೀವು ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದೀರಿ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಮಧ್ಯಾಹ್ನ ಕೆಪಿಸಿಸಿ ಚುನಾವಣೆ ನಿರ್ವಹಣೆ ಸಮಿತಿ ಅಧ್ಯಕ್ಷ ಪ್ರಕಾಶ ಕೆ. ರಾಠೋಡ ಅವರು ತುರ್ತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ, ಡಾ.ಭೀಮಣ್ಣ ಮೇಟಿ, ದೇವಿಂದ್ರಪ್ಪ ಮುನಮುಟಗಿ, ಸಿದ್ದಪ್ಪ ಗುಂಡಳ್ಳಿ, ಭೀಮರಡ್ಡಿ ಚೆಟ್ನಳ್ಳಿ, ಮಲ್ಲಿಕಾರ್ಜುನ ತಡಬಿಡಿ, ಮಹಾಲಿಂಗರಾವ್ ಖಾನಾಪೂರ ಅವರನ್ನು ಕೆಪಿಸಿಸಿ ನಿರ್ದೇಶನದ ಮೇರೆಗೆ ಕಾರಣಾಂತರಗಳಿಂದ ಅವರ ಸೇರ್ಪಡೆಯನ್ನು ರದ್ದುಗೊಳಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ಕೆಪಿಸಿಸಿ ಹಾಗೂ ಜಿಲ್ಲಾ ಕಾಂಗ್ರೆಸ್ ಮುಖಂಡರ ನಡೆಯಿಂದ ಡಾ.ಭೀಮಣ್ಣ ಮೇಟಿ ಹಾಗೂ ಅವರ ಬೆಂಬಲಿಗರಿಗೆ ತೀವ್ರ ಮುಜುಗರವಾಗಿದೆ. ಸ್ಥಳೀಯ ಕಾಂಗ್ರೆಸ್ ನಾಯಕರನ್ನು ಸಂಪರ್ಕ ಮಾಡದೆ ನೇರವಾಗಿ ಬೆಂಗಳೂರಿನಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿರುವ ಹಿನ್ನೆಲೆ ಸ್ಥಳೀಯ ನಾಯಕರ ಮಧ್ಯ ಭಿನ್ನಮತ ಉಂಟಾಗಿದೆ ಎನ್ನಲಾಗಿದೆ. ಬೆಳಗ್ಗೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಮೇಟಿ ಹಾಗೂ ಅವರ ಬೆಂಬಲಿಗರಿಗೆ ತೀವ್ರ ಮುಜಗರ ಆಗಿದ್ದಂತು ನಿಜ. ಮೇಟಿ ಮತ್ತು ಅವರ ಬೆಂಬಲಿಗರ ಮುಂದಿನ ನಡೆ ಏನು ಎಂಬುದು ಕಾಯ್ದು ನೋಡಬೇಕಿದೆ.