ಗರುಡ ಪಂಚಮಿ ಆಚರಣೆಯ ಹಿಂದಿರುವ ರಹಸ್ಯವೇನು.?
ದಿನಕ್ಕೊಂದು ಕಥೆ
ಸೋದರಿ ಪ್ರೇಮ
ಗರುಡ ಪಂಚಮಿ ವ್ರತಾಚರಣೆಯ ಹಿಂದೊಂದು ಕಥೆಯಿದೆ. ಪೂರ್ವಕಾಲದಲ್ಲಿ ಪುಟ್ಟಹಳ್ಳಿಯೊಂದರಲ್ಲಿ ರೈತನೊಬ್ಬನಿದ್ದ. ಆತನಿಗೆ ಏಳು ಗಂಡು ಮಕ್ಕಳು ಮತ್ತು ಒಬ್ಬಳು ಮಗಳು ಇದ್ದರು.
ಆ ಹೆಣ್ಣು ಮಗುವನ್ನು ಕಂಡರೆ ಸೋದರರಿಗೆ ಅಪಾರ ವಾತ್ಸಲ್ಯ. ಆಕೆಯನ್ನು ತುಂಬಾ ಪ್ರೀತಿಯಿಂದ ಸಾಕಿ ಬೆಳೆಸಿರುತ್ತಾರೆ. ಆಕೆಗೂ ಅಷ್ಟೇ. ತನ್ನ ಸೋದರರೆಂದರೆ ಪಂಚಪ್ರಾಣ. ತನ್ನ ಅಣ್ಣಂದಿರು ಹೊಲಗದ್ದೆಗಳಿಗೆ ಕೆಲಸಕ್ಕೆ ಹೋದರೆ ಊಟದ ಹೊತ್ತಿಗೆ ಈಕೆ ತಾನೇ ಕೈಯಾರೆ ಬುತ್ತಿಯನ್ನು ಕೊಂಡೊಯ್ಯುತ್ತಿದ್ದಳು. ಅವರಿಗೆ ಉಣಬಡಿಸಿ ಸಂತೋಷ ಪಡುತ್ತಿರುತ್ತಾಳೆ.
ಆದರೆ ಒಂದು ದಿನ ಈಕೆ ಬುತ್ತಿಯನ್ನು ತೆಗೆದುಕೊಂಡು ಹೊಲಕ್ಕೆ ಹೋದರೆ ಅಲ್ಲಿ ಯಾರೊಬ್ಬರೂ ಕಾಣುವುದಿಲ್ಲ. ಇದೇನು ಹೀಗೆ ಅಂತ ನೋಡುವಾಗ ಅಣ್ಣಂದಿರು ಸತ್ತು ಬಿದ್ದಿರುವುದು ಕಾಣುತ್ತದೆ. ಆ ಸೋದರಿ ಮಮ್ಮಲ ಮರುಗುತ್ತಾಳೆ. ಹೃದಯ ಬಿರಿಯುವಂತೆ ಜೋರಾಗಿ ಅಳುತ್ತಾಳೆ.
ಅದೇ ಹೊತ್ತಿಗೆ ಆಕಾಶಮಾರ್ಗದಲ್ಲಿ ಶಿವ, ಪಾರ್ವತಿಯರು ಸಂಚಾರಕ್ಕೆ ಹೊರಟಿರುತ್ತಾರೆ. ಪಾರ್ವತಿಯ ಕಣ್ಣಿಗೆ ಆ ಪುಟ್ಟ ಬಾಲೆ ರೋದಿಸುತ್ತಿರುವುದು ಕಾಣುತ್ತದೆ. ಆಳುತ್ತಿರುವ ಬಾಲೆಗೆ ಸಮಾಧಾನ ಮಾಡುವ ಸಲುವಾಗಿ ಶಿವನೊಂದಿಗೆ ಆ ಸ್ಥಳಕ್ಕೆ ಬರುತ್ತಾಳೆ. ವೃದ್ಧ ದಂಪತಿಯ ವೇಷದಲ್ಲಿ ಬಂದ ಅವರಿಬ್ಬರೂ ಮಗು ನಿನ್ನ ಅಳುವಿಗೆ ಕಾರಣವೇನು? ಎಂದು ಕೇಳುತ್ತಾರೆ. ಆಗ ಆ ಬಾಲೆ ಮೃತರಾದ ತನ್ನ ಸೋದರರನ್ನು ತೋರಿಸುತ್ತಾಳೆ. ಅವರ ಸಾವಿಗೆ ಕಾರಣವೇನು? ಅವರಿಗೆ ಜೀವದಾಗ ಮಾಡುವವರು ಯಾರು ಇಲ್ಲವೇ? ಎಂದು ಕೇಳಿಕೊಳ್ಳುತ್ತಾಳೆ.
ಆಗ ವೃದ್ಧ ದಂಪತಿ ಮಗೂ ನಿನ್ನ ಅಣ್ಣಂದಿರುವ ಹೊಲದಲ್ಲಿರುವ ಹುತ್ತವೊಂದನ್ನು ಆಗೆದಿದ್ದಾರೆ. ಅವರ ಕೃತ್ಯದಿಂದ ಕೋಪಗೊಂಡ ಸರ್ಪರಾಜ ಅವರನ್ನು ಕಚ್ಚಿ ಸಂಹರಿಸಿದ್ದಾನೆ. ನಾಗರಾಜನಿಗೆ ಮೊರೆ ಹೋಗಿ ಪೂಜಿಸು. ಅವನೇ ವಿಷವನ್ನು ಕಡಿಮೆ ಮಾಡುತ್ತಾನೆ ಎನ್ನುತ್ತಾರೆ. ಅದಕ್ಕೆ ಆ ಬಾಳೆ ನನಗೆ ಪೂಜೆ, ನೇಮವೊಂದು ಗೊತ್ತಿಲ್ಲ. ನೀವೇ ಪೂಜೆ ಮಾಡಿಸಬೇಕು ಎಂದು ಕೇಳಿಕೊಳ್ಳುತ್ತಾಳೆ.
ಬಾಲೆಯ ಮಾತಿಗೆ ಪ್ರಸನ್ನಳಾದ ಪಾರ್ವತಿದೇವಿ ನಾಗನಿರುವ ಹುತ್ತಕ್ಕೆ ಹಾಲು, ತುಪ್ಪವನ್ನು ಎರಯಬೇಕು. ಚಿಗುಳಿ, ತಂಬಿಟ್ಟು, ಮೊಳಕೆ ಕಟ್ಟಿದ ಹೆಸರು ಕಾಲಿನ ನೈವೇದ್ಯವನ್ನು ಮಾಡಬೇಕು ಎನ್ನುತ್ತಾಳೆ. ಆದರೆ ಆ ಬಾಲೆಯ ಬಳಿ ಮುದ್ದೆ ಮತ್ತು ಕಾಳು ಸಾರಿನ ಹೊರತಾಗಿ ಮತ್ತೇನು ಇರುವುದಿಲ್ಲ.
ತನ್ನ ಬಳಿ ಇರುವ ಪದಾರ್ಥವನ್ನೇ ಭಕ್ತಿಯಿಂದ ನಾಗರಾಜನ ಮುಂದಿಡುತ್ತಾಳೆ. ಸಮೀಪದಲ್ಲಿದ್ದ ಕಾಡು ಹೂವುಗಳನ್ನು ತಂದು ಅದನ್ನೇ ಭಕ್ತಿಯಿಂದ ನಾಗನಿಗೆ ಅರ್ಪಿಸುತ್ತಾಳೆ. ಸಂತುಶನಾದ ನಾಗರಾಜ ವಿಷವನ್ನು ಹೀರಿಕೊಂಡು ಆ ಬಾಲೆಯ ಸೋದರರನ್ನು ಬದುಕಿಸುತ್ತಾನೆ. ಯಾರು ಈ ದಿನದಂದು ತನಿ ಎರೆಡು, ನೇಮ, ನಿಷ್ಠೆಯಿಂದ ನನ್ನನ್ನು ಪೂಜಿಸುತ್ತಾರೋ ಆ ಹೆಣ್ಣು ಮಕ್ಕಳ ಸೋದರರನ್ನು ಕಾಪಾಡುತ್ತೇನೆ ಎಂದು ನಾಗರಾಜ ವಾಗ್ದಾನ ಮಾಡುತ್ತಾನೆ.
ಆ ಕಾರಣ ಗರುಡ ಪಂಚಮಿಯಂದು ಹೆಣ್ಣು ಮಕ್ಕಳು ಸೋದರ ಪ್ರೇಮವನ್ನು ಸಾರುವ ಸಲುವಾಗಿ ಸಡಗರದಿಂದ ನಾಗರಾಜನಿಗೆ ಪೂಜೆ ಸಲ್ಲಿಸುತ್ತಾರೆ.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882