ಕಥೆ

ಮುದಕನ ಸರದಿ ಮುಗಿಯಿತು…ಈಗ ನಿನ್ನ ಸರದಿ ಏನಿದು ಮಾಯೆ ಓದಿ

ಮೋಹದ ನಿಧಿ

ಮಾನವನ ಬದುಕೇ ಹೀಗೆ. ಕಷ್ಟಪಟ್ಟು ದುಡಿದು ಮಕ್ಕಳಿಗಾಗಿ ಸಂಪತ್ತು ಗಳಿಸಿ ಕೊನೆಗೆ ಹಸಿವು ಹಸಿವು ಅಂತಾ
ಕೈಯಲ್ಲಿ ಸಂಪತ್ತನ್ನೆ ಹಿಡಿದು ಅದೆಷ್ಟೋ ಜನ ಮರಣವನ್ನಪ್ಪಿದ್ದಾರೆ.

ಅಂತಹ ಮೋಹದ ನಿಧಿಯ ಕಥಾಹಂದರ ಓದಿ.
ಒಂದು ಯುರೋಪಿಯನ್‌ ಕಥೆ.

ಒಬ್ಬ ಮನುಷ್ಯ ಆಯುಷ್ಯದ ತುಂಬಾ ದುಡಿದು ಅಪಾರ ಸಂಪತ್ತು ಗಳಿಸಿದ್ದ. ಒಂದು ದೊಡ್ಡ ಮಹಡಿಯ ಮನೆಯ ಕಟ್ಟಿಸಿದ್ದ. ಮನೆಯ ತುಂಬ ಬಂಧು ಬಳಗವಿತ್ತು. ಯಾವುದಕ್ಕೇನೂ ಕೊರತೆಯಿರಲಿಲ್ಲ. ಈಗ ಆತನಿಗೆ 80 ವರ್ಷ ವಯಸ್ಸು.

ಈ ಮುದುಕ ತನ್ನ ಮನೆಯ ಕೆಳಗೊಂದು ನೆಲಮನೆಯ ಮಾಡಿಸಿದ್ದ. ಅದರಲ್ಲಿ ತಾನು ಗಳಿಸಿದ್ದ ಸಂಪತ್ತನ್ನೆಲ್ಲ ಸಂಗ್ರಹಿಸಿ ಗುಪ್ತವಾಗಿಟ್ಟಿದ್ದ. ಅದು ವಿಶೇಷವಾದ ಗಾಳಿ, ಬೆಳಕು ಇರಲಾದ ಕತ್ತಲೆಯ ಕೋಣೆ.

ಅಲ್ಲೊಂದು ಮೇಣದ ಬತ್ತಿ, ಕಡ್ಡಿ ಪೆಟ್ಟಿಗೆ ಇಟ್ಟಿದ್ದ.
ತನಗೆ ಸಂಪತ್ತನ್ನು ನೋಡುವ ಆಶೆಯಾದಾಗ ಯಾರಿಗೂ ಹೇಳದೆ ಒಬ್ಬನೇ ಬಂದು ನೋಡಿಕೊಂಡು ಹೋಗುತ್ತಿದ್ದ.

ಒಂದು ದಿನ ಮಧ್ಯರಾತ್ರಿ ಮುದುಕನಿಗೆ ಎಚ್ಚರವಾಯಿತು.
ಮೋಹದ ನಿಧಿಯ ನೋಡುವ ಅಪೇಕ್ಷೆಯಾಯಿತು, ಎದ್ದ.
ಮನೆಯವರೆಲ್ಲ ಮಲಗಿದ್ದಾರೆ. ಮುದುಕ ನೆಲಮನೆಯೊಳಗೆ ಹೋಗಿ ಬಾಗಿಲು ಹಾಕಿಕೊಂಡ. ದೀಪ ಬೆಳಗಿಸಿದ.
ಕಣ್ತುಂಬ ನಿಧಿಯ ನೋಡಿ ಸಂತಸಪಟ್ಟ. ಹಾಗೇ ಎಷ್ಟು ಹೊತ್ತು ನಿಧಿಯ ನೋಡುತ್ತ ಮೈಮರೆತು ಕುಳಿತಿದ್ದನೋ ಏನೋ ?
ಈತನ ಜಡಸಿರಿಯನ್ನೆಲ್ಲ ಬೆಳಗುತ್ತಿದ್ದ ಏಕೈಕ ದೀಪ ನಂದುವ ಸಮಯವಾಯಿತು.

ಮೇಲೆದ್ದು ಬಾಗಿಲು ತೆಗೆಯಲು ಹೋದ. ಬಾಗಿಲು ತೆಗೆಯಲಿಲ್ಲ. ಅದೇಕೋ ಬಾಗಿಲು ಭದ್ರವಾಗಿ ಮುಚ್ಚಿಕೊಂಡಿತ್ತು. ಮತ್ತೆ ಮತ್ತೆ ಪ್ರಯತ್ನಿಸಿದ. ಮುದುಕನ ದುರಾಶೆಗೆ ಮೈ ಸೋತು ಸಣ್ಣಾಗಿತ್ತು.

ಬಾಗಿಲು ತೆಗೆಯಲು ಶಕ್ತಿ ಸಾಲಲಿಲ್ಲ. ಮುದುಕ ಗಾಬರಿಯಾದ.
ಅಷ್ಟರಲ್ಲಿ ದೀಪವೂ ನಂದಿತು. ಮುದುಕನಿಗೆ ಜಗತ್ತೆಲ್ಲ ಈಗ ಶೂನ್ಯವಾಯಿತು. ಸ್ವಲ್ಪ ಸಮಯದ ನಂತರ ಹೊರಗೆ ಬೆಳಕಾಗಿತ್ತು.

ಮುದುಕನ ಪಾಲಿಗೆ ಮಾತ್ರ ಕತ್ತಲೆ ಶಾಶ್ವತವಾಗಿತ್ತು.
ಮಕ್ಕಳು ಮೊಮ್ಮಕ್ಕಳೆಲ್ಲ ಎದ್ದರು. ಮುದುಕ ಕಾಣಲಿಲ್ಲ.
ಮನೆಯೆಲ್ಲ ನೋಡಿದರು. ಊರೆಲ್ಲ ಹುಡುಕಿದರು.
ಮುದುಕ ದೊರೆಯಲಿಲ್ಲ.

ಕಳೆದಿದ್ದರಲ್ಲವೆ ದೊರೆಯುವುದು. ತಮ್ಮ ಮನೆಯ ಕೆಳಗೆಯೇ ನಶ್ವರ ಸಿರಿಯ ಮೋಹದಲ್ಲಿ ಮುಳುಗಿದ್ದ ಮುದುಕನನ್ನು ಅವರು ಕಾಣದೇ ಹೋದರು. ದಿನಗಳೆದಂತೆ ಮನೆಯವರೆಲ್ಲ ಮುದುಕನನ್ನು ಮರೆತೇಬಿಟ್ಟರು.

ನೆಲಮನೆಯಲ್ಲಿದ್ದ ಮುದುಕ ಎರಡು ದಿನ ಹೇಗೋ ಕಳೆದಿದ್ದ.
ಮುಂದೆ ಹಸಿವೆ ತಾಳದೆ ಅಲ್ಲೇ ಬಿದ್ದಿದ್ದ ಮೇಣದ ಬತ್ತಿಯ ಚೂರು ತಿಂದಿದ್ದ ! ಕೊನೆಗೆ ಅನ್ನ-ನೀರು, ನೀರು-ಅನ್ನವೆಂದು ಕೈಯಲ್ಲಿ ಮುತ್ತುರತ್ನ ಹಿಡಿದು ಪ್ರಾಣ ಬಿಟ್ಟಿದ್ದ !!

ಹತ್ತಾರು ವರುಷಗಳ ನಂತರ ಮಕ್ಕಳೆಲ್ಲ ಈ ಮನೆಯನ್ನು ಮಾರಿ ಪಟ್ಟಣ ಸೇರಿದರು. ಕೊಂಡವನು ಹೊಸಮನೆಯ ಕಟ್ಟಲೆಂದು ಈ ಹಳೆಮನೆಯ ಕೆಡವಿದ.

ಅಡಿಪಾಯ ತೆಗೆಯಿಸುವಾಗ ನೆಲ ಮನೆಯು ಕಾಣಿಸಿತು.
ಬಾಗಿಲು ಮುರಿದು ಒಳಗೆ ಹೋದ. ಕುರ್ಚಿಯ ಮೇಲೆ ಅಸೀನನಾಗಿದ್ದ ಮುದುಕನ ಅಸ್ಥಿಪಂಜರ ಕಂಡಿತು!
ಅದರ ಕೈಯಲ್ಲಿ ಮುತ್ತುರತ್ನಗಳಿದ್ದವು ! ಹೊಸ ಮಾಲೀಕ ಕ್ಷಣಕಾಲ ತನ್ನ ಕಣ್ಣನ್ನು ತಾನೇ ನಂಬಲು ಆಗದಂತೆ ನಿಬ್ಬೆರಗಾದ.

ನಿರಾಯಾಸವಾಗಿ ದೊರಕಿದ್ದ ಅಪಾರ ಸಿರಿಯ ಕಂಡು ಅವನಿಗೆ ಅಂತ್ಯತ ಸಂತೋಷವಾಯಿತು. ತಕ್ಷಣವೇ ಜಡಸಿರಿ ನಕ್ಕು ನುಡಿಯಿತು- ”ಮುದುಕನ ಸರದಿ ಮುಗಿಯಿತು, ಇನ್ನು ನಿನ್ನದು!

🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882

Related Articles

Leave a Reply

Your email address will not be published. Required fields are marked *

Back to top button