ಸಂತೋಷವನ್ನ ಹೆಕ್ಕಿ ತೆಗೆದ ಕ್ರಿಸ್ ಗಾರ್ಡನರ್ ಬಗ್ಗೆ ಗೊತ್ತಾ.? ಇದನ್ನೋದಿ
ಸಂತೋಷದ ಹುಡುಕಾಟ ಸಫಲವಾಗಲಿ
ಅವನ ಹೆಸರು ಕ್ರಿಸ್ ಗಾರ್ಡನರ್. ಊರು, ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋ. ಅಮ್ಮನೊಡನೆ ಬೆಳೆದ ಹುಡುಗ. ಅಪ್ಪ ಯಾರೆಂದು ಗೊತ್ತಾಗಿದ್ದೇ 28ನೆಯ ವಯಸ್ಸಿನಲ್ಲಿ. ಚಿಕ್ಕಂದಿನಿಂದಲೂ ಗಣಿತದಲ್ಲಿ ಆಸಕ್ತಿ. ಶಾಲೆಗೇ ಮೊದಲಿಗ. ಸಂಖ್ಯೆಗಳೊಂದಿಗೆ ಆಟವಾಡುವುದೆಂದರೆ ಅದೇನೋ ಹುಚ್ಚು. ಟೆಲಿಫೋನ್ ನಂಬರುಗಳಿಂದ ಹಿಡಿದು ಎಲ್ಲ ಅಂಕಿ-ಅಂಶಗಳನ್ನೂ ಒಮ್ಮೆ ನೋಡಿದರೆ ಅಥವಾ ಕೇಳಿದರೆ ಸಾಕು, ನೆನಪಿನಲ್ಲುಳಿಯುತ್ತಿದ್ದವು. ಪ್ರತಿಸಲ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದಾಗಲೂ ಉಕ್ಕುತ್ತಿದ್ದ, ಬದುಕಿನಲ್ಲಿ ತಾನು ಏನನ್ನಾದರೂ ಸಾಧಿಸಿಯೇ ತೀರುತ್ತೀನೆಂಬ ಅದಮ್ಯ ಆತ್ಮವಿಶ್ವಾಸ.
ಇಂಥ ಗಾರ್ಡರ್ನ ಹೊಟ್ಟೆ ಪಾಡಿಗಾಗಿ ಸೇರಿದ್ದು ಅಮೇರಿಕದ ನೌಕಾ ದಳವನ್ನು. ನುರಿತ ವೈದ್ಯರುಗಳ ಕೆಳಗೆ ಕೆಲಸ ಮಾಡಿ ತಾನೂ ಒಂದಷ್ಟು ಪರಿಣತಿಯನ್ನು ಪಡೆದುಕೊಳ್ಳುವ ಹೊತ್ತಿಗೆ ಅವನಿಗೆ 26ರ ಹರೆಯ. ಆ ವೇಳೆಗಾಗಲೇ ಅವನಿಗೆ ಮದುವೆ–ಯಾಗಿತ್ತು. ಕ್ರಿಸ್ಟೋಫರ್ ಎಂಬ ಐದು ವರ್ಷದ ಮಗನೂ ಇದ್ದ. ಕೈತುಂಬಾ ದುಡ್ಡು, ಮನಸ್ಸಿನ ತುಂಬಾ ನೆಮ್ಮದಿಯಿದ್ದರೂ ಇದ್ದಕ್ಕಿದ್ದ ಹಾಗೆ ತನ್ನ ಕೆಲಸದ ಬಗ್ಗೆ ಬೇಸರ ಮೂಡತೊಡಗಿತು. ಇನ್ನು ಮುಂದುವರಿಸಲಾರೆ ಎನ್ನುವಷ್ಟು ತೀವ್ರವಾದ ವಿಮುಖತೆ.
ಆಗ ಅವನೊಳಗೆ ಚಿಗುರಿದ್ದು ಸೇಲ್ಸ್ ಮ್ಯಾನ್ ಆಗುವ ಬಯಕೆ. ಹೇಗೂ ವೈದ್ಯಕೀಯ ಹಿನ್ನೆಲೆ, ತಿಳಿವಳಿಕೆ ಎರಡೂ ಇತ್ತು. ಮೂಳೆಯ ಸಾಂದ್ರತೆ ಅಳೆಯುವ ಉಪಕರಣವನ್ನು ಮಾರುವ ಏಜೆನ್ಸಿ ಕೊಂಡುಕೊಂಡ. ಅದಕ್ಕೆ ಹಣ ಹೊಂಚುವುದಕ್ಕೋಸ್ಕರ ತನ್ನಿಡೀ ಜೀವಮಾನದ ಸಂಪಾದನೆಯನ್ನು ಸುರಿದ. ಹೆಂಡತಿ ಜಾಕಿಯೊಡನೆ ಸೇರಿ, ಬಹಳ ನಿರೀಕ್ಷೆಗಳೊಂದಿಗೆ ಕೆಲಸವನ್ನೂ ಶುರು ಮಾಡಿದ. ಆದರೆ, ತಾನು ಯಶಸ್ವಿಯಾಗುತ್ತೇನೆಂಬ ಆ ಬುದ್ಧಿವಂತನ ಲೆಕ್ಕಾಚಾರ ನಾಲ್ಕೇ ದಿನಗಳಲ್ಲಿ ತಲೆಕೆಳಗಾಗಿತ್ತು! ಏಕೆಂದರೆ, ಆ ಉಪಕರಣ ವಿಪರೀತ ದುಬಾರಿ.
ಮಾರಾಟವಾದರೆ ಉಂಟು ಇಲ್ಲದಿದ್ದರೆ ಇಲ್ಲ. ಅದನ್ನು ನೆಚ್ಚಿಕೊಂಡರೆ ಪ್ರತಿ ತಿಂಗಳೂ ಇಂತಿಷ್ಟೇ ಎಂಬ ಖಾಯಂ ಆದಾಯವಿಲ್ಲ. ಸಾಲದ ಪಟ್ಟಿ ಬೆಳೆಯತೊಡಗಿತು. ಊಟ-ತಿಂಡಿಗಳಿಗೂ ಪರದಾಡುವಂತಾದಾಗ ಹೆಂಡತಿ ಜಾಕಿ, ಹೋಟೆಲ್ ಒಂದರಲ್ಲಿ ಕೆಲಸಕ್ಕೆ ಸೇರಿದಳು. ಎರಡೆರಡು ಪಾಳಿಗಳಲ್ಲಿ ಅವಿರತವಾಗಿ ದುಡಿಯತೊಡಗಿದಳು. ತಮ್ಮ ಪರಿಸ್ಥಿತಿ ಇವತ್ತಲ್ಲ ನಾಳೆ ಸರಿಹೋದೀತು ಎಂದು ಕಾದಳು. ಅವನೂ ಕಲಿತ ಬುದ್ಧಿಯನ್ನೆಲ್ಲ ಉಪಯೋಗಿಸಿ ಶ್ರಮ ಪಡುತ್ತಲೇ ಇದ್ದ.
ಆದರೆ ಪರಿಣಾಮ ಮಾತ್ರ ನಿರಾಶಾದಾಯಕವಾಗೇ ಇತ್ತು. ನಿಧಾನವಾಗಿ ಗಂಡ-ಹೆಂಡಿರ ನಡುವೆ ವಿರಸ ಮೂಡ ತೊಡಗಿತು. ಆ ಉಪಕರಣದ ಪೆಟ್ಟಿಗೆ ನೋಡಿದರೆ ಸಾಕು, ಜಾಕಿ ಸಿಡುಕ ತೊಡಗಿದಳು. ಹೆಂಡತಿ ಪಡುತ್ತಿದ್ದ ಕಷ್ಟ ಹಾಗೂ ಅವಳ ಮೇಲಿನ ಅವಲಂಬನೆಯಿಂದಾಗಿ ಅವನ ಜೀವ ಹಿಡಿಯಷ್ಟಾಗುತ್ತಿತ್ತು. ಸಂತೋಷವೆಂಬುದು ಮರೀಚಿಕೆಯಾಗಿದ್ದ ಸಂದರ್ಭ.
ಹೀಗೆ ಒಂದುದಿನ ಗಾರ್ಡನರ್ ತನ್ನ ಪೆಟ್ಟಿಗೆಯನ್ನು ಹೊತ್ತು ಹತಾಶನಾಗಿ ರಸ್ತೆಯಲ್ಲಿ ನಡೆಯುತ್ತಿದ್ದ. ಅವನ ಕಣ್ಣಿಗೆ ಬೀಳುತ್ತಿರುವವರೆಲ್ಲರೂ ನಗುತ್ತಿದ್ದಾರೆ. ಖುಷಿಯಿಂದಿದ್ದಾರೆ.
ತನ್ನ ದುಃಖ ಮಾತ್ರ ಮುಗಿಯುವ ಸೂಚನೆಯೇ ಇಲ್ಲವಲ್ಲ ಎನಿಸಿ ಮನಸ್ಸಿಗೆ ಇನ್ನಷ್ಟು ಬೇಸರವಾಯಿತು. ತಾನೂ ನಗಲೆತ್ನಿಸಿದ. ಇನ್ನಿಲ್ಲದ ಉತ್ಸಾಹ ಬರಿಸಿಕೊಂಡು, ಪಕ್ಕದ ಸಿಗ್ನಲ್ನಲ್ಲಿ ನಿಂತಿದ್ದ, ಕೆಂಪು ಫೆರಾರಿ ಕಾರಿನಲ್ಲಿದ್ದ ಅಪರಿಚಿತನನ್ನು ಮಾತನಾಡಿಸಿದ. ಹೇಗಿದ್ದೀಯ ನೀನು? ಎಲ್ಲಿ ಕೆಲಸ ಮಾಡುತ್ತೀಯ? ನಾನು ಚೆನ್ನಾಗಿದ್ದೀನಿ. ಷೇರುಗಳ ದಲ್ಲಾಳಿಯಾಗಿ ಕೆಲಸ ಮಾಡುತ್ತೀನಿ. ನೀನು ಹೇಗಿದ್ದೀಯ? ಆತನೂ ಸಹಜವಾಗೇ ಕೇಳಿದ. ಹೂಂ. ಚೆನ್ನಾಗಿದ್ದೀನಿ. ಹೇಗಿರುತ್ತೆ ಆ ಕೆಲಸ? ಓ ತುಂಬಾ ಚೆನ್ನಾಗಿರುತ್ತೆ. ಆತ ನಗು ನಗುತ್ತಲೇ ಹೇಳಿ ಹೊರಟುಹೋದ.
ಅವನ ಫೆರಾರಿ ಕಾರನ್ನು ನೋಡಿದ ಗಾರ್ಡನರ್‌ಗೆ ಅವನು ನಿಜವಾಗಿಯೂ ಸಂತೋಷವಾಗಿದ್ದಾನೆಂಬ ನಂಬಿಕೆ ಹುಟ್ಟಿತು. ದಿನವೂ ಅವನನ್ನು ಭೇಟಿಯಾಗಿ ಷೇರು ಮಾರುಕಟ್ಟೆಯ ಬಗ್ಗೆ ಇಷ್ಟಿಷ್ಟೇ ತಿಳಿದುಕೊಳ್ಳತೊಡಗಿದ. ಸಂಖ್ಯೆಗಳ ಮೇಲಿನ ಹುಚ್ಚು ಪ್ರೀತಿಯ ತಾನೂ ಯಶಸ್ವಿ ಷೇರು ದಲ್ಲಾಳಿ–ಯಾಗಬಹುದೆಂಬ ಕನಸು ಸಣ್ಣಗೆ ಚಿಗುರೊಡಯತೊಡಗಿತು.
ಇತ್ತ ಮನೆಯ ಪರಿಸ್ಥಿತಿ ದಿನೇದಿನೇ ಹದಗೆಡತೊಡಗಿತು. ಹೆಂಡತಿಯ ಅಲ್ಪ ಆದಾಯದಲ್ಲಿ ಬದುಕು ಸಾಗಿಸುವುದೇ ದುಸ್ತರವಾ–ಗಿತ್ತು. ಅವಳು ಸಹಜವಾಗೇ ರೋಸಿಹೋಗಿದ್ದಳು. ಮಾತಿಗೆ ಮುಂಚೆ ಮನೆ ರಣರಂಗವಾಗುತ್ತಿತ್ತು. ಅದರ ಪರಿಣಾಮ ಪುಟ್ಟ ಕ್ರಿಸ್ಟೋಫರ್‌ನ ಮೇಲಾಗುತ್ತಿತ್ತು. ಕಡೆಗೊಂದು ದಿನ ಹೆಂಡತಿ ಅವನನ್ನು ಬಿಟ್ಟು ನಡೆದಳು.
ನ್ಯೂಯಾರ್ಕಿನ ಹೋಟೆಲೊಂದರಲ್ಲಿ ಅವಳಿಗೆ ಹೆಚ್ಚಿನ ಸಂಬಳದ ಕೆಲಸ ಸಿಕ್ಕಿತ್ತು. ಮಗನನ್ನು ಇರಿಸಿಕೊಳ್ಳುವ ವಿಷಯದಲ್ಲಿ ಇಬ್ಬರ ನಡುವೆಯೂ ಹಣಾಹಣಿಯಾದರೂ ತಾನೇ ಅವನನ್ನು ನೋಡಿಕೊಳ್ಳುತ್ತೇನೆಂಬ ಗಂಡನ ಹಟಕ್ಕೆ ಮಣಿದಳು. ಕಣ್ಣೀರು ತುಂಬಿಕೊಂಡೇ, ಮಲಗಿದ್ದ ಮಗನನ್ನು ಗಂಡನಿಗೊಪ್ಪಿಸಿ ನಡೆದಳು. ಅಲ್ಲಿಂದಾಚೆಗಿನ ಗಾರ್ಡನರ್‌ನ ಬದುಕನ್ನು ತಿಳಿಯಲು ‘ದ ಪರ್ಸೂಟ್ ಆಫ್ ಹ್ಯಾಪಿನೆಸ್’ ಎಂಬ ಮನೋಜ್ಞ ಚಿತ್ರವನ್ನೊಮ್ಮೆ ನೋಡಲೇಬೇಕು.
ಮನೆಯ ಬಾಡಿಗೆ ಕಟ್ಟಿಲ್ಲವೆಂದು ಅಪ್ಪ-ಮಗನನ್ನು ಸಾಮಾನುಗಳ ಸಹಿತ ಮನೆಯಿಂದಾಚೆಗೆ ಹಾಕುವ ಮಾಲೀಕ. ಗಾರ್ಡನರ್‌ನ ಖಾತೆಯಲ್ಲಿದ್ದ ಅಲ್ಪ-ಸ್ವಲ್ಪ ಹಣವನ್ನೂ ತೆರಿಗೆಯ ನೆಪದಲ್ಲಿ ಕಬಳಿಸುವ ಆದಾಯ ಇಲಾಖೆ. ವಾಸಕ್ಕೆ ಮನೆಯಿಲ್ಲದೆ ಮುಂದಿನ ದಿಕ್ಕಿನ ಅರಿವೂ ಇಲ್ಲದೆ ಅವನು ಮಗನೊಡನೆ ರಾತ್ರಿ ಕಳೆಯುವುದೆಲ್ಲಿ ಗೊತ್ತೇ? ರೈಲು ನಿಲ್ದಾಣದ ಟಾಯ್ಲೆಟ್ಟಿನಲ್ಲಿ! ಒಳಗಿನಿಂದ ಬೋಲ್ಟು ಜಡಿದು ನೆಲದ ತುಂಬಾ ಟಿಶ್ಯೂ ಪೇಪರ್ ಗಳನ್ನು ಹಾಸಿ ಅದರ ಮೇಲೆ ಮಗನನ್ನು ಮಲಗಿಸಿಕೊಂಡು, ರಾತ್ರಿ ಯಾರಾದರೂ ಬಾಗಿಲು ಬಡಿದಾಗಲೆಲ್ಲ ಇನ್ನೆಲ್ಲಿ ಬಾಗಿಲು ಮುರಿದು ಒಳನುಗ್ಗುತ್ತಾರೋ ಎಂಬ ಅಸಹಾಯಕತೆಯಲ್ಲಿ ಕಣ್ಣೀರುಗರೆಯುವ ಆ ಅಪ್ಪನ ಕಷ್ಟ ಯಾರಿಗೂ ಬೇಡ.
ತನ್ನದು ಹಾಗಿರಲಿ, ಮಗನಿಗೆ ಪ್ರತಿರಾತ್ರಿಯೂ ಮಲಗಲು ಜಾಗ ಹೊಂದಿಸುವುದು ಹೇಗೆ ಎಂದು ಚಿಂತಾಕ್ರಾಂತನಾದ ಅವನ ಕಣ್ಣಿಗೆ ಬಿದ್ದಿದ್ದು, ಅಮೆರಿಕದ ಸರಕಾರ ನಿರ್ಗತಿಕರಿಗೆಂದೇ ರಾತ್ರಿಯ ವಾಸ್ತವ್ಯಕ್ಕೋಸ್ಕರ ಕೊಡಮಾಡುತ್ತಿದ್ದ ಉಚಿತ ವಸತಿನಿಲಯಗಳು. ಆ ವಸತಿಯೋ, ಒಂದು ದಿನಕ್ಕೆ ಮಾತ್ರ ಸೀಮಿತವಾಗಿರುತ್ತಿತ್ತು. ಇವತ್ತು ಅಲ್ಲಿ ಒಂದು ಹಾಸಿಗೆಯನ್ನು ಗಿಟ್ಟಿಸಿಕೊಳ್ಳಬೇಕೆಂದರೆ ಸಂಜೆ ಐದರಿಂದಲೇ ದೊಡ್ಡ ಕ್ಯೂನಲ್ಲಿ ನಿಲ್ಲಬೇಕು! ನಾಳೆ ಬೆಳಗ್ಗೆ ಆ ಜಾಗ ಖಾಲಿ ಮಾಡಿ ಸಂಜೆಯ ಹೊತ್ತಿಗೆ ಇನ್ನೊಂದನ್ನು ಹುಡುಕಿಕೊಳ್ಳಬೇಕು. ತಡವಾಗಿ ಹೋದರೆ ಎಲ್ಲೂ ಜಾಗ ಸಿಗುವುದಿಲ್ಲ.
ಮಗನಿಗೋಸ್ಕರ ತನ್ನನ್ನು ಈ ಸಂದರ್ಭಕ್ಕೂ ಒಗ್ಗಿಸಿಕೊಂಡ ಗಾರ್ಡನರ್. ಅಷ್ಟೊತ್ತಿಗಾಗಲೇ ‘ಡೀನ್ ವಿಟ್ಟರ್’ ಎಂಬ ಹಣಕಾಸು ಸಂಸ್ಥೆಯಲ್ಲಿ ಅವನಿಗೆ ಇಂಟರ್ನ್‌ಶಿಪ್ ಸಿಕ್ಕಿತ್ತು. ಆದರೆ ಅದು ಸಂಬಳದ ಉದ್ಯೋಗವಲ್ಲ. ಆರು ತಿಂಗಳ ಕಾಲಾವಧಿಗೆ ಇಪ್ಪತ್ತು ಜನರನ್ನು ಆರಿಸಿ ಅವರಿಗೆ ಇಂಟರ್ನ್‌ಶಿಪ್ ತರಬೇತಿ ನೀಡಲಾಗುತ್ತಿತ್ತು. ಆ ಅವಧಿಯಲ್ಲಿ ಅವರು ಸಾಧ್ಯವಾದಷ್ಟು ಗ್ರಾಹಕರನ್ನು ಸೆಳೆದು ತರಬೇಕು. ಯಾರು ಅತಿ ಹೆಚ್ಚಿನ ಮೊತ್ತದ ವಹಿವಾಟನ್ನು ತಂದುಕೊಡುತ್ತಾರೋ ಅವರಿಗೆ ಮಾತ್ರ ಉದ್ಯೋಗ. ಅವಧಿಯ ಕೊನೆಯಲ್ಲಿ ಲಿಖಿತ ಪರೀಕ್ಷೆ.
ಆರು ತಿಂಗಳ ಕಾರ್ಯಕ್ಷಮತೆಯ ಒಟ್ಟಾರೆ ಮೌಲ್ಯಮಾಪನ. ಇಪ್ಪತ್ತು ಜನರಲ್ಲಿ ಒಬ್ಬರಿಗೆ ಮಾತ್ರ ಆಯ್ಕೆಯಾಗುವ ಅವಕಾಶ. ಉಳಿದ ಐವರಿಗೆ ಇತ್ತ ಸಂಬಳವೂ ಇಲ್ಲ, ಅತ್ತ ಈ ಅವಧಿಯನ್ನು ಕೆಲಸದ ಅನುಭವವೆಂದು ಬೇರೆಡೆ ನಮೂದಿಸುವ ಸ್ವಾತಂತ್ರ್ಯವೂ ಇಲ್ಲ! ಬೇರೆ ಇಂಟರ್ ನೆಟ್ ಗಳೆಲ್ಲ ಬೆಳಗ್ಗೆ ಬೇಗ ಬಂದು ತಡರಾತ್ರಿಯವರೆಗೂ ಕೆಲಸ ಮಾಡುತ್ತಿದ್ದರೆ, ಗಾರ್ಡನರ್ ಅದರಲ್ಲೂ ಅವಕಾಶ ವಂಚಿತ. ಸಂಜೆ ಐದಕ್ಕೆ ವಸತಿನಿಲಯಗಳ ಮುಂದೆ ಕ್ಯೂನಿಲ್ಲಬೇಕಲ್ಲ! ಬೆಳಗ್ಗೆ ಧಡಬಡನೆ ಎದ್ದು ಮಗನನ್ನು ಡೇ ಕೇರ್ ಒಂದರಲ್ಲಿ ಬಿಟ್ಟು ಸೀದಾ ಆಫೀಸಿಗೆ ಬರುತ್ತಿದ್ದ.
ಉಳಿದವರು ಒಂಭತ್ತು ಘಂಟೆಗಳ ಕಾಲದಲ್ಲಿ ಮಾಡುತ್ತಿದ್ದ ಕೆಲಸವನ್ನು ತಾನು ಆರೇ ಘಂಟೆಗಳಲ್ಲಿ ಮಾಡಿ ಮುಗಿಸುವುದನ್ನು ಕಲಿತ. ಅದಕ್ಕೋಸ್ಕರ ಏನಾದರೂ ಹೊಂದಾಣಿಕೆ ಮಾಡಿಕೊಳ್ಳಲೇಬೇಕಲ್ಲ? ಕುರ್ಚಿ ಬಿಟ್ಟೆದ್ದು ಹೋಗುವುದನ್ನು ತಪ್ಪಿಸಲು ಊಟ ನಿಂತಿತು. ಬಾತ್ರೂಮಿಗೆ ಹೋದರೆ ಸಮಯ ಹಾಳೆಂದು ನೀರು ಕುಡಿಯುವುದನ್ನೇ ಬಿಟ್ಟುಬಿಟ್ಟ ಪುಣ್ಯಾತ್ಮ! ಬೆಳಗ್ಗೆಯಿಂದ ಸಂಜೆಯವರೆಗೂ ಒಂದೇ ಸಮನೆ ಕೆಲಸ.
ಗಡಿಯಾರದ ಮುಳ್ಳು ನಾಲ್ಕು ಹೊಡೆಯುತ್ತಿದ್ದ ಹಾಗೇ ಮಗನನ್ನು ಕರೆದುಕೊಂಡು ಬರಲು ದೌಡು. ಅಲ್ಲಿಂದ ಸೀದಾ ಮಲಗುವ ಜಾಗದ ಹುಡುಕಾಟ. ಹೊಟ್ಟೆಹೊರೆಯುವುದಕ್ಕಾಗಿ ಶನಿವಾರ ಭಾನುವಾರಗಳಂದು ತನ್ನ ಉಪಕರಣದ ಮಾರಾಟ.
ಇದು ಒಂದೆರಡು ತಿಂಗಳ ಕಥೆಯಲ್ಲ, ಬರೋಬ್ಬರಿ ಆರು ತಿಂಗಳ ಪರದಾಟ. ಏತನ್ಮಧ್ಯೆ ಮಗುವಿನ ಆತ್ಮವಿಶ್ವಾಸ ಕುಂದದ ಹಾಗೆ ನೋಡಿಕೂಳ್ಳುವ ಹೊಣೆಗಾರಿಕೆ. ಅದನ್ನು ನಗಿಸಿಕೊಂಡು, ತಾನು ಹಸಿದಿದ್ದರೂ ಅದರ ಹೊಟ್ಟೆಗೆ ಹಾಕಿ, ಕಣ್ಣಲ್ಲಿ ಜಿನುಗುವ ನೀರು ಹೊರಬಂದು ಅದಕ್ಕೆ ಕಾಣದಂತೆ ಅಂಚಿನಲ್ಲೇ ತಡೆದು, ತಾವು ಸುಖವಾಗಿರುವ ದಿನ ಬಂದೇ ಬರುತ್ತದೆಂಬುದನ್ನು ಅದಕ್ಕೆ ಹೇಳಲು ಪಡುವ ಪ್ರಯತ್ನ ಎಂಥ ಕಲ್ಲು ಹೃದಯವನ್ನೂ ಕರಗಿಸುತ್ತದೆ.
ಅಂತೂ ಆರು ತಿಂಗಳು ಕಳೆದು ಪರೀಕ್ಷೆಯ ದಿನ ಬಂದಾಗ ಅವತ್ತೂ ಅವನಿಗೆ ಪರೀಕ್ಷೆಯನ್ನು ಎಲ್ಲರಿಗಿಂತ ಬೇಗ ಮುಗಿಸಿ ಓಡಿ ಹೋಗಿ ರೂಮು ಹುಡುಕುವ ಧಾವಂತ! ಸುಕ್ಕಾದ ಹಣೆಯ ನೆರಿಗೆಗಳು ಒಂದು ಕ್ಷಣವೂ ಸಡಿಲಾಗಲು ಬಿಡದ ಕ್ರೂರ ವಿಧಿ.
ಫಲಿತಾಂಶದ ದಿನ ಅತಿಯಾದ ಉದ್ವೇಗದಿಂದಲೇ ಆಫೀಸಿಗೆ ಹೋಗುವ ಅವನನ್ನು ಮ್ಯಾನೇಜರ್ ಒಳಗೆ ಕರೆದು, ‘ನೀನು ಪಟ್ಟ ಶ್ರಮ ಸಾರ್ಥಕವಾಗಿದೆ. ಕೆಲಸಕ್ಕೆ ಆಯ್ಕೆಯಾಗಿದ್ದೀಯ’ ಎನ್ನುತ್ತಾನೆ.
ಅದನ್ನು ಕೇಳಿದ ಗಾರ್ಡನರ್ ಹೇಗೆ ಪ್ರತಿಕ್ರಿಯಿಸಬೇಕೆಂದು ತಿಳಿಯದೆ ಮೂಕನಾಗಿ ಸಂತೋಷಾತಿರೇಕದಿಂದ ಹೊರಬರುತ್ತಾನೆ. ರಸ್ತೆಯಲ್ಲಿ ನಡೆಯುತ್ತಿದ್ದ ಉಳಿದೆಲ್ಲರಿಗಿಂತ ಹೆಚ್ಚಿನ ಸಂತೋಷದಿಂದ ಕುಣಿ–ದಾಡುತ್ತಾನೆ.
ಕ್ರಿಸ್ ಗಾರ್ಡನರ್‌ನ ಕಥೆಯನ್ನು ಮನಮುಟ್ಟುವಂತೆ ಹೇಳಿರುವ ಹಾಲಿವುಡ್ ಚಿತ್ರ ‘ದ ಪರ್ಸೂಟ್ ಆಫ್ ಹ್ಯಾಪಿನಸ್’ನಲ್ಲಿ ಗಾರ್ಡನರ್‌ನ ಪಾತ್ರಕ್ಕೆ ನಟ ವಿಲ್ ಸ್ಮಿತ್ ಸಂಪೂರ್ಣ ನ್ಯಾಯ ಒದಗಿಸಿದ್ದಾನೆ. ಅಂದಹಾಗೆ, ಈ ಕಥೆ ಕಾಲ್ಪನಿಕವಲ್ಲ.
ಇದು ಕ್ರಿಸ್ ಗಾರ್ಡನರ್ ಎಂಬ ಸಾಮಾನ್ಯನೊಬ್ಬನ ಯಶೋಗಾಥೆ. ಘಟಿಸಿದ್ದು 80ರ ದಶಕದಲ್ಲಿ. ಬದುಕಿಡೀ ಬರೀ ಒಬ್ಬ ಷೇರು ದಲ್ಲಾಳಿಯಾಗೇ ಇದ್ದಿದ್ದರೆ ಅವನನ್ನು ಯಾರಿಗೂ ಪರಿಚಯಿಸುವ ಅಗತ್ಯವೇ ಬೀಳುತ್ತಿರಲಿಲ್ಲ.
ಆದರೆ ದಲ್ಲಾಳಿಯಾಗಿ ಸೇರಿದ ಐದೇ ವರ್ಷಗಳಲ್ಲಿ ‘ಗಾರ್ಡನರ್ ರಿಚ್’ ಎಂಬ ಸ್ವಂತ ಷೇರು ಹೂಡಿಕೆ ಸಂಸ್ಥೆಯನ್ನಾರಂಭಿಸಿದ ಅವನು ನೋಡನೋಡುತ್ತಲೇ ಕೋಟ್ಯಾಧಿಪತಿಯಾದ. ನಂತರ 2006ರಲ್ಲಿ ಅವನ ಸಾಮ್ರಾಜ್ಯ ಇನ್ನಷ್ಟು ವಿಸ್ತರಿಸಿದಾಗ ಈ ಚಿತ್ರ ತಯಾರಾಯಿತು. ಈಗ ಅವನನ್ನು ಉದ್ಯಮಿ ಎನ್ನುವುದಕ್ಕಿಂತ ಹೆಚ್ಚಾಗಿ ಕೌನ್ಸೆಲರ್ ಎನ್ನುವುದೇ ಸೂಕ್ತ.
ತನ್ನ ಮಾತುಗಳಿಂದ, ತನ್ನದೇ ಜ್ವಲಂತ ಉದಾಹರಣೆಯಿಂದ ಜನರನ್ನು ಹುರಿದುಂಬಿಸುತ್ತಾನೆ. ವರ್ಷದ 200 ದಿನಗಳನ್ನು ಆ ಕೆಲಸಕ್ಕೆಂದೇ ಮೀಸಲಿಟ್ಟಿದ್ದಾನೆ. ಕೆಲವೊಮ್ಮೆ ನಾವು ನಮ್ಮ ಕಷ್ಟವೇ ಹೆಚ್ಚಿನದು ಎಂದುಕೊಳ್ಳುತ್ತೇವೆ. ಯಾರಾದರೂ ಧೈರ್ಯ ಹೇಳಲು ಬಂದರೆ, ‘ನನ್ನ ಕಷ್ಟ ಅವರಿಗೇನು ಗೊತ್ತಾಗುತ್ತೆ?’ ಎಂಬ ಧೋರಣೆಯ ಮಾತಾಡುತ್ತೇವೆ. ಬದುಕಿನಲ್ಲಿ ಇನ್ನೆಂದೂ ಸಂತೋಷವೇ ಬರಲಾರದೇನೋ ಎನ್ನುವಷ್ಟು ನಿರಾಶರಾಗಿ ಧೃತಿಗೆಡುತ್ತೇವೆ.
ಆದರೆ, ನಮ್ಮ ಪಾಲಿನ ಸಂತೋಷವೂ ಎಲ್ಲೋ ಅಡಗಿ ಕುಳಿತಿರುತ್ತದೆ ಎನ್ನುವುದನ್ನು ಮರೆತುಬಿಡುತ್ತೇವೆ. ಹತಾಶರಾಗಿ ಕುಸಿಯದೆ ಅದನ್ನು ಹುಡುಕಿ ತೆಗೆಯಬೇಕು. ‘ದ ಪರ್ಸೂಟ್ ಆಫ್ ಹ್ಯಾಪಿನೆಸ್’ನಲ್ಲಿ ಕ್ರಿಸ್ ಗಾರ್ಡನರ್ ತನ್ನ ಸಂತೋಷವನ್ನು ಬೆಂಬೆತ್ತಿ ಪಡೆಯುತ್ತಾನೆ. ಈ ಹೊಸ ಕ್ಯಾಲೆಂಡರ್ ವರ್ಷದ ಆರಂಭವೇ ನೆವವಾಗಿ ನಮಗೂ ಕ್ರಿಸ್‌ನ ಬದುಕು ಮಾದರಿಯಾಗಲಿ. ಸಂತೋಷಗಳನ್ನು ಹೆಕ್ಕಿ ತೆಗೆಯುವುದೇ ಚಟವಾಗಲಿ.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882