ಅಗಲಿಕೆ ಎನ್ನುವದು ಹೃದಯ ವಿದ್ರಾವಕ ಅಲ್ಲವೇ.?
ಪ್ರೀತಿಯ ಬಂಧನ
ಒಂದೂರಿತ್ತು. ಆ ಊರಿನಲ್ಲಿ ತುಂಬಾ ದಿನಗಳ ಕಾಲ ಮಳೆ ಬರಲಿಲ್ಲ. ಜನರೆಲ್ಲ ನೀರು, ಆಹಾರವಿಲ್ಲದೆ ಆ ಊರು ಬಿಟ್ಟು ಗುಳೇ ಹೋದರು. ಹೀಗೆ ಗುಳೇ ಹೋದವರಲ್ಲಿ ತಾಯಿ, ಮಗ, ತಂಗಿಯರಿದ್ದರು. ಇವರೊಂದಿಗೆ ಒಂದು ಹಸು ಕೂಡ ಇತ್ತು. ಅದನ್ನು ಪ್ರೀತಿಯಿಂದ ಗೌರಿ ಎಂದು ಕರೆಯುತ್ತಿದ್ದರು.
ಎಲ್ಲಿಗೆ ಹೋಗುವುದು? ತಿಳಿಯದು, ಹೊರಟಿದ್ದಾಗಿದೆ. ಮೂರು ನಾಲ್ಕು ದಿನಗಳು ಕಳೆದಿವೆ. ತಾವು ತಂದಿದ್ದ ಆಹಾರ ಪದಾರ್ಥಗಳು ಮುಗಿದಿದ್ದವು. ಮುಂದಿನ ದಿನಗಳು ದುಸ್ತರವಾಗಿದ್ದವು. ಎಲ್ಲರಿಗೂ ಹಸಿವಾಗತೊಡಗಿತು. ಹಸಿವು ನೀಗಿಸಿಕೊಳ್ಳಲು ಏನು ಮಾಡುವುದೆಂದು ತಿಳಿಯದೆ ಯೋಚನೆಗೀಡಾದರು.
ತಮ್ಮಲ್ಲಿದ್ದ ಗೌರಿಯನ್ನು ಮಾರಿಬಿಡಲು ಅಮ್ಮ ಮಗನಿಗೆ ಹೇಳಿದಳು. ಅವರೆಲ್ಲರಿಗೂ ಪ್ರೀತಿಯ ಗೌರಿಯನ್ನು ಮಾರಲು ಇಷ್ಟವಿಲ್ಲದಿದ್ದರೂ ಆಕೆಯನ್ನು ಮಾರಲು ಮಗ ಮನಸ್ಸು ಮಾಡಿದ್ದ. ಗೌರಿಯನ್ನು ಕರುವಾಗಿದ್ದಾಗಿನಿಂದ ಮುದ್ದಿನಿಂದ ಸಾಕಿದ್ದರು. ತಂಗಿಯು ಗೌರಿಯೊಡನೆ ಖುಷಿಯಾಗಿ ಆಡುತ್ತಿದ್ದಳು. ಅದು ಚಿಗರಿ ಹಾಂಗ ನೆಗೆದಾಡುತ್ತಿತ್ತು.
ಅವರೆಲ್ಲರ ನಡುವೆ ಇಪ್ಪತ್ತು ವರ್ಷಗಳಿಂದ ಅದು ಪ್ರೀತಿಯಿಂದ ಬೆಳೆದಿತ್ತು. ಗೌರಿ ಸೇರಿ ಅವರು ನಾಲ್ಕು ಜನರು ಒಂದೇ ಕುಟುಂಬದವರಂತೆ ಇದ್ದರು. ಈಗ ದೊಡ್ಡದಾದ ಮೇಲೆ ಗೌರಿ ತಮ್ಮ ದೈವ ಎಂದು ತಿಳಿದಿದ್ದರು. ಮಗ ಗೌರಿಯ ಕಡೆಗೊಮ್ಮೆ ನೋಡಿದ. ಗೊತ್ತಿಲ್ಲದಂತೆ ಅವನಿಗೆ ಕಣ್ಣೀರು ಒತ್ತರಿಸಿತು.
ಗೌರಿಯನ್ನು ಬಿಗಿದಪ್ಪಿದ. ತಂಗಿಯೂ ಗೌರಿಯನ್ನು ತಬ್ಬಿಕೊಂಡು ಅಳಲಾರಂಭಿಸಿದಳು. ಗೌರಿಯನ್ನು ಮಾರು ಎಂದು ಅಮ್ಮ ಹೇಳಿದ್ದು ಎಲ್ಲರನ್ನೂ ತಲ್ಲಣಗೊಳಿಸಿತ್ತು. ತನ್ನನ್ನು ಯಾರಿಗೋ ಮಾರುತ್ತಾರೆ ಎಂದು ಗೌರಿಗೂ ಕಣ್ಣೀರು ಬರತೊಡಗಿತು.
ಅಗಲಿಕೆ ಎನ್ನುವುದು ಹೃದಯ ವಿದ್ರಾವಕ ಅಲ್ಲವೆ? ಅಮ್ಮನನ್ನ ನೋಡುವುದು, ಮಗನ ಕಡೆಗೊಮ್ಮೆ, ತಂಗಿಯ ಕಡೆಗೊಮ್ಮೆ ನೋಡುವುದು. ಕಡೆಗೊಮ್ಮೆ ಅಮ್ಮನ ಕಡೆಗೆ ದೈನ್ಯತೆಯಿಂದ ಗೌರಿ ನೋಡುತ್ತ, ಮೂಕ ವೇದನೆಯನ್ನು ಅನುಭವಿಸುತ್ತಿತ್ತು. ನಾನು ಇವರಿಗೆ ಭಾರವಾದೆನೆ? ತಾಯಿಗೆ ಮಗು ಭಾರವೇ ಎಂದು ಅದರ ಮುಖಭಾವದಿಂದ ತಿಳಿಯುತ್ತಿತ್ತು. ‘ಅದಕ್ಕೂ ತಿನ್ನಲು ಮೇವಿಲ್ಲ. ನಮಗೂ ಹಸಿವೆ ಹಾಗಾಗಿ ಅನಿವಾರ್ಯತೆಯಿಂದ, ಬೇರೆ ಮಾರ್ಗ ಇಲ್ಲದೇ ಗೌರಿಯನ್ನು ಮಾರಿಬಿಡುವುದು’ ಎಂದು ಯೋಚಿಸಿದ್ದರು.
ಮಗ ಪಟ್ಟಣದ ರಸ್ತೆಯ ಒಂದು ಭಾಗದಲ್ಲಿ ಗೌರಿಯನ್ನು ಹಿಡಿದುಕೊಂಡು ನಿಂತ. ಅದರ ಬೆಲೆಯನ್ನು ಕೂಗಲಾರಂಭಿಸಿದ. ಅವನ ಸುತ್ತ ಜನರು ಸೇರಲಾರಂಭಿಸಿದರು. ‘ಒಳ್ಳೆಯ ಬೆಲೆ ಬಂದರೆ ಕೊಟ್ಟು ಬಿಡು’ ಎಂದಳು ಅಮ್ಮ. ಗೌರಿ ತಮ್ಮ ಕೈಬಿಡುವಳೆಂದು ಆಕೆಯ ಕಡೆಗೊಮ್ಮೆ ನೋಡಿದ. ತಂಗಿಯ ಕಡೆಗೊಮ್ಮೆ ನೋಡಿದ. ಅವರ ಸ್ಥಿತಿ ಮನಮಿಡಿಯುವಂತಿತ್ತು.
ಗೌರಿಯನ್ನು ಮಾರಲೋ ಬಿಡಲೋ ಎಂದು ಆತನ ಮನಸ್ಸು ಹೊಯ್ದಾಡುತ್ತಿತ್ತು. ಆದರೂ ಅದರ ಬೆಲೆಯನ್ನು ಕೂಗಲಾರಂಭಿಸಿದ. ಸೇರಿದ್ದ ಜನರಲ್ಲಿ ಕೆಲವರು ಎರಡು ಸಾವಿರ ಎಂದರು. ಇನ್ನು ಕೆಲವರು ಮೂರು ಸಾವಿರ ಐದುನೂರು ಎಂದು ಕೂಗಿದರು.
ಕಡೆಯದಾಗಿ ಗೌರಿಯನ್ನು ಹರಾಜಿನಲ್ಲಿ ಕೂಗಿದ್ದ ವ್ಯಕ್ತಿ ಮಗನ ಕಿಸೆಯಲ್ಲಿ ಐದು ಸಾವಿರ ರೂಪಾಯಿಗಳನ್ನು ತುರುಕಿದ. ‘ಒಳ್ಳೆಯ ಬೆಲೆ ಬಂದಿದೆ ಕೊಟ್ಟುಬಿಡು’ ಎಂದಳು ಅಮ್ಮ. ಮಗನಿಗೆ ಇಷ್ಟವಿರಲಿಲ್ಲ. ಹಣ ತುರುಕಿದ ವ್ಯಕ್ತಿ ತನ್ನ ಸ್ನೇಹಿತನೊಂದಿಗೆ ಏನನ್ನೋ ಗುಸುಗುಸು ಮಾತನಾಡುತ್ತಿದ್ದ. ಇದನ್ನು ಹತ್ತಿರದಿಂದ ಆಲಿಸಿದಾಗ ಅವನು ಕಟುಕನೆಂದು ಗೊತ್ತಾಯಿತು.
‘ಎಲ್ಲಾದರೂ ಉಂಟೆ, ತಿಳಿದೂ ತಿಳಿದೂ ಕಟುಕನ ಕೈಗೆ ಗೌರಿಯನ್ನು ಕೊಡುವುದುಂಟೆ’ ಎಂದು ಯೋಚಿಸಿದವನೇ ತಕ್ಷಣ ತನ್ನ ಕಿಸೆಗೆ ತುರುಕಿದ್ದ ಹಣವನ್ನು ತೆಗೆದವನೇ ಗೌರಿ ಹಿಡಿದವನ ಮುಖದ ಮೇಲೆ ಎಸೆದು ಬಿಟ್ಟ. ಹೇಗಾದರಾಗಲಿ ಗೌರಿಯನ್ನು ನೋಡಿಕೊಳ್ಳುತ್ತೇವೆ, ಎಂದು ಧೈರ್ಯದಿಂದ ತಂಗಿಯ ಮುಖವನ್ನೊಮ್ಮೆ ನೋಡಿದ. ಗೌರಿಯನ್ನೆಳೆದುಕೊಂಡು ಅಮ್ಮನೊಂದಿಗೆ ನಡೆದ. ಮಂದಹಾಸದೊಂದಿಗೆ ಗೌರಿ ಅವರೊಂದಿಗೆ ಕಾಲುಹಾಕಿದಳು.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882