ಬದುಕಿನಲ್ಲಿ ನೀವೇನು ಕೊಡುತ್ತೀರಿ ಅದೇ ವಾಪಸ್ ಬರಲಿದೆ ಎಚ್ಚರ.!
ದಿನಕ್ಕೊಂದು ಕಥೆ
ರೈತನೊಬ್ಬ ಪ್ರತಿನಿತ್ಯ ಬೇಕರಿಯವನಿಗೆ ಒಂದು ಪೌಂಡ್ ಬೆಣ್ಣೆಯನ್ನು ಮಾರುತ್ತಿದ್ದ. ಒಂದು ದಿನ ಅಂಗಡಿಯವನು ಬೆಣ್ಣೆಯನ್ನು ತೂಕ ಮಾಡಿ ನೋಡಿ, ಅದು ಒಂದು ಪೌಂಡ್ ಇದೆಯೇ ಎಂದು ಪರೀಕ್ಷಿಸಿದ.
ಆದರೆ ಬೆಣ್ಣೆ ಒಂದು ಪೌಂಡ್ ತೂಗಲಿಲ್ಲ, ಸ್ವಲ್ಪ ಕಡಿಮೆಯೇ ಇತ್ತು. ಅದರಿಂದ ಕೋಪಗೊಂಡ ಬೇಕರಿಯವನು ರೈತನ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡಿದ. ನ್ಯಾಯಾಧೀಶರು ‘ನೀನು ಯಾವ ಮಾದರಿಯ ತಕ್ಕಡಿಯಲ್ಲಿ ಬೆಣ್ಣೆಯನ್ನು ಅಳತೆ ಮಾಡುತ್ತೀಯಾ?’ ಎಂದು ರೈತನನ್ನು ಕೇಳಿದರು.
ಅದಕ್ಕೆ ರೈತ ‘ಸ್ವಾಮಿ ನಾನು ರೈತ. ನನಗೆ ಓದು-ಬರಹ ಗೊತ್ತಿಲ್ಲ, ವ್ಯವಹಾರ ಜ್ಞಾನವೂ ಅಷ್ಟಕ್ಕಷ್ಟೆ. ನನಗೆ ಈ ಅಳತೆಯ ಲೆಕ್ಕವೆಲ್ಲ ತಿಳಿಯದು, ಆದರೆ ನನ್ನ ಬಳಿ ತಕ್ಕಡಿಯೊಂದಿದೆ’ ಎಂದ. ‘ಹಾಗಾದರೆ ನೀನು ಬೆಣ್ಣೆಯನ್ನು ಹೇಗೆ ತೂಕ ಮಾಡುತ್ತೀಯ?’ ಎಂದು ಕೇಳಿದರು ನ್ಯಾಯಾಧೀಶರು.
‘ಮಹಾಸ್ವಾಮಿ, ಈ ಬೇಕರಿಯಾತ ಬಹಳ ಹಿಂದಿನಿಂದಲೂ ನನ್ನಿಂದ ಬೆಣ್ಣೆ ಖರೀದಿಸುತ್ತಿದ್ದಾರೆ. ನಾನೂ ಕೂಡ ಇವರ ಅಂಗಡಿಯಿಂದ ಒಂದು ಪೌಂಡ್ ಬ್ರೆಡ್ ಖರೀದಿಸುತ್ತಾ ಬಂದಿದ್ದೇನೆ. ಪ್ರತಿದಿನ ಇವರು ಬ್ರೆಡ್ ತಂದುಕೊಟ್ಟಾಗ ನಾನು ಅದನ್ನು ತಕ್ಕಡಿಯ ಮೇಲಿಟ್ಟು ಅಷ್ಟೇ ತೂಕದ ಬೆಣ್ಣೆಯನ್ನು ಅವರಿಗೆ ಕೊಡುತ್ತಿದ್ದೇನೆ. ನೀವು ಶಿಕ್ಷಿಸುವುದಾದರೆ ಮೊದಲು ಅಂಗಡಿಯವನನ್ನೇ ಶಿಕ್ಷಿಸಿ’ ಎಂದ.
ಇಲ್ಲಿ ಯಾರು ತಪ್ಪಿತಸ್ಥರು? ಬದುಕಿನಲ್ಲಿ ನೀವೇನು ಕೊಡುತ್ತೀರೋ, ಅದೇ ನಿಮಗೆ ವಾಪಸ್ ಬರುತ್ತದೆ. ನೀವು ಪ್ರಾಮಾಣಿಕರಾಗಿದ್ದರೆ ಜಗತ್ತು ನಿಮ್ಮೊಂದಿಗೆ ಪ್ರಾಮಾಣಿಕವಾಗಿಯೇ ವರ್ತಿಸುತ್ತದೆ.
ಕೆಲವರು ಮೋಸ, ವಂಚನೆ, ಸುಳ್ಳು ಹೇಳುವುದನ್ನೇ ಅಭ್ಯಾಸವನ್ನಾಗಿಸಿಕೊಂಡಿರುತ್ತಾರೆ. ಅವರು ಎಷ್ಟು ಸುಳ್ಳು ಹೇಳುತ್ತಾರೆಂದರೆ ಅವರಿಗೂ ಸತ್ಯ ಏನೆಂಬುದು ತಿಳಿದಿರುವುದಿಲ್ಲ. ಹಾಗಾದರೆ ಅವರು ನಿಜಕ್ಕೂ ಯಾರಿಗೆ ಮೋಸ ಮಾಡುತ್ತಿರುತ್ತಾರೆ?
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882