ತಿರಸ್ಕಾರ ಮೆಟ್ಟಿ ನಿಂತ ಡೇವಿಡ್ ಈ ಕಥೆ ಓದಿ
ತಿರಸ್ಕಾರ ಮೆಟ್ಟಿ ನಿಂತ ಡೇವಿಡ್
ತಿರಸ್ಕಾರ ಮನಸ್ಸನ್ನು ಕುಗ್ಗಿಸುತ್ತದೆ, ಆತ್ಮವಿಶ್ವಾಸ ಕಡಿಮೆ ಮಾಡುತ್ತದೆ. ತಿರಸ್ಕಾರವನ್ನು ಎದುರಿಸಿದ ಮನುಷ್ಯ ಮಾಡುವ ಒಳ್ಳೆಯ ಕಾರ್ಯವನ್ನು ತೊರೆದು ನಿಷ್ಕ್ರಿಯನಾಗುವ ಸಂದರ್ಭಗಳೂ ಅನೇಕ. ಬದುಕಿನಲ್ಲಿ ಈ ತಿರಸ್ಕಾರ ಎದುರಿಸಿ ಪುಟದೆದ್ದು ನಿಲ್ಲದವನು ಯಾವನೂ ನಾಯಕನಾಗಲಾರ.
ನಾಯಕರಾದವರು ಈ ತಿರಸ್ಕಾರವನ್ನೇ ಮೆಟ್ಟಲಾಗಿ ಮಾಡಿಕೊಂಡು ಮೇಲೆದ್ದು ಸಾಧಕರಾಗುತ್ತಾರೆ.
ಬೈಬಲ್ಲಿನ ಕಥೆಗಳಲ್ಲಿ ಡೇವಿಡ್‌ನ ಕಥೆ ಬಹಳ ಮಾರ್ಮಿಕವಾದದ್ದು.
ಡೇವಿಡ್ ತನ್ನ ಜೀವನದಲ್ಲಿ ಅನುಭವಿಸಿದಷ್ಟು ತಿರಸ್ಕಾರವನ್ನು ಯಾರೂ ಅನುಭವಿಸಿರಲಿಕ್ಕಿಲ್ಲ. ಇಸ್ರೇಲಿನ ರಾಜನಾಗಿದ್ದ ಸೌಲನ ಆಡಳಿತವನ್ನು ದೇವರು ಮೆಚ್ಚಲಿಲ್ಲ. ನಿನ್ನ ಬದಲಾಗಿ ನಾನು ಒಪ್ಪುವ ಒಬ್ಬನನ್ನು ರಾಜನನ್ನಾಗಿ ಮಾಡುತ್ತೇನೆ ಎಂದು ತಿಳಿಸಿ ಈ ಕಾರ್ಯಕ್ಕೆ ಪ್ರವಾದಿ ಸಾಮ್ಯುವೆಲ್ನನ್ನು ನಿಯಮಿಸಿದ.
ಅವನಿಗಿದ್ದ ಕರ್ತವ್ಯವೆಂದರೆ ಬೆತ್ಲೆಹೆಮ್‌ನಲ್ಲಿದ್ದ ಜೆಸ್ಸಿಯ ಮನೆಗೆ ಹೋಗಿ ಅವನ ಒಬ್ಬ ಮಗನನ್ನು ರಾಜನನ್ನಾಗಿ ಮಾಡುವುದು. ಜೆಸ್ಸಿಗೆ ಏಳು ಜನ ಗಂಡುಮಕ್ಕಳು. ಅದರಲ್ಲಿ ಕಡೆಯವನು ಡೇವಿಡ್. ಅವನ ತಂದೆಯೇ ಅವನನ್ನು ತಿರಸ್ಕರಿಸಿ ಬಿಟ್ಟಿದ್ದ.
ಆ ಹುಡುಗ ಕುರಿ ಕಾಯುವುದನ್ನು ಬಿಟ್ಟರೆ ಯಾವುದಕ್ಕೂ ಪ್ರಯೋಜನವಿಲ್ಲವೆಂಬುದು ಅವನ ಮತ. ದಯವಿಟ್ಟು ಒಂದು ಕ್ಷಣ ಡೇವಿಡ್‌ನ ಸ್ಥಾನದಲ್ಲಿ ನಿಂತು ಯೋಚಿಸಿ, ಅದೆಂಥ ಹೀನ ಪರಿಸ್ಥಿತಿ. ತಂದೆ ತನ್ನ ಏಳೂ ಮಕ್ಕಳನ್ನು ಕರೆದು ಅದ್ಭುತವಾದ ವಿಷಯ ತಿಳಿಸುತ್ತಾನೆ.
ಇಂದು ನಮ್ಮ ಮನೆಗೆ ಪ್ರವಾದಿ ಸಾಮ್ಯುವೆಲ್ ಬರಲಿದ್ದಾರೆ. ನನ್ನ ಮಕ್ಕಳಲ್ಲಿ ಒಬ್ಬನನ್ನು ಇಸ್ರೇಲಿನ ರಾಜನನ್ನಾಗಿ ಮಾಡುತ್ತಾರೆ. ಆದ್ದರಿಂದ ನೀವೆಲ್ಲ ಚೆನ್ನಾಗಿ ಅಲಂಕಾರ ಮಾಡಿಕೊಂಡು ಸಿದ್ಧರಾಗಿರಿ. ಯಾರಿಗೆ ದೈವ ಒಲಿಯುತ್ತದೆಯೋ ಹೇಳುವುದೆಂತು? ಆದರೆ ಡೇವಿಡ್, ನೀನು ಇಲ್ಲಿ ಇರಬೇಕಿಲ್ಲ, ನಿಷ್ಪ್ರಯೋಜಕ ನೀನು. ಹೊರಡು ನೀನು ಕಾಡಿಗೆ ಕುರಿಗಳೊಂದಿಗೆ. ನಿನ್ನ ಅಣ್ಣಂದಿರು ಆರು ಜನ ಇಲ್ಲಿದ್ದರೆ ಸಾಕು’. ಆ ಹುಡುಗ ತಲೆ ತಗ್ಗಿಸಿ ಕಾಡಿಗೆ ನಡೆದ. ಡೇವಿಡ್‌ನ ಅಣ್ಣಂದಿರೆಲ್ಲರೂ ಅವನನ್ನು ತಿರಸ್ಕರಿಸಿದರು.
ಈತ ಬೆಳೆ ಬೆಳೆಸಿ ಕಾಳುಗಳನ್ನು ತೆಗೆದುಕೊಂಡು ಅಣ್ಣಂದಿರ ಮನೆಗೆ ಹೋದರೆ, ಕಾಳುಗಳನ್ನು ತೆಗೆದುಕೊಂಡು ಇವನನ್ನು ಹೊರಗೆ ತಳ್ಳಿಬಿಡುವರು, ನೀನೇಕೆ ಇಲ್ಲಿಗೆ ಬಂದೆ? ಕುರಿ ತೆಗೆದುಕೊಂಡು ಕಾಡಿಗೆ ಹೋಗು ಎಂದು ಅಪಮಾನಿಸುವರು.
ರಾಜನಾಗಿದ್ದ ಸೌಲ ಕೂಡ ತುಂಬ ಅಪಮಾನ ಮಾಡಿದ. ತನಗೆ ಬೇಕಾದಾಗ ಇವನನ್ನು ಕರೆಸಿಕೊಂಡು ಇವನು ನುಡಿಸುವ ವಾದ್ಯವನ್ನು ಕೇಳಿ ಸಂತೋಷಪಡುವ ಮತ್ತು ಮರುಕ್ಷಣವೇ ಭರ್ಜಿಯಿಂದ ಚುಚ್ಚಿ ಓಡಿಸಿ ಬಿಡುವ.
ಆದರೆ, ಪ್ರವಾದಿ ಸಾಮ್ಯುವೆಲ್ ಬಂದು ಜೆಸ್ಸಿಯ ಎಲ್ಲ ಮಕ್ಕಳನ್ನು ಒಬ್ಬೊಬ್ಬರನ್ನಾಗಿ ಕರೆದ. ಅವನ ಮನಸ್ಸಿನಲ್ಲಿ ಭಗವಂತ ಕುಳಿತು, ಇವನಲ್ಲ, ಇವನಲ್ಲ ಎಂದು ಹೇಳುತ್ತಲೇ ಬಂದ. ಆಗ ಒಬ್ಬ ಮಗ ಎಲಿಯಾಬ್ ಎದುರು ಬಂದ. ಅವನ ಭವ್ಯ ಆಕೃತಿಯನ್ನು ನೋಡಿ ಒಂದು ಕ್ಷಣ ಸಾಮ್ಯುವೆಲ್ ಕೂಡ ಇವನೇ ರಾಜನಾಗುವವನು ಎನ್ನಿಸಿತು.
ತಕ್ಷಣ ಅವನ ಮನಸ್ಸಿನಲ್ಲಿ ಭಗವಂತ ಹೇಳಿದ, ಬಾಹ್ಯ ಆಕಾರವನ್ನು ನೋಡಿ ತೀರ್ಮಾನಿಸಬೇಡ, ಹೃದಯದ ನಿಷ್ಕಲ್ಮತೆಯನ್ನು ನೋಡು. ಆರು ಮಕ್ಕಳನ್ನು ನೋಡಿದ ಮೇಲೆ ಸಾಮ್ಯುವೆಲ್ ಕೇಳಿದ, ‘ಜೆಸ್ಸಿ, ನಿನ್ನ ಎಲ್ಲ ಮಕ್ಕಳೂ ಬಂದರೇ?’ ಜೆಸ್ಸಿ ಹೇಳುತ್ತಾನೆ, ‘ರಾಜನಾಗಬಹುದಾಗಿದ್ದ ಆರು ಜನರನ್ನು ನೀವು ಕಂಡಿದ್ದೀರಿ.
ಇನ್ನೊಬ್ಬ ನಿರುಪಯೋಗಿ ಮಗ ಕಾಡಿನಲ್ಲಿ ಕುರಿ ಮೇಯಿಸಲು ಹೋಗಿದ್ದಾನೆ’. ‘ಅವನನ್ನೂ ಕರೆ’ ಎನ್ನುತ್ತಾನೆ ಸಾಮ್ಯುವೆಲ್. ಡೇವಿಡ್ ಬಂದು ಮುಂದೆ ನಿಂತ ತಕ್ಷಣ ಈತನೇ ಭಗವಂತ ನಿಯಮಿಸಿದ ಚಕ್ರವರ್ತಿ ಎಂದು ಖಾತ್ರಿಯಾಗಿ ಅವನನ್ನೇ ಸಿಂಹಾಸನದ ಮೇಲೆ ಪ್ರತಿಷ್ಠಾಪಿಸುತ್ತಾನೆ.
ಜನರು ನಮ್ಮನ್ನು ಅಳೆಯುವ ರೀತಿ, ಭಗವಂತ ನಮ್ಮನ್ನು ನೋಡುವ ರೀತಿ ಸಂಪೂರ್ಣ ಬೇರೆಯಾದದ್ದು. ಎಲ್ಲರೂ ನಮ್ಮನ್ನು ನಮ್ಮ ಹಣದಿಂದ, ಅಧಿಕಾರದಿಂದ, ಜನಪ್ರಿಯತೆಯಿಂದ ಅಳೆದರೆ ಭಗವಂತ ನಮ್ಮನ್ನು ನಮ್ಮ ಹೃದಯದ ಶುದ್ಧತೆಯಿಂದ ಅಳೆಯುತ್ತಾನೆ.
ಉಳಿದ ವಿಷಯಗಳು ಕೆಲಕಾಲ ಯಶಸ್ಸನ್ನು ನೀಡಿದಂತೆ ಕಂಡರೂ ಕೊನೆಗೆ ಭಗವಂತನ ಆಯ್ಕೆಯೇ ನಿಲ್ಲುವುದು. ಆದ್ದರಿಂದ ಬದುಕಿನಲ್ಲಿ ಜನ ತೋರುವ ತಿರಸ್ಕಾರ ಅಥವಾ ತೋರಿಕೆಯ ಆದರಕ್ಕೆ ಮನ ಸೋಲುವ ಬದಲು ಹೃದಯವನ್ನು ಆದಷ್ಟು ಶುದ್ಧವಾಗಿಟ್ಟುಕೊಳ್ಳುವುದರೆಡೆಗೆ ಮನ ನೀಡುವುದು ಕ್ಷೇಮ.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882