ಕಥೆ

ನಾಲ್ಕಾಣೆ‌ ಉಳಿಸಲು ಹೋದ ಕೊನೆಗೇನಾದ ಈ ‌ಕಥೆ ಓದಿ

ದುರಾಸೆಯ ಫಲ

ಒಂದು ಊರಿನಲ್ಲಿ ಈರಣ್ಣನೆಂಬ ವ್ಯಕ್ತಿ ಇದ್ದ. ಅವನು ಮಹಾ ಜಿಪುಣನೆಂದು ಹೆಸರುವಾಸಿಯಾಗಿದ್ದ. ಯಾವುದೇ ಸಾಮಾನು ತರಲಿಕ್ಕೆ ಪೇಟೆಗೆ ಹೋದರೆ ಚೌಕಾಸಿ ಮಾಡದೆ ಕೊಳ್ಳುತ್ತಿರಲಿಲ್ಲ.

ಒಮ್ಮೆ ಅವನ ತಾಯಿ ಎರಡು ರೂಪಾಯಿ ಕೊಟ್ಟು ತೆಂಗಿನಕಾಯಿ ತೆಗೆದುಕೊಂಡು ಬಾ ಎಂದು ಹೇಳಿದಳು. ಈರಣ್ಣ ಸಮೀಪದ ಅಂಗಡಿಗೆ ಹೋಗಿ, “ತೆಂಗಿನ ಕಾಯಿ ಹೇಗಪ್ಪಾ?” ಎಂದು ಕೇಳಿದ.

“ಎರಡು ರೂಪಾಯಿಗೊಂದು ಸ್ವಾಮಿ” ಎಂದ ಆಗಂಡಿಯಾತ.
“ಎರಡು ರೂಪಾಯಿ ತುಂಬಾ ಹೆಚ್ಚಾಯಿತು. ಒಂದು ರೂಪಾಯಿ ಮಾಡಿಕೊಡು” ಎಂದ ಈರಣ್ಣ.
“ಆಗಲ್ಲರಿ, ನಾವು ಪೇಟೆಯಿಂದ ತಂದು ಮಾರುತ್ತೇವೆ. ನಾವು ಕೊಳ್ಳುವ ಬೆಲೆಯೇ ಒಂದೂಕಾಲು ರೂಪಾಯಿ” ಎಂದ ಅಂಗಡಿಯವ.

“ಅಂದರೆ ಪೇಟೆಯಲ್ಲಿ ಒಂದೂಕಾಲು ರೂಪಾಯಿಗೆ ಒಂದು ತೆಂಗಿನ ಕಾಯಿ ಸಿಕ್ಕುತ್ತದೆಯೇ?” ಎಂದು ಕೇಳಿದ ಈರಣ್ಣ.
“ಇನ್ನೂ ಕಡಿಮೆ ಬೆಲೆಗೆ ಸಿಕ್ಕರೂ ಸಿಗಬಹುದು” ಎಂದ ಅಂಗಡಿಯವ.

“ಪೇಟೆಗೆ ಹೋಗಿ ಏಕೆ ತರಬಾರದು?” ಎಂದುಕೊಂಡ ಈರಣ್ಣ ಪೇಟೆಯ ದಾರಿ ಹಿಡಿದೆ ಬಿಟ್ಟ. ಪೇಟೆಯಲ್ಲಿಯ ಒಂದು ದೊಡ್ಡ ಅಂಗಡಿಯ ಮುಂದೆ ನಿಂತು “ತೆಂಗಿನಕಾಯಿ ಹೇಗೆ?” ಎಂದಾಗ “ಒಂದು ರುಪಾಯಿಗೆ ಒಂದು” ಎಂದ ಅಂಗಡಿಯಾತ.

“ಒಂದು ರೂಪಾಯಿ ತುಂಬಾ ಹೆಚ್ಚಾಯಿತು. ಎಂಟಾಣೆಗೊಂದು ಕೊಡೋದಿಲ್ಲವೇ?” ಎಂದ ಈರಣ್ಣ.
“ಇಲ್ಲಾರಿ, ತೆಂಗಿನ ತೋಟದ ಮಾಲೀಕರಿಂದಲೇ ನಾವು ಎಂಟಾಣೆಗೆ ಕೊಳ್ಳುತ್ತೇವೆ. ನೀವು ತೋಟಕ್ಕೆ ಹೋದರೆ ಎಂಟಾಣೆಗೊಂಡು ಕಾಯಿ ಸಿಕ್ಕಿತು” ಎಂದ.

ಈರಣ್ಣ ತೆಂಗಿನ ತೋಟದತ್ತ ನಡೆದೇ ಬಿಟ್ಟ. ತೆಂಗಿನಕಾಯಿಯ ರಾಶಿಯ ಮುಂದೆ ನಿಂತಿದ್ದ ತೋಟದ ಮಾಲೀಕ ಈರಣ್ಣನನ್ನು ತೋಟಕ್ಕೆ ಸ್ವಾಗತಿಸಿದ.

“ತೆಂಗಿನಕಾಯಿ ಹೇಗೆ ಕೊಡುತ್ತೀರಾ? ಎಂದ ಈರಣ್ಣ.
“ಎಂಟಾಣೆಗೊಂದು” ಎಂದ ತೋಟದ ಯಜಮಾನ.
“ತುಂಬಾ ಹೆಚ್ಚಾಯಿತು. ನಾಲ್ಕಾಣೆಗೊಂದು ಕೊಡಿ” ಎಂದ.
“ಮರದಿಂದ ಕಾಯಿ ಕೀಳುವ ಆಳಿಗೆ ನಾವು ಪ್ರತಿ ಕಾಯಿಗೆ ನಾಲ್ಕಾಣೆ ಕೊಡುತ್ತೇವೆ. ಬೇಕಾದರೆ ನೀವೇ ಮರ ಹತ್ತಿ ಕಾಯಿ ಕಿತ್ತುಕೊಳ್ಳಿ. ಆಗ ನಾಲ್ಕಾಣೆಯನ್ನೇ ಕೊಡಿ” ಎಂದ ಯಜಮಾನ.

ಮರ ಹತ್ತಿದರೆ ನಾಲ್ಕಾಣೆ ಉಳಿಯುತ್ತದೆಯೆಂದು ಯೋಚಿಸಿದ ಈರಣ್ಣ ಬಾವಿಯ ಕಡೆ ವಾಲಿ ನಿಂತಿದ್ದ ದೊಡ್ಡ ಮರವನ್ನು ಸರ ಸರ ಏರಿ ಒಂದು ಕಾಯಿ ಹರಿದು ಕೆಳಗೆ ಹಾಕಿದ. ಇನ್ನೇನು ಇಳಿಯಬೇಕೆನ್ನುವಷ್ಟರಲ್ಲಿ ಕಾಲು ಜಾರಿತು. ಆದರೆ ಕೈಯಿಂದ ತಿಂಗಿನ ಗರಿಯನ್ನು ಹಿಡಿದಿದ್ದರಿಂದ ಅದನ್ನು ಹಿಡಿದು ಜೋತುಬಿದ್ದ.

ಅಷ್ಟರಲ್ಲಿ ಇಬ್ಬರು ಒಂಟೆ ಸವಾರರು ನೀರಿಗಾಗಿ ತೋಟಕ್ಕೆ ಬಂದರು. ತನ್ನ ಪ್ರಾಣ ಉಳಿಸಬೇಕೆಂದು ಈರಣ್ಣ ಅವರಲ್ಲಿ ವಿನಂತಿಸಿಕೊಂಡ.
“ನನ್ನನ್ನು ಕೆಳಗೆ ಇಳಿಸಿದರೆ ನಿಮಗೆ ಎರಡು ರೂಪಾಯಿ ಕೊಡುತ್ತೇನೆ” ಎಂದು ಹೇಳಿದ.

ಅದನ್ನು ಕೇಳಿದ ಮೊದಲನೆಯ ಒಂಟೆ ಸವಾರ ತನ್ನ ಒಂಟೆಯನ್ನು ತಂದು ಕೆಳಗೆ ನಿಲ್ಲಿಸಿದ. ಅದರ ಮೇಲೆ ನಿಂತು ಈರಣ್ಣನ ಕಾಲು ಹಿಡಿದು ಇಳಿಸಿಕೊಳ್ಳಬೇಕೆನ್ನುವಷ್ಟರಲ್ಲಿ ಒಂಟೆ ಮುಂದೆ ಹೋಗಿ ಬಿಟ್ಟಿತು. ಆಗ ಒಂಟೆ ಸವಾರನು ಈರಣ್ಣನ ಕಾಲು ಹಿಡಿದು ಜೋತು ಬಿದ್ದು ಹೇಳಿದ.

ಮಹಾಶಯ ನೀನು ಕೈ ಬಿಟ್ಟರೆ ನಾವಿಬ್ಬರೂ ಸಾಯುತ್ತೇವೆ. ನಿನಗೆ ನಾಲ್ಕು ರೂಪಾಯಿ ಕೊಡುತ್ತೇನೆ. ಕೈಬಿಡಬೇಡ” ಎಂದು ಈರಣ್ಣನನ್ನು ವಿನಂತಿಸಿಕೊಂಡ.

ಎರಡನೆಯ ಒಂಟೆಯ ಮೇಲಿದ್ದವ ಅವರನ್ನು ಇಳಿಸಬೇಕೆಂದು ಒಂಟೆಯನ್ನು ತಂದು ನಿಲ್ಲಿಸಿ ಅದರ ಮೇಲೆ ನಿಂತು ತನ್ನ ಸಂಗಡಿಗನ ಕಾಲು ಹಿಡಿದು ಇಳಿಸಿಕೊಳ್ಳಬೇಕೆನ್ನುವಷ್ಟರಲ್ಲಿ ಒಂಟೆ ಮುಂದೆ ಹೋಗಿ, ಅವನು ಮೊದಲನೆಯವನಂತೆಯೇ ಜೋತು ಬಿದ್ದ. ಅವನು “ಗೆಳೆಯ ನೀನು ಕೈ ಬಿಟ್ಟರೆ ನಾವಿಬ್ಬರೂ ಸಾಯುತ್ತೇವೆ. ನಿನಗೆ ಎಂಟು ರೂಪಾಯಿ ಕೊಡುತ್ತೇನೆ. ಕೈ ಬಿಡಬೇಡ” ಎಂದು ತನ್ನ ಸಂಗಡಿಗನನ್ನು ವಿನಂತಿಸಿದ.

ಈ ಮಾತು ಕೇಳಿ ಈರಣ್ಣನಿಗೆ ಸಿಟ್ಟು ಬಂತು. ತನ್ನ ದುರಾಸೆಯ ಬುದ್ಧಿಯನ್ನು ಪ್ರದರ್ಶಿಸುತ್ತಾ ಹೀಗೆ ಹೇಳಿದ. “ಅವನಿಗೆ ಎಂಟು ರೂಪಾಯಿ ಏಕೆ ಕೊಡುತ್ತಿ? ನಿಮ್ಮಿಬ್ಬರ ಭಾರ ನನ್ನ ಕೈಯಲ್ಲಿದೆ. ನಾನು ಕೈಬಿಟ್ಟರೆ ನೀವಿಬ್ಬರೂ ಸಾಯುತ್ತೀರಿ” ಎಂದು ಜೋರು ಮಾಡಿದ.

ಅದಕ್ಕೆ ಮಧ್ಯದಲ್ಲಿ ಜೋತು ಬಿದ್ದಾವ “ಆಗಲಪ್ಪಾ, ನನ್ನ ನಾಲ್ಕು ರೂಪಾಯಿ ಮತ್ತು ಅವನ ಎಂಟು ರೂಪಾಯಿ ನಿನಗೆ ಕೊಡುತ್ತೇನೆ. ದಯಮಾಡಿ ನಮ್ಮ ಜೀವ ಉಳಿಸು” ಎಂದು ಅಂಗಲಾಚಿದ.

ನಾಲ್ಕಾಣೆ ಉಳಿಸಲಿಕ್ಕೆ ಮರವೇರಿದ ತನಗೆ ಹನ್ನೆರಡು ರೂಪಾಯಿ ಲಾಭವಾದದ್ದಕ್ಕೆ ಈರಣ್ಣ ಖುಷಿಯಿಂದ ಉಬ್ಬಿಹೋದ.

“ಹಾಗೆ ಬಾ ದಾರಿಗೆ” ಎಂದು ಖುಷಿಯಲ್ಲಿ ಎರಡೂ ಕೈಯಿಂದ ಚಪ್ಪಾಳೆ ತಟ್ಟಿದ. ಚಪ್ಪಾಳೆ ತಟ್ಟುತ್ತಿದ್ದಂತೆಯೇ ಮೂವರು ಹಾಳು ಬಾವಿಯಲ್ಲಿ ಬಿದ್ದರು.

ನೀತಿ :– ದುರಾಸೆಯೇ ಜೀವಕ್ಕೆ ಅಪಾಯ.

🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882

Related Articles

Leave a Reply

Your email address will not be published. Required fields are marked *

Back to top button