ಕೊನೆಯದಾಗಿ ಮಗನಿಗೆ ತಂದೆ ಹೇಳಿದ ಮಾತೇನು.?

ಕೊನೆಯ ಮಾತು
ರಂಗಯ್ಯ ಅಪಾರ ದೈವಭಕ್ತ. ತುಂಬಿದ ಸಂಸಾರದಲ್ಲಿ ಸಂತೃಪ್ತ ಬಾಳ್ವೆ ನಡೆಸಿದವ. ಎಂಟು ಹೆಣ್ಣು ಮಕ್ಕಳು ವಿವಾಹವಾಗಿ ಗಂಡನ ಮನೆಗಳಲ್ಲಿದ್ದಾರೆ. ಇರುವ ಒಬ್ಬನೇ ಮಗನನ್ನು ಹತ್ತಿರ ಕರೆದು “ಮಗೂ , ನನ್ನ ಜೀವನದ ಕೊನೆಯ ಕ್ಷಣ ಬಂದಿದೆ. ನಿನಗೊಂದು ವಿಚಾರ ತಿಳಿಸುವೆ.
ದೇವರ ಕೋಣೆಯಲ್ಲಿನ ಧೂಪದ ಪಾತ್ರೆ ತಾ. ಅದರೊಳಗಿಂದ ತುಸು ಶ್ರೀಗಂಧದ ಪುಡಿಯನ್ನು ಬಲ ಅಂಗೈಯೊಳಗಿಟ್ಟುಕೋ. ಅಲ್ಲೇ ಇರುವ ಅಗ್ಗಿಷ್ಟಿಕೆಯಿಂದಲೂ ಒಂದು ಚೂರು ಇದ್ದಿಲನ್ನು ಎಡ ಅಂಗೈಯೊಳಗಿಟ್ಟುಕೋ”. ಆಮೇಲೆ ಪದೇ ಪದೇ ಹೀಗೆ ತೆಗೆದುಕೊಂಡು ಪುನಃ ಅಲ್ಲೇ ಹಾಕಿ, ಹೀಗೆ ಐದಾರು ಬಾರಿ ಮಾಡಲು ಹೇಳಿದ.
ಆನಂತರ ಆ ಕೈಗಳನ್ನು ಮೂಸಲು ಹೇಳಿದ. ಶ್ರೀಗಂಧದ ಪುಡಿ ಹಿಡಿದ ಬಲ ಅಂಗೈ ಘಮಘಮ ಪರಿಮಳ ಬೀರಿದರೆ ಇದ್ದಲು ಮಸಿಯುಳ್ಳ ಎಡಗೈ ದುರ್ವಾಸನೆ ಬೀರುತ್ತಿತ್ತು. ಆಗಲೇ ರಂಗಯ್ಯನೂ ಹಿತವಚನ ಹೇಳಿದ.
ಮಗೂ , ಸಜ್ಜನರ ಸಹವಾಸ ಎಂದರೆ ಶ್ರೀ ಗಂಧದಂತೆ ಸದಾ ಮಧುರವಾಗಿಯೇ ಬಾಳಿಗೆ ಬೆಳಕನ್ನು ತುಂಬುತ್ತದೆ. ಆ ಸಹವಾಸ ಸುಖ ದೂರ ಹೋದರೂ ಆನಂದದಾಯಕವೇ ಆಗಿರುತ್ತದೆ.
ದುರ್ಜನರ ಸಹವಾಸದಿಂದ ಖಂಡಿತವಾಗಿಯೂ ನೆಮ್ಮದಿಗೆ ಭಂಗ ಬರುತ್ತದೆ. ಹಾಗಾಗಿ ಸದಾ ಸಜ್ಜನರ ಸಹವಾಸ ಮಾಡುತ್ತಿರು. ದುಷ್ಟರಿಂದ ದೂರವೇ ಇರು. ತನ್ನ ಬಾಳಿನುದ್ದಕ್ಕೂ ತಂದೆಯ ಮಾತಿನಂತೆಯೇ ಮಗನಾದ ವರ್ತಿಸಿ ಯಶಸ್ವಿಯಾದ.
ನೀತಿ :– ಸತ್ಸಂಗದ ಲಾಭ ಏನು? ಅದರಿಂದ ಮನೋಚಾಂಚಲ್ಯ ನಿವಾರಣೆ ಹಾಗೂ ಬದುಕಿನಲ್ಲಿ ಭರವಸೆ ಮೂಡುವುದು.
ಸಂಗ್ರಹ
ಡಾ.ಈಶ್ವರಾನಂದ ಸ್ವಾಮೀಜಿ.
– 9341137882.