ಕಥೆ

ಮೆಟ್ರಿಕ್ಯುಲೇಷನ್ ಪರೀಕ್ಷೆ ಫೀಸ್ ಕಟ್ಟಲು ಪರಿದಾಡಿದ್ದ ಬಾಲಕ.! ಮುಂದೆ ದೊಡ್ಡ ಜ್ಞಾನಿಯಾಗಿ ಖ್ಯಾತಿ

ದಿನಕ್ಕೊಂದು ಕಥೆ

ಒಂದು ಕತ್ತಲೆಯ ರಾತ್ರಿ,ಸಾಮನ್ಯ ಅಂಗಿ, ಪಂಚೆ ತೊಟ್ಟು, ಕಾಲಿಗೆ ಚಪ್ಪಲಿಯೂ ಇಲ್ಲದೆ ೧೫ ವರ್ಷದ ಹುಡುಗನೊಬ್ಬನು ನಿರ್ಬೀತಿಯಿಂದ ಬೆಂಗಳೂರು ಚಿಕ್ಕಬಳ್ಳಾಪುರ ಮಾರ್ಗದಲ್ಲಿ ನಡೆದು ಬರುತ್ತಿರುತ್ತಾನೆ.

ಮದ್ಯರಾತ್ರಿಯ ಸಮಯಕ್ಕೆ ಸರಿಯಾಗಿ ತನ್ನ ಚಿಕ್ಕದಾದ ಮುರುಕಲು ಮನೆಯ ಮುಂದೆ ನಿಂತು ಮನೆಯ ಬಾಗಿಲು ತಟ್ಟಿದ. ಮಗನ ಧ್ವನಿಯನ್ನು ಕೇಳಿದ ತಾಯಿ ಬಂದು ಬಾಗಿಲು ತೆರೆದಳು.

ತನ್ನ ಮಗನ ಹತ್ತಿರ ವಾಹನದಲ್ಲಿ ಬರಲು ಹಣವಿಲ್ಲದೆ, ಇತರರರನ್ನು ಕೇಳಲು ನಾಚಿ, ಸ್ವಾಭಿಮಾನದಿಂದ ಬೆಂಗಳೂರಿನಿಂದ ತನ್ನ ಹಳ್ಳಿಯ ಮನೆಯ ತನಕ ಸುಮಾರು ೪೫ ಮೈಲಿ ಕಾಲು ನಡಿಗೆಯಿಂದಲೇ ನಡೆದು ಬಂದ ವಿಚಾರ ತಿಳಿದು, ಆ ತಾಯಿ ತನ್ನ ಅಸಹಾಯಕತೆಗೆ ಮುಮ್ಮಲ ಮರುಗಿ ತನ್ನ ಮಗನ ಸ್ಥಿತಿಯನ್ನು ಕಂಡು ಬಿಕ್ಕಿ ಬಿಕ್ಕಿ ಅಳುತ್ತಾ, ಅತ್ತೂ ಅತ್ತೂ ಮನಸ್ಸು ಸ್ವಲ್ಪ ಹಗುರವಾದಾಗ ಮಗನನ್ನು ಕೇಳುತ್ತಾಳೆ, ಇಂತಹ ಕಡುರಾತ್ರಿಯಲ್ಲಿ ಒಬ್ಬಂಟಿಯಾಗಿ ಏಕೆ ಬಂದೆ ಎಂದು, ಅದಕ್ಕೆ ಆ ಹುಡುಗ ಹೇಳುತ್ತಾನೆ, ಅಮ್ಮ ನಾಳೆ ೧೧ ಗಂಟೆಯೊಳಗೆ ಮೆಟ್ರಿಕ್ಯುಲೇಷನ್ ಪರೀಕ್ಷೆಗೆ ೧೨ ರುಪಾಯಿ ಕಟ್ಟಬೇಕು, ಇಲ್ಲದಿದ್ದರೆ ಒಂದು ವರ್ಷದ ಓದು ವ್ಯರ್ಥವಾಗುತ್ತದೆ ಎಂದ, ಆ ವೇಳೆಗಾಗಲೇ ಆತನ ತಂದೆ ಕೂಡ ನಿಧನರಾಗಿರುತ್ತಾರೆ.

ಕೈಯಲ್ಲಿ ಬಿಡಿಗಾಸು ಇಲ್ಲದ ತಾಯಿ ಹತಾಶಳಾಗಿ ಕುಳಿತಳು. ಆಗ ಮಗನು ಅಮ್ಮಾ ಪಕ್ಕದ ಮನೆಯ ಶೆಟ್ಟರು ತುಂಬಾ ಒಳ್ಳೆಯವರು, ಕೇಳಿ ನೋಡಮ್ಮಾ ಎಂದು ಸಲಹೆ ಕೊಟ್ಚ. ಅದರಂತೆ ತಾಯಿ ಮಗ ಇಬ್ಬರೂ ಮದ್ಯರಾತ್ರಿಯಲ್ಲಿಯೇ ಶೆಟ್ಟಿರ ಮನೆಯನ್ನು ಬಾಗಿಲು ತಟ್ಟಿದರು.

ಶೆಟ್ಟರು ಸದ್ಗುಣಿಗಳು ಮಾತ್ರವಲ್ಲದೆ ಉದಾರಿಗಳು ಆಗಿದ್ದರು. ವಿಚಾರವನ್ನು ತಿಳಿದು ೧೫ ರೂ. ಹಣವನ್ನು ತಾಯಿಯ ಕೈಗಿತ್ತರು. ಮಗ ತಾಯಿಯ ಸಲಹೆಯಂತೆ ಒಂದೆರಡು ಗಂಟೆ ವಿಶ್ರಾಂತಿ ಪಡೆದು, ಸ್ನಾನ ಮುಗಿಸಿ, ತಾಯಿ ಕೊಟ್ಟ ಉಪಹಾರ ಸೇವಿಸಿ ಹಣದೊಂದಿಗೆ ಬೆಂಗಳೂರಿಗೆ ಹೊರಟ.

ಆದರೆ ಆ ಹುಡುಗನ ಸಾಹಸ ವ್ಯರ್ಥವಾಗಿತ್ತು, ಕಾರಣ ೧೧ ಗಂಟೆಯೊಳಗೆ ಪರೀಕ್ಷೆಯ ಅರ್ಜಿ ಮತ್ತು ಹಣ ಕೊಡಲು ಸಮಯ ಮೀರಿಹೋಗಿತ್ತು, ಹುಡುಗ ತನ್ನ ಕಷ್ಟವನ್ನು ಹೇಳಿಕೊಂಡು ಅಳುತ್ತಾ ಕುಳಿತಿದ್ದ.

ಅದೇ ಸಮಯಕ್ಕೆ ಅಲ್ಲಿಗೆ ಬಂದ ಮೇಲ್ವಿಚಾರಕರು ಹುಡುಗನ ಪರೀಕ್ಷೆಯ ಅರ್ಜಿ ಹಾಗೂ ಹಣವನ್ನು ತೆಗೆದುಕೊಳ್ಳುವಂತೆ ಆಜ್ಞೆ ಮಾಡಿದರು, ಹುಡುಗನಿಗೆ ಆದ ಸಂತೋಷ ಹೇಳತೀರದು.

ಪರೀಕ್ಷೆ ಮುಗಿದು ಫಲಿತಾಂಶ ಪ್ರಕಟವಾಯಿತು, ಆ ಹುಡುಗ ಮೈಸೂರು ಸಂಸ್ಥಾನಕ್ಕೆ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದ..ಅದೇ ಹುಡುಗ ಮುಂದೆ ಜಗದ್ವಿಖ್ಯಾತ ಇಂಜಿನಿಯರ್ ಆದ, ಆ ಮಹಾಪುರುಷರೇ. ಡಾ.ಸರ್ ಎಂ. ವಿಶ್ವೇಶ್ವರಯ್ಯನವರು…

🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882

Related Articles

Leave a Reply

Your email address will not be published. Required fields are marked *

Back to top button