ರಾಜಾಜ್ಞೆಯಿಂದ ಪರಿತಪಿಸಿದ ಜನ, ಮಕ್ಕಳು ಅರಿವು ಮೂಡಿಸಿದ ಮುದುಕಿ

ಹಾಲು ತುಂಬಿದ ಕೊಳ
ಒಮ್ಮೆ ಪರಶಿವನ ಪರಮಭಕ್ತನಾದ ಅರಸನೊಬ್ಬ ಭವ್ಯವಾದ ಶಿವದೇಗುಲವನ್ನು ನಿರ್ಮಿಸಿ ಅದರ ಆವರಣದಲ್ಲಿ ಚೆಂದದ ಕೊಳವನ್ನು ಕಟ್ಟಿದ.
ದೇವಾಲಯ ಉದ್ಘಾಟನೆಯ ದಿನ ಆ ಕೊಳದಲ್ಲಿ ಶುದ್ಧ ನೀರನ್ನು ತುಂಬುವ ಬದಲಿಗೆ ಈ ಅರಸನು ತುಂಬ ಹಾಲನ್ನೇ ತುಂಬಿಸಬೇಕೆಂದು ಆಜ್ಞೆ ಮಾಡಿದ. ಆ ದಿನ ಎಲ್ಲ ಹಾಲು ಉತ್ಪಾದಕರೂ ಒಂದಿನಿತೂ ಮಾರಟಮಾಡದೆ ಈ ಕೊಳಕ್ಕೇನೇ ಎಲ್ಲ ಹಾಲನ್ನೂ ತಂದು ಸುರಿಯಲೇಬೇಕೆಂದು ಡಂಗುರ ಹೊಡೆಯಿಸಿ ಆದೇಶ ಜಾರಿ ಮಾಡಿದ.
ಆ ಸುದಿನ ಬಂದಿತು. ಎಲ್ಲರೂ ತಂದು ಹಾಲನ್ನು ಸುರಿದರು. ಆದರೆ ಕೊಳ ಅರ್ಧದಷ್ಟೂ ತುಂಬಲಿಲ್ಲ. ಅರಮನೆಯ ಸನಿಹವೇ ಒಬ್ಬ ಹಣ್ಣು ಮುದುಕಿ ಇದ್ದಳು. ಅವಳೂ ಒಂದು ಹಸು ಸಾಕಿದ್ದಳು. ಪ್ರತಿದಿನದಂತೆ ಹಾಲನ್ನು ಕರೆದು ‘ಅಂಬಾ’ ಎಂದು ಕೂಗುವ ಕರುವಿಗೂ ಕುಡಿಸಿ ಉಳಿದ ಹಾಲನ್ನು ಪಾತ್ರೆಯಲ್ಲಿ ತುಂಬಿಸಿಕೊಂಡು ಶಿವಾಲಯ ಕಡೆಗೆ ಹೊರಟಳು.
ದಾರಿಯಲ್ಲಿ ಪುಟ್ಟ ಮಗುವೊಂದು ಹಾಲಿಗಾಗಿ ಅಳುತ್ತಿತ್ತು. ಅದರ ರಕ್ಷಕರು ಹಾಲನ್ನೆಲ್ಲ ಅದಾಗಲೇ ದೇಗುಲಕ್ಕೆ ಕೊಟ್ಟಾಗಿತ್ತೆಂದೂ ತಿಳಿದಳು. ರಾಜನ ಮಾತನ್ನು ಮೀರಲು ಹೆದರದೆ ಆ ಮಗುವಿಗೂ ಅದೇ ಪಾತ್ರೆಯಿಂದಲೇ ಹಾಲನ್ನು ಕೊಟ್ಟಳು.
ಇದೇ ರೀತಿ ದಾರಿಯಲ್ಲಿ ಎದುರಾದ ರೋಗಿಗಳಿಗೂ, ಭಿಕ್ಷುಕರಿಗೂ ತನ್ನ ಪಾತ್ರೆಯಿಂದಲೇ ಈ ಮುದುಕಿ ಹಾಲು ಕೊಡುತ್ತಲೇ ಬಂದಳು. ಮಧ್ಯಾಹ್ನದ ವೇಳೆಗೆ ದೇಗುಲ ತಲಪಿದಳು. ಶಿವನ ಕೊಳವಂತೂ ಆಗ ಅರ್ಧದಷ್ಟೇ ತುಂಬಿದ್ದರಿಂದ ಅಧಿಕಾರಿಗಳೆಲ್ಲ ಬಹಳಷ್ಟು ಚಡಪಡಿಸುತ್ತಿದ್ದರು. ರಾಜನೇ ಎದುರಿಗಿದ್ದು ಎಲ್ಲರಿಗೂ ಬೈಗುಳದ ಸುರಿಮಳೆ ಮಾಡುತ್ತಲಿದ್ದ.
ಈ ಮುದುಕಿಯೂ ಎಲ್ಲರನ್ನೂ ತಳ್ಳಿಕೊಂಡು ಸನಿಹ ಬಂದಳು. ಹೇ ದೇವಾ, ಕೊಡಬೇಕಾದವರಿಗೆಲ್ಲ ಪ್ರೀತಿಯಿಂದಲೇ ಕೊಟ್ಟು ಉಳಿದ ಈ ಹಾಲನ್ನು ನಿನಗೆಂದೇ ತಂದಿರುವೆ ಪ್ರಭೂ’ ಎಂದು ಕಣ್ಣುಂಬಿ ಬೇಡಿ ಇದ್ದ ಹಾಲನ್ನು ಆ ಕೊಳಕ್ಕೆ ಸುರಿದೇ ಬಿಟ್ಟಳು.
ಏನಾಶ್ಚರ್ಯ! ರಾಜನಿಗೆ ತನ್ನ ಕಣ್ಣುಗಳನ್ನೇ ನಂಬಲಿಕ್ಕಾಗದಂಥ ಸನ್ನಿವೇಶ! ಒಳಗಿನಿಂದಲೇ ಹಾಲಿನ ಒರತೆ ಉಕ್ಕಿ ಕೊಳವಂತೂ ಉಕ್ಕಿ ಹರಿದೇ ಬಿಟ್ಟಿತು.
ರಾಜನು ಆ ಮುದುಕಿಯನ್ನು ಕೇಳಿದ – ‘ಏನಜ್ಜಿ, ಎಂಥ ಪವಾಡ ಮಾಡಿದೆ ನೀನು!’ ಆಕೆ ಎಂದಳು ‘ಮಹಾಸ್ವಾಮಿ, ನಾನೊಬ್ಬಳು ಮುದಿ ಮಹಿಳೆ, ನೀವು ಹೊರಡಿಸಿದ್ದ ಆಜ್ಞೆ ಕ್ರೌರ್ಯದಿಂದ ಕೂಡಿತ್ತು. ನಿಮ್ಮಿಂದಾಗಿ ನೂರಾರು ಮಕ್ಕಳು ಹಸಿವೆಯಿಂದ ಅಳುತ್ತಿದ್ದಾರೆ.
ಸಾವಿರಾರು ಕರುಗಳು ಕಂಗಾಲಾಗಿ ತಾಯಂದಿರನ್ನು ಪೀಡಿಸುತ್ತಿವೆ. ಹಾಲನ್ನೇ ಕುಡಿದು ಬದುಕುವ ರೋಗಿಗಳು, ಮುದುಕರು, ಶಪಿಸುತ್ತಿದ್ದಾರೆ… ಯಾವ ಶಿವನು ಮೆಚ್ಚಿಯಾನು?’
ಮುದುಕಿಯ ಮನದಾಳದ ದಿವ್ಯಮಾತುಗಳಿಂದಾಗಿ ಅರಸನಿಗೆ ಜ್ಞಾನೋದಯವಾಯಿತು. ಮುದುಕಿ ಹೇಳುತ್ತಿದ್ದಳು. ‘ಮಹಾಸ್ವಾಮಿ, ನಾನು ನಿಮ್ಮ ಆಜ್ಞೆಯನ್ನು ಪಾಲಿಸಲಿಲ್ಲ. ನನ್ನ ಕರುವಿಗೆ ಹಾಲುಣಿಸಿದೆ. ಮಕ್ಕಳಿಗೆ, ವೃದ್ಧರಿಗೆ, ರೋಗಿಗಳಿಗೆ ಹಾಲನ್ನು ಕೊಟ್ಟೆ. ಹೀಗೆ ಕೊಡುವಾಗಲೆಲ್ಲ ‘ಶಿವಾರ್ಪಣ ಮಸ್ತು’ ಎನ್ನುತ್ತಿದ್ದೆ. ಅಳಿದುಳಿದದ್ದನ್ನೀಗ ಕೆಳಕ್ಕೆ ಹಾಕಿದೆ. ಅದೂ ತುಂಬಿತು ಎಂದರೆ ಶಿವನಿಗೆ ಸಂತೃಪ್ತಿಯಾಗಿದೆ ಎಂದು ಗೊತ್ತಾಗಿದೆ…’
ಮಹಾರಾಜನೇ ಮುದುಕಿಗೆ ನಮಿಸಿದ. ‘ದಯವಿಟ್ಟು ನೀವೆಲ್ಲರೂ ಕೊಳದಿಂದಲೇ ಬೇಕಾದಷ್ಟು ಹಾಲನ್ನು ಕೊಂಡೊಯಿರಿ, ಜನಸೇವೆಯೇ ಜನಾರ್ದನ ಸೇವೆ ಎಂಬ ಸತ್ಯದ ಅರಿವು ನನಗೆ ಮನದಟ್ಟಾಗಿದೆ’ ಎಂದು ಬಿತ್ತರಿಸಿದ.
ಸಂಗ್ರಹ
ಡಾ.ಈಶ್ವರಾನಂದ ಸ್ವಾಮೀಜಿ.
– 9341137882.