ಅಜ್ಞಾನ ಯಾವುದು.? ಜ್ಞಾನ ಯಾವುದು.? ಯಾವುದರ ಬಗ್ಗೆ ತಲೆ ಕೆಡಿಸಿಕೊಳ್ಳೋದು..?
ಜ್ಞಾನೋದಯ
ಪರುಶುರಾಮ ಎಂಬ ಗುರುವಿನ ಬಳಿ ಶಿವಮೂರ್ತಿ ಎಂಬ ಶಿಷ್ಯನಿದ್ದನು. ಅವನು ಒಂದು ದಿನ ಅಳುತ್ತಾ ನಿಂತಿದ್ದನು. ಅಲ್ಲಿಗೆ ಬಂದ ಗುರುಗಳು ಶಿಷ್ಯ ಏಕೆ ಅಳತ್ತಿರುವೆ ಎಂದು ಕೇಳಿದರು.
ಆಗ ಶಿಷ್ಯನು ಗುರುಗಳೆ, ಸಾಮಾನ್ಯವಾಗಿ ಮನುಷ್ಯನಿಗೆ ನೂರು ವರ್ಷ ಆಯಷ್ಯವಿರುತ್ತದೆ. ಇದರಲ್ಲಿ ಅರ್ಧ ನಿದ್ರೆಯಲ್ಲಿ ಕಳೆದು ಹೋಗುತ್ತೆ, ಹತ್ತು ವರ್ಷ ಕಾಲ ಬಾಲ್ಯದಲ್ಲಿ ಏನೂ ತಿಳಿಯದೇ ಹೋಗುತ್ತೆ, ಇನ್ನು ಯೌವನ, ವೃದ್ಧಾಪ್ಯ ಅಂತ ತೊಂದರೆಗಳು ಬೇರೆ, ಹೀಗಿರುವಾಗ ಮನುಷ್ಯ ಹೇಗೆ ಬದುಕಿರಲು ಸಾಧ್ಯ? ಹೇಗೆ ಜ್ಞಾನ ಪಡೆಯಲು ಸಾಧ್ಯ? ನಾನು ಹೇಗೆ ಜೀವಿಸಿದ್ದೇನೆ?
ಇದನ್ನು ಕೇಳಿದ ಗುರುಗಳು ಗೊಳೋ ಎಂದು ಅಳಲು ಪ್ರಾರಂಭಿಸಿದರು. ಆಗ ಶಿಷ್ಯನು ಅತ್ಯಾಶ್ಚರ್ಯದಿಂದ ಗುರುಗಳೇ ತಾವೇಕೆ ಅಳುತ್ತಿರುವಿರಿ ಎಂದು ಕೇಳಿದ.
ಅಯ್ಯಾ ಶಿಷ್ಯ ಏನು ಹೇಳಲಿ ನಿನಗೆ ತೋರಿ ಬಂದ ಬಾಧೆಯಂತೆ ನನಗೂ ಒಂದು ಬಾಧೆ ಹುಟ್ಟಿದೆ. ಈ ಪ್ರಪಂಚದಲ್ಲಿ ಮುಕ್ಕಾಲು ಪಾಲು ನೀರು, ಉಳಿದ ಕಾಲು ಪಾಲು ಮಾತ್ರ ಭೂಮಿ, ಇದರಲ್ಲಿಯೂ ಎಷ್ಟೋ ಪಾಲು ಬೆಟ್ಟ, ಗುಡ್ಡಗಳು, ಕಾಡು ಮತ್ತು ಮರಳಾಡುಗಳು, ಇನ್ನುಳಿದ್ದರಲ್ಲಿ ಜನರೆಲ್ಲಾ ಎಲ್ಲಿ ವಾಸಿಸಲಿ ಎಂದು ಕೇಳುತ್ತಾರೆ. ನನಗೇ ನಿಲ್ಲಲು ಜಾಗವಿಲ್ಲದಿರುವಾಗ ಅವರಿಗೆ ವಾಸಿಸಲು ಯಾವ ಜಾಗ ತೋರಿಸಲಿ? ಎಂದು ಗುರು ಮತ್ತೆ ಅಳುತ್ತಾನೆ.
ಆಗ ಶಿಷ್ಯನು ಗುರುಗಳೆ, ನೀವು ಎಷ್ಟು ಅಮಾಯಕರು. ಏನಾದರು ತೊಂದರೆ ಕಟ್ಟಿಕೊಂಡು ದುಃಖಿಸುವಿರಿ ಎಂದನು. ಅಯ್ಯಾ ನೀನು ಆಯುಷ್ಯದ ಚಿಂತೆ ಹಚ್ಚಿಕೊಂಡೆ, ನಾನು ಜಾಗದ ಚಿಂತೆ ಹಚ್ಚಿಕೊಂಡೆ ಎಂದ ಗುರು. ಆಗ ಶಿಷ್ಯನು ಗುರುಗಳೆ ನನಗೆ ಜ್ಞಾನೋದಯವಾಯಿತು. ಇನ್ನು ನಾನು ದುಃಖಿಸುವುದಿಲ್ಲ ಎಂದು ಹೇಳಿ ಸುಮ್ಮನಾದನು.
ನೀತಿ :– ಪ್ರಪಂಚದ ಬಗ್ಗೆ ತಲೆ ಕೆಡೆಸಿಕೊಂಡರೆ ಅಜ್ಞಾನ, ಪರಮಾತ್ಮನ ಬಗ್ಗೆ ತಲೆ ಕೆಡಿಸಿಕೊಂಡರೆ ಜ್ಞಾನ.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.