ಕಲಬುರಗಿ: ಸಿಡಿಲು ಬಡಿದು ಇಬ್ಬರು ಮಹಿಳೆಯರು ಸಾವು!
ಸಕಾಲಕ್ಕೆ ಮಳೆ ಬರಲಿ, ರೈತರಿಗೆ ನೆರವಾಗಲಿ, ನೀರಿಗೆ ಬರ ಬಾರದಿರಲಿ, ಸಾವಿನ ಮಳೆ ಸುರಿಯದಿರಲಿ…
ಕಲಬುರಗಿ: ನಿನ್ನೆಯಷ್ಟೇ ಪಕ್ಕದ ಯಾದಗಿರಿ ಜಿಲ್ಲೆಯಲ್ಲಿ ಓರ್ವ ವ್ಯಕ್ತಿ ಹಾಗೂ ಮೂವರು ಮಕ್ಕಳು ಸೇರಿ ಒಟ್ಟು ನಾಲ್ವರು ಸಿಡಿಲು ಬಡಿದು ಸಾವಿಗೀಡಾಗಿದ್ದರು. ಅಲ್ಲದೆ ಇನ್ನುಳಿದ ಮೂವರು ಈವರೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪರಿಣಾಮ ನಾಲ್ವರು ಸಿಡಿಲಿಗೆ ಬಲಿಯಾದ ಕಹಿ ಘಟನೆ ಇನ್ನೂ ಹಸಿಯಾಗಿರುವಾಗಲೇ ಮತ್ತೆ ಕಲಬುರಗಿಯಲ್ಲಿ ಸಿಡಿಲು ಬಡಿದು ಇಬ್ಬರು ಮಹಿಳೆಯರು ಸಾವಿಗೀಡಾದ ಘಟನೆ ನಡೆದಿದೆ.
ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ತೊನಸನಹಳ್ಳಿ(ಟಿ)ಯಲ್ಲಿಂದು ಜಮೀನಿನಲ್ಲಿ ಕೆಲಸ ಮಾಡುವಾಗ ಸಿಡಿಲು ಬಡಿದು ಇಬ್ಬರು ರೈತ ಮಹಿಳೆಯರು ಸಾವಿಗೀಡಾದ ಘಟನೆ ನಡೆದಿದೆ. ಬಸ್ಸಮ್ಮ ಸಂಗಾವಿ (45) ಮತ್ತು ಅಂಬಿಕಾ ಸಡರಗಿ(45) ಮೃತ ದುರ್ದೈವಿಗಳೆಂದು ಗುರುತಿಸಲಾಗಿದೆ. ಮಾಡಬೋಳ ಠಾಣಾ ವ್ಯಾಪ್ತಿಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. ಇಂದು ಮದ್ಯಾನ ಬಹುತೇಕ ಕಲಬುರಗಿ ಜಿಲ್ಲೆಯಾದ್ಯಂತ ಎಡೆಬಿಡದೆ ಗುಡುಗು, ಮಿಂಚು ಸಹಿತ ಭಾರೀ ಮಳೆ ಸುರಿದಿದೆ. ಇದೇ ವೇಳೆ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಈ ಇಬ್ಬರು ರೈತ ಮಹಿಳೆಯರು ಸಿಡಿಲಿಗೆ ಬಲಿಯಾಗಿದ್ದಾರೆ.
ಈವರೆಗೆ ಮಳೆ ಮಳೆಯೆಂದು ಕನವರಿಸುತ್ತಿದ್ದ ಬಿಸಿಲನಾಡಿನ ಜನ ಈಗ ಸಿಡಿಲಿನಿಂದ ಸಂಭವಿಸುತ್ತಿರುವ ಸರಣಿ ಸಾವಿನಿಂದಾಗಿ ಮಳೆರಾಯನಿಗೆ ನಮ್ಮ ಮೇಲಿಷ್ಟೇಕೆ ಕೋಪ. ಇಷ್ಟು ದಿನ ಮಳೆ ಬಾರದೆ ಸಾಯುವ ಸ್ಥಿತಿ ಇತ್ತು. ಈಗ ಮಳೆಯಿಂದಾಗಿ ಸಿಡಿಲಿಗೆ ಬಲಿಯಾಗುವ ದುಸ್ಥಿತಿ ಎದುರಾಗಿದೆಯಲ್ಲ ಎಂದು ಚಿಂತಿಸುವಂತಾಗಿದೆ. ಮತ್ತೊಂದು ಕಡೆ ಭಾರೀ ಮಳೆಯಿಂದಾಗಿ ಜಮೀನಿನಲ್ಲಿರುವ ಅಲ್ಪಸ್ವಲ್ಪ ಬೆಳೆಯೂ ನೀರಿನಲ್ಲಿ ಕೊಚ್ಚಿ ಹೋಗುವಂತಾಗಿದೆ ಎಂದು ರೈತರು ಪರಿತಪಿಸುವಂತಾಗಿದೆ. ಮಳೆ ಸಕಾಲಿಕವಾಗಿದ್ದು ಭೂಮಿಗೆ ತಂಪೆರೆಯಲಿ, ರೈತರ ಕೃಷಿ ಕಾಯಕಕ್ಕೆ ನೆರವಾಗಲಿ, ನೀರಿಗೆ ಬರ ಬಾರದಿರಲಿ. ಸಾವಿನ ಮಳೆ ಎಂದೆಂದೂ ಸುರಿಯದಿರಲಿ ಎಂಬುದು ರೈತಾಪಿ ವರ್ಗದ ಆಶಯವಾಗಿದೆ.
ವಿನಯವಾಣಿ ಆನ್ ಲೈನ್ ಪತ್ರಿಕೆಗೆ ಹಾರ್ದಿಕ ಶುಭಾಶಯಗಳು…
ಓದುಗರಿಗೆ ವಿನಯವಾಣಿ ಪತ್ರಿಕೆ ವಿನೂತನ ಸುದ್ದಿಗಳನ್ನು ನೀಡಲಿ ಎಂಬುದ ನನ್ನ ಆಶಯ…