ದಿನಕ್ಕೊಂದು ಕಥೆ
ಮಹಿಳೆ ಮತ್ತು ರೊಟ್ಟಿ
ಆಕೆ ವಿಧವೆ. ಇದ್ದೊಬ್ಬ ಮಗ ದೇಶಾಂತರ ಹೋಗಿದ್ದ. ಇದ್ದುದರಲ್ಲೇ ಹಂಚಿ ತಿನ್ನುವ ಸ್ವಭಾವದವಳು. ಆಕೆ ನಿತ್ಯ ಮೂರು ರೊಟ್ಟಿ ಮಾಡುತ್ತಿದ್ದಳು. ಅದರಲ್ಲಿ ಒಂದು ರೊಟ್ಟಿ ಮತ್ತು ನೀರನ್ನು ಯಾರಾದರೂ ತಿನ್ನಲಿ ಎಂದು ಕಿಟಕಿಯಲ್ಲಿಡುತ್ತಿದ್ದಳು.
ಉಳಿದೆರಡು ರೊಟ್ಟಿಗಳನ್ನು ತಾನು ತಿನ್ನುತ್ತಿದ್ದಳು. ಆ ರೊಟ್ಟಿಯನ್ನು ಪ್ರತೀದಿನ ಓರ್ವ ಗಡ್ಡಧಾರಿ ಸಂನ್ಯಾಸಿ ತೆಗೆದುಕೊಂಡು ನಾವು ಮಾಡಿದ ಒಳ್ಳೆಯದು ನಮಗೇ ಕೆಟ್ಟದ್ದು ನಮಗೇ.. ಎಂದು ಹೇಳಿ ಹೋಗುತ್ತಿದ್ದ.
ಕಷ್ಟಪಟ್ಟು ಮಾಡಿದ ರೊಟ್ಟಿಯನ್ನು ತಿನ್ನುವ ಸಂನ್ಯಾಸಿ ಒಮ್ಮೆಯೂ ಕೃತಜ್ಞತೆ ಅರ್ಪಿಸುವುದಿಲ್ಲವಲ್ಲ ಎಂಬ ಕೋಪದಲ್ಲಿ ಒಮ್ಮೆ ಸನ್ಯಾಸಿಯ ಮಾತು ಪರೀಕ್ಷಿಸಲೆಂದು ಆತನಿಗಿಡುವ ರೊಟ್ಟಿಯಲ್ಲಿ ವಿಷ ಬೆರೆಸಿ ರೊಟ್ಟಿ ತಯಾರಿಸಿಟ್ಟಳು. ನಂತರ ಭಯವಾದಂತಾಗಿ ಆ ರೊಟ್ಟಿ ತೆಗೆದು ಬೇರೆ ರೊಟ್ಟಿ ತಯಾರಿಸಿಟ್ಟಳು.
ಎಂದಿನಂತೆ ಸನ್ಯಾಸಿ ರೊಟ್ಟಿ ತೆಗೆದುಕೊಂಡು ಅದೇ ವಾಕ್ಯ ಹೇಳಿ ಹೋದ. ಸಂಜೆ ದೀಪ ಹಚ್ಚುವ ಹೊತ್ತಿನಲ್ಲಿ ಯಾರೋ ಬಾಗಿಲು ಬಡಿದಂತಾಯಿತು.
ಬಾಗಿಲಾಚೆ ಓರ್ವ ಕೃಶಕಾಯ ಯುವಕ ನಿಂತಿದ್ದ. ಆತ ದೇಶಾಂತರ ಹೋಗಿದ್ದ ಮಹಿಳೆಯ ಮಗನೇ ಆಗಿದ್ದ. ಕೂಡಲೇ ಆತನನ್ನು ಮನೆಯೊಳಗೆ ಕರೆತಂದು ಉಪಚರಿಸಿದಳು. ಆಗಾತ ಹೇಳಿದ ಅಮ್ಮ, ಮನೆಗೆ ಹಿಂತಿರುಗಬೇಕೆಂದು ನಾನು ಎಷ್ಟೋ ದೂರದಿಂದ ನಡೆದುಕೊಂಡು ಬರುತ್ತಿದ್ದೆ.
ಆದರೆ ಕಾಡಿನ ಮಧ್ಯೆ ಆಯಾಸ, ದಣಿವಿನಿಂದ ನಡೆಯಲಾಗದೇ ತಲೆತಿರುಗಿ ಬಿದ್ದು ಹೋದೆ. ಇನ್ನೇನು ಸತ್ತು ಹೋಗುತ್ತೇನೆ ಎಂದುಕೊಂಡಿದ್ದೆ. ಇಲ್ಲವಾದಲ್ಲಿ ಕಾಡಿನಲ್ಲೇ ಹೆಣವಾಗಿರುತ್ತಿದ್ದೆ.
ಆಗ ಒಬ್ಬ ಸನ್ಯಾಸಿ ಬಂದು ನನನ್ನು ಕಾಪಾಡಿದ. ಆ ಸನ್ಯಾಸಿ ಹೇಗಿದ್ದ ಎಂಬುದನ್ನೂ ವಿವರಿಸಿದ. ಆ ಸನ್ಯಾಸಿ ಬೇರೆ ಯಾರೂ ಅಲ್ಲ, ಪ್ರತೀದಿನ ತಾ ನೀಡುವ ರೊಟ್ಟಿ ತಿನ್ನುವವನೇ ಎಂಬುದು ಮಹಿಳೆಗೆ ಗೊತ್ತಾಯಿತು. ಸನ್ಯಾಸಿಯ ಮಾತಿನರ್ಥವಾಗಿ ಮನದಲ್ಲೇ ಆತನನ್ನು ವಂದಿಸಿದಳು.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.