ಬುದ್ಧಿ ಬಳಸಿ, ನಿಮ್ಮ ಶಕ್ತಿಯ ಅರಿವಿರಲಿ, ಎದುರಾಳಿಯ ಅಶಕ್ತತೆ ತಿಳಿದಿರಲಿ
🌸ದಿನಕ್ಕೊಂದು ಕಥೆ🌸
ಎದುರಾಳಿಯ ಅಶಕ್ತತೆ
ಆ ಪ್ರದೇಶದಲ್ಲಿ ಗಂಗಾನದಿ ಇಬ್ಭಾಗವಾಗಿ ಹರಿದು ಮತ್ತೆ ಮುಂದೆ ಸೇರಿ ನಡುವೆ ಒಂದು ದ್ವೀಪವಾಗಿತ್ತು. ಆ ದ್ವೀಪದಲ್ಲಿ ಸಾವಿರಾರು ಮರಗಳು. ಅದರಲ್ಲಿ ಅನೇಕ ಮಾವು, ಹಲಸು ಮತ್ತಿತರ ಹಣ್ಣಿನ ಮರಗಳು ಹೇರಳವಾಗಿದ್ದವು. ವರ್ಷದ ಹನ್ನೆರಡು ತಿಂಗಳೂ ಯಾವುದಾದರೂ ಹಣ್ಣು ದೊರೆಯುವಂತಿತ್ತು. ನದಿ ತೀರದಲ್ಲಿ ಅನೇಕ ಪ್ರಾಣಿ-ಪಕ್ಷಿಗಳು ನೆಲೆಯಾಗಿದ್ದವು. ಅವುಗಳಲ್ಲಿ ತುಂಬ ವಿಚಿತ್ರವಾದದ್ದು ಒಂದು ಕೋತಿ. ಅದು ಹುಟ್ಟುವಾಗಲೇ ಒಂದು ನಾಯಿಯಷ್ಟು ದೊಡ್ಡದಾಗಿತ್ತು. ದಿನದಿನಕ್ಕೂ ಬೆಳೆಯುತ್ತ ಎರಡು ವರ್ಷದಲ್ಲಿ ದೊಡ್ಡ ಕುದುರೆಯಷ್ಟಾಯಿತು, ಅದರ ನೋಟ, ಓಟ ಹೆದರಿಕೆ ತರುತ್ತಿದ್ದವು.
ಅದು ಮರದಿಂದ ಮರಕ್ಕೆ ಹಾರಿದರೆ ಮರಗಳು ಬಿದ್ದೇ ಹೋಗುವಷ್ಟು ಅಲುಗಾಡುತ್ತಿದ್ದವು. ಯಾವ ಪ್ರಾಣಿಯೂ ಇದರ ಹತ್ತಿರ ಸುಳಿಯುತ್ತಿರಲಿಲ್ಲ. ಕೋತಿ ಮಾತ್ರ ನದಿಯ ಮಧ್ಯದಲ್ಲಿದ್ದ ದ್ವೀಪಕ್ಕೆ ನಿತ್ಯವೂ ಹೋಗಿ ಅಲ್ಲಿದ್ದ ಹಣ್ಣುಗಳನ್ನು ಹೊಟ್ಟೆತುಂಬ ತಿಂದು ಬರುತ್ತಿತ್ತು. ನದಿ ದಾಟುವುದಕ್ಕೆ ಯೋಜನೆಯೊಂದನ್ನು ಮಾಡಿಕೊಂಡಿತ್ತು.
ನದಿಯ ಮಧ್ಯದಲ್ಲಿ ಒಂದು ದೊಡ್ಡ ಬಂಡೆಯಿತ್ತು. ಈ ಕೋತಿ ನದಿ ತೀರದಿಂದ ಜೋರಾಗಿ ಹಾರಿದರೆ ನೇರವಾಗಿ ಮಧ್ಯದ ಬಂಡೆಯ ಮೇಲೆ ಹೋಗಿ ನಿಲ್ಲುತ್ತಿತ್ತು. ನಂತರ ಅಲ್ಲಿಂದ ಹಾರಿ ದ್ವೀಪದಲ್ಲಿ ಇಳಿಯುವುದು, ಬರುವಾಗಲೂ ಹಾಗೆಯೇ. ಹೀಗಾಗಿ ಬೆಳಿಗ್ಗೆ ದ್ವೀಪಕ್ಕೆ ಹೋದರೆ ಸಾಯಂಕಾಲವೇ ಮರಳಿ ಬಂದು ಮನೆ ಸೇರುತ್ತಿತ್ತು.
ಹೀಗಿರುವಾಗ ಒಮ್ಮೆ ಒಂದು ಮೊಸಳೆ ತನ್ನ ಪರಿವಾರದೊಂದಿಗೆ ನದಿಯ ಈ ಭಾಗಕ್ಕೆ ಬಂದು ಸೇರಿಕೊಂಡಿತು. ಅವುಗಳಿಗೂ ಈ ಕೋತಿ ಇಲ್ಲಿಂದಲ್ಲಿಗೆ, ಅಲ್ಲಿಂದಿಲ್ಲಿಗೆ ಹಾರುವುದನ್ನು ಕಂಡು ಆಶ್ಚರ್ಯವಾಯಿತು. ಮೊಸಳೆಯ ಹೆಂಡತಿ ಯಾವುಯಾವುದೋ ಪ್ರಾಣಿಗಳನ್ನು ತಿಂದು ರುಚಿ ಸವಿದಿದ್ದ ಅದಕ್ಕೆ ಈ ಕೋತಿಯನ್ನು ತಿನ್ನುವ ಮನಸ್ಸಾಯಿತು.
ಒಂದೇ ಸಮನೆ ಗಂಡನನ್ನು ಪೀಡಿಸತೊಡಗಿತು. ಕೊನೆಗೆ ಹೆಂಡತಿಯ ಕಾಟ ತಡೆಯದೆ ಗಂಡು ಮೊಸಳೆ ಒಪ್ಪಿ ಯೋಜನೆ ಹಾಕಿತು. ಹೇಗಿದ್ದರೂ ಸಂಜೆ ಮರಳುವಾಗ ಕೋತಿ ಮೊದಲು ಬಂಡೆಯ ಮೇಲೆಯೇ ಹಾರುತ್ತದೆ. ತಾನು ಹಾಗೆಯೇ ಬಂಡೆಯಂತೆ ಮಲಗಿದ್ದರೆ ಕೋತಿ ಕಾಲಿಟ್ಟ ಕೂಡಲೇ ಅದನ್ನು ಹಿಡಿದುಕೊಳ್ಳುತ್ತೇನೆ. ನೀವೂ ಬಂದು ಸಹಕರಿಸಿ, ಯಾಕೆಂದರೆ ಅದೊಂದು ಭಾರಿ ಗಾತ್ರದ ಕೋತಿ ಎಂದು ಪರಿವಾರಕ್ಕೆ ಸೂಚನೆ ಕೊಟ್ಟಿತು. ಅಂತೆಯೇ ಹೋಗಿ ಬಂಡೆಯ ಮೇಲೆ ಕಲ್ಲಿನಂತೆ ಅಲುಗಾಡದೆ ಮಲಗಿತು.
ದ್ವೀಪದಿಂದ ಹಾರುವುದಕ್ಕೆ ಮೊದಲು ಕೋತಿ ಬಂಡೆಯನ್ನು ನೋಡಿತು. ಏನೋ ಬದಲಾವಣೆ ಕಂಡಿತು. ಸೂಕ್ಷ್ಮವಾಗಿ ನೋಡಿದಾಗ ಮೊಸಳೆ ಕಾಣಿಸಿತು. ತನ್ನನ್ನು ತಿನ್ನಲೆಂದೇ ಬಂದಿದೆಯೇ ನೋಡೋಣ ಎಂದುಕೊಂಡು, ‘ಅಯ್ಯಾ, ಸ್ನೇಹಿತ ಬಂಡೆ’ ಎಂದು ಜೋರಾಗಿ ಕೂಗಿತು. ಎರಡು ನಿಮಿಷ ಬಿಟ್ಟು, ‘ಏನಯ್ಯ, ದಿನಾಲು ಉತ್ತರಕೊಡುತ್ತಿದ್ದವನು ಇಂದು ಸುಮ್ಮನಿದ್ದೀಯೆ. ಏನು ಕಾರಣ?’ ಎಂದಿತು. ಅಯ್ಯೋ, ಹಾಗಾದರೆ ನಿತ್ಯ ಈ ಬಂಡೆ ಮಾತನಾಡುತ್ತಿರಬಹುದು ಎಂದುಕೊಂಡು ಮೊಸಳೆಯೇ ಕೂಗಿತು.
‘ಸ್ನೇಹಿತ ಕೋತಿ, ಏನು ಬೇಕಿತ್ತು?’. ‘ನೀನು ಮೊಸಳೆಯಲ್ಲವೇ? ಅಲ್ಲೇಕೆ ಕುಳಿತಿದ್ದೀ?’ ಕೇಳಿತು ಕೋತಿ. ಮೊಸಳೆ ಹೇಳಿತು, ‘ನನ್ನ ಹೆಂಡತಿ ನಿನ್ನ ಹೃದಯವನ್ನು ತಿನ್ನಬಯಸಿದ್ದಾಳೆ, ಅದಕ್ಕೇ ಕಾಯ್ದು ಕುಳಿತಿದ್ದೇನೆ’. ‘ಅಯ್ಯೋ ಪಾಪ! ನಿನ್ನ ಹೆಂಡತಿ ಅಷ್ಟೊಂದು ಅಪೇಕ್ಷೆ ಪಟ್ಟಾಗ ಇಲ್ಲವೆನ್ನುವುದು ಹೇಗೆ? ನೀನು ಅಗಲವಾಗಿ ಬಾಯಿ ತೆರೆದುಕೊಂಡು ಕುಳಿತಿರು. ನಾನು ಹಾರಿ ಬಾಯಿಯಲ್ಲೇ ಬೀಳುತ್ತೇನೆ’ ಎಂದಿತು ಕೋತಿ. ದಡ್ಡ ಮೊಸಳೆ ಅಗಲವಾಗಿ ಬಾಯಿತೆರೆಯಿತು.
ಮೊಸಳೆ ಅಷ್ಟಗಲ ಬಾಯಿ ತೆರೆದಾಗ ಅದರ ಕಣ್ಣು ಮುಚ್ಚಿಕೊಳ್ಳುತ್ತವೆ, ಏನೂ ಕಾಣುವುದಿಲ್ಲ. ಇದು ಕೋತಿಗೆ ಗೊತ್ತಿತ್ತು. ಆಗ ಕೋತಿ ಠಣ್ಣನೇ ಹಾರಿ ಮೊಸಳೆಯ ತಲೆಯ ಮೇಲೆ ಕಾಲಿಟ್ಟು ಕ್ಷಣಾರ್ಧದಲ್ಲಿ ಮತ್ತೆ ಜಿಗಿದು ದಡ ಸೇರಿಬಿಟ್ಟಿತು. ಮೊಸಳೆ ಕೋತಿಯ ಹಾಗೆ ಮುಖ ಮಾಡಿತು. ಸಮಸ್ಯೆ ಎದುರಾದಾಗ ಬುದ್ಧಿವಂತಿಕೆ ಬಳಸಬೇಕು. ನಿಮ್ಮ ಶಕ್ತಿಯ ಅರಿವಿರಬೇಕು ಮತ್ತು ಎದುರಾಳಿಯ ಅಶಕ್ತತೆಯ ತಿಳಿವಿರಬೇಕು. ಈ ಸಾಮಗ್ರಿಗಳು ನಮ್ಮಲ್ಲಿದ್ದರೆ ಎಂಥ ಸಮಸ್ಯೆಯನ್ನೂ ಎದುರಿಸಬಹುದು.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.