ದಿನಕ್ಕೊಂದು ಕಥೆ
ಟಾರ್ಗೆಟ್
ದಟ್ಟವಾದ ಅರಣ್ಯ. ಅಲ್ಲಿ ಒಂದು ಗುಹೆ. ಅದರ ಬಾಗಿಲಲ್ಲಿ ಒಂದು ಮೊಲ ಕುಳಿತು ಆತುರಾತುರವಾಗಿ ಲೇಖನ ಒಂದನ್ನು ಬರೀತಿತ್ತು. ಆ ಕಡೆ ಹೋಗುತ್ತಿದ್ದ ನರಿಯೊಂದು ಇದನ್ನ ನೋಡಿ ಆಶ್ಚರ್ಯದಿಂದ, “ಏನು ಬರೆಯುತ್ತಿದ್ದಿ?” ಎಂದು ವಿಚಾರಿಸಿತು. ಅದಕ್ಕೆ ಮೊಲ “ಅದಾ? ನರಿಗಳನ್ನು ತಿನ್ನುವ ಮೊಲಗಳ ಬಗ್ಗೆ ಸಂಶೋಧನೆ ಮಾಡಿ ಪ್ರಬಂಧವೊಂದನ್ನು ಬರೆಯುತ್ತಿದ್ದೇನೆ” ಎಂದು ಉತ್ತರ ಕೊಟ್ಟಿತು.
ಇದನ್ನು ನಂಬದ ನರಿ ಅವಹೇಳನದ ನಗೆಯನ್ನು ಬೀರುತ್ತಾ, “ಹಾಗೊಂದು ಇರುವುದು ಸಾಧ್ಯವೇ ಇಲ್ಲ. ಮೊಲ ನರಿಯನ್ನು ತಿನ್ನುವುದು ಅಸಂಭವ !” ಎಂದಿತು. “ನನ್ನ ಜೊತೆ ಈ ಗುಹೆಯೊಳಗೆ ಬಾ. ನಿನಗೆ ನರಿಯನ್ನು ತಿನ್ನುವ ಮೊಲವನ್ನು ತೋರಿಸುವೆ” ಎಂದು ಮೊಲ ಹೇಳಲು ನರಿ ಒಪ್ಪಿಕೊಂಡಿತು.
ನರಿ ಜತೆಗೆ ಒಳಗೆ ಹೋದ ಸ್ವಲ್ಪ ಹೊತ್ತಿನಲ್ಲಿ ಮೊಲ ಒಂದೇ ಹೊರಗೆ ಬಂದು, ಮತ್ತೆ ಬರೆಯಲು ಶುರು ಮಾಡಿತು. ಆ ದಾರಿಯಲ್ಲಿ ಒಂದು ತೋಳ ಬಂತು. ಆ ತೋಳವು ಸಹ ಮೊಲವನ್ನು ನೋಡಿ, “ಏನು ಮಾಡುತ್ತಿದ್ದಿ?” ಎಂದು ವಿಚಾರಿಸಿತು. ಮೊಲ ಮತ್ತೆ ಅದೇ ಪ್ರಕಾರ, ತೋಳಗಳನ್ನು ತಿನ್ನುವ ಮೊಲಗಳ ಬಗ್ಗೆ ತಾನು ನಡೆಸುತ್ತಿರುವ ಸಂಶೋಧನೆಯ ಬಗ್ಗೆ ವಿವರಿಸಿತು.
ತೋಳ ಅದನ್ನು ನಂಬಲು ತಯಾರಿರಲಿಲ್ಲ. ನೀನೇ ನೋಡುವಿಯಂತೆ ಎಂದು ಹೇಳಿ ಗುಹೆಯೊಳಗೆ ಕರೆದೊಯ್ಯಿತು. ಮತ್ತೆ ಸ್ವಲ್ಪ ಹೊತ್ತಿನ ನಂತರ ಮೊಲ ಒಂದೇ ಹೊರಗೆ ಬಂದು ಬರವಣಿಗೆಯನ್ನು ಮುಂದುವರೆಸಿತು.
ಸ್ವಲ್ಪ ಹೊತ್ತಿನಲ್ಲಿ ಕಾಡುಕೋಣವೊಂದು ಬಂತು “ಏನು ಮಾಡುತ್ತಿದ್ದಿ?” ಎಂಬ ಕೋಣದ ಪ್ರಶ್ನೆಗೆ ಮೊದಲಿನಂತೆಯೇ ಕೋಣವನ್ನು ತಿನ್ನುವ ಮೊಲದ ಬಗ್ಗೆ ಲೇಖನ ಬರೆಯುತ್ತಿರುವೆ ಎಂದು ಹೇಳಿತು. ಕೋಣಕ್ಕೆ ಮನದಟ್ಟು ಮಾಡಲು ಅದನ್ನೂ ಗುಹೆಯೊಳಗೆ ಕರೆದುಕೊಂಡು ಹೋಯಿತು.
ಅಲ್ಲಿ ಒಂದು ಸಿಂಹ ಭಯಂಕರವಾಗಿ ಗರ್ಜಿಸುತ್ತಿತ್ತು. ಮೊಲ ಅದಕ್ಕೆ ವಂದಿಸಿ, “ನನ್ನ ಇವತ್ತಿನ ಟಾರ್ಗೆಟ್ ಮೂರು. ಅದನ್ನು ಅಚೀವ್ ಮಾಡಿಬಿಟ್ಟೆ ಬಾಸ್!” ಎಂದು ಹೇಳಿ ಹೊರಟುಹೋಯಿತು.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.