ದಿನಕ್ಕೊಂದು ಕಥೆ
ದೃಢ ನಂಬಿಕೆ
ಒಂದು ಗ್ರಾಮ. ಅಲ್ಲೊಂದು ಅಗ್ರಹಾರ. ಅದರಲ್ಲೊಬ್ಬ ವೈದೀಕ ಬ್ರಾಹ್ಮಣರ ಕುಟುಂಬ. ಮನೆಯ ಯಜಮಾನರಿಗೆ 40ರ ಆಸುಪಾಸು ವಯಸ್ಸು. ಸುಂದರಿಯಾದ ಅನುಕೂಲೆ ಧರ್ಮಪತ್ನಿ. ಬುದ್ಧಿವಂತ, ವಿಧೇಯರಾದ ಮಕ್ಕಳು, ಒಂದು ಗಂಡು, ಒಂದು ಹೆಣ್ಣು. ಆ ಯಜಮಾನರು ಗುರುಕುಲದ ರೀತಿಯಲ್ಲಿ ಒಂದಷ್ಟು ಶಿಷ್ಯರಿಗೆ ತಮ್ಮ ಮನೆಯಲ್ಲೇ ವಾಸ ಕಲ್ಪಿಸಿ, ಅವರಿಗೆ ವೇದವಿದ್ಯೆಯನ್ನು ಕಲಿಸುತ್ತಿದ್ದಾರೆ. ಸಾಕಷ್ಟು ಹೊಲ, ಗದ್ದೆ ಪಿತ್ರಾರ್ಜಿತವಾಗಿ ಬಂದಿದ್ದು, ಮನೆಯಲ್ಲಿ ಹಸು, ಕರುಗಳೂ ಧಂಡಿಯಾಗಿ ಇದ್ದು, ಆ ಬ್ರಾಹ್ಮಣ ಗೃಹಸ್ಥರು ತಕ್ಕಮಟ್ಟಿಗೆ ಸ್ಥಿತಿವಂತರೇ. ತೃಪ್ತ ಜೀವನ. ಅತ್ಯಂತ ಆಚಾರ ನಿಷ್ಠರೂ, ದೈವಭಕ್ತರೂ ಆದ ಅವರಿಗೆ ಭಗವಂತನಲ್ಲಿ ಅಚಲ ಭಕ್ತಿ, ನಂಬಿಕೆ. ಅವನು ತನ್ನನ್ನು ಎಂದೂ ಕೈಬಿಡಲಾರ ಎಂಬ ಶ್ರದ್ಧೆ. ಭಗವದ್ಗೀತೆಯ,
ಅನನ್ಯಾಃ ಚಿಂತಯಂತೋ ಮಾಂ ಯೇ ಜನಾಃ ಪರ್ಯುಪಾಸತೇ|
ತೇಷಾಂ ನಿತ್ಯಾಭಿಯುಕ್ತಾನಾಂ ಯೋಗಕ್ಷೇಮಂ ವಹಾಮ್ಯಹಂ||
ಎಂಬ ಶ್ಲೋಕ ಅವರಿಗೆ ಬಹು ಪ್ರಿಯವಾದದ್ದು. ತಾನು ಇಂದು ಹೀಗಿರಲು, ಭಗವಂತನ ಅನುಗ್ರಹವೇ ಕಾರಣ ಎಂದು ದೃಢವಾಗಿ ನಂಬಿದವರು. ಈ ಐಶ್ವರ್ಯ, ಭೋಗವೆಲ್ಲ ತನ್ನದಲ್ಲ, ಎಲ್ಲ ಭಗವಂತನದೇ ಎಂದುಕೊಂಡು, ಅವಕ್ಕೆಲ್ಲ ಅಂಟಿಯೂ ಅಂಟದಂತಿದ್ದವರು.
ಭಗವಂತ ಲೀಲಾವಿನೋದ ಪ್ರಿಯನಲ್ಲವೇ? ಈ ಭಕ್ತನನ್ನು ಒಮ್ಮೆ ಪರೀಕ್ಷಿಸುವ ಮನಸ್ಸು ಅವನಿಗಾಯಿತು.
ಅಂದು ನಿಲ್ಲದೇ ಸುರಿಯುತ್ತಿರುವ ಮಳೆ. ಈ ಭಕ್ತರು ಹೊರಗೆ ಯಾವುದೋ ಕೆಲಸಕ್ಕೆ ಹೋದವರು ಮಳೆಯ ಆರ್ಭಟ ಹೆಚ್ಚಿದೊಡನೆ ಆ ಬೀದಿಯಲ್ಲಿರುವ ಒಂದು ಅಂಗಡಿಯ ಮುಂದೆ ಚಾಚಿದ ಸೂರಿನಡಿಯಲ್ಲಿ ಬಂದು ನಿಂತರು. ಮಳೆಯಿಂದ ಏನೋ ಅವರಿಗೆ ರಕ್ಷಣೆ ದೊರಕಿತು. ಮುಂದೆ ನಡೆದದ್ದೇ ಒಂದು ಪವಾಡವೆನ್ನುವಂಥ ಘಟನೆ. ಆ ಭಕ್ತರ ಜೀವನವನ್ನೇ ಬದಲಾಯಿಸಿತು ಅದು.
ಅವರು ನಿಂತ ಸ್ಥಳದಲ್ಲಿ ಏನೋ ವಿಚಿತ್ರವಾದ ದುರ್ವಾಸನೆ. ಹಿಂದೆಂದೂ ಈ ವಾಸನೆಯನ್ನು ಅವರು ಮೂಸಿದ್ದಿಲ್ಲ. ಉತ್ತರೀಯದಿಂದ ಮೂಗು ಮುಚ್ಚಿಕೊಂಡೇ ನಿಂತರು. ಮಳೆ ನಿಲ್ಲುವ ಸೂಚನೆಯೇ ಇಲ್ಲ. ಇನ್ನೂ ಜೋರಾಗಿದೆ. ಆ ಅಂಗಡಿಯ ಮಾಲೀಕ ಒಬ್ಬ ಮುಸಲ್ಮಾನ. ಇವರನ್ನು ಕಂಡು ಏನೆನಿಸಿತೋ! ಮಾತನಾಡಿಸಿದ. ” ಸ್ವಾಮಿ! ಏನು ಬೇಕು ನಿಮಗೆ? ಓ! ಮಳೆಯಿಂದ ತಪ್ಪಿಸಿಕೊಳ್ಳಲು ನಿಂತಿದ್ದೀರಾ? ಬನ್ನಿ! ಕುಳಿತುಕೊಳ್ಳಿ.” ಎಂದ. ಇವರು ಹಿಂದೆ ತಿರುಗಿ ನೋಡಿದರು. ಅವರ ಊರ್ಧ್ವ ಪುಂಡ್ರ ನಾಮಗಳನ್ನು ನೋಡಿದವನು ಗೌರವದಿಂದ ಕೈಮುಗಿದು ಅಲ್ಲಿದ್ದ ಒಂದು ಬೆಂಚನ್ನು ಒರೆಸಿ ಕೂರಲು ಹೇಳಿದ. ಇವರು ಆಗ ನೋಡುತ್ತಾರೆ! ತಾನು ನಿಂತದ್ದು ಒಂದು ಮಾಂಸದಂಗಡಿ. ಅಯ್ಯೋ! ಇಂದು ಈ ದುರ್ವಾಸನೆಯನ್ನು ಮೂಸುವಂತಾಯಿತಲ್ಲ ಎಂದುಕೊಂಡವರು,
ಸರಿ ಮನೆಗೆ ಹೋಗಿ, ಸ್ನಾನ ಮಾಡಿ ಜನಿವಾರ ಬದಲಾಯಿಸಿಕೊಳ್ಳಬೇಕು ಎಂದೆಲ್ಲಾ ಯೋಚಿಸುತ್ತಾರೆ. ಬೇರೆಡೆಗೆ ಹೋಗಲೂ ಸಾಧ್ಯವಾಗದಂಥ ಜೋರು ಮಳೆ. ಇವರ ಸಂಕಟವನ್ನರಿತ ಆ ಮಾಲೀಕ, “ಸ್ವಾಮಿ! ಸದ್ಯಕ್ಕೆ ಮಳೆ ನಿಲ್ಲುವ ಹಾಗೆ ಕಾಣುವುದಿಲ್ಲ. ನೀವು ಆರಾಮವಾಗಿ ಕುಳಿತುಕೊಳ್ಳಿ.” ಎಂದು ಲೋಕಾಭಿರಾಮವಾಗಿ ಮಾತುಕತೆಗೆ ತೊಡಗಿದ. ಇವರೂ ಈಗ ಸ್ವಲ್ಪ ಸಡಿಲವಾಗಿ ಕುಳಿತುಕೊಂಡರು.
ಮಾಂಸ ಕಡಿಯುವುದು, ಮಾರುವುದು ಅವನ ವೃತ್ತಿ. ನಾನೇಕೆ ತಲೆ ಕೆಡಿಸಿಕೊಳ್ಳಲಿ? ಹಿಂದೆ ಧರ್ಮವ್ಯಾಧನೂ ಇದೇ ವೃತ್ತಿಯನ್ನು ಮಾಡುತ್ತಿದ್ದನಲ್ಲವೇ? ಇಂದು ನಾನಿಲ್ಲಿರಬೇಕೆಂಬುದು ಭಗವಂತನ ಸಂಕಲ್ಪ ಎಂದು ನಿರ್ವಿಕಾರವಾಗಿ ಕುಳಿತರು.
ಅಕಸ್ಮಾತ್ತಾಗಿ ಅವರ ದೃಷ್ಟಿ ಅಂಗಡಿಯಲ್ಲಿದ್ದ ತಕ್ಕಡಿಯ ಕಡೆಗೆ ಹೋಯಿತು. ಅದರಲ್ಲಿ ಒಂದು ಕಿಲೋ ತೂಗುವಂಥ ಒಂದು ಕಲ್ಲು. ಕರಿಯ ಕಲ್ಲು. ಅದರ ತೂಕಕ್ಕೆ ತಕ್ಕಂತೆ ಅಂಗಡಿಯವನು ಮಾಂಸ ತೂಗಿ ಕೊಡುತ್ತಿದ್ದನೇನೋ. ಇವರು ಸ್ವಲ್ಪ ಸಂದೇಹದಿಂದ ಸೂಕ್ಷ್ಮವಾಗಿ ಅದನ್ನು ಗಮನಿಸಿ ಅಂಗಡಿಯವನನ್ನು ಅದನ್ನು ತನಗೆ ತೋರಿಸುವಂತೆ ಕೇಳುತ್ತಾರೆ.
ಅವನೂ ಕೊಟ್ಟ. ಹಾಗೆ ಹೀಗೆ, ಮೇಲೆ, ಕೆಳಗೆ ತಿರುಗಿಸಿ ನೋಡುತ್ತಾರೆ. ಆದೊಂದು ನರಸಿಂಹ ಸಾಲಿಗ್ರಾಮ. ತೆರೆದ ಬಾಯಿಯ ಉಗ್ರ ನರಸಿಂಹ ಸಾಲಿಗ್ರಾಮ. ಇವರಿಗೆ ಹೃದಯವೇ ಬಾಯಿಗೆ ಬಂತು. ” ಅಯ್ಯೋ! ದೇವರೇ! ನನ್ನಪ್ಪಾ! ನಿನಗೀ ದುಸ್ಥಿತಿಯೇ? ” ಎನ್ನುತ್ತಾ ಒಂದು ನಿರ್ಧಾರಕ್ಕೆ ಬಂದು, ಅದನ್ನು ತನಗೆ ನೀಡುವಂತೆ ಆ ಅಂಗಡಿಯವನನ್ನು ಕೇಳುತ್ತಾರೆ. ಅವನೂ, ” ಯಾರೋ ನಿಮ್ಮಂಥ ಬ್ರಾಂಬರೇ ಇದನ್ನು ನನಗೆ ಕೊಟ್ಟಿದ್ದು. ಧಾರಾಳವಾಗಿ ತೆಗೆದುಕೊಳ್ಳಿ ಸ್ವಾಮಿ! ನನ್ನ ಬಳಿ ಬೇರೆ ಬೊಟ್ಟು ಇದೆ. ” ಎಂದು ಕೊಟ್ಟುಬಿಟ್ಟ. ಇವರು ಅಲ್ಲೇ ಪಕ್ಕದಲ್ಲಿದ್ದ ನಲ್ಲಿಯಲ್ಲಿ ಅದನ್ನು ಸ್ವಲ್ಪ ತೊಳೆದು ಉತ್ತರೀಯದಿಂದಲೇ ಒರೆಸಿ ಕಣ್ಣಿಗೆ ಒತ್ತಿಕೊಂಡರು.
ಮತ್ತೆ ಅದೇ ಉತ್ತರೀಯದಲ್ಲಿ ಸುತ್ತಿಕೊಂಡು, ಕೈಯಲ್ಲಿ ಭದ್ರವಾಗಿ ಹಿಡಿದು ಸುರಿಯುವ ಮಳೆಯನ್ನೂ ಲೆಕ್ಕಿಸದೆ, ಅಂಗಡಿಯಿಂದ ಹೊರಬಿದ್ದರು. ಇವರು ನೆನೆಯುತ್ತಲೇ ಹೋದದ್ದನ್ನು ಕಂಡ ಆ ಮಾಲೀಕನೋ “ನಿಲ್ಲಿ ಸ್ವಾಮಿ.” ಎಂದು ಕೂಗುತ್ತಲೇ ಇದ್ದ. ಇವರು ಬಿರಬಿರನೆ ಹೆಜ್ಜೆ ಹಾಕುತ್ತ ನಡೆದರು. ದಾರಿಯಲ್ಲಿ ಕತ್ತಲು. ಇವರೊಬ್ಬರೇ. ಯಾರೋ ಇವರೊಂದಿಗೆ ಮಾತಾಡಿದಂತಾಯ್ತು.
“ನನ್ನನ್ನು ಎಷ್ಟೋ ಜನ ಇಟ್ಟುಕೊಂಡು ಕಷ್ಟಪಟ್ಟು, ಕೊನೆಗೆ ಇಲ್ಲಿ ತಂದು ಸೇರಿಸಿದ್ದಾರೆ. ನಾನು ಅಲ್ಲಿ ಆರಾಮವಾಗೇ ಇದ್ದೇನೆ. ಅಲ್ಲಿಯೇ ನನ್ನನ್ನು ಬಿಟ್ಟುಬಿಡು.” “ಎಲ್ಲಿಂದ ಬಂದ ಧ್ವನಿ ಇದು?” ಎಂದು ಆಶ್ಚರ್ಯ ಪಟ್ಟರು. ಆ ಸಾಲಿಗ್ರಾಮದಿಂದಲೇ ನರಸಿಂಹ ಸ್ವಾಮಿಯೇ ಮಾತಾಡಿದ್ದು ಎಂದರಿತರು. “ಇಲ್ಲ ಸ್ವಾಮಿ! ನೀನಿಷ್ಟು ದಿನ ಅಲ್ಲಿ, ಆ ನರಕದಲ್ಲಿ ಇದ್ದದ್ದು ಸಾಕು. ನಿನ್ನನ್ನು ಇನ್ನು ಅಲ್ಲಿ ಬಿಡಲಾರೆ.” ಎಂದರು. “ಸರಿ. ಅನುಭವಿಸು.” ಎಂದ ನರಸಿಂಹ.
ಮನೆಗೆ ಬಂದವರೇ ಶುದ್ಧವಾಗಿ ಸ್ನಾನ ಮಾಡಿದರು. ಪೂಜೆಗೆ ಕುಳಿತರು. ಈ ಹೊಸ ಸಾಲಿಗ್ರಾಮವನ್ನು ಏಲಕ್ಕಿ, ಕೇಸರಿ, ಪಚ್ಚ ಕರ್ಪೂರಗಳಿಂದ ಕೂಡಿದ ಸುವಾಸಿತ ತೀರ್ಥದಿಂದ ಅಭಿಷೇಕ ಮಾಡಿ, ಹೊಸ ವಸ್ತ್ರದಿಂದ ಒರೆಸಿ, ಧೂಪ, ದೀಪ ಹೂವುಗಳಿಂದ ಪೂಜಿಸಿದರು. ತುಪ್ಪದಿಂದ ಮಾಡಿದ ಕೇಸರಿಭಾತನ್ನು ನೈವೇದ್ಯ ಮಾಡಿ, ಮಂಗಳಾರತಿಯನ್ನೂ ಮಾಡಿದರು. ಮತ್ತೆ ಪಿಸುಗುಟ್ಟಿದ ಸ್ವಾಮಿ. “ಯೋಚಿಸು. ನನ್ನಿಂದ ಬಹಳ ಜನ ದುಃಖವನ್ನು ಅನುಭವಿಸಿದ್ದಾರೆ. ನನ್ನನ್ನು ಬಿಟ್ಟು ಬಿಡು.” ಎಂದ. “ಖಂಡಿತ ಬಿಡೆನು. ಏನೇ ಕಷ್ಟ ಬಂದರೂ ನೀನು ನನ್ನ ಬಳಿಯೇ ಇರುವೆ.” ಎಂದರು.
ಸ್ವಲ್ಪ ದಿನ ಕಳೆಯುತ್ತಿದ್ದಂತೆಯೇ, ಸ್ವಾಮಿ ತನ್ನ ಲೀಲೆಯನ್ನಾರಂಭಿಸಿದ. ಮೇಯಲು ಹೋದ ಅವನ ಹಸುಗಳು ಒಂದೊಂದಾಗಿ ಕಾಣೆಯಾಗುತ್ತಾ ಬಂದವು. ಒಂದನ್ನು ಹುಲಿ ತಿಂದರೆ, ಇನ್ನು ಕೆಲವು ಯಾವುದೋ ಹೇಳತೀರದ ಕಾಯಿಲೆಗೆ ತುತ್ತಾಗಿ ಸತ್ತು ಹೋದವು.
ಇದ್ದ ಎರಡು ಮಕ್ಕಳೂ ಜ್ವರ ಬಂದು ಹಾಸಿಗೆ ಹಿಡಿದದ್ದೇ ಕಾರಣವಾಗಿ ಒಂದೇ ವಾರದಲ್ಲಿ ತೀರಿಹೋದವು. ಮಕ್ಕಳು ಹೋದ ದುಃಖದಲ್ಲೇ ಹೆಂಡತಿಯೂ ಕೊರಗಿ ಸತ್ತು, ಇವರು ಒಬ್ಬಂಟಿಯಾದರು.
ಒಂದು ದಿನ ಪೂಜೆಯಲ್ಲಿ ಸ್ವಾಮಿ ಮಾತಾಡಿದ. ನೋಡಿದೆಯಾ! ಈಗಲಾದರೂ ನನ್ನನ್ನು ಅಲ್ಲಿಗೇ ಕಳಿಸಿಬಿಡು.” ಎಂದ. “ಸಾಧ್ಯವೇ ಇಲ್ಲ” ಎಂದರು ಈ ಭಕ್ತರು.
ಗದ್ದೆ, ಹೊಲಗಳನ್ನು ನೋಡಿಕೊಳ್ಳುತ್ತಿದ್ದ ಆಳುಗಳು ಒಟ್ಟಾಗಿ ಬಂದು, “ನಾವು ಕಷ್ಟ ಪಟ್ಟು ದುಡಿದು ಧಾನ್ಯವನ್ನು ನಿಮಗೆ ಕೊಡಬೇಕೇ? ಇದು ಅನ್ಯಾಯ. ಇನ್ನು ಮೇಲೆ ಒಂದು ಕಾಳನ್ನೂ ನೀಡೆವು. ಭೂಮಿಯೂ ನಮ್ಮದೇ ಎಂದು ಗಲಾಟೆ ಮಾಡಿಕೊಂಡು ಹೊರಟು ಹೋದರು. ಇವರಿಗೆ ಬೇರೆ ಉತ್ಪತ್ತಿ ಇಲ್ಲ. ಶಿಷ್ಯರಿಗೆ ಊಟ ಹಾಕುವುದು ಹೇಗೆ? ಕ್ರಮೇಣ ಅವರೂ ಒಬ್ಬೊಬ್ಬರಾಗಿ ಕಳಚಿಕೊಂಡರು. ಕೊನೆಗೆ ತೀರಾ ವಿಶ್ವಾಸಿಗಳಾದ ಇಬ್ಬರು ಮಾತ್ರ ಉಳಿದರು.
ಈಗ ಇನ್ನೂ ಹೆಚ್ಚಿನ ಪರೀಕ್ಷೆ. ಇವರಿಗೇ ಯಾವುದೋ ತೀವ್ರವಾದ ಕಾಯಿಲೆ ಬಂದಿತು. ನೋಡನೋಡುತ್ತಿದ್ದಂತೆಯೇ ಆರೋಗ್ಯ ಕ್ಷೀಣವಾಗಿ ಹಾಸಿಗೆ ಹಿಡಿದರು. ದೇಹ ಹಿಡಿಯಷ್ಟಾಯಿತು.
ಮತ್ತೆ ಸ್ವಾಮಿ ಹೇಳಿದ.
“ಈಗಲಾದರೂ ನಿನ್ನ ಹಟವನ್ನು ಬಿಡು. ನೀನು ಕಳೆದುಕೊಂಡಿದ್ದೆಲ್ಲವನ್ನೂ ಮರಳಿ ಪಡೆಯುವೆ.” ಎಂದ. “ಸ್ವಾಮಿ! ನೀನು ಕೊಟ್ಟಿದ್ದನ್ನು ನೀನೇ ಕಿತ್ತುಕೊಂಡರೆ, ನಾನೇಕೆ ದುಃಖಪಡಲಿ? ಅದು ನಿನ್ನಿಷ್ಟ. ನೀನು ನನ್ನ ಬಳಿ ಇರುವುದೇ ನನ್ನಿಷ್ಟ.” ಎಂದರು ಇವರು.
ಇವರ ಖಾಯಿಲೆ ಗುಣವಾಗದೆ ಕೊನೆಯ ದಿನಗಳೂ ಸಮೀಪಿಸಿದವು. ಇವರು ಹಾಸಿಗೆಯಲ್ಲಿದ್ದರೂ ಆ ಸಾಲಿಗ್ರಾಮವನ್ನು ಪಕ್ಕದಲ್ಲೇ ಇಟ್ಟುಕೊಂಡು ಶಿಷ್ಯರ ಕೈಯ್ಯಿಂದ ಶುದ್ಧವಾದ ತೀರ್ಥವನ್ನು ತರಿಸಿ, ಅದರ ಮೇಲೆ ಒಂದು ಉದ್ಧರಣಿ ಹಾಕುತ್ತಿದ್ದರು. ಅದೇ ಪೂಜೆ. ಅದನ್ನೇ ಸೇವಿಸುತ್ತಿದ್ದರು. ಅದು ಬಿಟ್ಟರೆ ಬೇರೆ ಆಹಾರವಿಲ್ಲ. ಕೊನೆಯ ದಿನವೂ ಬಂದಿತು.
ಆ ಇಬ್ಬರು ಶಿಷ್ಯರನ್ನು ಕರೆದು ನೀವೇ ಯಾರಾದರೂ ಈ ಸಾಲಿಗ್ರಾಮವನ್ನು ನನ್ನ ನಂತರ ಪೂಜಿಸಿ. ಇದು ನನ್ನ ಅಪ್ಪಣೆ ಎಂದರು. ಅವರಿಬ್ಬರೂ ಒಬ್ಬರ ಮುಖವನ್ನು ಒಬ್ಬರು ನೋಡುತ್ತಾ , “ಗುರುಗಳೇ! ನೀವು ಕಷ್ಟ ಪಟ್ಟಿದ್ದನ್ನು ನೋಡಿಯೂ ಈ ಅಪ್ಪಣೆಯನ್ನು ಪಾಲಿಸಲು ನಮಗೆ ಧೈರ್ಯ ಬರುತ್ತದೆಯೇ? ಎಂದು ಹೇಳಿ, ತಲೆಯನ್ನು ಕೆಳಗೆ ಹಾಕಿದರು.
ಇವರಿಗೆ ಈಗ ಬೇರೇನು ದಾರಿ?” ಸರಿ. ಮಕ್ಕಳೇ! ಇನ್ನೇನು ನನ್ನ ಪ್ರಾಣ ಹೋಗುತ್ತದೆ. ನನ್ನ ಎದೆಯ ಮೇಲೇ ಈ ಸ್ವಾಮಿಯನ್ನು ಇಟ್ಟು ಹಾಗೆಯೇ ಸಂಸ್ಕಾರ ಮಾಡಿಬಿಡಿ. “ಎಂದವರೇ, ಆ ಸಾಲಿಗ್ರಾಮವನ್ನು ತಮ್ಮ ಎದೆಯ ಮೇಲಿರಿಸಿಕೊಂಡು ಕಣ್ಣು ಮುಚ್ಚಿದರು. ಮತ್ತೆ ಸ್ವಾಮಿ ಅವರ ಕಿವಿಯಲ್ಲಿ ಮಾತಾಡಿದ. “ನಾನೇ ಸೋತೆ ಭಕ್ತಾ! ನೀ ಗೆದ್ದೆ.” ಎಂದ.
ಈಗ ಒಂದು ಪವಾಡ ನಡೆಯಿತು. ಸಂಸ್ಕಾರಕ್ಕೆ ಸಿದ್ಧತೆ ಮಾಡುತ್ತಿದ್ದವರ ಕಣ್ಣಿಗೆ ಇವರ ಮೈ, ಕೈಗಳು ಅಲುಗಿದ್ದು ಕಂಡು ಆಶ್ಚರ್ಯವಾಗಿದೆ. ನಿಧಾನವಾಗಿ ಕಣ್ಣು ಬಿಟ್ಟಿದ್ದಾರೆ. ಸ್ವಲ್ಪ ಹೊತ್ತಿನಲ್ಲಿ ಎದ್ದು ಕುಳಿತಿದ್ದಾರೆ. ಕ್ರಮೇಣ ಚೇತರಿಸಿಕೊಂಡು ಆರೋಗ್ಯವಂತರಾದರು ಆ ಭಕ್ತರು. ಮತ್ತೆ ಶಿಷ್ಯರೆಲ್ಲ ಒಬ್ಬೊಬ್ಬರಾಗಿ ಬಂದು ಸೇರಿ, ಗುರುಕುಲ ತುಂಬಿತು.
ಗುರುದಕ್ಷಿಣೆಯಿಂದ ಧನಾರ್ಜನೆಯೂ ಆಗತೊಡಗಿತು. ರೈತರೂ ಬಂದು ಹೊಲ ಗದ್ದೆಗಳನ್ನು ಒಪ್ಪಿಸಿದರು. ಆರೋಗ್ಯವಾಗಿ ಲಕ್ಷಣವಾಗಿದ್ದ ಇವರಿಗೆ ಮತ್ತೆ ಮದುವೆಯೂ ಆಗಿ ಮಕ್ಕಳೂ ಆದವು. ಸ್ವಾಮಿಯ ಪೂಜೆಯನ್ನು ಮಾತ್ರ ಒಂದು ದಿನವೂ ಅವರು ತಪ್ಪಿಸಲಿಲ್ಲ. ಅವನಿಗೆ ಬೆಳ್ಳಿಯ ಸಂಪುಟವೇ ಶಾಶ್ವತ ವಾಸಸ್ಥಾನವಾಯಿತು.
ಈ ಕಥೆ. ಶ್ರೀ ಅಹೋಬಿಲ ಮಠದ 44ನೆಯ ಪಟ್ಟದ ಸ್ವಾಮಿಗಳಾದ ಶ್ರೀ ವೇದಾಂತ ದೇಶಿಕ ಶಠಕೋಪ ಯತೀಂದ್ರ ಮಹಾದೇಶಿಕರಾದ ಅವರು ಮುಕ್ಕೂರ್ ಅಳಸಿಂಗರೆಂದೂ ಶ್ರೀರಂಗದ ಗೋಪುರವನ್ನು ಕಟ್ಟಿದ ಸ್ವಾಮಿಗಳೆಂದೇ ಪ್ರಸಿದ್ಧರಾದವರು.
ನೀತಿ :– ಒಂದು ಉದ್ಧರಣೆ ತೀರ್ಥ. ಯಾವುದೋ ಒಂದು ಹೂವು, ಒಂದು ಹಣ್ಣೋ, ಹಾಲೋ, ಸಕ್ಕರೆಯೋ ನೈವೇದ್ಯ ಸಾಕು. ತನ್ನನ್ನೇ ಅನನ್ಯವಾಗಿ ನಂಬಿದವರನ್ನು ಭಗವಂತ ಎಂದೂ ಕೈ ಬಿಡುವುದಿಲ್ಲ. ಅವರ ಯೋಗಕ್ಷೇಮವನ್ನು ಭಗವಂತನೇ ನೋಡಿಕೊಳ್ಳುತ್ತಾನೆ.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.