ದಿನಕ್ಕೊಂದು ಕಥೆ
ಮಹಾತ್ಮರ ದರ್ಶನದ ಪ್ರಯೋಜನ
ಒಮ್ಮೆ ನಾರದ ಈಶ್ವರನ ಹತ್ತಿರ ಆಗಮಿಸಿ, ಮಹಾನುಭಾವರ ದರುಶನದಿಂದ ದೊರೆಯುವ ಲಾಭವೇನು? ಎಂದು ಪ್ರಶ್ನಿಸಿದಾಗ ಶಿವನು, ಭೂಮಿಯೊಳಗಿನ ತಿಪ್ಪೆಯ ಮಧ್ಯದಲ್ಲಿ ಇರುವ ಗೊಬ್ಬರದ ಹುಳುವೊಂದನ್ನು ತೋರಿಸಿ, ಅದಕ್ಕೆ ಕೇಳು. ಅದು ಹೇಳುತ್ತದೆ ಎಂದನು. ನಾರದ ಸರಿ ಎಂದು ಹೇಳಿ, ಆ ಹುಳುವಿನ ಎದುರು ನಿಂತು ನಮಸ್ಕಾರ ಎಂದಾಗ ಆ ಗೊಬ್ಬರದ ಹುಳು ಮೇಲೆ ನೋಡಿದ ಕೂಡಲೆ ಅಲ್ಲೇ ಸತ್ತಹೋಯಿತು. ಬೇಸರಗೊಂಡ ನಾರದ ಶಿವನಲ್ಲಿಗೆ ಬಂದು ನಡೆದ ವಿಚಾರವನ್ನು ಶಿವನಿಗೆ ಹೇಳಿದ.
ಆಗ ಶಿವನು, ಚಿಂತಿಸಬೇಡ ನಾನು ಇನ್ನೂ ಒಂದು ಉಪಾಯವನ್ನು ಹೇಳುತ್ತೇನೆ. ಅಗೋ ಆ ಮಾವಿನ ಮರದ ತುದಿಯಲ್ಲಿನ ಹಕ್ಕಿ ಗೂಡಿನಲ್ಲಿ ಇನ್ನು ಕೆಲವೇ ಕ್ಷಣಗಳಲ್ಲಿ ಗಿಳಿಯೊಂದು ಮರಿಗೆ ಜನ್ಮ ನೀಡಲಿದೆ. ಆ ಗಿಳಿಮರಿಯನ್ನು ಕೇಳು ಎಂದ. ನಾರದ ಅಲ್ಲಿಗೆ ಹೊರಟು, ಆಗ ತಾನೇ ಜನ್ಮ ತಾಳಿದ್ದ, ಆ ಗಿಳಿಮರಿಗೆ ವಂದನೆಯನ್ನು ತಿಳಿಸಿದ. ಅವನನ್ನು ಕಂಡೊಡನೆ ಆ ಗಿಳಿಮರಿಯೂ ಪ್ರಾಣ ಬಿಟ್ಟಿತು.
ಕೋಪಗೊಂಡ ನಾರದ ಮುನಿ ಮತ್ತೆ ಶಿವನಲ್ಲಿಗೆ ಬಂದು ತಿಳಿಸಲು ಶಿವನು ಮತ್ತೊಂದು ಉಪಾಯವನ್ನು ಹೇಳಿದ. ದೂರದಲ್ಲಿ ಕೊಟ್ಟಿಗೆಯೊಂದನ್ನು ತೋರಿ, ಕೆಲವೇ ಕ್ಷಣಗಳಲ್ಲಿ ಅಲ್ಲಿ ಹಸುವೊಂದು ಕರುವಿಗೆ ಜನ್ಮ ನೀಡಲಿದೆ, ಆ ಕರುವು ನಿಮ್ಮ ಸಂದೇಹ ನಿವಾರಿಸುತ್ತದೆ ಎಂದ. ಒಲ್ಲದ ಮನಸಿನಿಂದಲೇ ಹೊರಟ ನಾರದ ಆಗತಾನೇ ಹುಟ್ಟಿದ್ದ ನವಜಾತ ಕರುವನ್ನು ಉದ್ದೇಶಿಸಿ, ವಂದನೆಗಳನ್ನು ತಿಳಿಸಿದ. ಆ ಕರು ಕೂಡ ಆಗಲೇ ಸತ್ತು ಹೋಯಿತು. ಈಗಲೂ ನಾರದ ಬೇಸರಗೊಂಡು ಶಿವನಲ್ಲಿ ಆಗಿರುವುದನ್ನು ತಿಳಿಸಿದ.
ಶಿವನು ಈಗಲೂ ಉಪಾಯವೊಂದನ್ನು ತಿಳಿಸಿದ. ಸಂಪದ್ಭರಿತ ರಾಜ್ಯವೊಂದನ್ನು ತೋರಿಸಿ, ನೋಡಿ ಇನ್ನೇನು ಕೆಲವೇ ಕ್ಷಣಗಳಲ್ಲಿ ಆ ರಾಜ್ಯದ ಮಹಾರಾಣಿಗೆ ಮಗುವೊಂದು ಜನಿಸಲಿದೆ. ಆ ಮಗು, ನಿಮ್ಮ ಪ್ರಶ್ನೆಯ ಉತ್ತರ ನೀಡಲಿದೆ ಎಂದ.
ನಾರದ ಭಯಗೊಂಡರು, “ಅಲ್ಲ ಪ್ರಭು, ಅವುಗಳೆಲ್ಲ ಕೀಟ, ಪ್ರಾಣಿ ಪಕ್ಷಿಗಳು ಸತ್ತವು. ಇವನು ಯುವರಾಜ. ಇವನೇನಾದರೂ ಸತ್ತರೆ ಮಹಾರಾಜ, ಮಂತ್ರಿ, ಸೈನ್ಯ ನನ್ನನ್ನು ಸುಮ್ಮನೇ ಉಳಿಸುವುದೇ? ದಯವಿಟ್ಟು ನಾನು ಹೋಗಲಾರೆ” ಎಂದ.
ಶಿವನು ಧೈರ್ಯ ತುಂಬಿ, ಈ ಬಾರಿ ಹಾಗೇನೂ ಆಗಲಾರದು. ಹೋಗಿಬಾ ಎಂದು ಹೇಳಿದ. ಈಶ್ವರನ ಮಾತು ಮೀರಲಾಗದೇ ನಾರದ ಮುನಿ, ನಿಧಾನವಾಗಿ ಅರಮನೆಯೊಳಗೆ ಕಾಲಿಡುತ್ತಿರಲು, ತೊಟ್ಟಿಲ ಕಡೆಯಿಂದ “ವಂದನೆಗಳು ಮಹಾಮುನಿಗಳೇ” ಎಂಬ ಸ್ವರ ಕೇಳಿಸಿತು. ಅಚ್ಚರಿಗೊಂಡ ನಾರದ, ತೊಟ್ಟಿಲ ಬಳಿಗೆ ಹೋಗಲು, ಆಗತಾನೇ ಜನಿಸಿದ ನವಜಾತ ಶಿಶುವು ಅವರನ್ನು ಮಾತನಾಡಿಸಿತು. ಕ್ಷಣ ನಿರಾಳರಾದ ನಾರದ, ಆ ಮಗುವಿನಲ್ಲಿ ಕೇಳಿದ, ದೊಡ್ಡವರ, ನಹಾತ್ಮರ ದರುಶನದಿಂದಾಗುವ ಲಾಭವೇನು? ಎಂದು ಕೇಳಿದ.
ಆ ಮಗುವು “ನಾನು ಗೊಬ್ಬರದ ಹುಳುವಾಗಿದ್ದಾಗ ನೀವು ಬಂದಿರಿ. ನಿಮ್ಮ ದರುಶನದಿಂದ ನಾನು ಮರುಜನ್ಮದಲ್ಲಿ ಗಿಳಿಯ ಮರಿಯಾದೆ. ಆಗಲೂ ನೀವು ನನಗೆ ದರುಶನ ನೀಡಿದಿರಿ. ಮರುಜನ್ಮದಲ್ಲಿ ಕರುವಾಗಿ ಜನಿಸಿದೆ. ಆಗಲೂ ನಿಮ್ಮ ದರುಶನ ನನಗೆ ಲಭಿಸಿತು. ಈಗ ಮರುಜನ್ಮ ಪಡೆದು, ರಾಜಕುವರನಾಗಿದ್ದೇನೆ. ಮಹಾತ್ಮರ ದರ್ಶನದಿಂದ ಇದಕ್ಕಿಂತ ದೊಡ್ಡ ಲಾಭವುಂಟೆ ಮುನಿವರ್ಯಾ” ಎಂದು ಕೇಳಿತು.
ನಾರದರು ಮಹಾತ್ಮರ ದರ್ಶನದಿಂದಾಗುವ ಲಾಭವನ್ನು ಅರಿತು ಶಿವನಿಗೆ ಮನದಲ್ಲೇ ವಂದಿಸಿ ಅಲ್ಲಿಂದ ಸಂತೋಷಿತರಾಗಿ ಹೊರಟ.
ನೀತಿ :– ದೊಡ್ಡವರ ಒಡನಾಟ ನಮಗೆ ಆ ಕ್ಷಣ ಮುಖ್ಯ ಅನಿಸದಿರಬಹುದು. ಆದರೆ ಖಂಡಿತ ಮುಂದೊಮ್ಮೆ ನಮಗೆ ಆ ಮಹಾತ್ಮರ ದರುಶನದಿಂದ ಖಂಡಿತ ಪ್ರಯೋಜನವಾಗಲಿದೆ.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.