ಕಥೆ

ಬರದ ನಾಡಿನಲ್ಲಿ ನೀರುಕ್ಕಿಸಿದ ಛಲಗಾರ

ದಿನಕ್ಕೊಂದು ಕಥೆ

ಬರದ ನಾಡಿನಲ್ಲಿ ನೀರುಕ್ಕಿಸಿದ ಛಲಗಾರ

ಮಳೆಯ ಕೊರತೆಯಿಂದ ನೀರಿನ ಅಭಾವ ಹೆಚ್ಚಾಗಿದೆ. ಮರಗಿಡ ಕಡಿದು ಕೆರೆ -ಕಟ್ಟೆಗಳನ್ನು ಮುಚ್ಚಿ ಗಗನದೆತ್ತರಕ್ಕೆ ಕಟ್ಟಡಗಳ ನಿರ್ಮಾಣ ಮಾಡುತ್ತಿರುವುದರಿಂದ, ಪ್ರಕೃತಿ ವಿಕೋಪಕ್ಕೆ ತುತ್ತಾಗಿ ಮಳೆ ಕಡಿಮೆಯಾಗಿ ನೀರಿಲ್ಲದೆ ಹಳ್ಳ-ಕೊಳ್ಳಗಳು ಬತ್ತಿ ಹೋಗು ತ್ತಿವೆ.

ಹಳ್ಳಿಗಳಲ್ಲಿ ಬೆಳಗಾದರೆ ಸಾಕು, ಬೀದಿ ನಲ್ಲಿಗಳ ಮುಂದೆ ಕೊಡಗಳು ಸಾಲಾಗಿ ಕುಳಿತಿರುತ್ತವೆ. ಬೆಳಗ್ಗೆ ಎದ್ದು ಸೂರ್ಯನನ್ನು ನೋಡಲು ಹೊರ ಬಂದವರಿಗೆ ಸೂರ್ಯನಿಗಿಂತ ಮುಂಚೆ ಇದೇ ಬಣ್ಣ ಬಣ್ಣಗಳ ಕೊಡಗಳ ಸಾಲು ಎದ್ದು ಕಾಣುತ್ತದೆ.

ಇನ್ನು ನೀರು ಹಿಡಿಯುವ ಸಮಯದಲ್ಲಿ ನಡೆಯುವ ಜಗಳ ಪೈಪೋಟಿಯನ್ನು ನೋಡಿದಾಗ ಎಂತಹವರಿಗೂ ನೀರಿನ ಮಹತ್ವದ ಬಗ್ಗೆ ಅರಿವಾಗುತ್ತದೆ. ಒಂದು ಕೊಡ ನೀರಿಗೂ ಒದ್ದಾಡುವವರ ಬದುಕು ಬಹಳಷ್ಟು ಕಷ್ಟಕರ. ಇನ್ನು ನೀರಿ ಲ್ಲದ ಜೀವನವನ್ನು ಊಹಿಸಲಾದೀತೇ?

ಛತ್ತೀಸ್‌ಗಡದ ಕೋರಿಯಾ ಜಿಲ್ಲೆಯ ಸಾಜಾ ಪಹಾದ್ ಗ್ರಾಮದ ಜನರು ಮೊದಲೆಲ್ಲ ನೀರಿನ ಅಭಾವದಿಂದ ಮೈಲಿ ಗಟ್ಟಲೇ ನಡೆದು ನೀರು ಹೊರುತ್ತಿದ್ದ ಪರಿಸ್ಥಿತಿ ಇತ್ತು. ಆದರೆ ಈಗ ದೊಡ್ಡ ಕೊಳದಲ್ಲಿನ ಬೇಕಾದಷ್ಟು ನೀರನ್ನು ಬಳಸಬಲ್ಲಂತಹ ಅದೃಷ್ಟ ಅವರ ಪಾಲಿಗೆ ಒದಗಿ ಬಂದಿದೆ. ಇದಕ್ಕೆ ಕಾರಣ ಯಾವುದೇ ಸಂಘಸಂಸ್ಥೆಯಲ್ಲ.

ಅಲ್ಲಿನ ಸರಕಾರವಲ್ಲ. ಬದಲಾಗಿ ಒರ್ವ ಪುಟ್ಟ ಬಾಲಕ. 15 ವರ್ಷದ ಶ್ಯಾಮ್‌ ಲಾಲ್, ಗ್ರಾಮದ ಜನರು ಜಾನುವಾರುಗಳ ಬಾಯಾರಿಕೆಯನ್ನು ನೀಗಿಸಲು ತನ್ನ ಸಾಮರ್ಥ್ಯಕ್ಕೂ ಮೀರಿದ ಉಪಾಯವೊಂದನ್ನು ಕಂಡು ಹಿಡಿದು ಕೊಂಡಿದ್ದಾನೆ.

ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಗ್ರಾಮ ದಲ್ಲಿ ಕೆರೆ ತೋಡುವ ಆಲೋಚನೆ ಮಾಡಿದ್ದಾನೆ. ಬರೀ ಆಲೋಚನೆ ಮಾಡಿ, ಕಾರ್ಯ ರೂಪಕ್ಕೆ ತರದ ಸಾವಿರಾರು ಜನರನ್ನು ನಾವು ನೋಡಿದ್ದೇವೆ.

ಆದರೆ ಈತ ಅವರಂತಲ್ಲ. ಅಂದುಕೊಂಡಿರುವುದನ್ನು ಸಾಧಿಸಿದ ಛಲಗಾರ. ಆದರೆ, ಒಳ್ಳೆ ಕೆಲಸಗಳಿಗೆ ನೂರಾರು ವಿಘ್ನ ಎಂಬಂತೆ ಅವನ ನಿರ್ಧಾರಕ್ಕೆ ಯಾರೂ ಪ್ರೋತ್ಸಾಹಿಸಲೇ ಇಲ್ಲ.

ಆಗದ ಕೆಲಸಕ್ಕೆ ಕೈ ಹಾಕಿ ಸಮಯ ವ್ಯರ್ಥ ಮಾಡುತ್ತಿದ್ದಾನೆ ಎಂದು ಮೂದಲಿಸಿ ದರು. ಆದರೆ ಆತನ ಗಮನ ಕೆರೆ ತೋಡುವುದರ ಮೇಲಿತ್ತೇ ಹೊರತು, ಗ್ರಾಮಸ್ಥರ ಕೊಂಕು ಮಾತಿನ ಮೇಲಲ್ಲ.

ನಿಧಾನವಾದರೂ ಪರವಾಗಿಲ್ಲ ಗುರಿ ಸಾಧಿಸುವುದು ಮುಖ್ಯ ಎಂದು ಮನಗಂಡು, ಒಬ್ಬನೇ ತನ್ನ 15ನೇ ವರ್ಷದಲ್ಲೇ ಕೆರೆ ತೋಡಲು ಶುರು ಮಾಡಿದ. ಆ ಮುಗ್ಧ ವಯಸ್ಸಿನಲ್ಲಿ ಇಂತಹಾ ಆಲೋಚನೆ!

ನಿಧಾನಗತಿಯಲ್ಲಿ ಒಬ್ಬನೇ ಕೆರೆ ತೋಡುತ್ತಾ ಸತತ 12 ವರ್ಷಗಳ ಬಳಿಕ, ಕೆರೆ ತೋಡುವ ಕಾರ್ಯವನ್ನು ಮುಗಿಸಿಬಿಟ್ಟ. ಕೆರೆಯಲ್ಲಿ ನೀರೂ ತುಂಬಿತು. ಇದು ಅವನ ಯಶಸ್ಸಿಗೆ ಹಿಡಿದ ಕನ್ನಡಿ. ಈಗ ಈ ಕೆರೆಯ ಉಪಯೋಗವನ್ನು ಪಡೆದುಕೊಳ್ಳಲು ಬಂದವರು ಅದೇ ಊರಿನ ಕೊಂಕು ನುಡಿದ ಜನರು. ಪುಟ್ಟ ಬಾಲಕನ ಈ ಛಲ ಅವರೆಲ್ಲರ ಕಣ್ಣು ತೆರೆಸಿದೆ.

ಅಂದು ಅವನು ಯಾರ ಸಹಾಯವಿಲ್ಲದೆ ಕೆರೆ ತೋಡಬೇಕೆಂಬ ಧೃಡ ನಿರ್ಧಾರವನ್ನು ಕೈಬಿಟ್ಟಿದ್ದರೆ ಹಿಂದು ಹಳ್ಳಿಯ ಜನ ಸಮೃದ್ದಿಯಿಂದ ಇರಲು ಸಾಧ್ಯವಾಗುತ್ತಿರಲಿಲ್ಲ. ಛಲ, ಆತ್ಮಸಾಕ್ಷಿ, ಧೈರ್ಯ, ಇದ್ದರೆ ಒಬ್ಬನೇ ಇದ್ದರೂ ಅವರಲ್ಲಿ ಆನೆಯ ಬಲವಿರುತ್ತದೆ ಎಂಬುದು ಸತ್ಯ.

🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882

Related Articles

Leave a Reply

Your email address will not be published. Required fields are marked *

Back to top button