ಸೋಲನ್ನು ಒಪ್ಪಿಕೊಳ್ಳಬಹುದು, ಆದರೆ ಅಪ್ಪಿಕೊಳ್ಳಬಾರದು..!
ಸಿದ್ಧಾರ್ಥ ಸಹ ಸೋಲೊಪ್ಪಿಕೊಂಡಿದ್ದ..ಅಳಿಲಿನ ಮಾತಿನಿಂದ ಸ್ಪೂರ್ತಿಗೊಂಡ

ದಿನಕ್ಕೊಂದು ಕಥೆ
ಸೋಲನ್ನು ಒಪ್ಪಿಕೊಳ್ಳಬಹುದು, ಆದರೆ ಅಪ್ಪಿಕೊಳ್ಳಬಾರದು..!
ಈ ವಿಶೇಷ ಘಟನೆಯನ್ನು ನಮ್ಮ ಪ್ರಿನ್ಸಿಪಾಲರು ಪಿಯುಸಿಯಲ್ಲಿ ನಪಾಸಾಗಿದ್ದ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತ ಹೇಳಿದರು. ಸತ್ಯಾನ್ವೇಷಣೆಗಾಗಿ ಸಿದ್ಧಾಾರ್ಥ ತನ್ನ ಮಡದಿ ಮತ್ತು ಮಗನನ್ನು ಬಿಟ್ಟು ಮಧ್ಯರಾತ್ರಿ ಅರಮನೆಯಿಂದ ಹೊರಟುಬಿಟ್ಟ. ಸತ್ಯಾನ್ವೇಷಣೆ ಅಷ್ಟು ಸುಲಭದ್ದೇನೂ ಆಗಿರಲಿಲ್ಲ. ಆತ ಜಪ-ಧ್ಯಾನ-ಉಪವಾಸಗಳನ್ನು ಆಚರಿಸಿದ. ಕಠಿಣ ತಪಸ್ಸು ಮಾಡಿದ. ಆದರೂ ಸತ್ಯದ ದರ್ಶನವಾಗಲಿಲ್ಲ. ಕೊನೆ ಕೊನೆಗೆ ತಾನು ಸೋತಿದ್ದೇನೆ ಎನಿಸಲು ಶುರುವಾಯಿತು. ಇಲ್ಲಿದ್ದೇನು ಪ್ರಯೋಜನ, ಮರಳಿ ಊರಿಗೆ ಹೋಗಬೇಕೆಂದು ಚಿಂತಿಸತೊಡಗಿದ.
ದಂತಕತೆಯೊಂದರ ಪ್ರಕಾರ ಸಿದ್ಧಾರ್ಥ ಸೋಲನ್ನೊಪ್ಪಿಕೊಳ್ಳುತ್ತಿದ್ದಾನೆ. ತನ್ನ ರಾಜ್ಯಕ್ಕೆ ಮರಳುತ್ತಿದ್ದಾನೆ ಎಂಬ ವಿಷಯ ಸ್ವರ್ಗಾಧಿಪತಿ ಇಂದ್ರನಿಗೂ ಗೊತ್ತಾಯಿತು. ಆತ, ‘ಒಬ್ಬ ಸಿದ್ಧಾರ್ಥ ಸತ್ಯವನ್ನು ಕಂಡುಕೊಂಡರೆ ಅದರ ಫಲ ಸಾವಿರಾರು ಜನಕ್ಕಾಗುತ್ತದೆ.
ಅದೇ ಒಬ್ಬ ಸಿದ್ಧಾರ್ಥ ಸೋಲನ್ನೊಪ್ಪಿಕೊಂಡು ಹಿಂತಿರುಗಿ ಹೋದರೆ, ಅದರ ದುಷ್ಪರಿಣಾಮ ಎಲ್ಲ ಸಾಧಕರ ಮೇಲೆ ಆಗುತ್ತದೆ. ಅವರು ನಿರುತ್ಸಾಹಗೊಳ್ಳುತ್ತಾರೆ. ಹಾಗಾಗಬಾರದು, ಸಿದ್ಧಾರ್ಥನಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು’ಎಂದುಕೊಂಡು ಒಂದು ಅಳಿಲಿನ ರೂಪದಲ್ಲಿ ಧರೆಗಿಳಿದು ಬಂದ. ಸಿದ್ಧಾರ್ಥನ ದಾರಿಯಲ್ಲಿ ಕುಳಿತ.
ಸಿದ್ಧಾರ್ಥ ಹತ್ತಿರ ಬಂದ ತಕ್ಷಣ ಪಕ್ಕದಲ್ಲಿದ್ದ ಕೊಳವೊಂದರಲ್ಲಿ ಧುಮುಕಿ ತನ್ನ ಬಾಲವನ್ನು ನೀರಿನಲ್ಲಿ ಅದ್ದಿ ಒದ್ದೆ ಮಾಡಿಕೊಂಡು ಮೇಲೆದ್ದು ಬಂದು, ಆ ನೀರನ್ನು ದಾರಿಯಲ್ಲಿ ಚಿಮುಕಿಸಿದ. ಮತ್ತೆ ದಡದಡನೆ ಹೋಗಿ ಕೊಳದಲ್ಲಿ ಬಾಲ ಅದ್ದಿ ನೀರು ತಂದು ದಾರಿಯಲ್ಲಿ ಚಿಮುಕಿಸಿದ. ಅಳಿಲಿನ ದಡಬಡ ಓಡಾಟವನ್ನು ಸಿದ್ಧಾರ್ಥ ಗಮನಿಸಿದ.
ಕುತೂಹಲವೆನಿಸಿತು. ‘ಅಳಿಲೇ! ಅಳಿಲೇ! ಏನಿದು ನಿನ್ನ ಓಡಾಟ?’ಎಂದು ಕೇಳಿದ. ಅಳಿಲು ‘ಕೊಳದಲ್ಲಿ ಸಾಕಷ್ಟು ನೀರಿದೆ. ಆದರೆ ರಸ್ತೆ ಒಣಗಿದೆ. ನನ್ನ ಬಾಲದಲ್ಲಿ ನೀರು ಹಿಡಿದು ತಂದು ರಸ್ತೆಯನ್ನು ಒದ್ದೆ ಮಾಡುತ್ತಿದ್ದೇನೆ. ಕೊಳದ ನೀರನ್ನೆಲ್ಲ ರಸ್ತೆಯಲ್ಲಿ ಸುರಿಯುತ್ತೇನೆ’ಎಂದಿತು. ಸಿದ್ಧಾರ್ಥ ‘ಇಷ್ಟು ದೊಡ್ಡ ಕೊಳದ ನೀರನ್ನು ನಿನ್ನ ಪುಟ್ಟ ಬಾಲದಲ್ಲಿ ತಂದು ಉದ್ದದ ರಸ್ತೆಯನ್ನು ಒದ್ದೆ ಮಾಡಲು ಯತ್ನಿಸುತ್ತಿದ್ದೀಯಲ್ಲ! ಇದು ಸಾಧ್ಯವೇ?’ಎಂದು ಅಚ್ಚರಿಯಿಂದ ಪ್ರಶ್ನಿಸಿದ.
ತಕ್ಷಣ ಅಳಿಲು, ‘ಸರೋವರ ದೊಡ್ಡದಾದರೇನಂತೆ? ರಸ್ತೆ ಉದ್ದವಾದರೇನಂತೆ? ಬಾಲ ಚಿಕ್ಕದಾದರೇನಂತೆ? ಮಹತ್ಕಾರ್ಯಕ್ಕೆ ಕೈ ಹಾಕಿದ್ದೇನೆ. ಇದನ್ನು ಅರ್ಧದಲ್ಲೇ ಬಿಟ್ಟು ಸೋಲನ್ನೊಪ್ಪಿಕೊಂಡು ಹೋಗಲು ನಾನೇನು ಸಿದ್ಧಾರ್ಥನೇ?’ಎಂದಿತು. ಅದು ಸಿದ್ಧಾರ್ಥನ ಎದೆಗೆ ಒದ್ದಂತಾಯಿತು. ಆತ ಹಾಗೆಯೇ ನಿಂತಿದ್ದನ್ನು ಲೆಕ್ಕಿಸದೇ ಅಳಿಲು ತನ್ನ ಪ್ರಯತ್ನ ಮುಂದುವರಿಸತೊಡಗಿತು. ಸಿದ್ಧಾರ್ಥ ನೋಡನೋಡುತ್ತಿದ್ದಂತೆ ರಸ್ತೆಯ ಒಂದೆರಡು ಚದರಡಿ ಒದ್ದೆಯಾಗಿತ್ತು.
ತಕ್ಷಣ ಸಿದ್ಧಾರ್ಥನ ಬುದ್ಧಿಗೆ ಏನೋ ಹೊಳೆದಂತಾಯಿತು. ಅಳಿಲಿನಂಥ ಪುಟ್ಟ ಜೀವಿಯೇ ಇಷ್ಟು ದೊಡ್ಡ ಕಾರ್ಯ ತನ್ನಿಂದ ಸಾಧ್ಯವಿಲ್ಲವೆಂದು ಭಾವಿಸದೆ ಕಾರ್ಯಮಗ್ನವಾಗಿರುವಾಗ, ಸತ್ಯದ ಸಾಕ್ಷಾತ್ಕಾರ ತನ್ನಿಂದ ಸಾಧ್ಯವಿಲ್ಲವೆಂದು ಸೋಲನ್ನೊಪ್ಪಿಕೊಳ್ಳುವುದು ಸರಿಯಲ್ಲವೆಂದು ತೀರ್ಮಾನಿಸಿದ.
ಮತ್ತೆ ತಪಸ್ಸಿಗೆ ತೊಡಗಿದನಂತೆ. ನಂತರ ಸೂಕ್ತಸಮಯದಲ್ಲಿ ಆತನಿಗೆ ಸತ್ಯದರ್ಶನವಾಯಿತಂತೆ. ಈ ಕತೆ ಹೇಳಿದ ಪ್ರಿನ್ಸಿಪಾಲರು, ‘ಸಿದ್ಧಾರ್ಥನಂಥ ಮಹಾಪುರುಷನೇ ತನ್ನ ಪ್ರಯತ್ನದಲ್ಲಿ ಸೋತಿದ್ದ.
ಆತ ಸೋಲನ್ನೊಪ್ಪಿಕೊಂಡ, ಆದರೆ ಸೋಲನ್ನಪ್ಪಿಕೊಂಡು ಸುಮ್ಮನೆ ಕುಳಿತುಕೊಳ್ಳಲಿಲ್ಲ. ಮರಳಿ ಯತ್ನವ ಮಾಡಿದ. ಯಶಸ್ಸನ್ನು ಪಡೆದ. ನೀವು ಪಿಯುಸಿಯಂಥ ಒಂದು ಪರೀಕ್ಷೆಯಲ್ಲಿ ನಪಾಸಾದರೆ ಜೀವನದಲ್ಲೇ ನಪಾಸಾದಂತೆ ಭಾವಿಸಬಾರದು.
ಮತ್ತೆ ಮತ್ತೆ ಪ್ರಯತ್ನಿಸಬೇಕು’ಎಂದು ಪ್ರೋತ್ಸಾಹಿಸಿದರು. ವಿದ್ಯಾರ್ಥಿಗಳು ಅವರ ಮಾತನ್ನು ಅನುಸರಿಸಿ ಮುಂದಿನ ಪರೀಕ್ಷೆಯಲ್ಲಿ ಉತ್ತೀರ್ಣರಾದರು!
‘ಸೋಲನ್ನೊಪ್ಪಿಕೊಳ್ಳಬಹುದು, ಆದರೆ ಅಪ್ಪಿಕೊಳ್ಳಬಾರದು’ ಎಂಬುದು ಕೇವಲ ವಿದ್ಯಾರ್ಥಿಗಳಿಗಷ್ಟೇ ಅಲ್ಲ, ಎಲ್ಲರಿಗೂ ಒಳ್ಳೆಯ ತತ್ತ್ವವೆಂಬುದನ್ನು ನಾವೂ ಒಪ್ಪಿಕೊಳ್ಳಲೇಬೇಕಲ್ಲವೇ?
ಸಂಗ್ರಹ
ಡಾ.ಈಶ್ವರಾನಂದ ಸ್ವಾಮೀಜಿ.
– 9341137882.