ದಿನಕ್ಕೊಂದು ಕಥೆ
ತಾಳ್ಮೆಗೆ ತಕ್ಕ ಫಲ
ಒಬ್ಬ ಶಿಲ್ಪಿ ಸುಂದರವಾದ ಮೂರ್ತಿಗಳನ್ನು ಕೆತ್ತಲು ಮೂರು ಕಲ್ಲುಗಳನ್ನು ತಂದನು. ಮೊದಲನೆಯ ಕಲ್ಲನ್ನು ತೆಗೆದು ಅದನ್ನು ಉಳಿ ಮತ್ತು ಸುತ್ತಿಗೆಯಿಂದ ಕೆತ್ತಲು ಪ್ರಾರಂಭಿಸಿದ.
ಆಗ ಆ ಕಲ್ಲು ಶಿಲ್ಪಿಯ ಏಟನ್ನು ತಾಳಲಾರದೆ “ಅಯ್ಯೋ ಶಿಲ್ಪಿಯೇ ನಾನು ಏಟನ್ನು ಸಹಿಸಲಾರೆ, ನನ್ನನ್ನು ಬಿಟ್ಟುಬಿಡು” ಎಂದಿತು. ಆಗ ಶಿಲ್ಪಿ ಕಲ್ಲಿನ ಮಾತನ್ನು ಕೇಳಿ ಅದನ್ನು ಪಕ್ಕಕ್ಕೆ ಇಟ್ಟ. ಮತ್ತೆ ಎರಡನೇಯ ಕಲ್ಲನ್ನು ತೆಗೆದುಕೊಂಡು, ಅದಕ್ಕೆ ನೂರಾರು ಏಟುಗಳನ್ನು ಹಾಕಿದನು.
ಆ ಕಲ್ಲೂ ಸಹ ನೋವು ಸಹಿಸದೆ, “ಶಿಲ್ಪಿ.. ಶಿಲ್ಪಿ.. ನನಗೆ ತುಂಬಾ ನೋವಾಗುತ್ತಿದೆ. ಏಟುಗಳನ್ನು ತಡೆಯಲಾರೆ. ದಯಮಾಡಿ ನನ್ನನ್ನು ಬಿಟ್ಟು ಬಿಡು” ಎಂದು ಗೋಗರೆಯಿತು. ಅದರ ಮಾತು ಕೇಳಿ ಶಿಲ್ಪಿಗೆ ಬೇಸರವಾಯಿತು.
ಆದರೂ ಇನ್ನೊಂದು ಕಲ್ಲು ಇದೆಯಲ್ಲಾ. ಅದನ್ನಾದರೂ ಸುಂದರ ಮೂರ್ತಿಯಾಗಿ ಮಾಡೋಣ ಅಂದುಕೊಂಡ. ಮೂರನೆಯ ಕಲ್ಲನ್ನು ತೆಗೆದುಕೊಂಡನು. ಅದಕ್ಕೆ ಸಾವಿರಾರು ಪೆಟ್ಟುಗಳನ್ನು ಹಾಕಿದ. ಆ ಕಲ್ಲು ತಾಳ್ಮೆಯಿಂದ ಎಲ್ಲಾ ಏಟುಗಳನ್ನು ಸಹಿಸಿಕೊಂಡಿತು. ಶಿಲ್ಪಿ ಆ ಕಲ್ಲನ್ನು ಸುಂದರ ಮೂರ್ತಿಯಾಗಿ ಮಾಡಿದ. ತಾನು ಮಾಡಿದ ಮೂರ್ತಿಯನ್ನು ನೋಡಿ ಆನಂದಪಟ್ಟ.
ಈ ಸುಂದರ ಕಲ್ಲಿನ ಮೂರ್ತಿಯನ್ನು ನೋಡಲು ಸಾವಿರಾರು ಜನರು ಸಾಲು ಸಾಲಾಗಿ ಬರತೊಡಗಿದರು. ಅವರು ಮೂರ್ತಿಯ ಸೌಂದರ್ಯವನ್ನು ನೋಡಿ ಆನಂದಿಸಿದರು. ಅವರೆಲ್ಲರೂ ಶಿಲ್ಪಿಯನ್ನು ಬಾಯಿತುಂಬ ಹೊಗಳುತ್ತಿದ್ದರು.
ಇದನ್ನು ಗಮನಿಸಿದ ಮೊದಲ ಎರಡು ಕಲ್ಲುಗಳು, ಜನರ ಹೊಗಳಿಕೆಯನ್ನು ಕೇಳಿ ತಾವು ಹಾಗೆ ಆಗಬೇಕೆಂದು ಆಸೆಪಟ್ಟವು. ಕೊನೆಗೆ ಅವೆರಡೂ “ನಾವು ಶಿಲ್ಪಿಯ ಏಟುಗಳನ್ನು ತಾಳಲಾರದೇ ಹೋದೆವು. ನಮ್ಮ ಗೆಳೆಯ ಪೆಟ್ಟುಗಳನ್ನು ತಡೆದುಕೊಂಡದ್ದರಿಂದ ಇಂದು ಸುಂದರ ಮೂರ್ತಿಯಾಗಿದ್ದಾನೆ.
ಅದನ್ನು ನೋಡಲು ಪ್ರತಿನಿತ್ಯ ಜನರು ಬರುತ್ತಿದ್ದಾರೆ. ನಾವೂ ಏಟನ್ನು ಸಹಿಸಿಕೊಳ್ಳುತ್ತೇವೆ. ನಮ್ಮನ್ನು ಸಹ ಸುಂದರ ಮೂರ್ತಿಗಳನ್ನಾಗಿ ಮಾಡು ಎಂದು ಶಿಲ್ಪಿಯನ್ನು ಕೇಳಿಕೊಳ್ಳೋಣ” ಎಂದು ತೀರ್ಮಾನಿಸಿದವು.
ಒಂದು ದಿನ ಶಿಲ್ಪಿಯನ್ನು ಕುರಿತು “ನಾವು ಈಗ ಎಷ್ಟು ಏಟುಗಳನ್ನಾದರೂ ಸಹಿಸಿಕೊಳ್ಳುತ್ತೇವೆ. ನಮ್ಮನ್ನು ಸುಂದರ ಮೂರ್ತಿಯನ್ನಾಗಿಸು” ಎಂದು ಬೇಡಿಕೊಂಡವು.
ಶಿಲ್ಪಿಯು ಸಂತೋಷದಿಂದ ಒಪ್ಪಿ ಅವುಗಳನ್ನು ಸುಂದರ ಮೂರ್ತಿಗಳಾಗಿ ಮಾಡಿದ. ಜನರು ಮೂರು ಶಿಲ್ಪಿಗಳ ಸೌಂದರ್ಯವನ್ನು ಕಣ್ತುಂಬ ನೋಡಿ ಆನಂದಿಸಿದರು. ಶಿಲ್ಪಿಯ ಕುಶಲತೆಯನ್ನು ಮೆಚ್ಚಿದರು. ಅವನಿಗೆ ಅಭಿನಂದನೆ ಸಲ್ಲಿಸಿದರು.
ನೀತಿ :– ತಾಳಿದವನು ಬಾಳುತ್ತಾನೆ ಎಂಬ ಹಿರಿಯರ ಮಾತಿನಂತೆ ಸಾಮಾನ್ಯವಾಗಿ ಜೀವನದಲ್ಲಿ ಅನೇಕ ಸುಖ ದುಃಖಗಳು ಬರುತ್ತವೆ.ಅದರಿಂದ ಮುಂದೆ ತನಗೆ ಒಳ್ಳೆತದಾಗುತ್ತದೆ ಎಂಬ ಭಾವವಿದ್ದರೆ, ತಾನೊಂದು ಮೂರ್ತಸ್ವರೂಪದ ಮೂರ್ತಿಯಂತೆ ಗೌರವಾದಾರಗಳಿಗೆ ಪಾತ್ರನಾಗುತ್ತಾನೆ.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.