ಪಾತ್ರೆ ತೊಳೆಯುವ ಬಾಲಕನ ಕಲಾ ಪ್ರತಿಭೆ
ಪ್ರತಿಭೆಯ ಒರತೆ ಕಾರಂಜಿಯಾಗಿಸುವ ಚೋದ್ಯ.!
ಈ ಪ್ರಪಂಚದಲ್ಲಿ ಕಲಾಪ್ರೇಮ, ಕಲಾಭಿಮಾನಿ ಎನ್ನುವುದೊಂದು ಭಗವಂತನ ಕೊಡುಗೆ. ಭಗವಂತನ ಅನುಗ್ರಹವಿಲ್ಲದೆ ಒಬ್ಬ ವ್ಯಕ್ತಿಯು ಎಷ್ಟೇ ಪ್ರಯತ್ನ ಮಾಡಿದರೂ ಕಲಾ ಪ್ರವೀಣನಾಗಲಾರ. ಅದರ ಬದಲಿಗೆ ಭಗವಂತನ ಕೃಪಾಕಟಾಕ್ಷ ವಿದ್ದಾಗ ಒಬ್ಬ ಸಾಮಾನ್ಯ ಬಡವನೂ ಕೂಡಾ ಕಲಾನಿಪುಣನಾಗಿ ರೂಪುಗೊಳ್ಳಲು ಸಾಧ್ಯ ಎಂಬುದನ್ನು ನಿರೂಪಿಸುವ ಒಂದು ಸ್ವಾರಸ್ಯಕರ ಪ್ರಸಂಗ ಹೀಗಿದೆ.
ಫ್ರಾನ್ಸಿಸ್ ಎಂಬ ಶ್ರೀಮಂತ ವ್ಯಾಪಾರಿಯ ಮನೆಯಲ್ಲಿ ಬಡ ಬಾಲಕನೊಬ್ಬನು ಪಾತ್ರೆ ತೊಳೆಯುವ ಕೆಲಸ ಮಾಡುತ್ತಿದ್ದ. ಪಕ್ಕದಲ್ಲೇ ಒಬ್ಬ ಶಿಲ್ಪಿಯು ಮೂರ್ತಿಗಳ ಕೆತ್ತನೆ ಕೆಲಸ ಮಾಡುತ್ತಿದ್ದ. ಈ ಪಾತ್ರೆ ತೊಳೆಯುವ ಬಾಲಕನು ಪುರುಸೊತ್ತು ಸಿಕ್ಕಿದಾಗಲೆಲ್ಲ ಶಿಲ್ಪಿಯ ಕಾರ್ಯ ನಡೆಯುವಲ್ಲಿಗೆ ಹೋಗುತ್ತಿದ್ದ. ಬಂಡೆಗಳು ಸುಂದರ ಮೂರ್ತಿಯಾಗಿ ರೂಪುಗೊಳ್ಳುವ ಕಲೆಯನ್ನು ಕುತೂಹಲ, ಆಸಕ್ತಿಯಿಂದ ವೀಕ್ಷಿಸುತ್ತಿದ್ದ.
ಒಮ್ಮೆ ಆ ಶ್ರೀಮಂತ ವ್ಯಾಪಾರಿಯು ತನ್ನ ಮನೆಯಲ್ಲಿ ನಗರದ ಪ್ರತಿಷ್ಠಿತ ವ್ಯಕ್ತಿಗಳಿಗಾಗಿ ಭರ್ಜರಿ ಔತಣವನ್ನು ಏರ್ಪಡಿಸಿದ್ದರು.
ದೊಡ್ಡ-ದೊಡ್ಡ ಅಧಿಕಾರಿಗಳಿದ್ದ ಆ ಭೋಜನ ಶಾಲೆಯಲ್ಲಿ ದೊಡ್ಡ ಮೇಜೊಂದರಲ್ಲಿ ಸುಂದರವಾದ ಸಿಂಗಾರದ ಅಚ್ಚುಕಟ್ಟು ರಚಿಸಲಾಗಿತ್ತು. ಮುಖ್ಯ ವ್ಯವಸ್ಥಾಪಕನು ರೂಪಿಸಿದ ಶೃಂಗಾರ ಅಂದಗೆಟ್ಟು ವ್ಯಾಪಾರಿಗೆ ಸಿಟ್ಟು ಬಂತು. ಇಷ್ಟರಲ್ಲಿ ಪಾತ್ರೆ ತೊಳೆಯುವ ಬಾಲಕನ ಕಲಾಭಿರುಚಿ ನೆರವಿಗೆ ಬಂತು.
ಆತ ಒಂದು ತಟ್ಟೆಯಲ್ಲಿ ನಾಲ್ಕಾರು ಕೆ.ಜಿ. ತೂಕದ ಬೆಣ್ಣೆಯನ್ನು ತರಿಸಿ, ಅದರಿಂದ ಸುಂದರ ಚಿರತೆಯ ಗೊಂಬೆಯೊಂದನ್ನು ರೂಪಿಸಿದಾಗ, ಇಡೀ ಭೋಜನ ಶಾಲೆಗೇ ಒಂದು ಚಿತ್ತಾಕರ್ಷಕತೆ ಮೂಡಿಬಂತು. ಆಗಂತುಕರ ಪೈಕಿ ಒಬ್ಬ ಮೂರ್ತಿಕಲಾ ತಜ್ಞರೂ ಇದ್ದರು. ಅವರು ಈ ಚಿರತೆಯ ಮೂರ್ತಿಯನ್ನು ಅಪಾರವಾಗಿ ಮೆಚ್ಚಿಕೊಂಡರು.
ಮೂರ್ತಿ ರೂಪಿಸಿದ ಬಾಲಕನನ್ನು ಬೆನ್ನು ಚಪ್ಪರಿಸುತ್ತಾ, ‘ ಶಹಬ್ಬಾಸ್, ಈ ಬಾಲಕನು ಇನ್ನಷ್ಟು ಮೂರ್ತಿ ಕಲಾ ಶಿಕ್ಷ ಣ ಪಡೆದರೆ ಒಬ್ಬ ಶ್ರೇಷ್ಠ ಶಿಲ್ಪಿಯಾಗಬಲ್ಲ ಎಂದು ಘೋಷಿಸಿದರು.
ಇದನ್ನು ಕೇಳಿದ ಶ್ರೀಮಂತ ವ್ಯಾಪಾರಿಯು ಪ್ರಸನ್ನನಾಗಿ, ಆ ಬಾಲಕನಿಗೆ ಮೂರ್ತಿಕಲಾ ಶಿಕ್ಷ ಣದ ವೆಚ್ಚವನ್ನು ತಾನೇ ವಹಿಸಿಕೊಳ್ಳುವುದಾಗಿ ಘೋಷಿಸಿದರು. ಅಂತೆಯೇ ಮೂರ್ತಿಕಲಾ ಶಿಕ್ಷ ಣವನ್ನು ಪಡೆದ ಆ ಬಾಲಕನು ಆಂಟೋನಿಯೋ ಎಂಬ ಹೆಸರಿನಲ್ಲಿ ವಿಶ್ವ ಪ್ರಸಿದ್ಧ ಕಲಾವಿದನಾಗಿ ಬಿಟ್ಟ.
ಯಾವ ವ್ಯಕ್ತಿಯಲ್ಲಿ ಎಂತಹ ಪ್ರತಿಭೆಯ ಬೀಜಗಳು ಅಡಗಿರುತ್ತವೋ ಯಾರಿಗೆ ಗೊತ್ತು! ಭಗವಂತನ ಕೃಪೆಯಿಂದ ಸೂಕ್ತ ಸಂದರ್ಭ ಒದಗಿದಾಗ ಆ ಪ್ರತಿಭಾ ವಿಕಸನ ಆಗಲು ಸಾಧ್ಯ. ಭಗವಂತನ ಕೃಪೆ ಇದ್ದರೆ ಸಾಮಾನ್ಯ ವ್ಯಕ್ತಿಯೂ ಅಸಾಮಾನ್ಯವಾಗಿ ಕೀರ್ತಿಶಾಲಿಯಾಗಲು ಸಾಧ್ಯ.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882